ಪ್ರಲ್ಹಾದ್‌ ಜೋಶಿಗೆ ಸರಿಸಾಟಿ ‘ಕೈ’ ಅಭ್ಯರ್ಥಿ ಯಾರು?: ಲಾಡ್‌, ಶೆಟ್ಟರ್‌ ಹೆಸರು ಮುಂಚೂಣಿಗೆ

By Kannadaprabha News  |  First Published Jan 9, 2024, 4:23 AM IST

ಲೋಕಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಬಿಜೆಪಿಯ ಭದ್ರಕೋಟೆ ಎನಿಸಿರುವ ಈ ಕ್ಷೇತ್ರವನ್ನು ಹೇಗಾದರೂ ಮಾಡಿ ಕೈವಶ ಮಾಡಿಕೊಳ್ಳಲು ಕಾಂಗ್ರೆಸ್‌ ಸೂಕ್ತ ಅಭ್ಯರ್ಥಿಯ ಹುಡುಕಾಟದಲ್ಲಿ ತೊಡಗಿದೆ. 
 


ಶಿವಾನಂದ ಗೊಂಬಿ

ಹುಬ್ಬಳ್ಳಿ (ಜ.09): ಲೋಕಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಬಿಜೆಪಿಯ ಭದ್ರಕೋಟೆ ಎನಿಸಿರುವ ಈ ಕ್ಷೇತ್ರವನ್ನು ಹೇಗಾದರೂ ಮಾಡಿ ಕೈವಶ ಮಾಡಿಕೊಳ್ಳಲು ಕಾಂಗ್ರೆಸ್‌ ಸೂಕ್ತ ಅಭ್ಯರ್ಥಿಯ ಹುಡುಕಾಟದಲ್ಲಿ ತೊಡಗಿದೆ. ಧಾರವಾಡ ಜಿಲ್ಲೆಯ 7 ಹಾಗೂ ಹಾವೇರಿ ಜಿಲ್ಲೆಯ 1 ವಿಧಾನಸಭಾ ಕ್ಷೇತ್ರವನ್ನು ಒಳಗೊಂಡಿರುವ ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ 2004ರಿಂದ ಈವರೆಗೆ ನಡೆದ ನಾಲ್ಕೂ ಚುನಾವಣೆಯಲ್ಲೂ ಬಿಜೆಪಿಯಿಂದ ಪ್ರಹ್ಲಾದ ಜೋಶಿ ಗೆದ್ದು ಬೀಗಿದ್ದಾರೆ. ಈ 8 ವಿಧಾನಸಭಾ ಕ್ಷೇತ್ರಗಳ ಪೈಕಿ ಪ್ರಸ್ತುತ ನಾಲ್ಕರಲ್ಲಿ ಬಿಜೆಪಿ ಶಾಸಕರಿದ್ದರೆ, ನಾಲ್ಕರಲ್ಲಿ ಕಾಂಗ್ರೆಸ್‌ ಶಾಸಕರಿದ್ದಾರೆ. ಕೇಂದ್ರ ಸಚಿವರಾಗಿ ರಾಷ್ಟ್ರಮಟ್ಟದಲ್ಲಿ ಸಾಕಷ್ಟು ಹೆಸರು ಪಡೆದಿರುವ ಜೋಶಿ ಅವರೇ ಈ ಸಲವೂ ಬಿಜೆಪಿಯಿಂದ ಕಣಕ್ಕಿಳಿಯುವುದು ಖಚಿತ. ಈಗಾಗಲೇ ಅವರು ಚುನಾವಣೆಗೆ ಭರ್ಜರಿ ತಯಾರಿ ಕೂಡ ಮಾಡುತ್ತಿದ್ದಾರೆ.

