ನನಗೆ ಟಿಕೆಟ್ ಸಿಗುವುದು ನಿಶ್ಚಿತ, ಪ್ರತಾಪ್ ಸಿಂಹ ಸೋಲು ಖಚಿತ: ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್

By Ravi JanekalFirst Published Mar 8, 2024, 8:33 PM IST
Highlights

 ಸಂಸದ ಪ್ರತಾಪ್ ಸಿಂಹ ಕಳೆದ ಹತ್ತು ವರ್ಷಗಳಲ್ಲಿ ಏನೂ ಕೆಲಸ ಮಾಡಿಲ್ಲ. ರಾಜ್ಯ ಸರ್ಕಾರದ ಕೆಲಸಗಳನ್ನು ತಮ್ಮ ಕೆಲಸಗಳೆಂದು ಪ್ರಿಂಟ್ ಮಾಡಿ ಊರೆಲ್ಲಾ ಹಂಚುತ್ತಿದ್ದಾರೆ. ಅದರಲ್ಲಿರುವುದು 90 ರಷ್ಟು ಸುಳ್ಳು ಮಾಹಿತಿ ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಸಂಸದ ಪ್ರತಾಪ್ ಸಿಂಹ ವಿರುದ್ಧ ಕಿಡಿಕಾರಿದ್ದಾರೆ. 

ವರದಿ: ರವಿ.ಎಸ್ ಹಳ್ಳಿ ಏಷ್ಯಾನೆಟ್ ಸವುರ್ಣ ನ್ಯೂಸ್

ಕೊಡಗು (ಮಾ.8) : 28 ಕ್ಷೇತ್ರಗಳ ಪೈಕಿ ಇಂದು ಸಂಜೆಯೇ 9 ಕ್ಷೇತ್ರಗಳ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಆಗುತ್ತದೆ ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಹೇಳಿದ್ದಾರೆ. 

ಮಡಿಕೇರಿಯಲ್ಲಿ ಮಾತನಾಡಿದ ಅವರು ಯಾವುದೇ ಗೊಂದಲವಿಲ್ಲದ 9 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಆಗುತ್ತದೆ. ಇನ್ನುಳಿದ ಕ್ಷೇತ್ರಗಳಿಗೆ ಇನ್ನೊಮ್ಮೆ ಸಭೆ ನಡೆಸಿ ಅಭ್ಯರ್ಥಿಗಳ ಫೈನಲ್ ಮಾಡಲಾಗುತ್ತದೆ. ಆ ಸಂಬಂಧ 11 ರಂದು ಬೆಂಗಳೂರಿನಲ್ಲಿ ಸಭೆ ನಡೆಸಿ ನಿರ್ಧರಿಸಲಿದ್ದಾರೆ. 15 ನೇ ತಾರೀಕಿನ ಒಳಗೆ ಎಲ್ಲಾ ಕ್ಷೇತ್ರಗಳಿಗೆ ಅಭ್ಯರ್ಥಿಗಳು ಫೈನಲ್ ಆಗಲಿದ್ದಾರೆ ಎಂದಿದ್ದಾರೆ. 

