ಬಿಜೆಪಿಗೆ ಜೆಡಿಎಸ್‌ ಕೋಲಾರ ಸಡ್ಡು, ಬಿಜೆಪಿ ಸಂಸದರಿದ್ದರೂ ಅಭ್ಯರ್ಥಿ ಕಣಕ್ಕಿಳಿಸಲು ಜೆಡಿಎಸ್ ನಿರ್ಧಾರ

By Kannadaprabha NewsFirst Published Mar 19, 2024, 5:04 AM IST
Highlights

ಕೋಲಾರ ಕ್ಷೇತ್ರವನ್ನು ಬಿಜೆಪಿಯವರು ಬಿಟ್ಟು ಕೊಡಲಿ ಅಥವಾ ಕೊಡದಿರಲಿ. ಅಲ್ಲಿ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಮಿತ್ರ ಪಕ್ಷ ಜೆಡಿಎಸ್‌ ತೀರ್ಮಾನಿಸಿದೆ.

ಬೆಂಗಳೂರು (ಮಾ.19) :   ಕೋಲಾರ ಕ್ಷೇತ್ರವನ್ನು ಬಿಜೆಪಿಯವರು ಬಿಟ್ಟು ಕೊಡಲಿ ಅಥವಾ ಕೊಡದಿರಲಿ. ಅಲ್ಲಿ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಮಿತ್ರ ಪಕ್ಷ ಜೆಡಿಎಸ್‌ ತೀರ್ಮಾನಿಸಿದೆ.

ಹಾಸನ ಮತ್ತು ಮಂಡ್ಯ ಕ್ಷೇತ್ರಗಳನ್ನು ಬಿಟ್ಟು ಕೊಡುವ ಬಗ್ಗೆ ಸ್ಪಷ್ಟತೆ ಕೊಟ್ಟಿರುವ ಬಿಜೆಪಿ ವರಿಷ್ಠರು ಇದುವರೆಗೆ ಕೋಲಾರ ಕ್ಷೇತ್ರದ ಯಾವುದೇ ಸ್ಪಷ್ಟತೆ ನೀಡಿಲ್ಲ. ಹೀಗಾಗಿಯೇ ಕೋಲಾರ ಕ್ಷೇತ್ರವನ್ನು ಬಿಟ್ಟು ಕೊಡಲೇಬೇಕು ಎಂಬ ಪಟ್ಟನ್ನು ಮುಂದಿಟ್ಟಿರುವ ಜೆಡಿಎಸ್‌ ನಾಯಕರು, ಅಭ್ಯರ್ಥಿ ಅಂತಿಮಗೊಳಿಸುವ ಸಿದ್ಧತೆಯಲ್ಲಿದ್ದಾರೆ.

Lok sabha election 2024: ಚಿಕ್ಕಬಳ್ಳಾಪುರ ಕ್ಷೇತ್ರದ ಬಿಜೆಪಿ ಟಿಕೆಟ್ ಯಾರಿಗೆ?

ಈ ವಿಷಯದಲ್ಲಿ ಬೇಸರಗೊಂಡಿರುವ ಪಕ್ಷದ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಅವರು, ನಾವು ಬಿಜೆಪಿಯಿಂದ ಆರೇಳು ಕ್ಷೇತ್ರಗಳನ್ನು ಕೇಳಿಲ್ಲ. ನಾವು ಕೇಳಿರುವುದು ಮೂರ್ನಾಲ್ಕು ಕ್ಷೇತ್ರ ಮಾತ್ರ. ನಮ್ಮ ಶಕ್ತಿ ಅವರಿಗೂ ಗೊತ್ತಿದೆ. ಮೂರ್ನಾಲ್ಕು ಕ್ಷೇತ್ರ ಕೊಡುತ್ತಾರೆ ಎಂಬ ನಂಬಿಕೆ ಇಟ್ಟುಕೊಂಡಿದ್ದೇನೆ. ಕೇವಲ ಎರಡು ಕ್ಷೇತ್ರ ತೆಗೆದುಕೊಳ್ಳೋಕೆ ನಾನು ಇಷ್ಟು ಪ್ರಯತ್ನ ಮಾಡಬೇಕಿತ್ತಾ? ಇಷ್ಟೆಲ್ಲ ಹೊಂದಾಣಿಕೆ ಬೇಕಾ ನನಗೆ ಎಂದು ತೀಕ್ಷ್ಣವಾಗಿ ಹೇಳಿದ್ದಾರೆ.

