ಇಂದಿನಿಂದ ಎಚ್‌ಡಿಕೆ ವಿರುದ್ಧ ಹೋರಾಟಕ್ಕೆ ಕಾಂಗ್ರೆಸ್ ಸಜ್ಜು!

By Kannadaprabha NewsFirst Published Apr 15, 2024, 5:14 AM IST
Highlights

‘ಗ್ಯಾರಂಟಿ ಯೋಜನೆಗಳಿಂದ ಹಳ್ಳಿ ಮಹಿಳೆಯರು ದಾರಿ ತಪ್ಪಿದ್ದಾರೆ’ ಎಂಬ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಅವರ ಹೇಳಿಕೆಯನ್ನು ಲೋಕಸಭಾ ಚುನಾವಣೆಗೆ ಪ್ರಮುಖ ಅಸ್ತ್ರವಾಗಿ ಬಳಸಿಕೊಳ್ಳಲು ಕಾಂಗ್ರೆಸ್‌ ತೀರ್ಮಾನಿಸಿದೆ. ಅಲ್ಲದೆ, ಚುನಾವಣೆ ಮುಗಿಯುವವರೆಗೂ ಈ ವಿಷಯ ಜೀವಂತವಾಗಿಡಲು ನಿರ್ಧರಿಸಿದೆ.

ಬೆಂಗಳೂರು (ಏ.15): ‘ಗ್ಯಾರಂಟಿ ಯೋಜನೆಗಳಿಂದ ಹಳ್ಳಿ ಮಹಿಳೆಯರು ದಾರಿ ತಪ್ಪಿದ್ದಾರೆ’ ಎಂಬ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಅವರ ಹೇಳಿಕೆಯನ್ನು ಲೋಕಸಭಾ ಚುನಾವಣೆಗೆ ಪ್ರಮುಖ ಅಸ್ತ್ರವಾಗಿ ಬಳಸಿಕೊಳ್ಳಲು ಕಾಂಗ್ರೆಸ್‌ ತೀರ್ಮಾನಿಸಿದೆ. ಅಲ್ಲದೆ, ಚುನಾವಣೆ ಮುಗಿಯುವವರೆಗೂ ಈ ವಿಷಯ ಜೀವಂತವಾಗಿಡಲು ನಿರ್ಧರಿಸಿದೆ.

ಈ ಸಂಬಂಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾನುವಾರ ರಾತ್ರಿ ಜೂಮ್ ಆ್ಯಪ್‌ ಮೂಲಕ ಸಭೆ ನಡೆಸಿ ಕುಮಾರಸ್ವಾಮಿ ಅವರ ಹೇಳಿಕೆ ವಿರುದ್ಧ ಸೋಮವಾರದಿಂದಲೇ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲು ತಮ್ಮ ಪಕ್ಷದ ಎಲ್ಲಾ ಮುಂಚೂಣಿ ಘಟಕಗಳು, ಜಿಲ್ಲಾ ಘಟಕಗಳ ಪದಾಧಿಕಾರಿಗಳು, ಜಿಲ್ಲಾ ಉಸ್ತುವಾರಿ ಸಚಿವರುಗಳು, ಮುಖಂಡರುಗಳಿಗೆ ಸೂಚನೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಅಲ್ಲದೆ, ಮಹಿಳೆಯರ ಬಗ್ಗೆ ಕುಮಾರಸ್ವಾಮಿ ಅವರು ಅವಮಾನಕರ ರೀತಿಯಲ್ಲಿ ಹೇಳಿಕೆ ನೀಡಿರುವುದರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಮೂಲಕ ಕೇಂದ್ರ ಹಾಗೂ ರಾಜ್ಯ ಚುನಾವಣಾ ಆಯೋಗ ಮತ್ತು ರಾಜ್ಯ ಮತ್ತು ಕೇಂದ್ರ ಮಹಿಳಾ ಆಯೋಗಗಳಿಗೆ ದೂರು ನೀಡಲು ಕೂಡ ಸೂಚಿಸಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಹೆಣ್ಣುಮಕ್ಕಳು ದಾರಿ ತಪ್ಪಿದ್ದಾರೆ ಎಂದರೆ ಏನರ್ಥ: ಕುಮಾರಸ್ವಾಮಿ ಹೇಳಿಕೆಗೆ ಸಿದ್ದರಾಮಯ್ಯ ಗರಂ

