
ಮಾಗಡಿ(ಮಾ.13): ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ನಾನು ರಾಜ್ಯ ರಾಜಕಾರಣದಲ್ಲಿ ಉಳಿಯುತ್ತೇನೆ, ರಾಷ್ಟ್ರ ರಾಜಕಾರಣಕ್ಕೆ ಹೋಗುವುದಿಲ್ಲ ಎಂಬ ಹೇಳಿಕೆಗೆ ಶಾಸಕ ಬಾಲಕೃಷ್ಣ ತಿರುಗೇಟು ನೀಡಿದ್ದು, ಯೋಗಿಶ್ವರ್ ಗೆ ರಾಷ್ಟ್ರ ರಾಜಕಾರಣಕ್ಕೆ ಹೋಗಲು ಧಮ್ ಬೇಕು ಎಂದು ಎಂದು ಗೇಲಿ ಮಾಡಿದರು.
ಪಟ್ಟಣದ ತಿರುಮಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಸದ ಡಿ.ಕೆ.ಸುರೇಶ್ ರನ್ನು ಎದುರಿಸಲಾಗದೆ ಸಿ.ಪಿ.ಯೋಗೇಶ್ವರ್ ರವರು ಕಣದಿಂದ ಹಿಂದೆ ಸರಿಯುತ್ತಿದ್ದಾರೆ. ರಾಷ್ಟ್ರ ರಾಜಕಾರಣ ಮಾಡಲು ಧಮ್ ಇರಬೇಕು, ಸಚಿವರಾಗಿದ್ದಾಗ ಚನ್ನಪಟ್ಟಣ ಕ್ಷೇತ್ರದ ಅಭಿವೃದ್ಧಿ ಮಾಡಲಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಯವರೇ ಹೇಳಿಕೆ ನೀಡಿದ್ದರು. ಯೋಗೇಶ್ವರ್ ಸಚಿವರಾಗಿದ್ದಾಗ ಉಸ್ತುವಾರಿ ಸಚಿವ ಸ್ಥಾನವನ್ನು ರಾಮನಗರಕ್ಕೆ ಕೇಳುವ ಬದಲು ಮಂಡ್ಯ ಹಾಗೂ ಬೇರೆ ಕಡೆ ಕೇಳಿದ್ದರು. ತಮ್ಮ ಜಿಲ್ಲೆಯನ್ನು ಅಭಿವೃದ್ಧಿಗೊಳಿಸದೇ ಬೇರೆಡೆ ಹೋಗುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು. ನನಗೇನಾದರೂ ಉಸ್ತುವಾರಿ ಸಿಕ್ಕರೆ ನಾನು ರಾಮನಗರಕ್ಕೇ ಕೇಳುತ್ತೇನೆ ಹೊರತು ಅಮೆರಿಕಕ್ಕೆ ಕೊಟ್ಟರೂ ಹೋಗೋದಿಲ್ಲ ಎಂದು ಸಿ.ಪಿ.ಯೋಗೇಶ್ವರ್ ಹೇಳಿಕೆ ವಿರುದ್ಧ ಬಾಲಕೃಷ್ಣ ಟೀಕಿಸಿದರು.
ಬೆಂಗಳೂರು ಗ್ರಾಮಾಂತರ: ಹ್ಯಾಟ್ರಿಕ್ ಸಂಸದ ಡಿ.ಕೆ.ಸುರೇಶ್ 4ನೇ ಬಾರಿ ಸ್ಪರ್ಧೆ..!
ತಮ್ಮ ಚುನಾವಣೆಯಲ್ಲಿ ಒಂದು ರು. ಕೂಡ ಹಂಚಿಲ್ವಾ?:
ಸಂಸದ ಡಿ.ಕೆ.ಸುರೇಶ್ ಅಭಿವೃದ್ಧಿ ಮಾಡದೆ ಚುನಾವಣೆ ಎದುರಿಸಲು ಮನೆಮನೆಗೆ ಕುಕ್ಕರ್, ಸೀರೆ ಹಂಚುತ್ತಿದ್ದಾರೆ ಎಂಬ ಸಿ.ಪಿ.ಯೋಗೇಶ್ವರ್ ರವರ ಹೇಳಿಕೆಗೆ ಶಾಸಕ ಬಾಲಕೃಷ್ಣ್ಣ ಪ್ರತಿಕ್ರಿಯಿಸಿ, ಯೋಗೇಶ್ವರ್ ಅವರು ತಮ್ಮ ಚುನಾವಣೆಯಲ್ಲಿ ಒಂದು ರುಪಾಯಿ ಕೂಡ ಹಂಚಲಿಲ್ಲವೇ? ಕೆಂಗಲ್ ಆಂಜನೇಯಸ್ವಾಮಿ ಹತ್ತಿರ ಬಂದು ಆಣೆ ಮಾಡಲಿ, ಎಚ್.ಡಿ.ಕುಮಾರಸ್ವಾಮಿಯವರೂ ಕೂಡ ಚುನಾವಣೆಯಲ್ಲಿ ಹಣ ಖರ್ಚು ಮಾಡಿಲ್ಲವೇ? ಇವರೆಲ್ಲಾ ಹಣ ತೆಗೆದುಕೊಂಡು ಮನೆಗೆ ಹೋಗುತ್ತಾರೆ, ನಾವು ಕೆರೆಯ ನೀರನ್ನು ಕೆರೆಗೆ ಚೆಲ್ಲುತ್ತೇವೆ, ಸ್ವಲ್ಪ ಸಂಪಾದನೆ ಮಾಡಿದ ಹಣವನ್ನು ಬಡವರಿಗೆ ದಾನ ಮಾಡುತ್ತೇವೆ. ಡಿ.ಕೆ.ಸುರೇಶ್ ಕರೋನಾ ಕಾಲದಲ್ಲಿ ಸಂತ್ರಸ್ತರಿಗೆ ಸಹಾಯ ಮಾಡಿದ್ದರು. ರಾಜರಾಜೇಶ್ವರಿ ಆಸ್ಪತ್ರೆಗೆ ಯಾರು ಹೋಗದ ಸಂದರ್ಭದಲ್ಲಿ ಡಿ.ಕೆ.ಸುರೇಶ್ ಭೇಟಿ ನೀಡಿ ಕರೋನ ರೋಗಿಗಳಿಗೆ ಧೈರ್ಯ ತುಂಬಿದರು, ಇದೆಲ್ಲಾ ಮಾಡಿದ್ದಕ್ಕೇ ನಾವು ಚುನಾವಣೆಯನ್ನು ಧೈರ್ಯವಾಗಿ ಎದುರಿಸುತ್ತಿದ್ದೇವೆ, ಐದು ವರ್ಷಕ್ಕೊಮ್ಮೆ ಬರುವ ನಾಯಕರಿಗೆ ಈಗ ಭಯವಾಗಿದೆ ಎಂದರು. ಯಡಿಯೂರಪ್ಪನವರ ಕ್ಯಾಸೆಟ್ ಹಿಡಿದುಕೊಂಡು ಸ್ವಾಮೀಜಿ ಹತ್ತಿರ ಹೋಗಿ ಯಡಿಯೂರಪ್ಪನವರನ್ನು ಇಳಿಸಿ ಎಂದು ನಾವು ಕೇಳಿದ್ದೇವಾ?, ಸಿಡಿ ಸಂಸ್ಕೃತಿಯನ್ನು ಬಿಟ್ಟು ಯೋಗೀಶ್ವರ್ ನೇರವಾಗಿ ರಾಜಕೀಯ ಮಾಡಲಿ ಎಂದು ತಿರುಗೇಟು ನೀಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.