Tap to resize

Latest Videos

ಅಭ್ಯರ್ಥಿಗಳಿಗೆ ‘ಕೈ’ ಹುಡುಕಾಟ: ಜೋಶಿ ಗೆಲುವಿನ ಓಟಕ್ಕೆ ಬ್ರೇಕ್‌ ಹಾಕಬೇಕೆಂಬ ಹಂಬಲವೇನೋ ಕಾಂಗ್ರೆಸ್‌ನಲ್ಲಿದೆ. ಆದರೆ, ಸೂಕ್ತ ಅಭ್ಯರ್ಥಿ ಯಾರು ಎಂಬುದು ನಿಗೂಢ ಪ್ರಶ್ನೆಯಾಗಿದೆ. ಅಭ್ಯರ್ಥಿಗಳ ಹುಡುಕಾಟಕ್ಕೆ ಐದಾರು ಸಲ ಸಭೆಯನ್ನೂ ನಡೆಸಲಾಗಿದೆ. ಕಾಂಗ್ರೆಸ್ಸಿನಲ್ಲಿ 10ಕ್ಕೂ ಹೆಚ್ಚು ಆಕಾಂಕ್ಷಿಗಳು ಟಿಕೆಟ್‌ಗಾಗಿ ಪ್ರಯತ್ನ ನಡೆಸಿದ್ದಾರೆ. ವಿಧಾನ ಪರಿಷತ್‌ ಮಾಜಿ ಸದಸ್ಯ ಮೋಹನ ಲಿಂಬಿಕಾಯಿ, ಸದಾನಂದ ಡಂಗನವರ, ಲಕ್ಷ್ಮೀ ಹೆಬ್ಬಾಳ್ಕರ್‌ ಅಳಿಯ ರಜತ್‌ ಉಳ್ಳಾಗಡ್ಡಿಮಠ, ಬಸವರಾಜ ಗುರಿಕಾರ, ಅನಿಲಕುಮಾರ ಪಾಟೀಲ, ವಿಜಯ ಕುಲಕರ್ಣಿ, ಶರಣಪ್ಪ ಕೊಟಗಿ, ಮಾಜಿ ಶಾಸಕ ಎಂ.ಎಸ್‌.ಅಕ್ಕಿ, ಲೋಹಿತ್‌ ನಾಯ್ಕರ ಹೀಗೆ 10 ಜನರು ಅರ್ಜಿ ಸಲ್ಲಿಸಿದ್ದಾರೆ. ಇವರೆಲ್ಲರೂ ತಮಗೊಂದು ಅವಕಾಶ ಕೊಡಿ ಎಂದು ಬೇಡಿಕೆ ಇಟ್ಟಿದ್ದಾರೆ.