ಸ್ತ್ರೀಯರಿಗೆ ಅವಮಾನವಾಗುವ ರೀತಿ ಮಾತನಾಡಿಲ್ಲ: ಎಚ್‌ಡಿಕೆ ಸಮಜಾಯಿಷಿ

ಗ್ಯಾರಂಟಿಗಳ ಬಗ್ಗೆ ಹೇಳಿದ್ದೇನೆಯೇ ಹೊರತು ಮಹಿಳೆಯರಿಗೆ ಅಪಮಾನ ಮಾಡುವ ರೀತಿಯಲ್ಲಿ ನಾನು ಮಾತನಾಡಿಲ್ಲ. ಅನಗತ್ಯವಾಗಿ ಕಾಂಗ್ರೆಸ್ ಈ ವಿಷಯದಲ್ಲಿ ರಾಜಕೀಯ ಮಾಡುತ್ತಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಸಮಜಾಯಿಷಿ ನೀಡಿದ್ದಾರೆ.

ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರಿಗೆ ಬರ, ನೀರಿನ ಸಮಸ್ಯೆಗಿಂತ ರಾಜಕೀಯವೇ ಹೆಚ್ಚಾಗಿದೆ. ಸಿದ್ದರಾಮಯ್ಯ ಅವರ ಬಳಿ ಈ ಬಗ್ಗೆ ಹೇಳುವುದಕ್ಕೆ ಏನಿದೆ? ನಾನು ಹೇಳಿದ್ದೇ ಬೇರೆ, ಇವರು ತಿರುಚಿ ಹೇಳಿದ್ದೇ ಬೇರೆ. ಗ್ಯಾರಂಟಿಗಳ ಹೆಸರಲ್ಲಿ ನಿಮ್ಮನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದಷ್ಟೇ ಹೇಳಿದ್ದೇನೆ. ನಾನು ಮಹಿಳೆಯರನ್ನು ಅವಮಾನ ಮಾಡಿದ್ದೀನಾ? ಖಂಡಿತಾ ಇಲ್ಲ. ಮುಗ್ಧ ಜನರನ್ನು, ಮಹಿಳೆಯರನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದಿದ್ದೇನೆ. ನೀವು ಎಚ್ಚರಿಕೆಯಿಂದ ಇರಿ ಎಂದು ಹೇಳಿದ್ದೇನೆ ಎಂದರು.

ನಮ್ಮ ಗ್ಯಾರಂಟಿ ಕಾಪಿ ಮಾಡಿದ್ದಾರೆ: ಬಿಜೆಪಿ ಪ್ರಣಾಳಿಕೆ ಬಗ್ಗೆ ಪರಮೇಶ್ವರ ವ್ಯಂಗ್ಯ

ನಾನಾಗಲಿ, ನನ್ನ ಕುಟುಂಬವಾಗಲಿ ಮಹಿಳೆಯರ ಬಗ್ಗೆ ಅಗೌರವದಿಂದ ನಡೆದುಕೊಂಡಿಲ್ಲ. ನಡೆದುಕೊಳ್ಳುವುದೂ ಇಲ್ಲ. ಕಷ್ಟ ಅಂತ ಬಂದಾಗ ನಾನು ನೆರವಾಗಿದ್ದೇನೆ. ಅಧಿಕಾರ ಸಿಕ್ಕಾಗ ಮಹಿಳೆಯರಿಗಾಗಿ ಒಳ್ಳೆಯ ಕಾರ್ಯಕ್ರಮ ಕೊಟ್ಟಿದ್ದೇನೆ. ಮಹಿಳೆಯರ ಬಗ್ಗೆ ನಾನು ಕೇವಲವಾಗಿ ಮಾತನಾಡುವ ವ್ಯಕ್ತಿ ಅಲ್ಲ. ಅವರನ್ನು ಅಸಡ್ಡೆಯಿಂದ ಕಂಡಿಲ್ಲ. ಮಹಿಳೆಯರಿಗೆ ಅವಮಾನ ಆಗುವ ರೀತಿ ಎಲ್ಲೂ ಹೇಳಿಲ್ಲ. ನಾನು ಏನು ಹೇಳಿದ್ದೇನೆ ಎನ್ನುವುದನ್ನು ಅರ್ಥ ಮಾಡಿಕೊಳ್ಳದೇ ಈ ರೀತಿ ಹೇಳುತ್ತಿದ್ದಾರೆ. ರಾಜಕೀಯದಲ್ಲಿ ನನಗೆ ಶಕ್ತಿ ಇದೆ ಅಂದರೆ ಅದು ಮಹಿಳೆಯರಿಂದಲೇ. ಕಾಂಗ್ರೆಸ್ ನಾಯಕರು ನನ್ನ ಮೇಲೆ ತಪ್ಪು ಹೊರಿಸುವ ರೀತಿ ಮಾತನಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

click me!