ಮೈಸೂರು ಕೊಡಗು ಕ್ಷೇತ್ರ(Mysuru kodagu loksabha constituency)ದಲ್ಲಿ ಸಾಕಷ್ಟು ಆಕಾಂಕ್ಷಿಗಳು ಇದ್ದರು. ಅದರಲ್ಲಿ ಅಂತಿಮವಾಗಿ ಮೂವರನ್ನು ಎಐಸಿಸಿ ಪರಿಗಣಿಸಿದೆ. ಎಂ ಲಕ್ಷ್ಮಣ್, ಶ್ರುಶುತ್ ಗೌಡ ಹಾಗೂ ಡಾ. ಬಿ. ಜೆ ವಿಜಯ ಕುಮಾರ್ ಅವರನ್ನು ಅಂತಿಮಗೊಳಿಸಿತ್ತು. ಅದರಲ್ಲಿ ಇಬ್ಬರ ಹೆಸರನ್ನು ಫೈನಲ್ಗೊಳಿಸಿದೆ. ನಾನು ಪ್ರಬಲ ಆಕಾಂಕ್ಷಿಯಾಗಿದ್ದು, ಪಕ್ಷಕ್ಕಾಗಿ ದುಡಿಯುತ್ತಿದ್ದೇನೆ. ನೂರಕ್ಕೆ ನೂರರಷ್ಟು ನನಗೆ ಟಿಕೆಟ್ ಸಿಗುವ ವಿಶ್ವಾಸವಿದೆ. ನಮ್ಮ ಮುಖಂಡರು ಕೂಡ ನಿಮ್ಮ ಕ್ಷೇತ್ರದಲ್ಲಿ ನೀವು ಕೆಲಸ ಮಾಡಿಕೊಳ್ಳಿ ಎಂದು ಹೇಳಿದ್ದಾರೆ. 

ಸಂಸದ ಪ್ರತಾಪ ಸಿಂಹ ಮೇಲೆ ಸುಳ್ಳು ಆರೋಪ; ಕೆಪಿಸಿಸಿ ವಕ್ತಾರ ಲಕ್ಷ್ಮಣ್ ವಿರುದ್ದ ಮಾನನಷ್ಟ ಕೇಸ್‌ ದಾಖಲಿಸಲು ಕೋರ್ಟ್ ಆದೇಶ

ನೂರಕ್ಕೆ ನೂರರಷ್ಟು ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಲಿದ್ದಾರೆ. ನಾವು ಕನಿಷ್ಠ 2 ಲಕ್ಷ ಮತಗಳ ಅಂತರದಿಂದ ಗೆಲ್ಲುತ್ತೇವೆ ಎಂದು ಎಂ ಲಕ್ಷ್ಮಣ್ ಹೇಳಿದ್ದಾರೆ. 
ಮಹದೇವಪ್ಪನವರು ದಲಿತ ಸಿಎಂ ಆಗಬೇಕು ಎಂದು ಕೇಳಿರುವುದಲ್ಲಿ ಯಾವುದೇ ತಪ್ಪಿಲ್ಲ. ಮುಂದಿನ ದಿನಗಳಲ್ಲಿ ನೂರಕ್ಕೆ ನೂರರಷ್ಟು ದಲಿತ ಸಿಎಂ ಆಗುತ್ತಾರೆ ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಹೇಳಿದ್ದಾರೆ. 

ದಲಿತ ಸಿಎಂ ಮಾಡುವುದಕ್ಕೆ ಅವಕಾಶ ಇರುವುದು ಕಾಂಗ್ರೆಸ್ ನಲ್ಲಿ ಮಾತ್ರ. ಇಡೀ ದೇಶದಲ್ಲಿ ಇಲ್ಲಿಯವರೆಗೆ 37 ದಲಿತ ಸಿಎಂಗಳನ್ನು ಮಾಡಿದ್ದೇವೆ. ಇತರೆ ಸಮುದಾಯದವರನ್ನು ಒಗ್ಗೂಡಿಸಿಕೊಂಡು ಹೋಗುವ ಲೀಡರ್ ಶಿಪ್ ಇಲ್ಲ ಅಂತ ಹೇಳಿದ್ದಾರೆ. ನಾವು ಸಣ್ಣ ಸಣ್ಣ ಸಮುದಾಯಗಳಿಂದ ಬಂದವರನ್ನೂ ಸಿಎಂ ಮಾಡಿದ್ದೇವೆ. ಆ ವ್ಯವಸ್ಥೆ ಇರುವುದು ಕಾಂಗ್ರೆಸ್ ನಲ್ಲಿ ಮಾತ್ರ. ಬಿಜೆಪಿಯಲ್ಲಿ ಇಡೀ ದೇಶದಲ್ಲಿ ಒಬ್ಬರೇ ಒಬ್ಬರು ದಲಿತ ಸಿಎಂ ಮಾಡಿದ್ದಾರಾ ತೋರಿಸಲಿ. ಈಗ ಬಿಜೆಪಿ ಅಧಿಕಾರ ಇರುವ 17 ರಾಜ್ಯಗಳಲ್ಲಿ ಒಬ್ಬರೇ ಒಬ್ಬರು ದಲಿತ ಸಿಎಂ ಅಥವಾ ಡಿಸಿಎಂ ಇದ್ದಾರಾ ಹೇಳಲಿ ಎಂದು ಸವಾಲು ಹಾಕಿದರು. 

