ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು
ಚಿಕ್ಕಮಗಳೂರು (ನ.5) : ಮಂಗಳೂರಿನಲ್ಲಿ ನಾವು ಬಿಜೆಪಿಯನ್ನ ಎಲ್ಲಿಗೆ ತಂದು ನಿಲ್ಲಿಸುತ್ತೇವೆ ನೋಡಿ ಎಂದು ಕಾಂಗ್ರೆಸ್ ಹಿಂದುಳಿದ ವರ್ಗಗಳ ರಾಜ್ಯಾಧ್ಯಕ್ಷ ಮಧುಬಂಗಾರಪ್ಪ ಬಿಜೆಪಿಗೆ ಓಪನ್ ಚಾಲೆಂಜ್ ಹಾಕಿದ್ದು, ಬಿಜೆಪಿ ಜಾತಿ-ಧರ್ಮಕ್ಕೆ ದ್ರೋಹ ಮಾಡಿದ್ದು, 80 ಪರ್ಸೆಂಟ್ ಹಿಂದೂಗಳಿಗೆ ಮೋಸ ಮಾಡಿದ್ದಾರೆ ಎಂದರು.
ಮಧು ಬಂಗಾರಪ್ಪ ಕಾಂಗ್ರೆಸ್‌ನಲ್ಲೂ ಉಳಿಯಲ್ಲ; ಕುಮಾರ ಬಂಗಾರಪ್ಪ ಭವಿಷ್ಯ
ಚಿಕ್ಕಮಗಳೂರಿನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಮಂಗಳೂರಿನಲ್ಲಿ ಬಿಜೆಪಿ-ಸಂಘಪರಿವಾರ ಹಾಗೂ ವಿಹೆಚ್‌ಪಿಯವರೇ ಸಮಾಜದಲ್ಲಿ ಬೆಂಕಿ ಹಚ್ಚುವ ಕೆಲಸ ಮಾಡ್ತಿದ್ದಾರೆ. ಆಜಾನ್ ಕೂಗಿನಿಂದ ಯಾರೂ ಹೃದಯಾಘಾತವಾಗಿ ಸತ್ತಿಲ್ಲ. ಆದರೆ, ಹಿಂದೂಗಳಿಗೆ ಏಕೆ ಬಿಜೆಪಿ ಮೇಲೆ ಸಿಟ್ಟು-ದ್ವೇಷ ಅಂದರೆ, ಅವರದ್ದು ಬಂದ್ ಮಾಡಿಸಲು ಹೋಗಿ ಹಿಂದೂಗಳ ಮೈಕ್ ಬಂದ್ ಮಾಡಿಸಿದ್ದಾರೆ. ಜಾತಿ-ಧರ್ಮಕ್ಕೆ ದ್ರೋಹ ಮಾಡಿದವರು ಬಿಜೆಪಿಯವರು. ನಾನು ಹೇಳುವುದು ಇಷ್ಟೆ. ಮಂಗಳೂರಿನಲ್ಲಿ ಕಾಂಗ್ರೆಸ್ ಗೆದ್ದಿರುವುದು ಒಂದೇ ಒಂದು ಸೀಟು. ಆದರೆ, ಈ ಬಾರಿ ಮಂಗಳೂರಿನಲ್ಲಿ ಬಿಜೆಪಿಯವರನ್ನ ಎಲ್ಲಿಗೆ ತಂದು ನಿಲ್ಲಿಸುತ್ತೇವೆ ನೋಡಿ ಎಂದು ಬಿಜೆಪಿಗೆ ಓಪನ್ ಚಾಲೆಂಜ್ ಹಾಕಿದ್ದಾರೆ.
ಎಲ್ಲಾ ಜಿಲ್ಲೆಗಳಲ್ಲಿ ಒಬಿಸಿ ಸಮಾವೇಶ
ಹಿಂದುಳಿದ ವಿಭಾಗದ ಸಂಘಟನೆಯನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುವ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಒಬಿಸಿ ಸಮಾವೇಶಗಳನ್ನು ನಡೆಸಲಾಗುವುದು ಎಂದು ಮಧು ಬಂಗಾರಪ್ಪ ತಿಳಿಸಿದರು. ಚುನಾವಣೆ ಹತ್ತಿರ ಬಂದಿರುವುದರಿಂದ ಪಕ್ಷದ ರಾಜ್ಯ ಮತ್ತು ಸ್ಥಳೀಯ ಮುಖಂಡರುಗಳನ್ನು ಸೇರಿಸಿಕೊಂಡು ಸುಮಾರು 30 ಸಾವಿರ ಜನರ ಸಮಾವೇಶ ಸಂಘಟಿಸ ಬೇಕೆಂಬ ಗುರಿ ಇದೆ ಎಂದರು. ಎಲ್ಲಾ ಜಿಲ್ಲೆಗಳಲ್ಲೂ ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚಿನ ಶಕ್ತಿಯನ್ನು ಹಿಂದುಳಿದವರ್ಗದ ವಿಭಾಗದಿಂದ ಕೊಡಬೇಕು. ಪಾರಂಪರಿಕವಾಗಿ ಹಿಂದುಳಿದವರು ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚು ಶಕ್ತಿ ನೀಡುತ್ತಾ ಬಂದಿದ್ದಾರೆ ಎಂದರು.
