ಮಾಜಿ ಸಚಿವ ಸಿ.ಟಿ.ರವಿ ಅವರಿಗೆ ಅನ್ಯಾಯವಾಗಿದೆ: ಮರುಗಿದ ಬಿ.ಎಸ್.ಯಡಿಯೂರಪ್ಪ

By Govindaraj S  |  First Published Apr 11, 2024, 7:32 PM IST

ಮಾಜಿ ಸಚಿವ ಸಿ.ಟಿ.ರವಿ ಅವರಿಗೆ ಅನ್ಯಾಯವಾಗಿದೆ ಎಂದು ಹೇಳುವ ಮೂಲಕ ವಿಧಾನಸಭೆ ಚುನಾವಣೆಯಲ್ಲಿ ರವಿ ಅವರ ಸೋಲಿಗೆ ಯಡಿಯೂರಪ್ಪ ವಿಷಾಧಿಸಿದರು. 


ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು 

ಚಿಕ್ಕಮಗಳೂರು (ಏ.11): ಮಾಜಿ ಸಚಿವ ಸಿ.ಟಿ.ರವಿ ಅವರಿಗೆ ಅನ್ಯಾಯವಾಗಿದೆ ಎಂದು ಹೇಳುವ ಮೂಲಕ ವಿಧಾನಸಭೆ ಚುನಾವಣೆಯಲ್ಲಿ ರವಿ ಅವರ ಸೋಲಿಗೆ ಯಡಿಯೂರಪ್ಪ ವಿಷಾಧಿಸಿದರು. ಚಿಕ್ಕಮಗಳೂರು ತಾಲೂಕಿನ ಸಖರಾಯಪಟ್ಟಣದಲ್ಲಿ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ-ಜೆಡಿಎಸ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಬೃಹತ್ ಸಮಾವೇಶವನ್ನು ಮಾಜಿ ಮುಖ್ಯಮಂತ್ರಿ ಬಿಜೆಪಿ ಧುರೀಣ ಬಿ.ಎಸ್.ಯಡಿಯೂರಪ್ಪ ಉದ್ದೇಶಿಸಿ ಮಾತನಾಡಿದರು ವಿಧಾನ ಸಭೆಯಲ್ಲಿ ಗುಡುಗಬೇಕಾದ ರವಿ ಅವರು ಹೊರಗಿದ್ದಾರೆ. ಅವರಿಗೆ ಮುಂದೆ ಬರುವ ದಿನಗಳಲ್ಲಿ ವಿಧಾನಸಭೆ ಅಥವಾ ವಿಧಾನ ಪರಿಷತ್ತು ಎಲ್ಲಿಯಾದರೂ ಒಂದು ಅವಕಾಶ ಸಿಗಲೇಬೇಕು. 

Latest Videos

undefined

ಅದಕ್ಕೆ ಎಲ್ಲ ರೀತಿಯ ಪ್ರಯತ್ನವನ್ನು ಪ್ರಾಮಾಣಿಕವಾಗಿ ಮಾಡುತ್ತೇನೆ ಎಂದು ಹೇಳಿದರು. ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಕೊಡುವ ಮತಗಳು ಅರಾಜಕತೆ, ದೇಶದ ಆರ್ಥಿಕ ದಿವಾಳಿತನ, ಭ್ರಷ್ಟಾಚಾರ, ಅಭದ್ರತೆ ಹಾಗೂ ಆಂತರಿಕ ಸುರಕ್ಷತೆಯ ಅಪಾಯಕ್ಕೆ ನಾಂದಿಯಾಗುತ್ತದೆ ಎಂದರು. ಹಣದ ಬಲ, ಅಧಿಕಾರ ಬಲ, ತೋಳ್ಬಲ, ಹೆಂಡದ ಬಲ, ಜಾತಿ ವಿಷಬೀಜ ಬಿತ್ತಿ ಓಟು ಪಡೆಯುವ ಕಾಲವಿತ್ತು. ಆದರೆ ಜನ ಇಂದು ಜಾಗೃತರಾಗಿದ್ದಾರೆ. ಸರಿ, ತಪ್ಪು ತಿಳಿದುಕೊಳ್ಳುವ ಶಕ್ತಿ ಅವರಿಗಿದೆ. ಕಾಂಗ್ರೆಸಿಗರ ರಾಜಕೀಯ ದೊಂಬರಾಟವನ್ನು ನಂಬುವುದಿಲ್ಲ ಎಂದರು.

