ಸಿದ್ದು ವರ್ಷನ್‌-2 ಅಂದ್ರೆ ಬನಾನಾ ರಿಪಬ್ಲಿಕ್‌! - ಅರವಿಂದ್ ಬೆಲ್ಲದ್ ವಿಶೇಷ ಅಂಕಣ

By Kannadaprabha NewsFirst Published Aug 10, 2024, 9:52 AM IST
Highlights

ನಮ್ಮದು ‘ಆಳುವ ಸರ್ಕಾರವಲ್ಲ, ಆಲಿಸುವ ಸರ್ಕಾರ’ ಎಂಬುದು ಕಾಂಗ್ರೆಸ್‌ನವರ ಸಮರ್ಥನೆ. ಹಾಗಾದರೆ ಯಾರ ಮೊರೆಯನ್ನು ಈ ಸರ್ಕಾರ ಆಲಿಸುತ್ತಿದೆ? ರಾಜ್ಯದ ಜನರಿಗೆ ತೆರಿಗೆ ಹೊರೆ ಹೇರಿರುವ ಸರ್ಕಾರಕ್ಕೆ ಕೇರಳದ ವಯನಾಡಿನಲ್ಲಿ ಆನೆ ತುಳಿತಕ್ಕೆ ಮೃತಪಟ್ಟವರಿಗೆ ನಮ್ಮ ರಾಜ್ಯದವರಿಗಿಂತ ಹೆಚ್ಚಿನ ಪರಿಹಾರ ಕೊಡುವುದಕ್ಕಾ?

ರಾಜ್ಯ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಅಂದಿನ ಬಿಜೆಪಿ ಸರ್ಕಾರದ ವಿರುದ್ಧ ‘ಟೂಲ್‌ ಕಿಟ್‌ ಪಾಲಿಟಿಕ್ಸ್‌’ ನಡೆಸಿದ ಕಾಂಗ್ರೆಸ್‌ ಇನ್ನೊಂದೆಡೆ ಕರ್ನಾಟಕದಲ್ಲಿ ಸ್ವರ್ಗದ ಸಿರಿಯನ್ನು ಪ್ರತಿಷ್ಠಾಪಿಸುತ್ತೇವೆ ಎಂದು ಭ್ರಮೆಯನ್ನು ಬಿತ್ತಿತು. ಗ್ಯಾರಂಟಿ ಕಾರ್ಡ್‌ ಹಂಚಿಕೆಯ ಮೂಲಕ ಸರ್ಕಾರ ಜನರಲ್ಲಿ ಯಾವ ಮಟ್ಟದ ಭ್ರಾಂತಿಯನ್ನು ಬಿತ್ತಿತೆಂದರೆ ಇತ್ತೀಚಿನ ದಿನಗಳಲ್ಲಿ ರಾಜ್ಯ ಕಾಣದ ಅಭೂತಪೂರ್ವ ಬಹುಮತ ಕಾಂಗ್ರೆಸ್‌ಗೆ ಲಭಿಸಿತು. ರಾಜ್ಯದಲ್ಲಿ ಸಿದ್ದರಾಮಯ್ಯ 0.2 ವರ್ಷನ್‌ ಸರ್ಕಾರ ಅಧಿಕಾರ ಪ್ರಾರಂಭಿಸಿ ಸುಮಾರು ಹದಿನೈದು ತಿಂಗಳು ಕಳೆದಿದೆ. ಈಗ ಒಮ್ಮೆ ತಿರುಗಿ ನೋಡಿ…