ಈಗ ಸಿದ್ದರಾಮಯ್ಯನವರು ಸಿಎಂ ಆಗಿ ಮುಂದುವರಿದಿದ್ದಾರೆ. ಖಾಲಿಯಾದ ಮೇಲೆ ಮುಂದೆ ಡಿಕೆಶಿಯವರು ಸಿಎಂ ಆಗಬಹುದು. ಇದರಲ್ಲಿ ಡಿಕೆಶಿ ಅವರು ಸಿಎಂ ಆಗುತ್ತಾರೆ ಎನ್ನುವುದಕ್ಕೆ ಸಂಬಂಧಿಸಿದಂತೆ ಯಾವುದೇ ಹುನ್ನಾರಗಳಿಲ್ಲ. ಮಹದೇವಪ್ಪ ಅವರು ನಮ್ಮ ಸಮುದಾಯದವರು ಸಿಎಂ ಆಗಬೇಕೆಂದು ಕೇಳುವುದರಲಿ ತಪ್ಪೇನಿದೆ ಎಂದು ಮಡಿಕೇರಿಯಲ್ಲಿ ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್ ಪ್ರಶ್ನಿಸಿದ್ದಾರೆ.

 ಸಂಸದ ಪ್ರತಾಪ್ ಸಿಂಹ ಕಳೆದ ಹತ್ತು ವರ್ಷಗಳಲ್ಲಿ ಏನೂ ಕೆಲಸ ಮಾಡಿಲ್ಲ. ರಾಜ್ಯ ಸರ್ಕಾರದ ಕೆಲಸಗಳನ್ನು ತಮ್ಮ ಕೆಲಸಗಳೆಂದು ಪ್ರಿಂಟ್ ಮಾಡಿ ಊರೆಲ್ಲಾ ಹಂಚುತ್ತಿದ್ದಾರೆ. ಅದರಲ್ಲಿರುವುದು 90 ರಷ್ಟು ಸುಳ್ಳು ಮಾಹಿತಿ ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಸಂಸದ ಪ್ರತಾಪ್ ಸಿಂಹ ವಿರುದ್ಧ ಕಿಡಿಕಾರಿದ್ದಾರೆ. 