ಎಂ.ಎಲ್.ಎ ಸೋಲಿನ ಕಾರಣ ಬಿಚ್ಚಿಟ್ಟ ಸಿ.ಟಿ.ರವಿ: ಕಳೆದ ವಿಧಾನಸಭೆ ಚುನಾವಣೆಯಲ್ಲಿ ನಾವು ಮಾಡಿದ ಅಭಿವೃದ್ಧಿ ಕೆಲಸಗಳು ಚರ್ಚೆಯಾಗಲಿಲ್ಲ. ಅಪಪ್ರಚಾರಗಳು ಚರ್ಚೆಯಾದವು. ನಮ್ಮ ನಾಯಕರ ಹೆಸರನ್ನೂ ಬಳಸಿಕೊಂಡು ಅಪಪ್ರಚಾರ ನಡೆಸಿದರು. ನಮ್ಮ ಗ್ರಹಚಾರ ಕೆಟ್ಟಿತ್ತೆಂದು ಕಾಣುತ್ತೆ. ಜನತಾದಳದ ಅಭ್ಯರ್ಥಿ ಇದ್ದರೂ ಅವರೂ ಕಾಂಗ್ರೆಸ್ಗೆ ಬೆಂಬಲಿಸಿಬಿಟ್ಟರು..ತಮ್ಮ ಸೋಲಿಗೆ ಕಾರಣರಲ್ಲಿ ಒಬ್ಬರಾದ ಜೆಡಿಎಸ್ ಮುಖಂಡರ ಎಸ್.ಎಲ್.ಬೋಜೇಗೌಡ ಅವರ ಸಮ್ಮುಖದಲ್ಲೇ ಮಾಜಿ ಸಚಿವ ಸಿ.ಟಿ.ರವಿ ಹೀಗೆ ಭಾವುಕರಾಗಿ ನುಡಿದರು. 

ಸುಳ್ಳುಗಾರ ಮೋದಿ ಜನರಿಗೆ ನಾಮ ಹಾಕ್ತಾರೆ: ಸಚಿವ ಮಧು ಬಂಗಾರಪ್ಪ ಲೇವಡಿ

ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೋಟಾ ಶ್ರೀನಿವಾಸ ಪೂಜಾರಿ ಪರ ಬೃಹತ್ ಸಮಾವೇಶವನ್ನುದ್ದೇಶಿ ಮಾತನಾಡಿದ ರವಿ, ಜಿಲ್ಲೆಯಲ್ಲಿ ನಾವು ಐದೂ ಜನರು ಕೆಲಸ ಮಾಡಿಯೂ ಸೋತೆವು. ಐದೂ ಜನರ ಸೋಲಿನ ಅಂತರ ಕೇವಲ 15 ಸಾವಿರ ಮತಗಳು. ಅಷ್ಟು ಮತಗಳು ಕಾಂಗ್ರೆಸ್ನಿಂದ ಬಿಜೆಪಿಗೆ ಬಂದಿದ್ದರೆ ನಾವೆಲ್ಲರೂ ಈಗಲೂ ಹಾಲಿ ಆಗಿರುತ್ತಿದ್ದೆವು. ಒಂದು ಬೂತ್ಗೆ ೫ ಮತಗಳು ಹೆಚ್ಚು ಬಂದಿದ್ದರೆ ಐದೂ ಜನರೂ ಗೆಲ್ಲುತ್ತಿದ್ದೆವು ಎಂದರು.ಮುಖಂಡರುಗಳಾದ ಆರಗ ಜ್ಞಾನೇಂದ್ರ, ಭೈರತಿ ಬಸವರಾಜ್, ಡಿ.ಎನ್.ಜೀವರಾಜ್, ಮಾಜಿ ಶಾಸಕರುಗಳಾದ ಡಿ.ಎಸ್.ಸುರೇಶ್, ಬೆಳ್ಳಿ ಪ್ರಕಾಶ್, ಜೆಡಿಎಸ್ ಮುಖಂಡ, ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಬೋಜೇಗೌಡ, ಜಿಲ್ಲಾ ಬಿಜೆಪಿ ಅಧ್ಯಕ್ಷ ಎಂ.ಆರ್.ದೇವರಾಜ ಶೆಟ್ಟಿ, ಎಚ್.ಸಿ.ಕಲ್ಮರುಡಪ್ಪ ಸೇರಿದಂತೆ ವಿವಿಧ ಮುಖಂಡರು ಉಪಸ್ಥಿತರಿದ್ದರು.

click me!