ಈಗ ಎಲ್ಲಿ ನೋಡಿದರೂ ಭ್ರಷ್ಟಾಚಾರ, ಹಗರಣ, ವರ್ಗಾವಣೆ ದಂಧೆ, ಭೂ ಕಬಳಿಕೆ, ಅಧಿಕಾರಿಗಳ ಆತ್ಮಹತ್ಯೆ, ಬೆಲೆ ಏರಿಕೆ, ಲಂಚಗುಳಿತನ. ಒಟ್ಟಾರೆಯಾಗಿ ಕರ್ನಾಟಕದ ಪರಿಸ್ಥಿತಿ ಈಗ ‘ಬನಾನಾ ರಿಪಬ್ಲಿಕ್‌’ಗಿಂತಲೂ ನಿಕೃಷ್ಟವಾಗುವ ಹಂತ ತಲುಪಿದೆ. ಖುದ್ದು ರಾಜ್ಯದ ಮುಖ್ಯಮಂತ್ರಿಯೇ ಹಗರಣದ ಸುಳಿಗೆ ಸಿಲುಕಿರುವಾಗ ಇನ್ನು ಸಂಪುಟದ ಸದಸ್ಯರು ಸುಮ್ಮನೆ ಕೂರಲು ಸಾಧ್ಯವೇ? ಹಿರಿಯಕ್ಕನ ಚಾಳಿ ಮನೆ ಮಂದಿಗೆ ಎಂಬಂತೆ ಒಂದು ಕಾಲದಲ್ಲಿ ಆಡಳಿತ ಸುಧಾರಣೆಯಲ್ಲಿ ಮುಂಚೂಣಿಯಲ್ಲಿ ಇದ್ದ ರಾಜ್ಯ ಈಗ ದುರಾಡಳಿತದ ಸಂತೆಯಾಗಿ ಬಿಟ್ಟಿದೆ.

Latest Videos

 

'ಫಸ್ಟ್ ನಮ್ಮದೇನಿದೆ ಬಿಚ್ಚಿ; ನಿಮ್ಮದೇನಿದೆ ನಾವು ಬಿಚ್ತೇವೆ' ಡಿಕೆಶಿ-ಎಚ್‌ಡಿಕೆ ನಡುವೆ ನಿಲ್ಲದ ಆಸ್ತಿ ಕುಸ್ತಿ!

ಶೂನ್ಯ ಸಾಧನೆ, ವಿಫಲ ಘೋಷಣೆ

ರಾಜ್ಯ ಸರ್ಕಾರ ಚುನಾವಣೆ ಸಮಯದಲ್ಲಿ ಅನೇಕ ಭರವಸೆಗಳನ್ನು ನೀಡಿದ್ದರೂ ಅಂತಿಮವಾಗಿ ಜೋತು ಬಿದ್ದಿದ್ದು ಮಾತ್ರ ಪಂಚ ಗ್ಯಾರಂಟಿಗಳಿಗೆ. ದುರಂತವೆಂದರೆ ಈ ಪೈಕಿ ಶಕ್ತಿ ಯೋಜನೆ ಹೊರತುಪಡಿಸಿದರೆ ಉಳಿದವುಗಳನ್ನು ಪರಿಪೂರ್ಣವಾಗಿ ಜಾರಿ ಮಾಡುವುದಕ್ಕೆ ಸಾಧ್ಯವಾಗಲೇ ಇಲ್ಲ. ಅನ್ನಭಾಗ್ಯ ಯೋಜನೆಯಲ್ಲಿ ಹತ್ತು ಕೇಜಿ ಅಕ್ಕಿ ಕೊಡುತ್ತೇವೆ ಎಂದವರು ಕೊನೆಗೆ ಕೊಟ್ಟಿದ್ದು ‘5 ಕೇಜಿ ಮೋದಿ ಅಕ್ಕಿʼ ಮಾತ್ರ. ಇನ್ನುಳಿದ 5 ಕೇಜಿ ಅಕ್ಕಿಗೆ ನೇರ ಹಣ ಸಂದಾಯ ಮಾಡುತ್ತೇವೆಂದವರು ಮಾತು ಮರೆತೇ ವರ್ಷವಾಗಿದೆ. ಲೋಕಸಭಾ ಚುನಾವಣೆಗೆ ಮುಂಚಿತವಾಗಿಯೇ ಈ ಭರವಸೆ ನಿಂತು ಹೋಗಿದೆ. ಈಗ ರಾಜ್ಯದಲ್ಲಿ ಬಡವರಿಗೆ ನೀಡುತ್ತಿರುವುದು ಕೇಂದ್ರ ಸರ್ಕಾರ ನೀಡುತ್ತಿರುವ ಅಕ್ಕಿಯೇ ವಿನಃ ಸಿದ್ದರಾಮಯ್ಯನವರ ಅನ್ನಭಾಗ್ಯ ಅಲ್ಲವೇ ಅಲ್ಲ.

