ಗೋವಾದಲ್ಲಿ ‘ಡಬಲ್‌ ಧಮಾಕಾ’ಗೆ ಬಿಜೆಪಿ ಸಿದ್ಧತೆ

By Kannadaprabha NewsFirst Published Apr 15, 2024, 5:31 AM IST
Highlights

ಅರಬ್ಬಿ ಸಮುದ್ರಕ್ಕೆ ಹೊಂದಿಕೊಂಡಂತಿರುವ ಪುಟ್ಟ ರಾಜ್ಯ ಗೋವಾದಲ್ಲಿ ಈ ಬಾರಿ ಬಿಜೆಪಿ ಮತ್ತು ಕಾಂಗ್ರೆಸ್‌ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ. ಇಲ್ಲಿ ಮೂರು ಪ್ರಾದೇಶಿಕ ಪಕ್ಷಗಳಿದ್ದರೂ ಎರಡು ಪಕ್ಷಗಳು ಬಿಜೆಪಿ ಹಾಗೂ ಕಾಂಗ್ರೆಸ್‌ನೊಂದಿಗೆ ಮೈತ್ರಿ ಮಾಡಿಕೊಂಡಿರುವ ಪರಿಣಾಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿಲ್ಲ

ಅರಬ್ಬಿ ಸಮುದ್ರಕ್ಕೆ ಹೊಂದಿಕೊಂಡಂತಿರುವ ಪುಟ್ಟ ರಾಜ್ಯ ಗೋವಾದಲ್ಲಿ ಈ ಬಾರಿ ಬಿಜೆಪಿ ಮತ್ತು ಕಾಂಗ್ರೆಸ್‌ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ. ಇಲ್ಲಿ ಮೂರು ಪ್ರಾದೇಶಿಕ ಪಕ್ಷಗಳಿದ್ದರೂ ಎರಡು ಪಕ್ಷಗಳು ಬಿಜೆಪಿ ಹಾಗೂ ಕಾಂಗ್ರೆಸ್‌ನೊಂದಿಗೆ ಮೈತ್ರಿ ಮಾಡಿಕೊಂಡಿರುವ ಪರಿಣಾಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿಲ್ಲ. ಆದರೆ ಕ್ರಾಂತಿಕಾರಿ ಗೋವಾ ಪಾರ್ಟಿ (ಆರ್‌ಜಿಪಿ) ಮಾತ್ರ ಎರಡೂ ಕ್ಷೇತ್ರಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು, ರಾಷ್ಟ್ರೀಯ ಪಕ್ಷಗಳು ಪಡೆಯುವ ಮತಗಳಲ್ಲಿ ವಿಭಜನೆ ಮಾಡುವ ಮೂಲಕ ಯಾರಿಗೆ ಲಾಭ ಮಾಡಿಕೊಡಲಿದೆ ಎಂಬುದು ಕುತೂಹಲವಾಗಿದೆ.

ಹೇಗಿದೆ ಬಿಜೆಪಿ ಪರಿಸ್ಥಿತಿ?

