Lok Sabha Elections 2024: ಎನ್‌ಡಿಎ 220 ಸೀಟು ಗೆದ್ದರೆ ಅದೇ ದೊಡ್ಡದು: ಸಿಎಂ ಸಿದ್ದರಾಮಯ್ಯ

By Kannadaprabha NewsFirst Published Apr 18, 2024, 5:49 AM IST
Highlights

ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿ ಕೂಟ 200ರಿಂದ 220 ಸೀಟು ಗೆದ್ದರೆ ಅದೇ ಜಾಸ್ತಿ. ಈ ಬಾರಿ ಮತ್ತೆ ಎನ್‌ಡಿಎ ಅಧಿಕಾರಕ್ಕೆ ಬರೋದಿಲ್ಲ, ಮೋದಿ ಮತ್ತೆ ಪ್ರಧಾನಿಯೂ ಆಗುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. 

ಬೆಂಗಳೂರು (ಏ.18): ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿ ಕೂಟ 200ರಿಂದ 220 ಸೀಟು ಗೆದ್ದರೆ ಅದೇ ಜಾಸ್ತಿ. ಈ ಬಾರಿ ಮತ್ತೆ ಎನ್‌ಡಿಎ ಅಧಿಕಾರಕ್ಕೆ ಬರೋದಿಲ್ಲ, ಮೋದಿ ಮತ್ತೆ ಪ್ರಧಾನಿಯೂ ಆಗುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಬುಧವಾರ ನಡೆದ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಬಿಜೆಪಿಯ ಮಾಜಿ ಸಂಸದ ಕರಡಿ ಸಂಗಣ್ಣ, ದಾಸರಹಳ್ಳಿ ಕೃಷ್ಣಮೂರ್ತಿ, ನಿವೃತ್ತ ಐಎಎಸ್‌ ಎ.ಎಸ್‌.ಪುಟ್ಟಸ್ವಾಮಿ, ಪತ್ರಕರ್ತೆ ಸ್ವಾತಿ ಚಂದ್ರಶೇಖರ್‌ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡು ಬಳಿಕ ಅವರು ಮಾತನಾಡಿದರು.

ಬಿಜೆಪಿಯವರ ಆಂತಕರ ಸಮೀಕ್ಷೆಯಲ್ಲೇ ಎನ್‌ಡಿಎ 200 ಸೀಟು ಗೆಲ್ಲಬಹುದು ಎಂಬ ವರದಿ ಬಂದಿದೆ. ಹಾಗಾಗಿ ಇದು ಹೊರಗೆ ಬರಬಾರದು, ಜನರಿಗೆ ಗೊತ್ತಾಗಬಾರದು ಅಂತ ಎನ್‌ಡಿಎ 400 ಸೀಟು ಗೆಲ್ಲುತ್ತೆ ಅಂತ ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಆದರೆ, ನನಗಿರುವ ಮಾಹಿತಿ ಪ್ರಕಾರ ಎನ್‌ಡಿಎ ಮೈತ್ರಿ ಕೂಟ ಈ ಬಾರಿ 200ರಿಂದ 220 ಸೀಟು ಗೆದ್ದರೆ ಅದೇ ಹೆಚ್ಚು ಎಂದು ಹೇಳಿದರು.