ಇನ್ನು ಕಳೆದ ನಾಲ್ಕು ತಿಂಗಳಿನಿಂದ ಗೃಹಲಕ್ಷ್ಮೀ ರಾಜ್ಯದ ಮಹಿಳೆಯರನ್ನು ತಲುಪುತ್ತಿಲ್ಲ. ತಾಂತ್ರಿಕ ದೋಷದ ನೆಪವೊಡ್ಡಿ ಹಣವನ್ನು ಬ್ಯಾಂಕ್‌ ಖಾತೆಗೆ ಜಮಾ ಮಾಡುವುದನ್ನು ನಿಲ್ಲಿಸಲಾಗಿದೆ. ಆದರೆ, ಶಾಸಕರಿಗೆ ಅನುದಾನ ಕೊಡುವಾಗ ಗೃಹಲಕ್ಷ್ಮೀಯತ್ತ ಕೈ ತೋರಿ ದಾರಿ ತಪ್ಪಿಸಲಾಗುತ್ತಿದೆ. ಸರ್ಕಾರ ಈ ಒಂದು ಯೋಜನೆಯ ಮೂಲಕ ಏಕಕಾಲಕ್ಕೆ ಜನರು ಹಾಗೂ ಜನಪ್ರತಿನಿಧಿಗಳಿಬ್ಬರನ್ನೂ ವಂಚಿಸುತ್ತಿದೆ. ನಿರುದ್ಯೋಗ ಭತ್ಯೆ ಕೊಡುತ್ತೇನೆ ಅಂದವರು ಕೆಲವರಿಗಷ್ಟೇ ಅದನ್ನು ಸೀಮಿತಗೊಳಿಸಿದ್ದಾರೆ. ಸಾಲದೆಂಬಂತೆ ಈ ಎಲ್ಲ ಯೋಜನೆಗಳಿಗೆ ಎಸ್‌ಸಿಎಸ್‌ಪಿ, ಟಿಎಸ್‌ಪಿ ಹಣವನ್ನು ಡೈವರ್ಟ್‌ ಮಾಡಿಕೊಂಡಿದ್ದು, ಕಳೆದ ಎರಡು ವರ್ಷದಲ್ಲಿ ₹25 ಸಾವಿರ ಕೋಟಿಯನ್ನು ದಲಿತರ ಅಭ್ಯುದಯದ ಬುಟ್ಟಿಯಿಂದ ಕಿತ್ತು ತಮ್ಮ ರಾಜಕೀಯ ಘೋಷಣೆಗಳ ಪೋಷಣೆಗಾಗಿ ಕಾಂಗ್ರೆಸ್‌ ಸರ್ಕಾರ ಬಳಸಿಕೊಳ್ಳುತ್ತಿದೆ. ಇದು ದಲಿತ ಸಮುದಾಯಕ್ಕೆ ಕಾಂಗ್ರೆಸ್‌ ಮಾಡುತ್ತಿರುವ ಅತಿ ದೊಡ್ಡ ಮೋಸವೂ ಹೌದು.

