
ಬೆಂಗಳೂರು (ಜೂ.20): ರಾಜ್ಯದಲ್ಲಿ ಹೊಸದಾಗಿ ‘ಮುಖ್ಯಮಂತ್ರಿಗಳ ಜನಸ್ಪಂದನ ಮತ್ತು ಜನಹಿತ ಆಡಳಿತ ಇಲಾಖೆ’ ಹಾಗೂ ‘ಅನಿವಾಸಿ ಭಾರತೀಯ ವ್ಯವಹಾರಗಳ ಇಲಾಖೆ’ ರಚಿಸುವ ಬಗ್ಗೆ ಹಾಗೂ ವಿಧಾನಪರಿಷತ್‌ನ ಐದು ಸ್ಥಾನಗಳಿಗೆ ನಾಮನಿರ್ದೇಶನ ಮಾಡುವ ಕುರಿತು ಶನಿವಾರ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ಚರ್ಚೆ ನಡೆಯುವ ಸಾಧ್ಯತೆಯಿದೆ.
ನೂತನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಅಧಿಕಾರವಹಿಸಿಕೊಂಡ ಬಳಿಕ ಎರಡು ನೂತನ ಇಲಾಖೆ ಸ್ಥಾಪಿಸುವ ಕುರಿತು ಘೋಷಣೆ ಮಾಡಿದ್ದರು.
ಈ ಬಗ್ಗೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯಿಂದ ಸಚಿವ ಸಂಪುಟ ಸಭೆ ಎದುರು ವಿಷಯ ಮಂಡಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಮುಖ್ಯಕಾರ್ಯದರ್ಶಿ ಅವರು ಪತ್ರ ಬರೆದಿದ್ದು, ಬಹುತೇಕ ಶನಿವಾರದ ಸಂಪುಟ ಸಭೆಗೆ ವಿಷಯ ಮಂಡನೆಯಾಗಲಿದೆ.
ಇನ್ನು ಜು.21ಕ್ಕೆ ಅಡಗೂರು ಎಚ್.ವಿಶ್ವನಾಥ್, ಭಾರತಿ ಶೆಟ್ಟಿ, ಶಾಂತರಾಮ್ ಬುಡ್ನಸಿದ್ಧಿ, ಡಾ.ತಳವಾರ್ ಬಾಬಣ್ಣ ಹಾಗೂ ರಮೇಶ್ ಬಾಬು ಅವರ ನಾಮನಿರ್ದೇಶನದ ಅವಧಿ ಮುಕ್ತಾಯವಾಗಲಿದೆ. ಈ ಐದು ಸ್ಥಾನಗಳಿಗೆ ರಾಜ್ಯಪಾಲರ ಮೂಲಕ ನಾಮನಿರ್ದೇಶನಗೊಳ್ಳುವ ಕುರಿತು ಸಹ ಶನಿವಾರದ ಸಂಪುಟ ಸಭೆಯಲ್ಲಿ ಚರ್ಚೆಯಾಗಲಿದೆ. ಪ್ರಸ್ತುತ ಏಳು ಸದಸ್ಯರಿಗೆ ನಡೆದ ಚುನಾವಣೆಯಲ್ಲಿ ಐದು ಸ್ಥಾನಗಳನ್ನು ಗೆದ್ದಿರುವ ಕಾಂಗ್ರೆಸ್, ನಾಮನಿರ್ದೇಶನದ ಸ್ಥಾನಗಳಿಗೆ ಸಂಬಂಧಿಸಿ ಸಿದ್ಧತೆ ನಡೆಸಿದೆ. ಈ ಮೂಲಕ ವಿಧಾನಪರಿಷತ್‌ನಲ್ಲಿ ಬಲ ಮತ್ತಷ್ಟು ಹೆಚ್ಚಿಸಿಕೊಳ್ಳಲಿದೆ. ಜತೆಗೆ ಸಂಪುಟ ಸಭೆಯಲ್ಲಿ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡುವ ಬಗ್ಗೆಯೂ ಚರ್ಚೆಯಾಗಲಿದೆ.
ಜತೆಗೆ ರಾಜ್ಯಾದ್ಯಂತ ಸರ್ಕಾರಿ ಶಾಲೆಗಳಲ್ಲಿ 360 ಕೋಟಿ ರು. ವೆಚ್ಚದಲ್ಲಿ 2,200 ತರಗತಿ ಕೊಠಡಿಗಳ ನಿರ್ಮಾಣ ಮಾಡುವ ಬಗ್ಗೆ, ಸಾರಿಗೆ ಇಲಾಖೆಯ ವಿವಿಧ ನಿಗಮಗಳಿಂದ ಬಸ್ಸುಗಳ ಖರೀದಿಸುವ ಬಗ್ಗೆ, ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ಪರಿಶಿಷ್ಟ ಜಾತಿ ನಿರುದ್ಯೋಗಿ ಯುವಕರಿಗೆ 63 ಕೋಟಿ ರು. ವೆಚ್ಚದಲ್ಲಿ ಫಾಸ್ಟ್ ಫುಡ್ ಟ್ರಕ್, ಟ್ರೈಲರ್, ಮೊಬೈಲ್ ಕಿಚನ್ ಫುಡ್ ಕಿಯೋಸ್ಕ್ ಸೌಲಭ್ಯ ಕಲ್ಪಿಸುವ ಬಗ್ಗೆ ಚರ್ಚೆಯಾಗಲಿದೆ.
ಇನ್ನು ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠಕ್ಕೆ 3.32 ಎಕರೆ ವಿಸ್ತೀರ್ಣದ ಜಮೀನಿನಲ್ಲಿ ಸಾರ್ವಜನಿಕ ಮತ್ತು ಅರೆ ಸಾರ್ವಜನಿಕ, ವಾಣಿಜ್ಯ ಉದ್ದೇಶದ ಏಕನಿವೇಶನ ವಿನ್ಯಾಸ ನಕ್ಷೆ ಮಂಜೂರಿ ಮಾಡಿರುವುದಕ್ಕೆ ನಿಯಮಾನುಸಾರ ಪಾಔತಿಸಬೇಕಾಗಿದ್ದ ಶುಲ್ಕ, ಸೆಸ್ ಮತ್ತು ತೆರಿಗೆ ಸೇರಿ ₹45.76 ಲಕ್ಷಗಳಿಗೆ ವಿನಾಯಿತಿ ನೀಡುವ ಬಗ್ಗೆಯೂ ಪ್ರಸ್ತಾಪ ಆಗುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.