ಕೋಲಾರ ಕ್ಷೇತ್ರದ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಸಂಬಂಧ ಕುಮಾರಸ್ವಾಮಿ ಅವರು ತಮ್ಮ ನಿವಾಸದಲ್ಲಿ ಸೋಮವಾರ ಸಂಜೆ ಜಿಲ್ಲಾ ಮುಖಂಡರೊಂದಿಗೆ ಸಭೆ ನಡೆಸಿದರು. ಸಭೆಯಲ್ಲಿ ಕೋರ್‌ ಕಮಿಟಿ ಅಧ್ಯಕ್ಷ ಜಿ.ಟಿ.ದೇವೇಗೌಡ, ಶಾಸಕರಾದ ವೆಂಕಟಶಿವಾರೆಡ್ಡಿ, ಸಮೃದ್ಧಿ ಮಂಜುನಾಥ್‌, ಮಾಜಿ ಶಾಸಕ ಕೃಷ್ಣಾರೆಡ್ಡಿ, ಜೆಡಿಎಸ್‌ ಮಹಿಳಾ ಘಟಕ ಅಧ್ಯಕ್ಷೆ ರಶ್ಮಿ ರಾಮೇಗೌಡ ಸೇರಿದಂತೆ ಜಿಲ್ಲೆಯ ಇತರೆ ಮುಖಂಡರು ಭಾಗಿಯಾಗಿದ್ದರು.

ಕೋಲಾರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಕಳೆದ ವಿಧಾನಸಭೆಯ ಪರಾಜಿತ ಅಭ್ಯರ್ಥಿ ಎಂ.ಮಲ್ಲೇಶ್ ಬಾಬು, ಶಾಸಕ ಸಮೃದ್ಧಿ ಮಂಜುನಾಥ್‌ ಮತ್ತು ಮಾಜಿ ಶಾಸಕ ನಿಸರ್ಗ ನಾರಾಯಣಸ್ವಾಮಿ ಆಕಾಂಕ್ಷಿಗಳಾಗಿದ್ದು, ಈ ಮೂವರಲ್ಲಿ ಒಬ್ಬರ ಆಯ್ಕೆಯ ಕುರಿತು ಸಮಾಲೋಚನೆ ನಡೆಸಲಾಯಿತು.

ನಾನೊಬ್ಬನೇ ಅಭ್ಯರ್ಥಿಗಳ ಆಯ್ಕೆಮಾಡಲು ಸಾಧ್ಯವಿಲ್ಲ: ಈಶ್ವರಪ್ಪಗೆ ವಿಜಯೇಂದ್ರ ತಿರುಗೇಟು

ಈ ವೇಳೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ ಮುಖಂಡರು, ಅಂತಿಮ ನಿರ್ಣಯವನ್ನು ಕುಮಾರಸ್ವಾಮಿಗೆ ಅವರ ತೀರ್ಮಾನಕ್ಕೆ ಬಿಟ್ಟರು. ಕುಮಾರಸ್ವಾಮಿ ಅವರು ಯಾವುದೇ ಅಭ್ಯರ್ಥಿಯನ್ನು ಅಂತಿಮಗೊಳಿಸಿದರೂ, ಅವರ ಪರವಾಗಿ ಕೆಲಸ ಮಾಡಿ ಗೆಲ್ಲಿಸಿಕೊಡುತ್ತೇವೆ ಎಂದು ಕುಮಾರಸ್ವಾಮಿಗೆ ನಾಯಕರು ಆಶ್ವಾಸನೆ ನೀಡಿದರು.

ಬಳಿಕ ಕುಮಾರಸ್ವಾಮಿ ಮಾತನಾಡಿ, ಅಭ್ಯರ್ಥಿ ಆಯ್ಕೆ ಸಂಬಂಧ ರಾಜ್ಯ ಮತ್ತು ಸ್ಥಳೀಯ ಬಿಜೆಪಿ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು. ಶೀಘ್ರದಲ್ಲಿಯೇ ಈ ಬಗ್ಗೆ ತೀರ್ಮಾನ ಪ್ರಕಟಿಸಲಾಗುವುದು ಎಂದರು ಎನ್ನಲಾಗಿದೆ.

click me!