ಗ್ಯಾರಂಟಿ ನಿಲ್ಲಿಸುವ ಪ್ರಯತ್ನ

ಇದೆಲ್ಲದರ ಮಧ್ಯೆ ಲೋಕಸಭಾ ಚುನಾವಣೆಯ ಅಂಚಿನಲ್ಲಿ ಗ್ಯಾರಂಟಿಗಳು ಸರ್ಕಾರಕ್ಕೆ ಭಾರ ಎಂಬ ಧ್ವನಿಯನ್ನು ಹೊರ ಹಾಕಲಾಯಿತು. ಈ ಮಾತನ್ನು ಆಡಿದವರು ಸ್ವತಃ ಮುಖ್ಯಮಂತ್ರಿಯವರ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ! ಅಂದರೆ ಇದು ಸಿದ್ದರಾಮಯ್ಯನವರ ಕಿಚನ್‌ ಕ್ಯಾಬಿನೆಟ್‌ನ ಅಭಿಪ್ರಾಯವಾಗಿತ್ತು. ಲೋಕಸಭಾ ಚುನಾವಣೆಯ ಬಳಿಕವಂತೂ ಕಾಂಗ್ರೆಸ್ ಸಚಿವರು- ಶಾಸಕರೇ ಗ್ಯಾರಂಟಿ ಯೋಜನೆಗಳ ಬಗ್ಗೆ ತಗಾದೆ ತೆಗೆಯಲಾರಂಭಿಸಿದ್ದಾರೆ. ಗ್ಯಾರಂಟಿ ಯೋಜನೆಗಳಿಗೆ ಕೆಲವು ನಿಯಂತ್ರಣಗಳನ್ನು ಹೇರಬೇಕು, ಹೆಚ್ಚು ಜನರಿಗೆ ಅದು ದೊರೆಯದಂತೆ ನಿಬಂಧನೆಗಳನ್ನು ಹೇರಬೇಕು. ಇಲ್ಲವಾದಲ್ಲಿ ಅದರಿಂದ ಆಗುವ ನಷ್ಟ ತಡೆಯಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್ ಶಾಸಕರು ಬಹಿರಂಗವಾಗಿಯೆ ಹೇಳಿಕೆ ನೀಡುತ್ತಿದ್ದಾರೆ. ಯಾವುದಾದರೊಂದು ಕುಂಟು ನೆಪ ಹೇಳಿ ಗ್ಯಾರಂಟಿ ರದ್ದು ಮಾಡುವುದಷ್ಟೇ ಕಾಂಗ್ರೆಸ್‌ ಸರ್ಕಾರದ ಮುಂದಿರುವ ಅತಿದೊಡ್ಡ ಟಾಸ್ಕ್‌ ಆಗಿದೆ. ಇದೆಲ್ಲದಕ್ಕಿಂತ ತೀಕ್ಷ್ಮವಾದ ಸಮಸ್ಯೆಯೆಂದರೆ ರಾಜ್ಯದ ಜನರನ್ನು ಕಳೆದ ಒಂದೂವರೆ ವರ್ಷದಲ್ಲಿ ಸಂಪೂರ್ಣವಾಗಿ ಅಭಿವೃದ್ಧಿ ವಂಚಿತರನ್ನಾಗಿಸಿರುವುದು. ಒಂದೂವರೆ ವರ್ಷದಲ್ಲಿ ರಾಜ್ಯದಲ್ಲಿ ಒಂದೇ ಒಂದು ದೂರದೃಷ್ಟಿಯ ಯೋಜನೆಗಳಿಗೆ ಶಿಲಾನ್ಯಾಸವಾಗಿಲ್ಲ. ಜಲಸಂಪನ್ಮೂಲ ಇಲಾಖೆಯಲ್ಲಿ ಸುಮಾರು ₹20 ಸಾವಿರ ಕೋಟಿ ಯೋಜನೆಗಳು ಹಿನ್ನಡೆ ಕಂಡಿವೆ ಎಂದು ಖುದ್ದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಕಳವಳ ವ್ಯಕ್ತಪಡಿಸಿದ್ದಾರೆ. ಆದರೆ ತನ್ನ ಜವಾಬ್ದಾರಿ ನಿಭಾಯಿಸುವಲ್ಲಿ ವಿಫಲವಾಗಿರುವ ಕಾಂಗ್ರೆಸ್ ಸರ್ಕಾರ ಕೇಂದ್ರದ ಕಡೆಗೆ ತಾರತಮ್ಯ ಧೋರಣೆಯ ಆರೋಪ ಮಾಡಿ ತಪ್ಪಿಸಿಕೊಳ್ಳುತ್ತಿರುವುದು ಈ ಶತಮಾನದ ಅತಿದೊಡ್ಡ ಜೋಕ್‌. ಜನರ ಲಕ್ಷ್ಯವನ್ನು ಬೇರೆಡೆಗೆ ಸೆಳೆದು ರಾಜಕೀಯ ನಿರ್ವಾತ ಸೃಷ್ಟಿಸುವುದಕ್ಕೆ ವ್ಯವಸ್ಥಿತ ಪಿತೂರಿಯನ್ನು ರಾಜ್ಯ ಹಾಗೂ ರಾಷ್ಟ್ರೀಯ ಕಾಂಗ್ರೆಸ್‌ ನಾಯಕರು ಪ್ರಾರಂಭಿಸಿದ್ದು, ಒಕ್ಕೂಟ ವ್ಯವಸ್ಥೆಯ ಮೇಲೆ ಗದಾ ಪ್ರಹಾರ ನಡೆಸಲಾರಂಭಿಸಿದ್ದಾರೆ. ಇದು ಹಿಟ್‌ ಆ್ಯಂಡ್‌ ರನ್‌ ಧೋರಣೆಯ ಹತಾಶ ಪ್ರಯತ್ನ.

