
ಬಾಗಲಕೋಟೆ(ಜ.18): ಬಾಗಲಕೋಟೆ ಜಿಲ್ಲೆಯ ಅಬಕಾರಿ ಇಲಾಖೆಯಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರದ ಪ್ರಕರಣ ಈಗ ರಾಜ್ಯಾದ್ಯಂತ ಸಂಚಲನ ಮೂಡಿಸಿದೆ. ಅಬಕಾರಿ ಡಿಸಿ ಜಗದೀಶ್ ನಾಯ್ಕ್ ಹಾಗೂ ಸೂಪರಿಂಟೆಂಡೆಂಟ್ ತಮ್ಮಣ್ಣ ಅವರನ್ನು ಲೋಕಾಯುಕ್ತರು ವಶಕ್ಕೆ ಪಡೆದ ವಿಚಾರವಾಗಿ ಬಾದಾಮಿಯಲ್ಲಿ ಪ್ರತಿಕ್ರಿಯಿಸಿದ ಸಚಿವ ಆರ್. ಬಿ. ತಿಮ್ಮಾಪುರ, 'ಉಪ್ಪು ತಿಂದವ ನೀರು ಕುಡಿಯಲೇಬೇಕು' ಎಂದು ಎಚ್ಚರಿಸಿದ್ದಾರೆ. ಕೆಳಹಂತದ ಅಧಿಕಾರಿಗಳು ಹಣಕ್ಕಾಗಿ ಮಂತ್ರಿಗಳ ಹೆಸರು ದುರ್ಬಳಕೆ ಮಾಡಿಕೊಳ್ಳುವುದು ಸಾಮಾನ್ಯವಾಗಿದೆ ಎಂದು ಅವರು ಕಿಡಿಕಾರಿದ್ದಾರೆ.
ದುಡ್ಡು ಪಡೆಯಲು ಅಧಿಕಾರಿಗಳು ಮಂತ್ರಿಗಳಿಗೆ ಕೊಡಬೇಕು, ಅವರಿಗೆ ಕೊಡಬೇಕು ಇವರಿಗೆ ಕೊಡಬೇಕು ಎಂದು ಸುಳ್ಳು ಹೇಳುತ್ತಾರೆ. ಹೀಗೆ ಹೆಸರು ದುರ್ಬಳಕೆ ಮಾಡಿಕೊಂಡರೆ ಮಾತ್ರ ಅವರಿಗೆ ಹಣ ಸಿಗುತ್ತದೆ. ಇದು ಕೇವಲ ನನ್ನ ಇಲಾಖೆಯಲ್ಲ, ಬೇರೆ ಇಲಾಖೆಗಳಲ್ಲೂ ನಡೆಯುತ್ತಿದೆ ಎಂದು ಸಚಿವರು ಸ್ಫೋಟಕ ಹೇಳಿಕೆ ನೀಡಿದ್ದಾರೆ. ಲೋಕಾಯುಕ್ತರ ಬಲೆಗೆ ಬಿದ್ದಿರುವ ತಮ್ಮಣ್ಣ ಎಂಬ ಅಧಿಕಾರಿಯ ಆಡಿಯೋ ಬಗ್ಗೆ ತಮಗೆ ಮಾಹಿತಿಯಿಲ್ಲ, ಅದನ್ನು ಪರಿಶೀಲಿಸುವುದಾಗಿ ಅವರು ತಿಳಿಸಿದ್ದಾರೆ.
ಇಲಾಖೆಯಲ್ಲಿ ಪಾರದರ್ಶಕತೆ ತರಲು ಹಲವು ಬದಲಾವಣೆ ಮಾಡಲಾಗಿದೆ ಎಂದು ಸಚಿವರು ಸಮರ್ಥಿಸಿಕೊಂಡಿದ್ದಾರೆ. ಮೊದಲು 10-12 ಲಾಗಿನ್ ಹಂತಗಳಿದ್ದವು, ಭ್ರಷ್ಟಾಚಾರ ತಡೆಯಲು ನಾನು ಅದನ್ನು 6-7ಕ್ಕೆ ಇಳಿಸಿದ್ದೇನೆ. ಅಕ್ರಮ ನಡೆದಿದೆ ಎನ್ನಲಾದ ತಮ್ಮಣ್ಣ ಎಂಬುವವನಿಗೂ ಲಾಗಿನ್ ಅಧಿಕಾರಕ್ಕೂ ಸಂಬಂಧವೇ ಇಲ್ಲ. ಸದ್ಯ ಆತನನ್ನು ಅಮಾನತು ಮಾಡಲು ಸೂಚಿಸಿದ್ದೇನೆ, ಆದರೆ ಪ್ರಕರಣ ಈಗ ನ್ಯಾಯಾಲಯದಲ್ಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಪುತ್ರ ವಿನಯ್ ತಿಮ್ಮಾಪುರ ಹೆಸರು ಪ್ರಸ್ತಾಪ: ಸಚಿವರ ತಿರುಗೇಟು
ಪ್ರಕರಣದಲ್ಲಿ ಸಚಿವರ ಪುತ್ರ ವಿನಯ್ ತಿಮ್ಮಾಪುರ ಅವರ ಹೆಸರು ಕೇಳಿಬಂದಿರುವ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, 'ಆಡಿಯೋದಲ್ಲಿ ಏನಿದೆ ಎಂದು ನನಗೆ ಗೊತ್ತಿಲ್ಲ. ಲೋಕಾಯುಕ್ತರು ಬಿಜೆಪಿಗರಿಗೆ ಆಡಿಯೋ ಕೊಟ್ಟಿದ್ದಾರೆಯೇ? ಆರೋಪ ಮಾಡುವಾಗ ಸತ್ಯಾಂಶವಿರಲಿ. ತೇಜೋವಧೆ ಮಾಡಲು ಗಾಳಿಯಲ್ಲಿ ಗುಂಡು ಹಾರಿಸುವ ಕೆಲಸ ನಡೆಯುತ್ತಿದೆ. ಅಧಿಕಾರ ಯಾರಿಗೂ ಶಾಶ್ವತವಲ್ಲ ಎಂದು ತೀಕ್ಷ್ಣವಾಗಿ ಉತ್ತರಿಸಿದ್ದಾರೆ.
'ತಿಮ್ಮಾಪುರ ಈಸ್ ಡಿಫರೆಂಟ್' ಎಂದ ಸಚಿವ
ತಮ್ಮನ್ನು ರಾಜಕೀಯವಾಗಿ ಟಾರ್ಗೆಟ್ ಮಾಡಲಾಗುತ್ತಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನನ್ನ ಮೇಲೆ ಇಂತಹ ಪ್ರಯತ್ನಗಳು ನಡೆಯುತ್ತಿವೆ. ಆದರೆ ತಿಮ್ಮಾಪುರ ಈಸ್ ಎ ಡಿಫರೆಂಟ್. ಇವೆಲ್ಲವೂ ರಾಜಕೀಯದಲ್ಲಿ ನಡೆಯುವ ಸಹಜ ಪ್ರಕ್ರಿಯೆಗಳಷ್ಟೇ ಎಂದು ಹೇಳುವ ಮೂಲಕ ವಿರೋಧಿಗಳಿಗೆ ಟಾಂಗ್ ನೀಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.