2014ರ ಚುನಾವಣೆಯಲ್ಲಿ ಎರಡೂ ಕ್ಷೇತ್ರಗಳನ್ನು ಗೆದ್ದಿದ್ದ ಬಿಜೆಪಿ 2019ರಲ್ಲಿ ಅತಿಯಾದ ಆತ್ಮವಿಶ್ವಾಸದಿಂದಾಗಿ ದಕ್ಷಿಣ ಗೋವಾ ಲೋಕಸಭಾ ಕ್ಷೇತ್ರವನ್ನು ಕಾಂಗ್ರೆಸ್‌ಗೆ ಬಿಟ್ಟುಕೊಟ್ಟಿತ್ತು. ಹಾಗಾಗಿ ಈ ಬಾರಿ ಬಿಜೆಪಿ ಎಚ್ಚರಿಕೆಯ ಹೆಜ್ಜೆಯನ್ನಿಟ್ಟು ಬಹಳ ಮುಂಚೆಯೇ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ಅದರಲ್ಲೂ ದಕ್ಷಿಣ ಗೋವಾ ಕ್ಷೇತ್ರದಲ್ಲಿ ಪ್ರಬಲವಾಗಿರುವ ಕ್ರಿಶ್ಚಿಯನ್‌ ಸಮುದಾಯವನ್ನು ಗಮನದಲ್ಲಿಟ್ಟುಕೊಂಡು ಮಹಿಳಾ ಉದ್ಯಮಿಯಾಗಿರುವ ಪಲ್ಲವಿ ಶ್ರೀನಿವಾಸ್‌ ಡೆಂಪೋ ಅವರಿಗೆ ಅಚ್ಚರಿ ಎಂಬಂತೆ ಟಿಕೆಟ್‌ ನೀಡಿದೆ. ಇದರಲ್ಲಿ ಪುರುಷರಿಗಿಂತ ಅಧಿಕವಾಗಿರುವ ಮಹಿಳಾ ಮತದಾರರನ್ನು ಸೆಳೆಯುವ ಸಾಧ್ಯತೆಯೂ ಒಳಗೊಂಡಿರುವುದು ಗುಟ್ಟಾಗಿ ಉಳಿದಿಲ್ಲ. ಇನ್ನು ಉತ್ತರ ಗೋವಾದಲ್ಲಿ ತನ್ನ ಎಂದಿನ ಅಭ್ಯರ್ಥಿ ಶ್ರೀಪಾದ್‌ ನಾಯಕ್‌ ಅವರಿಗೆ ಮತ್ತೆ ಟಿಕೆಟ್‌ ನೀಡಿದ್ದು, ಎರಡೂ ಕ್ಷೇತ್ರಗಳಲ್ಲಿ ಗೆಲುವಿನ ವಿಶ್ವಾಸದಲ್ಲಿದೆ. ಆದರೆ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿರುವ ಪ್ರಾದೇಶಿಕ ಪಕ್ಷ ಮಹಾರಾಷ್ಟ್ರವಾದಿ ಗೋಮಾಂತಕ್‌ ಪಾರ್ಟಿ ಸ್ಥಳೀಯತೆಯ ಹೆಸರಿನಲ್ಲಿ ಒಳಗಿನಿಂದ ಏಟು ನೀಡಿದಲ್ಲಿ ಪಕ್ಷ ತುಸು ಹಿನ್ನಡೆ ಅನುಭವಿಸಬೇಕಾದೀತು.

ಮತ್ತೆ ಕನ್ನಡಿಗರ ಒಕ್ಕಲೆಬ್ಬಿಸಿದ ಗೋವಾ ಸರ್ಕಾರ!

ಸ್ಥಾನ ಉಳಿಸಿಕೊಳ್ಳಲು ಕಾಂಗ್ರೆಸ್‌ ಯತ್ನ:

ಬಿಜೆಪಿಯ ಅತಿಯಾದ ಆತ್ಮವಿಶ್ವಾಸವನ್ನು ಬಳಸಿಕೊಂಡು ಕಳೆದ ಬಾರಿ ಗೆದ್ದಿದ್ದ ಕಾಂಗ್ರೆಸ್‌ ಪಕ್ಷ ಈ ಬಾರಿ ಕ್ಷೇತ್ರವನ್ನು ಉಳಿಸಿಕೊಳ್ಳುವ ತವಕದಲ್ಲಿದೆ. ಆದರೂ ಹಾಲಿ ಸಂಸದರನ್ನು ಬದಲಿಸಿ ಕ್ಷೇತ್ರದಲ್ಲಿ ಚಿರಪರಿಚಿತರಾಗಿರುವ ಕ್ಯಾಪ್ಟನ್‌ ವಿರಿಟೋ ಫರ್ನಾಂಡೀಸ್‌ ಅವರಿಗೆ ಮಣೆ ಹಾಕಿದೆ. ಇದರ ಹಿಂದೆ ಹೆಚ್ಚಿನ ಸಂಖ್ಯೆಯಲ್ಲಿರುವ ಮಹಿಳಾ ಮತದಾರರು ಮತ್ತು ಕ್ರಿಶ್ಚಿಯನ್‌ ಸಮುದಾಯವನ್ನು ಸೆಳೆಯುವ ರಹಸ್ಯ ಅಡಗಿರುವುದು ಬಹಿರಂಗ ಸತ್ಯ. ಇದರ ಜೊತೆಗೆ ಉತ್ತರ ಗೋವಾ ಕ್ಷೇತ್ರದಿಂದಲೂ ಸಹ ರಮಾಕಾಂತ್ ಖಲಪ್‌ ಎಂಬ ಪ್ರಬಲ ಸ್ಥಳೀಯ ನಾಯಕನಿಗೆ ಟಿಕೆಟ್‌ ನೀಡಿ ಬಿಜೆಪಿಗೆ ಪ್ರಬಲ ಸ್ಪರ್ಧೆ ಒಡ್ಡುತ್ತಿದೆ. ಅದರಲ್ಲೂ ಈ ಬಾರಿ ಕಾಂಗ್ರೆಸ್‌ ಪಕ್ಷವು ಆಮ್‌ ಆದ್ಮಿ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡು ಎರಡೂ ಕ್ಷೇತ್ರಗಳಲ್ಲಿ ಒಮ್ಮತ ಅಭ್ಯರ್ಥಿಯನ್ನು ಕಣಕ್ಕಿಳಿಸಿರುವ ಪರಿಣಾಮ ಗೆಲ್ಲುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.

