ಕಾರಜೋಳ ಮಾದಿಗ ಸಮುದಾಯದವರು, ಆದ್ರೆ ಚುನಾವಣೆಯಲ್ಲಿ ತಪ್ಪು ಹೆಜ್ಜೆ ಇಟ್ರು: ಕೆ.ಎಚ್.ಮುನಿಯಪ್ಪ

By Kannadaprabha NewsFirst Published Apr 13, 2024, 7:35 PM IST
Highlights

ಮಾದಿಗರು ಗೆಲ್ಲುವ ಕಡೆ ಯಾಕೆ ಬಂದು ತೊಂದರೆ ಕೊಡ್ತೀಯ ಅಂತ ಸೂಕ್ಷ್ಮವಾಗಿ ಹೇಳಿದ್ದೆ, ಆದರೆ ಅವರು ಕಿವಿಗೆ ಹಾಕಿಕೊಳ್ಳಲಿಲ್ಲವೆಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಎಚ್.ಮುನಿಯಪ್ಪ ಹೇಳಿದರು. 

ಚಿತ್ರದುರ್ಗ (ಏ.13): ಗೋವಿಂದ ಕಾರಜೋಳ ಮಾದಿಗ ಸಮುದಾಯದವರೇ ಆಗಿದ್ದಾರೆ. ಅವರು ಬುದ್ಧಿವಂತರಾಗಿದ್ದರೆ ಇಲ್ಲಿಗೆ ಬಂದು ಸ್ಪರ್ಧೆ ಮಾಡುತ್ತಿರಲಿಲ್ಲ. ಮಾದಿಗರು ಗೆಲ್ಲುವ ಕಡೆ ಯಾಕೆ ಬಂದು ತೊಂದರೆ ಕೊಡ್ತೀಯ ಅಂತ ಸೂಕ್ಷ್ಮವಾಗಿ ಹೇಳಿದ್ದೆ, ಆದರೆ ಅವರು ಕಿವಿಗೆ ಹಾಕಿಕೊಳ್ಳಲಿಲ್ಲವೆಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಎಚ್.ಮುನಿಯಪ್ಪ ಹೇಳಿದರು. ಕಾಂಗ್ರೆಸ್ ಅಭ್ಯರ್ಥಿ ಬಿ.ಎನ್.ಚಂದ್ರಪ್ಪ ಅವರನ್ನು ಬೆಂಬಲಿಸಿ ಶುಕ್ರವಾರ ಚಿತ್ರದುರ್ಗದಲ್ಲಿ ನಡೆದ ಲೋಕಸಭಾ ಕ್ಷೇತ್ರದ ಮಾದಿಗ ಸಮುದಾಯದ ಮುಖಂಡರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ರಾಜ್ಯದ 28 ಕ್ಷೇತ್ರಗಳಲ್ಲಿ ಬೇರೆ ಎಲ್ಲಿಯಾದರೂ ಹೋಗಿ ಕಾರಜೋಳ ಸ್ಪರ್ಧಿಸಬಹುದಿತ್ತು. 

ಧರ್ಮ ಅಧರ್ಮದ ನಡುವೆ ನಡೆಯುತ್ತಿರುವ ಚುನಾವಣೆಯಲ್ಲಿ ಧರ್ಮದ ಪರವಾಗಿರುವ ಸರಳ, ಸಂಪನ್ನ ಬಿ.ಎನ್.ಚಂದ್ರಪ್ಪ ಅವರನ್ನು ಗೆಲ್ಲಿಸುವಂತೆ ಮಾದಿಗ ಸಮುದಾಯದವರಲ್ಲಿ ಮನವಿ ಮಾಡಿದರು. ಮಾದಿಗ ಸಮುದಾಯಕ್ಕೆ ರಾಜ್ಯದಲ್ಲಿ ಕೋಲಾರ ಮತ್ತು ಚಿತ್ರದುರ್ಗ ಎರಡು ಕಡೆ ಸೀಟ್‌ ತರಬೇಕಾದರೆ ಸಾಕಷ್ಟು ಹೋರಾಟ ನಡೆಸಬೇಕಾಯಿತು. ಸೀಟು ತಪ್ಪಿಸುವ ಹುನ್ನಾರವು ನಡೆಯಿತು. ಎಲ್ಲವನ್ನು ಮೀರಿ ದೊಡ್ಡ ಸಂಖ್ಯೆಯ ಜನಾಂಗಕ್ಕೆ ಅನ್ಯಾಯ ಮಾಡಬಾರದೆಂದು ಎಐಸಿಸಿ ಅಧಿನಾಯಕಿ ಸೋನಿಯಾ ಗಾಂಧಿ ಹಾಗೂ ಮಲ್ಲಿಕಾರ್ಜುನ ಖರ್ಗೆ ಮಾದಿಗ ಸಮುದಾಯಕ್ಕೆ ಟಿಕೆಟ್ ನೀಡಿ ಸ್ಪರ್ಧಿಸಲು ಅವಕಾಶ ನೀಡಿದ್ದಾರೆ. 