ಜನರ ಮೇಲೆ ತೆರಿಗೆಯ ಭಾರ

ರಾಜ್ಯದ ಹಣಕಾಸು ಪರಿಸ್ಥಿತಿಯೂ ದಿನದಿಂದ ದಿನಕ್ಕೆ ಹದಗೆಡುತ್ತಿದೆ. ಬೇರೆ ರಾಜ್ಯಗಳಿಗೆ ಹೋಲಿಸಿದರೆ ವಾಹನ, ರಸ್ತೆ ಮತ್ತು ಅಬಕಾರಿ ತೆರಿಗೆಗಳು ರಾಜ್ಯದಲ್ಲಿ ದುಬಾರಿಯಾಗಿವೆ. ಹೊಸ ವಾಹನಗಳ ಖರೀದಿ ರಾಜ್ಯದಲ್ಲಿ ಅತ್ಯಂತ ತುಟ್ಟಿ. ಗ್ಯಾರಂಟಿ ಯೋಜನೆಗಳಿಗೆ ಹಣ ಜೋಡಿಸುವುದಕ್ಕಾಗಿ ಪೆಟ್ರೋಲ್- ಡೀಸೆಲ್‌ ಸೆಸ್‌ ಹೆಚ್ಚಿಸಲಾಗಿದೆ. ಪ್ರತಿ ಲೀಟರಿಗೆ 3 ರುಪಾಯಿ ಹೊರೆಯನ್ನು ಜನರ ಮೇಲೆ ಹೇರಿದ್ದಾರೆ. ಕಾಂಗ್ರೆಸ್‌ಗೆ ಮತ ಹಾಕಿದ ತಪ್ಪಿನ ಬಗ್ಗೆ ಜನರು ಪ್ರತಿ ಬಾರಿ ಪೆಟ್ರೋಲ್ ಬಂಕ್‌ಗೆ ಹೋದಾಗಲೂ ಪಶ್ಚಾತ್ತಾಪ ಪಡುವ ಸ್ಥಿತಿ ನಿರ್ಮಾಣವಾಗಿದೆ. ಪೆಟ್ರೋಲ್ ಮತ್ತು ಡೀಸೆಲ್ ಖರೀದಿಸುವಾಗ, ಸಿನೆಮಾ ಟಿಕೆಟ್ ಖರೀದಿಸುವಾಗ, ಒಟಿಟಿ ರಿಚಾರ್ಜ್ ಮಾಡುವಾಗ ಸಾರ್ವಜನಿಕರು ಸರ್ಕಾರದ ಮೇಲೆ ಹಿಡಿಶಾಪ ಹಾಕುವಂತಾಗಿದೆ. ನಂದಿನಿ ಹಾಲಿನ ದರ ಪರಿಷ್ಕರಣೆಯಂತೂ ಇನ್ನೊಂದು ಬಗೆಯ ಪ್ರಹಸನ. ನಂದಿನಿ ಹಾಲಿನ ದರ ಏರಿಸಿಲ್ಲ, ಬದಲಾಗಿ 50 ಎಂಎಲ್ ಹೆಚ್ಚುವರಿ ನೀಡಿದ್ದಕ್ಕಾಗಿ ಎರಡು ರುಪಾಯಿ ಹೆಚ್ಚು ಪಡೆಯುತ್ತಿದ್ದೇವೆ ಎಂಬ ಸ್ಪಷ್ಟೀಕರಣ ಬೇರೆ.