ಶ್ರೀಕಾಂತ್‌ ಪೂಜಾರಿ ಹೆಸರಲ್ಲಿ ಬಿಜೆಪಿ ರಾಜಕೀಯ: ಸಚಿವ ದಿನೇಶ ಗುಂಡೂರಾವ್‌

ಆದರೆ, ಜೋಶಿ ಅವರನ್ನು ಕಟ್ಟಿ ಹಾಕಲು ಅವರಷ್ಟೇ ಪ್ರಬಲವಾಗಿರುವ ಅಭ್ಯರ್ಥಿಯಾಗಬೇಕು ಎನ್ನುವುದು ಕಾಂಗ್ರೆಸ್‌ ನಿಲುವು. ಜೋಶಿ ಅವರಿಗೆ ಪ್ರತಿ ಚುನಾವಣೆಯಲ್ಲೂ ಸಾಥ್‌ ನೀಡುತ್ತಿದ್ದ ಜಗದೀಶ ಶೆಟ್ಟರ್ ಇದೀಗ ಕಾಂಗ್ರೆಸ್ಸಿನಲ್ಲಿದ್ದಾರೆ. ಈಗ ಅವರನ್ನೇ ಕಣಕ್ಕಿಳಿಸಿದರೆ ಹೇಗೆ ಎಂಬ ಲೆಕ್ಕಾಚಾರವೂ ನಡೆದಿದೆ. ಆದರೆ, ಶೆಟ್ಟರ್‌ ತಾವು ಲೋಕಸಭೆಗೆ ಸ್ಪರ್ಧಿಸುವುದಿಲ್ಲ ಎಂದು ಈಗಾಗಲೇ ವರಿಷ್ಠರಿಗೆ ತಿಳಿಸಿದ್ದಾರೆ. ಶಾಸಕ ವಿನಯ ಕುಲಕರ್ಣಿ ಅವರ ಪತ್ನಿ ಶಿವಲೀಲಾ ಕುಲಕರ್ಣಿ ಹೆಸರು ಪ್ರಬಲವಾಗಿ ಕೇಳಿಬಂದಿದೆ. ಇನ್ನು, ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಅವರು ಬಿಜೆಪಿ ಬಿಟ್ಟು ಕಾಂಗ್ರೆಸ್‌ ಸೇರುತ್ತಾರೆ. ಅವರೇ ಜೋಶಿ ವಿರುದ್ಧ ಕಣಕ್ಕಿಳಿಯುತ್ತಾರೆ ಎಂಬ ಗುಲ್ಲು ಹಬ್ಬಿತ್ತು. ಅದೀಗ ತಣ್ಣಗಾಗಿದೆ.

ಅಯೋಧ್ಯೆಯಲ್ಲಿ ವಾಲ್ಮೀಕಿ ದೇಗುಲ ನಿರ್ಮಾಣವಾಗಬೇಕು: ಸಚಿವ ಕೆ.ಎನ್.ರಾಜಣ್ಣ

ಬಿಜೆಪಿಗೆ ಠಕ್ಕರ್‌ ಕೊಡಬೇಕೆಂದರೆ ಕೆಲವು ಕ್ಷೇತ್ರಗಳಲ್ಲಿ ಪ್ರಭಾವಿ ಸಚಿವರನ್ನೇ ಕಣಕ್ಕಿಳಿಸಬೇಕೆಂಬ ಯೋಚನೆಯನ್ನು ಕೆಪಿಸಿಸಿ ಮಾಡಿದೆ. ಅದರಂತೆ ಧಾರವಾಡ ಕ್ಷೇತ್ರದಿಂದ ಸಚಿವ ಸಂತೋಷ ಲಾಡ್‌ ಚುನಾವಣೆಗೆ ನಿಲ್ಲುತ್ತಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಈಗ ರಾಜ್ಯದಲ್ಲಿ ನಮ್ಮದೇ ಸರ್ಕಾರವಿದ್ದು, ಈಗಲೇ ಧಾರವಾಡ ಲೋಕಸಭಾ ಕ್ಷೇತ್ರವನ್ನು ವಶಪಡಿಸಿಕೊಳ್ಳಬೇಕು. ಇದಕ್ಕಾಗಿ ಅಳೆದು ತೂಗಿ ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕು ಎಂಬ ಯೋಚನೆ ಕಾಂಗ್ರೆಸ್‌ನದು. ಇದಕ್ಕಾಗಿ ಪಕ್ಷ ತಯಾರಿಯನ್ನೇನೋ ನಡೆಸಿದೆ. ಆದರೆ, ಕೇಂದ್ರ ಸರ್ಕಾರದ ಸಾಧನೆ, ಮೋದಿಯ ವರ್ಚಸ್ಸು, ಜೋಶಿ ಪ್ರಾಬಲ್ಯವನ್ನು ಮೆಟ್ಟಿ ನಿಂತು ಸ್ಪರ್ಧೆ ಒಡ್ಡುವ ಅಭ್ಯರ್ಥಿಯ ಹುಡುಕಾಟ ಮಾತ್ರ ಕಾಂಗ್ರೆಸ್ಸಿಗೆ ಬಹು ದೊಡ್ಡ ಸವಾಲಾಗಿದೆ.

click me!