ಆಫ್‌ ಮರ್ಡರ್‌, ಫುಲ್‌ ಮರ್ಡರ್‌ ಮಾಡಿರೋರ ಜತೆ ಇದ್ದೆ: ಜೈಲಿನ ಕರಾಳ ದಿನಗಳ ಅನುಭವ ಬಿಚ್ಚಿಟ್ಟ ಸೋನು ಗೌಡ!

ಚಿತ್ರದುರ್ಗ ಹಾಗೂ ಕೋಲಾರ ಎರಡು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆದ್ದರೆ ಶೋಷಿತರು, ಅಲ್ಪಸಂಖ್ಯಾತರು, ದಲಿತರು ಶಾಂತವಾಗಿರಬಹುದು. ಕೋಮು ಗಲಭೆಗಳು ನಡೆಯುವುದಿಲ್ಲ. ಕೇವಲ ಮಾದಿಗರಷ್ಟೆ ಅಲ್ಲ ಎಲ್ಲಾ ಜಾತಿ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕ್ಷೇತ್ರ ಗೆಲ್ಲಬೇಕೆಂದರು. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇವರು ಐದು ಉಚಿತ ಗ್ಯಾರಂಟಿಗಳನ್ನು ನೀಡಿದ್ದಾರೆ. ಎಲ್ಲಾ ವರ್ಗದವರನ್ನು ಹಸಿವು ಮುಕ್ತವನ್ನಾಗಿಸಿ ಆಹಾರ ಭದ್ರತೆ ಕಾಯ್ದೆ ಜಾರಿಗೆ ತಂದಿದ್ದು, ಕಾಂಗ್ರೆಸ್ ಗೃಹಲಕ್ಷ್ಮಿ, ಅನ್ನಭಾಗ್ಯ, ಯುವನಿಧಿ, ಶಕ್ತಿ ಯೋಜನೆ ಈ ಬಾರಿಯ ಚುನಾವಣೆಯಲ್ಲಿ ಪಕ್ಷಕ್ಕೆ ವರದಾನವಾಗಲಿದೆ. ಕಾಂಗ್ರೆಸ್ ಕಾರ್ಯಕ್ರಮಗಳನ್ನು ಪ್ರತಿ ಮನೆ ಮನೆಗೆ ಮುಟ್ಟಿಸಿ ಅಭ್ಯರ್ಥಿ ಬಿ.ಎನ್.ಚಂದ್ರಪ್ಪ ಅವರನ್ನು ಬಹುಮತಗಳಿಂದ ಗೆಲ್ಲಿಸುವಂತೆ ಕೆ.ಎಚ್.ಮುನಿಯಪ್ಪ ಮಾದಿಗ ಸಮುದಾಯದವರಲ್ಲಿ ಕೋರಿದರು.

ಮಾಜಿ ಸಚಿವ ಎಚ್.ಆಂಜನೇಯ ಮಾತನಾಡಿ, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ವರಿಷ್ಟರು ಕೋಲಾರ ಹಾಗೂ ಚಿತ್ರದುರ್ಗ ಮೀಸಲು ಕ್ಷೇತ್ರಗಳಲ್ಲಿ ಮಾದಿಗರಿಗೆ ಟಿಕೆಟ್ ನೀಡಿ ಸ್ಪರ್ಧೆಗೆ ಅವಕಾಶ ಮಾಡಿಕೊಟ್ಟಿದ್ದಾರೆ. ನನಗೂ ಸ್ಪರ್ಧಿಸುವಂತೆ ಕೇಳಿದರು. ರಾಷ್ಟ್ರ ರಾಜಕಾರಣ ಇಷ್ಟವಿಲ್ಲದ ಕಾರಣ ಬಿ.ಎನ್.ಚಂದ್ರಪ್ಪನವರನ್ನೆ ಸ್ಪರ್ಧಿಸುವಂತೆ ಹೇಳಿದೆ. ಅನೇಕ ಆಕಾಂಕ್ಷಿಗಳಿದ್ದರೂ ಬಿ.ಎನ್.ಚಂದ್ರಪ್ಪನವರನ್ನು ಅಭ್ಯರ್ಥಿಯನ್ನಾಗಿ ಪಕ್ಷ ಘೋಷಿಸಿದೆ. ಮಾದಿಗ ಸಮುದಾಯ ಒಗ್ಗಟ್ಟಾಗಿ ಗೆಲ್ಲಿಸಿ ರಾಜಕೀಯವಾಗಿ ಶಕ್ತಿ ತುಂಬುವ ಕೆಲಸ ಮಾಡಬೇಕೆಂದು ಮಾದಿಗ ಜನಾಂಗದವರನ್ನು ತಾಕೀತು ಮಾಡಿದರು.