ಯಾರ ಮೊರೆ ಆಲಿಸಿದ್ದೀರಿ?

ಆದಾಗಿಯೂ ನಮ್ಮದು ‘ಆಳುವ ಸರ್ಕಾರವಲ್ಲ, ಆಲಿಸುವ ಸರ್ಕಾರ’ ಎಂಬುದು ಕಾಂಗ್ರೆಸ್‌ನವರ ಸಮರ್ಥನೆ. ಹಾಗಾದರೆ ಯಾರ ಮೊರೆಯನ್ನು ಈ ಸರ್ಕಾರ ಆಲಿಸುತ್ತಿದೆ? ರಾಜ್ಯದ ಜನರಿಗೆ ತೆರಿಗೆ ಹೊರೆ ಹೇರಿರುವ ಸರ್ಕಾರಕ್ಕೆ ಕೇರಳದ ವಯನಾಡಿನಲ್ಲಿ ಆನೆ ತುಳಿತಕ್ಕೆ ಮೃತಪಟ್ಟವರಿಗೆ ನಮ್ಮ ರಾಜ್ಯದವರಿಗಿಂತ ಹೆಚ್ಚಿನ ಪರಿಹಾರ ಕೊಡುವುದಕ್ಕಾ? ಈಗ ವಯನಾಡಿನಲ್ಲಿ ಸಂಭವಿಸಿದ ಅನಾಹುತದಲ್ಲಿ ಮೃತಪಟ್ಟವರಿಗೆ 100 ಮನೆ ಕಟ್ಟಿಸಿಕೊಡುವುದಾಗಿ ಘೋಷಿಸಿದೆ. ಮಾನವೀಯ ನೆಲೆಯಲ್ಲಿ ಸಹಾಯ ಮಾಡುವುದಕ್ಕೆ ಖಂಡಿತ ವಿರೋಧವಿಲ್ಲ. ಸ್ವಾಗತಿಸುತ್ತೇವೆ. ಆದರೆ ವಯನಾಡಿನ ಜನರ ಬಗ್ಗೆ ಸಿದ್ದರಾಮಯ್ಯನವರಿಗೆ ಇರುವ ಮಮಕಾರ ಉತ್ತರ ಕನ್ನಡದ ಶಿರೂರಿನ ಮೇಲೆ ಏಕೆ ಇಲ್ಲ? ಅಲ್ಲಿ ಕಾಂಗ್ರೆಸ್‌ನ ರಾಹುಲ್ ಗಾಂಧಿ ಸ್ಪರ್ಧಿಸಿದ್ದರು ಎಂಬ ಕಾರಣಕ್ಕಾಗಿಯೆ? ಅಥವಾ ಇನ್ನು ಮುಂದೆ ಪ್ರಿಯಾಂಕಾ ಗಾಂಧಿ ಸ್ಪರ್ಧಿಸಬಹುದು ಎಂಬ ಕಾರಣಕ್ಕಾಗಿಯೆ? ವಯನಾಡಿನ ಜನರಲ್ಲಿ ಕಾಂಗ್ರೆಸ್ ಬಗ್ಗೆ ಪ್ರೀತಿ ಮೂಡಿಸಲು ರಾಜ್ಯದ ಜನರ ತೆರಿಗೆ ಹಣವನ್ನು ಬಳಸಲಾಗುತ್ತಿದೆಯೇ ಹೊರತು, ನಿಜವಾದ ಮಾನವೀಯತೆಯ ಕಾರಣದಿಂದಲ್ಲ ಎಂದು ನಾವು ವ್ಯಾಖ್ಯಾನಿಸಬಹುದಲ್ಲ?