ಕಸ್ತೂರಿ ರಂಗನ್ ವರದಿಗೆ ಸಂಬಂಧಿಸಿದಂತೆ ಕೇರಳದಲ್ಲಿ ಕಾನೂನನ್ನು ಸ್ವಲ್ಪ ಸಡಿಲಮಾಡಿಕೊಂಡು ಅಲ್ಲಿನ ಸರ್ಕಾರ ಜನರಿಗೆ ಅನುಕೂಲ ಮಾಡಿಕೊಟ್ಟಿದೆ. ಆದರೆ, ನಮ್ಮ ರಾಜ್ಯದಲ್ಲಿ ಚಿಕ್ಕಮಗಳೂರು, ಕಾರವಾರ, ಹಾಸನ, ಶಿವಮೊಗ್ಗ ಸೇರಿದಂತೆ ವಿವಿಧೆಡೆಯ ಪ್ರದೇಶಗಳನ್ನು ಬಾಧಿಸುವ ಕಸ್ತೂರಿ ರಂಗನ್ ವರದಿ ಬಗ್ಗೆ ದೆಹಲಿಯಲ್ಲಿ ಧ್ವನಿ ಎತ್ತಬೇಕಾದ ಸಂಸದರುಗಳು ತಮ್ಮ ಶಕ್ತಿಯನ್ನೇ ಕಳೆದುಕೊಂಡಿದ್ದಾರೆ ಎಂದು ಹರಿಹಾಯ್ದರು.
ಸಮ ಸಮಾಜಕ್ಕೆ ಶ್ರಮಿಸಿದ್ದ ನಾರಾಯಣ ಗುರು; ಮಧು ಬಂಗಾರಪ್ಪ
ಅರಣ್ಯ ಪ್ರದೇಶಗಳ ಒತ್ತುವರಿಗೆ ಸಂಬಂಧಿಸಿದ ಸಮಸ್ಯೆಗಳು ಇತ್ಯರ್ಥ ಮಾಡಿಕೊಳ್ಳದಿದ್ದರೆ ನೂರಾರು ವರ್ಷಗಳಾದರು ಇದು ಸಮಸ್ಯೆಯಾಗಿಯೇ ಉಳಿದುಕೊಳ್ಳುತ್ತಿದೆ. ಅರಣ್ಯ ಒತ್ತುವರಿ ಸಮಸ್ಯೆಗೆ ಸಂಬಂಧಿಸಿದಂತೆ ಹೆಚ್ಚು ಹಿಂದುಳಿದ ವರ್ಗದ ಜನರೇ ಸಾಗುವಳಿ ಮಾಡುತ್ತಿದ್ದಾರೆ. ಇವರುಗಳನ್ನು ಭೂಗಳ್ಳರು ಎಂದು ಬಿಂಬಿಸಲಾಗಿದೆ. ಶಿವಮೊಗ್ಗದಲ್ಲಿ ಇವರುಗಳಿಗೆ ನೋಟೀಸ್ ನೀಡಲಾಗುತ್ತಿದೆ. ನ್ಯಾಯಾಲಯದಿಂದ ಜಾಮೀನು ಪಡೆಯಬೇಕಾದ ಪರಿಸ್ಥಿತಿಗೆ ತಂದಿಟ್ಟಿರುವ ಸರ್ಕಾರ ಇಡೀ ಊರುಗಳನ್ನೇ ಖಾಲಿ ಮಾಡಿಸುತ್ತಿದ್ದಾರೆ ಎಂದು ಆರೋಪಿಸಿ ಇದಕ್ಕೆಲ್ಲಾ ಹೆಚ್ಚು ಬಲಿಪಶುಗಳಾಗುತ್ತಿರುವವರು ಹಿಂದುಳಿದವರಾಗಿದ್ದಾರೆ. ಈ ಎಲ್ಲಾ ಕಾರಣಗಳಿಂದ ಹಿಂದುಳಿದ ವರ್ಗದ ವಿಭಾಗದವರನ್ನು ಹೆಚ್ಚು ಸಂಘಟಿಸಬೇಕಾಗಿದೆ ಎಂದರು.