ಸಿದ್ದರಾಮಯ್ಯ- ಡಿಕೆಶಿ ಕುಸ್ತಿಯಲ್ಲಿ ಬಡವಾದ ರಾಜ್ಯ: ವಿಶ್ವೇಶ್ವರ ಹೆಗಡೆ ಕಾಗೇರಿ

By Kannadaprabha News  |  First Published Apr 5, 2024, 10:23 AM IST

ಕಾಂಗ್ರೆಸ್ ಯಾವತ್ತಿದ್ದರೂ ಅಮಾವಾಸ್ಯೆಯ ರಾತ್ರಿ ಕಾಣುವ ಬಾವಿ ಎಂದು ಉತ್ತರಕನ್ನಡ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಕಿಡಿಕಾರಿದರು. 


ಕುಮಟಾ (ಏ.05): ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಯಾವುದೇ ಗ್ಯಾರಂಟಿಗಳು ಸಮರ್ಪಕವಾಗಿಲ್ಲ. ಡಿ.ಕೆ. ಶಿವಕುಮಾರ್ ಮತ್ತು ಸಿದ್ದರಾಮಯ್ಯ ಮಧ್ಯದ ಕುಸ್ತಿಯಲ್ಲಿ ರಾಜ್ಯ ಬಡವಾಗಿದೆ. ಅಭಿವೃದ್ಧಿ ಶೂನ್ಯ ಆಗಿದೆ. ಕಾಂಗ್ರೆಸ್ ಯಾವತ್ತಿದ್ದರೂ ಅಮಾವಾಸ್ಯೆಯ ರಾತ್ರಿ ಕಾಣುವ ಬಾವಿ ಎಂದು ಉತ್ತರಕನ್ನಡ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಕಿಡಿಕಾರಿದರು. ಇಲ್ಲಿನ ಬಿಜೆಪಿ ಕಾರ್ಯಾಲಯದ ಆವಾರದಲ್ಲಿ ಮಂಡಲದ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿ, ಕಾಂಗ್ರೆಸ್ ಸರ್ಕಾರ ಬರಗಾಲ ಎದುರಿಸಲು ವಿಫಲವಾಗಿದೆ. ನೀರಿಗೆ, ಮೇವಿಗೆ ವ್ಯವಸ್ಥೆಯಿಲ್ಲ ಎಂದರು.

ಕ್ಷೇತ್ರದಲ್ಲಿ ಜನರ ಉತ್ಸಾಹ ನೋಡಿ ಗೆಲುವಿನ ವಿಶ್ವಾಸ ಮೂಡಿದೆ. ಆದರೆ ಅತಿಯಾದ ಆತ್ಮವಿಶ್ವಾಸದಲ್ಲಿ ಮೈಮರೆಯದಂಥ ದೊಡ್ಡ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಇಲ್ಲಿಗೆ ಬಸನಗೌಡ ಪಾಟೀಲ ಯತ್ನಾಳರ ಆಗಮನ ಆನೆಬಲ ತಂದಿದೆ. ಹಾಗೆಯೇ ಜೆಡಿಎಸ್‌ನೊಂದಿಗಿನ ಮೈತ್ರಿ ಹಾಲು- ಸಕ್ಕರೆಯಂತೆ ಗೆಲುವಿಗೆ ಶಕ್ತಿ ತುಂಬಲಿದೆ ಎಂದರು. ಶಾಸಕ ದಿನಕರ ಶೆಟ್ಟಿ ಮಾತನಾಡಿ, ಬಿಜೆಪಿ ಸರ್ಕಾರದ ಬಜೆಟ್‌ನಲ್ಲಿ ಘೋಷಣೆಯಾಗಿ ಜಾಗವೂ ಅಂತಿಮವಾಗಿದ್ದ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ವಿಚಾರಕ್ಕೆ ಕಾಂಗ್ರೆಸ್ ಸರ್ಕಾರ ಬಂದ ಕೂಡಲೇ ಕಲ್ಲುಹಾಕಿ ತಾರತಮ್ಯ ಮಾಡಿದೆ. ಸರ್ಕಾರ ಪ್ರಯತ್ನಿಸಿದ್ದರೆ ಆಸ್ಪತ್ರೆಯನ್ನು ಕಾರ್ಯರೂಪಕ್ಕೆ ತರಬಹುದಿತ್ತು. ವಿಶ್ವೇಶ್ವರ ಹೆಗಡೆ ಕಾಗೇರಿ ಗೆಲುವು ನಮ್ಮ ಪ್ರಥಮ ಆದ್ಯತೆ ಎಂದರು.