 

ಎನ್‌ಡಿಎ ಸರ್ಕಾರಕ್ಕೆ ಅಲ್ಪಸಂಖ್ಯಾತರ ಮೇಲೆ ಕೋಪ ಇದೆ: ವಕ್ಫ್ ಕಾಯ್ದೆ ತಿದ್ದುಪಡಿ ವಿಚಾರಕ್ಕೆ ಸಿಎಂ ಕಿಡಿ

ಅಭಿವೃದ್ಧಿ ಕಾರ್ಯಕ್ಕೆ ಹಣವೇ ಇಲ್ಲ

ಅಭಿವೃದ್ಧಿ ಕೆಲಸಗಳಿಗೆ ಹಣ ದೊರೆಯುತ್ತಿಲ್ಲ ಎಂದು ವಿರೋಧ ಪಕ್ಷಗಳು ಆರೋಪ ಮಾಡುವುದು ಸಹಜ. ಆದರೆ ಆಡಳಿತ ಪಕ್ಷದ ಶಾಸಕರೇ ಈ ರೀತಿಯ ಆರೋಪಗಳನ್ನು ಮಾಡುತ್ತಿದ್ದಾರೆ. ಕಾರಣ ಶಾಸಕರ ಕ್ಷೇತ್ರದಲ್ಲಿ ಬೇರೆ ಬೇರೆ ಕೆಲಸಗಳನ್ನು ಮಾಡಿಸಲು ಹಣ ಬಿಡುಗಡೆಯಾಗುತ್ತಿಲ್ಲ. ಕಾರಣ ಸರ್ಕಾರದ ಬಳಿ ಹಣವಿಲ್ಲ. ಜನ ನೇರವಾಗಿ ಸರ್ಕಾರವನ್ನು ಕೇಳಲು ಆಗುವುದಿಲ್ಲ. ಹಾಗಾಗಿ ಕೆಲಸಕ್ಕಾಗಿ ಶಾಸಕರನ್ನು ಸಂಪರ್ಕಿಸುತ್ತಾರೆ. ಕ್ಷೇತ್ರದಲ್ಲಿ ಕೆಲಸಗಳನ್ನು ಮಾಡಲು ಆಗದೆ ಶಾಸಕರು ಜನರಿಗೆ ಮುಖ ತೋರಿಸುವುದು ಕಷ್ಟವಾಗುತ್ತಿದೆ. ಹೊಸ ಕಾಮಗಾರಿಗಳ ಶಂಕು ಸ್ಥಾಪನೆಯ ಮಾತು ಬಿಡಿ, ಹಳೆಯ ಮತ್ತು ನಿರ್ಮಾಣ ಹಂತದ ಕಾಮಗಾರಿಗಳಿಗೆ ಅನುದಾನ ಬಿಡುಗಡೆ ಮಾಡುವುದಕ್ಕೂ ಈ ಸರ್ಕಾರ ಪರ್ಸೆಂಟೇಜ್‌ ನಿಗದಿ ಮಾಡಿದೆ. ಖುದ್ದು ಸಿದ್ದರಾಮಯ್ಯನವರೇ ಆರೋಪದ ಸುಳಿಯಲ್ಲಿ ಸಿಲುಕಿದ್ದು, ವರ್ಗಾವಣೆ ದಂಧೆಯ ‘ಹಲೋ ಅಪ್ಪಾ’ ರಾಜ್ಯದ ತುಂಬಾ ಮೊಳಗುತ್ತಿದೆ. ಅಭಿವೃದ್ಧಿ ವಿಚಾರದಲ್ಲಿ ರಾಜ್ಯವನ್ನು ಹತ್ತು ವರ್ಷ ಹಿಂದೆ ತಳ್ಳಿದಷ್ಟೇ ಸಿದ್ದರಾಮಯ್ಯನವರ ಗ್ಯಾರಂಟಿ ಸರ್ಕಾರದ ಭಾಗ್ಯ!!

click me!