ಬಿಜೆಪಿ ಮಾಜಿ ಸಂಸದ ಕರಡಿ ಸಂಗಣ್ಣ ಕಾಂಗ್ರೆಸ್‌ ಸೇರ್ಪಡೆ

ಇಂಡಿಯಾ ಒಕ್ಕೂಟಕ್ಕೆ ಹೆಚ್ಚು ಸ್ಥಾನ: ಈ ಬಾರಿ ಕರ್ನಾಟಕವೂ ಸೇರಿದಂತೆ ಇಡೀ ದೇಶದಲ್ಲಿ ಕಾಂಗ್ರೆಸ್‌ ಹಾಗೂ ಇಂಡಿಯಾ ಒಕ್ಕೂಟದ ಪರವಾದ ಅಲೆ ಇದೆ. ಜೊತೆಗೆ ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ಆಡಳಿತ ವಿರೋಧಿ ಅಲೆ ಇದೆ. ಇದರಿಂದ ದೇಶದಲ್ಲಿ ಕಾಂಗ್ರೆಸ್‌ ಅತಿ ಹೆಚ್ಚು ಸ್ಥಾನಗಳಲ್ಲಿ ಗೆದ್ದು ಅಧಿಕಾರಕ್ಕೆ ಬರಲಿದೆ. ಕರ್ನಾಟಕದಲ್ಲೂ ಕೂಡ ಪಂಚ ಗ್ಯಾರಂಟಿಗಳ ಅಲೆ ಇದೆ. ಈಗಾಗಲೇ ಡಿ.ಕೆ.ಶಿವಕುಮಾರ್‌ ಅವರು ಹೇಳಿರುವಂತೆ ರಾಜ್ಯದ 20 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಗೆಲುವು ಸಾಧಿಸಲಿದೆ ಎಂದರು. ಇವತ್ತು ಇಡೀ ದೇಶದಲ್ಲಿ ನಡೆಯುತ್ತಿರುವುದು ಸುಳ್ಳು ಮತ್ತು ಸತ್ಯದ ನಡುವಿನ ಹೋರಾಟ. ಜನರಿಗೆ ಕಾಂಗ್ರೆಸ್‌ ಬಗ್ಗೆ ವಿಶ್ವಾಸ, ನಂಬಿಕೆ ಬಂದಿದೆ.

ಕಾಂಗ್ರೆಸ್‌ನವರು ನುಡಿದಂತೆ ನಡೆಯುತ್ತಾರೆ. ಕೊಟ್ಟ ಮಾತು ಈಡೇರಿಸುತ್ತಾರೆ. ಸುಳ್ಳು ಹೇಳುವುದಿಲ್ಲ ಎಂಬುದು ಗೊತ್ತಾಗಿದೆ. ಬಿಜೆಪಿಯವರು ಬರೀ ಸುಳ್ಳು ಹೇಳುವವರು. ಪ್ರಧಾನಿ ಮೋದಿ 2014ರಲ್ಲಿ ಹೇಳಿದ್ದಂತೆ ಕಪ್ಪು ಹಣ ತಂದು 15 ಲಕ್ಷ ಕೊಡಲಿಲ್ಲ, ಅಚ್ಚೇದಿನ ಬರಲಿಲ್ಲ, ರೈತರ ಆದಾಯ ದುಪ್ಪಟ್ಟು ಮಾಡಲಿಲ್ಲ, ಬೆಲೆ ಏರಿಕೆ ಗಗನ ಮುಟ್ಟಿದೆ, 2 ಕೋಟಿ ಉದ್ಯೋಗ ಸೃಷ್ಟಿಸಲಿಲ್ಲ ಹೀಗೆ ಅವರು ಕೊಟ್ಟ ಯಾವ ಭರವಸೆಗಳನ್ನೂ ಈಡೇರಿಸಿಲ್ಲ. ಜನರ ಸಮಸ್ಯೆಗಳ ಬಗ್ಗೆಯೂ ಪ್ರಸ್ತಾಪಿಸಿಲ್ಲ. ಬರೀ ಭಾವನಾತ್ಮಕ ವಿಚಾರಗಳನ್ನು ಹೇಳಿಕೊಂಡು ಬಂದು ಹಿಂದೆ ಯಶಸ್ಸನ್ನು ಕಂಡಿದ್ದಾರೆ. ಆದರೆ ಈ ಬಾರಿ ಅವರಿಗೆ ಆ ರೀತಿ ಯಶಸ್ಸು ಸಿಗಲು ಸಾಧ್ಯವಿಲ್ಲ ಎಂದರು. ಈ ವೇಳೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಸಚಿವ ಶಿವರಾಜ ತಂಗಡಗಿ, ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಮತ್ತಿತರರಿದ್ದರು.