ಇದಲ್ಲದೆ ಕ್ರಾಂತಿಕಾರಿ ಗೋವಾ ಪಾರ್ಟಿಯೂ ಸಹ ಎರಡೂ ಕ್ಷೇತ್ರಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಹಾಕಿದ್ದು, ಹೇಗೆ ಪರಿಣಾಮ ಉಂಟು ಮಾಡಬಲ್ಲರು ಎಂಬುದನ್ನು ತಿಳಿಯಲು ಜೂ.4ರವರೆಗೂ ಕಾಯಬೇಕಿದೆ.

ಸ್ಪರ್ಧೆ ಹೇಗೆ?

ಗೋವಾ ಚುನಾವಣೆಯಲ್ಲಿ ಇದೇ ಮೊದಲ ಬಾರಿಗೆ ರಾಷ್ಟ್ರೀಯ ಪಕ್ಷಗಳ ನಡುವಿನ ಸಮರವಾಗಿ ಏರ್ಪಟ್ಟಿದ್ದರೂ ಪ್ರಾದೇಶಿಕ ವಿಷಯಗಳ ಮೇಲೆಯೇ ಚುನಾವಣೆ ನಡೆಯುವುದು ನಿಶ್ಚಿತ. ಈಗಾಗಲೇ ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಂಡಿದ್ದರೂ ಸಹ ಮಹಾರಾಷ್ಟ್ರವಾದಿ ಗೋಮಾಂತಕ್‌ ಪಾರ್ಟಿಯ ನಾಯಕರು ಮಹದಾಯಿಯ ನೀರನ್ನು ಕರ್ನಾಟಕಕ್ಕೆ ಬಿಡುವುದಿಲ್ಲ ಎಂದು ಸ್ವತಃ ಪ್ರಧಾನಿ ಮೋದಿಯೇ ಬಂದು ಪ್ರಕಟಿಸಬೇಕು ಎಂದು ಆಗ್ರಹಿಸಿದ್ದಾರೆ. ಸದ್ಯಕ್ಕೆ ಅದರ ಜ್ವಾಲೆ ರಾಜ್ಯಾದ್ಯಂತ ವ್ಯಾಪಿಸದಿದ್ದರೂ ಮುಂದೆ ಇಂತಹ ಸಣ್ಣ ಸಣ್ಣ ಪ್ರಾದೇಶಿಕ ಅಸ್ಮಿತೆಗಳೇ ಚುನಾವಣೆಯ ಫಲಿತಾಂಶವನ್ನು ನಿರ್ಧರಿಸುವ ಮಟ್ಟಿಗೆ ತೀವ್ರ ಸ್ವರೂಪವನ್ನು ಪಡೆದುಕೊಳ್ಳುವ ಸಾಧ್ಯತೆಗಳು ದಟ್ಟವಾಗಿವೆ. 

ಮೀಸಲಾತಿ ಶಾಶ್ವತ, ಅದನ್ನು ರದ್ದು ಮಾಡಲ್ಲ: ಅಮಿತ್‌ ಶಾ ಸ್ಪಷ್ಟನೆ

ರಾಜ್ಯ: ಗೋವಾ ಚುನಾವಣೆ ನಡೆಯುವ ಹಂತಗಳು: 1

ಒಟ್ಟು ಲೋಕಸಭಾ ಕ್ಷೇತ್ರಗಳು: 2

ಮತದಾನ ನಡೆಯುವ ದಿನ: ಮೇ.7

ಪ್ರಮುಖ ಕ್ಷೇತ್ರಗಳು: ಗೋವಾ ಉತ್ತರ, ಗೋವಾ ದಕ್ಷಿಣ

ಪ್ರಮುಖ ಹುರಿಯಾಳುಗಳು: ಶ್ರೀಪಾದ್‌ ನಾಯಕ್‌ (ಬಿಜೆಪಿ), ಪಲ್ಲವಿ ಶ್ರೀನಿವಾಸ್‌ ಡೆಂಪೋ (ಬಿಜೆಪಿ), ಕ್ಯಾ. ವಿರಿಟೋ ಫರ್ನಾಂಡೀಸ್‌ (ಕಾಂಗ್ರೆಸ್‌), ರಮಾಕಾಂತ್‌ ಖಲಪ್‌ (ಕಾಂಗ್ರೆಸ್‌), ಮನೋಜ್‌ ಪರಬ್‌ (ಅರ್‌ಜಿಪಿ), ರೂಬರ್ಟ್‌ ಪೆರೇರಾ (ಆರ್‌ಜಿಪಿ).

click me!