Tap to resize

Latest Videos

undefined

ಕಾರ್ಯಕ್ರಮ ಉದ್ಘಾಟಿಸಿದ ಬಿಜೆಪಿ ರಾಜ್ಯ ಉಪಾಧ್ಯಕ್ಷೆ ರೂಪಾಲಿ ನಾಯ್ಕ ಅವರು, ಪ್ರಧಾನಿ ಮೋದಿಯವರು ನೀಡಿದ ಯೋಜನೆ ಹಾಗೂ ಸವಲತ್ತುಗಳು ಎಲ್ಲ ಧರ್ಮ ಜಾತಿಯವರಿಗೂ ಸಮಾನವಾಗಿ ಸಿಕ್ಕಿದೆ. ಮೋದಿಗಾಗಿ ಮತ್ತು ದೇಶಕ್ಕಾಗಿ ಕಾಗೇರಿಯವರನ್ನು ಗೆಲ್ಲಿಸಿ. ಶಾಸಕ ಹೆಬ್ಬಾರ ಕಾರ್ಯಕರ್ತರನ್ನು ಗೊಂದಲಕ್ಕೆ ಹಾಕಿದ್ದು, ಅವರು ಬೀದಿಗೆ ಬೀಳುವ ಭಯದಲ್ಲಿ ತಳಮಳಗೊಂಡಿದ್ದಾರೆ ಎಂದರು. ಜೆಡಿಎಸ್ ಮುಖಂಡ ಸೂರಜ ನಾಯ್ಕ, ವಿಶ್ವೇಶ್ವರ ಹೆಗಡೆ ಕಾಗೇರಿಯವರ ಪ್ರೀತಿಗೆ ಮನಸೋತು ಬಂದಿದ್ದೇನೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಕೂಡಿ ಗಳಿಸಿದ್ದ ಒಂದೂ ಕಾಲು ಲಕ್ಷದಷ್ಟು ಮತವನ್ನು ಈಗ ಮತ್ತೆ ಕಾಗೇರಿಯವರಿಗೆ ಸಂಗ್ರಹಿಸಿಕೊಡಬೇಕಿದೆ. ನಮ್ಮ ಪಕ್ಷದ ಕಾರ್ಯಕರ್ತರನ್ನು ಪ್ರೀತಿ, ವಿಶ್ವಾಸದಿಂದ ನೋಡಿಕೊಳ್ಳಿ, ಮೈತ್ರಿ ಧರ್ಮವನ್ನು ಪಾಲಿಸಿ ಎಂದರು.

ಸಿದ್ದರಾಮಯ್ಯಗೆ ಸಿಎಂ ಸ್ಥಾನ ಕಳೆದುಕೊಳ್ಳುವ ಆತಂಕ ಎದುರಾಗಿದೆ: ಜಗದೀಶ್‌ ಶೆಟ್ಟರ್

ಜಿಲ್ಲಾಧ್ಯಕ್ಷ ಎನ್.ಎಸ್. ಹೆಗಡೆ ಮಾತನಾಡಿದರು. ಸಂಚಾಲಕ ಗೋವಿಂದ ನಾಯ್ಕ, ನಿಕಟಪೂರ್ವ ಜಿಲ್ಲಾಧ್ಯಕ್ಷ ವೆಂಕಟೇಶ ನಾಯಕ, ಜಿಲ್ಲಾ ಸಹಪ್ರಭಾರಿ ಪ್ರಸನ್ನ ಕೆರೆಕೈ, ಎಂ.ಜಿ. ಭಟ್, ನಾಗರಾಜ ನಾಯಕ ತೊರ್ಕೆ, ಶಿವಾನಂದ ಹೆಗಡೆ ಕಡತೋಕಾ, ಪ್ರಧಾನ ಕಾರ್ಯದರ್ಶಿಗಳಾದ ಗುರುಪ್ರಸಾದ ಹೆಗಡೆ, ಪ್ರಶಾಂತ ನಾಯ್ಕ, ಜಿಲ್ಲಾ ಉಪಾಧ್ಯಕ್ಷ ಗಜಾನನ ಗುನಗಾ, ಡಾ. ಜಿ.ಜಿ. ಹೆಗಡೆ, ಜೆಡಿಎಸ್ ತಾಲೂಕಾಧ್ಯಕ್ಷ ಸಿ.ಜಿ. ಹೆಗಡೆ, ವಕ್ತಾರ ಜಿ.ಕೆ. ಪಟಗಾರ ಇತರರು ಇದ್ದರು. ಕ್ಷೇತ್ರದ ಪ್ರಭಾರಿ ಕೆ.ಜಿ. ನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಂಡಲಾಧ್ಯಕ್ಷ ಜಿ.ಐ. ಹೆಗಡೆ ಸ್ವಾಗತಿಸಿದರು. ವಿನಾಯಕ ನಾಯ್ಕ ವಂದಿಸಿದರು. ಚಿದಾನಂದ ಭಂಡಾರಿ ನಿರ್ವಹಿಸಿದರು.

click me!