ಮಗನಿಗಾಗಿ ಅನೇಕ ನಿಷ್ಠರಿಗೆ ಬಿಜೆಪಿ ಟಿಕೆಟ್‌ ಮಿಸ್‌: ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ತಮ್ಮ ಮಗ ವಿಜಯೇಂದ್ರ ಅವರನ್ನು ಮುಂದೆ ಮುಖ್ಯಮಂತ್ರಿ ಮಾಡಬೇಕೆಂಬ ಉದ್ದೇಶಕ್ಕೆ ವಿಜಯೇಂದ್ರ ಅವರಿಗೆ ಹೊಂದಿಕೊಳ್ಳದವರೆಲ್ಲರಿಗೂ ಈ ಬಾರಿ ಟಿಕೆಟ್‌ ತಪ್ಪಿಸಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದ್ದಾರೆ. ಕರಡಿ ಸಂಗಣ್ಣ ಕೆಳ ಹಂತದಿಂದ ಬೆಳೆದು ಬಂದ ನಾಯಕ. ಜಿಲ್ಲಾ ಪಂಚಾಯಿತಿ ಸದಸ್ಯರಾಗಿ, ಶಾಸಕರಾಗಿ, ಸಂಸದರಾಗಿದ್ದವರು. ಕ್ಷೇತ್ರದಲ್ಲಿ ಒಳ್ಳೆಯ ಕೆಲಸ ಮಾಡಿ ಉತ್ತಮ ಹೆಸರು, ಜನಸಂಪರ್ಕ ಹೊಂದಿರುವವರು. 

ಕೇಂದ್ರ ಸರ್ಕಾರ ಉದ್ಯಮಿಗಳಿಂದ ಹಫ್ತಾ ಸುಲಿಗೆ: ರಾಹುಲ್‌ ಗಾಂಧಿ ಗಂಭೀರ ಆರೋಪ

ಅಂತಹವರಿಗೆ ಯಾಕೆ ಟಿಕೆಟ್‌ ತಪ್ಪಿಸಿದರು ಎಂಬುದು ಇವತ್ತಿನವರೆಗೂ ನನಗೆ ಅರ್ಥವಾಗಿಲ್ಲ. ಬಿಜೆಪಿಯಲ್ಲಿ ಯಡಿಯೂರಪ್ಪ, ಸಂತೋಷ್‌ ಪರವಾದ ಎರಡು ಗುಂಪುಗಳಿವೆ. ಒಳ್ಳೆಯ ಅಭ್ಯರ್ಥಿಗಳಿಗೆ ಟಿಕೆಟ್‌ ತಪ್ಪಲು ಎರಡು ಕಾರಣಗಳಿವೆ. ಒಂದು ಯಡಿಯೂರಪ್ಪ ಅವರು ತಮ್ಮ ಮಗನನ್ನು ಮುಖ್ಯಮಂತ್ರಿ ಮಾಡಬೇಕು ಎಂಬುದು. ಅದಕ್ಕಾಗಿ ಯಾರು ವಿಜಯೇಂದ್ರನಿಗೆ ಹೊಂದಿಕೊಳ್ಳುವುದಿಲ್ಲ ಅವರೆಲ್ಲರಿಗೂ ಟಿಕೆಟ್‌ ತಪ್ಪಿಸಿದ್ದಾರೆ. ಎರಡನೆಯದು, ಕಳೆದ ಬಾರಿ 25 ಸ್ಥಾನ ಗೆದ್ದಿದ್ದ ಬಿಜೆಪಿಯವರಿಗೆ ಈ ಬಾರಿ ಹೆಚ್ಚು ಸ್ಥಾನ ಗೆಲ್ಲುವ ವಿಶ್ವಾಸವಿಲ್ಲ. ಹಾಗಾಗಿ ಅನೇಕ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಬದಲಿಸಿದ್ದಾರೆ ಎಂದರು.

click me!