ಕೆಪಿಸಿಸಿ ಅಸಂಘಟಿತ ಕಾರ್ಮಿಕರ ವಿಭಾಗದ ರಾಜ್ಯಾಧ್ಯಕ್ಷ ಜಿ.ಎಸ್.ಮಂಜುನಾಥ್ ಮಾತನಾಡಿ, ಮಾದಿಗ ಸಮುದಾಯದಲ್ಲಿ ನಾಯಕತ್ವವನ್ನು ಕುಂದಿಸುವಂತ ಕೆಲಸವಾಗುತ್ತಿರುವುದರಿಂದ ಎಚ್.ಆಂಜನೇಯ ಹೊಳಲ್ಕೆರೆ ವಿಧಾನಸಭಾ ಕ್ಷೇತ್ರದಿಂದ ಸೋಲಬೇಕಾಯಿತು. ಸಣ್ಣ ಸಣ್ಣ ಮನಸ್ತಾಪಗಳನ್ನು ಬಿಟ್ಟು ಎಲ್ಲರೂ ಒಂದಾಗಿ ಲೋಕಸಭಾ ಚುನಾವಣೆಯಲ್ಲಿ ಚಿತ್ರದುರ್ಗ ಕ್ಷೇತ್ರದಿಂದ ಸ್ಪರ್ಧಿಸಿರುವ ಬಿ.ಎನ್.ಚಂದ್ರಪ್ಪನವರನ್ನು ಗೆಲ್ಲಿಸಬೇಕಿದೆ ಎಂದು ಹೇಳಿದರು. ಜಾತ್ಯತೀತ ಪಕ್ಷ ಜೆಡಿಎಸ್, ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಂಡಿದೆ. ಮಾದಿಗರೆಲ್ಲಾ ಒಂದಾಗಿ ಬಿಜೆಪಿಯನ್ನು ಮಣಿಸಬೇಕು. ರಾಜ್ಯದಲ್ಲಿ 60-70 ಲಕ್ಷ ಮಾದಿಗರಿದ್ದೇವೆ. 

ರಾಮನಗರವೇ ಕಣ್ಣಂದವರು ಜಿಲ್ಲೆಯೇ ಬಿಟ್ಟು ಹೋದರಲ್ಲ: ಎಚ್‌ಡಿಕೆ ವಿರುದ್ಧ ಡಿ.ಕೆ.ಸುರೇಶ್ ಪರೋಕ್ಷ ವಾಗ್ದಾಳಿ

ಡಿ.ಸುಧಾಕರ್‌ ಅವರನ್ನು ಮಾದಿಗರು ಮಂತ್ರಿಯನ್ನಾಗಿ ಮಾಡಿದ್ದಾರೆ. ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಮಾದಿಗ ಮತದಾರರಿದ್ದಾರೆ. ಮನುವಾದಿಗಳ ಕೈಗೆ ಅಧಿಕಾರ ಕೊಡಬಾರದೆಂದರೆ ಕಾಂಗ್ರೆಸ್‍ನ ಬಿ.ಎನ್.ಚಂದ್ರಪ್ಪನವರನ್ನು ಗೆಲ್ಲಿಸಬೇಕಿದೆ ಎಂದು ವಿನಂತಿಸಿದರು. ಅಭ್ಯರ್ಥಿ ಬಿ.ಎನ್.ಚಂದ್ರಪ್ಪ, ಲಿಡ್ಕರ್ ಮಾಜಿ ಚೇರ್ಮನ್ ಓ.ಶಂಕರ್, ಮಾದಿಗ ಸಮಾಜದ ಮುಖಂಡರಾದ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಗೋಪಾಲಕೃಷ್ಣ, ಆರ್.ನರಸಿಂಹರಾಜ, ಡಿ.ಎನ್.ಮೈಲಾರಪ್ಪ, ಜಿ.ಎಲ್.ಮೂರ್ತಿ, ಪಾಂಡುರಂಗ ಸ್ವಾಮಿ, ವೀರಭದ್ರಪ್ಪ, ರಂಗಸ್ವಾಮಿ, ಮಲ್ಲೇಶಪ್ಪ, ತಿಪ್ಪಮ್ಮ, ಗೀತಮ್ಮ, ಸುಜಾತಮ್ಮ, ಎಂ.ಡಿ.ರವಿ, ಬಿ.ಪಿ.ತಿಪ್ಪೇಸ್ವಾಮಿ, ಹರೀಶ್, ಕೊಟ್ಟ ಶಂಕರ್, ಜಯಣ್ಣ, ಕೆ.ಕುಮಾರ್, ಬಿ.ಪಿ.ಪ್ರಕಾಶ್ ಮೂರ್ತಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್‍ಪೀರ್, ಮಾದಿಗ ಸಮಾಜದ ಎಸ್.ಜಗದೀಶ್, ಕೆ.ರಾಜಣ್ಣ, ಮಲ್ಲೇಶ್ ಇದ್ದರು.

click me!