ನಾನು ಬಿಜೆಪಿ ಎಂಪಿ ಪ್ರತಾಪ್ ಸಿಂಹ ಅವರನ್ನು ಆಹ್ವಾನಿಸುತ್ತಿದ್ದೇನೆ. ಅವರು ಯಾವೆಲ್ಲಾ ಯೋಜನೆ ಜಾರಿಗೆ ತಂದಿದ್ದಾರೆ ಚರ್ಚೆಗೆ ಬರಲಿ. ಬೆಂಗಳೂರು ಮೈಸೂರು ದಶಪಥ ಹೈವೇ ನಾನು ತಂದಿದ್ದು ಅಂತ ಸುಳ್ಳು ಬರೆದುಕೊಂಡಿದ್ದಾರೆ. ಅವರ ಮನೆಯಿಂದಲೋ, ಜೇಬಿನಿಂದನೋ ಹಣ ತಂದು ಹಾಕಿದ್ದಾರೆ ಎನ್ನುವಂತೆ ಮಾತನಾಡುತ್ತಿದ್ದಾರೆ. ನಮ್ಮ ಸಿದ್ದರಾಮಯ್ಯನವರ ಸರ್ಕಾರ ಇದ್ದಾಗ ಜಾರಿಗೆ ತಂದಿದ್ದ ಕುಡಿಯುವ ನೀರಿನ ಯೋಜನೆ ನಾನು ತಂದಿದ್ದು ಎಂದು ಬರೆದುಕೊಂಡಿದ್ದಾರೆ. ಇದನ್ನೆಲ್ಲಾ ಜನ ಯಾರು ನಂಬುತ್ತಾರೆಯೇ. 59 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ನಾನು ತಂದಿದ್ದು ಎಂದು ಬರೆದುಕೊಂಡಿದ್ದಾರೆ. ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಕೇಂದ್ರದಲ್ಲಿ ಇದೆಯಾ ಎಂದು ಲಕ್ಷ್ಮಣ್ ಪ್ರಶ್ನಿಸಿದ್ದಾರೆ. 

ಡಿಕೆಶಿ ಅವರ ಆಸ್ತಿ ಅಕ್ರಮ ಎನ್ನುವ ಎಚ್‌ಡಿಕೆ ಅವರದ್ದು ಬೇನಾಮಿ ಅಲ್ಲವೆ: ಕೆಪಿಸಿಸಿ ವಕ್ತಾರ ಲಕ್ಷ್ಮಣ್

ನಾನು ಅವರ ವಿರುದ್ಧ ಮಾತನಾಡಬಾರದು ಅಂತ ಸಿವಿಲ್ ಕೋರ್ಟಿನಲ್ಲಿ ತಡೆಯಾಜ್ಞೆ ತಂದಿದ್ದರು. ಅದು ಆರನೇ ತಾರೀಖಿನಂದು ತೆರವಾಗಿದೆ. ನನ್ನ ವಾಕ್ ಸ್ವಾತಂತ್ರ್ಯವನ್ನು ಕಸಿಯುವುದಕ್ಕೆ ಯಾರಿಗೂ ಸಾಧ್ಯವಿಲ್ಲ. ಪ್ರತಾಪ್ ಸಿಂಹ ಅವರಿಗೆ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಲ್ಲ. ಇದ್ದಿದ್ದರೆ ಜನ ಸಾಮಾನ್ಯರು ಕೇಳುವ ಪ್ರಶ್ನೆಗೆ ಉತ್ತರಿಸುತ್ತಿದ್ದರು. ಪ್ರತಾಪ್ ಸಿಂಹ ಕನಿಷ್ಠ ಒಂದುವರೆಯಿಂದ 2 ಲಕ್ಷ ಮತಗಳ ಅಂತರದಲ್ಲಿ ಸೋಲುತ್ತಾರೆ. ಕೇಂದ್ರದ ಜನವಿರೋಧಿ ನೀತಿಯಿಂದ ಅವರು ಸೋಲುತ್ತಾರೆ. ಅವರನ್ನು ಕಾಂಗ್ರೆಸ್ ಕಾರ್ಯಕರ್ತರಲ್ಲ, ಬಿಜೆಪಿ ಕಾರ್ಯಕರ್ತರೇ ಸೋಲಿಸುವುದಕ್ಕೆ ಕಾಯುತ್ತಿದ್ದಾರೆ. ಮೊದಲಿಗೆ ಅವರಿಗೆ ಟಿಕೆಟ್ ಸಿಗುತ್ತಾ ಅದನ್ನು ಖಚಿತಪಡಿಸಿಕೊಳ್ಳಲಿ ಎಂದು, ಸಂಸದ ಪ್ರತಾಪ್ ಸಿಂಹ ವಿರುದ್ಧ ಎಂ ಲಕ್ಷ್ಮಣ್ ವಾಗ್ದಾಳಿ ನಡೆಸಿದ್ದಾರೆ.

click me!