ಚಿಕ್ಕೋಡಿ ಬಿಜೆಪಿ ಟಿಕೆಟ್‌ ಮೇಲೆ ಲಿಂಗಾಯತ ಲೀಡರ್ಸ್ ಕಣ್ಣು; ಕತ್ತಿ, ಕೋರೆ, ಜೊಲ್ಲೆ ಯಾರ ಮುಡಿಗೇರಲಿದೆ ಕಮಲ?

By Sathish Kumar KH  |  First Published Feb 6, 2024, 1:03 PM IST

ಚಿಕ್ಕೋಡಿ ಲೋಕಸಭಾ ಬಿಜೆಪಿ ಟಿಕೆಟ್‌ ಮೇಲೆ ಲಿಂಗಾಯತ ನಾಯಕರಾದ ಪ್ರಭಾಕರ್ ಕೋರೆ, ರಮೇಶ್ ಕತ್ತಿ ಹಾಗೂ ಹಾಲಿ ಸಂಸದ ಅಣ್ಣಾ ಸಾಹೇಬ್ ಜೊಲ್ಲೆ ಕಣ್ಣು ಬಿದ್ದಿದೆ. ಹಾಗಾದರೆ ಯಾರ ಬಿಜೆಪಿ ಕಮಲ ಯಾರ ಮುಡಿಗೇರಲಿದೆ ಎಂಬ ಲೆಕ್ಕಾಚಾರ ಇಲ್ಲಿದೆ ನೋಡಿ.. 


ವರದಿ- ಅನಿಲ್ ಕಾಜಗಾರ, ಏಷ್ಯಾನೆಟ್ ಸುವರ್ಣ ನ್ಯೂಸ್
ಬೆಳಗಾವಿ (ಫೆ.06):
ಲೋಕಸಭೆ ಚುನಾವಣೆಗೆ ಕೇವಲ ಎರಡು ತಿಂಗಳು ಮಾತ್ರ ಬಾಕಿ ಇದ್ದು, ಚಿಕ್ಕೋಡಿ ಕ್ಷೇತ್ರದ ಬಿಜೆಪಿ ಟಿಕೆಟ್‍ಗಾಗಿ ಬೆಳಗಾವಿ ಜಿಲ್ಲೆಯ ಮೂವರು ಪ್ರಭಾವಿ ಲಿಂಗಾಯತ ನಾಯಕರ ಮಧ್ಯೆ ಪೈಪೋಟಿ ತೀವ್ರಗೊಂಡಿದೆ. ಹಾಲಿ ಸಂಸದ ಅಣ್ಣಾಸಾಹೇಬ್ ಜೊಲ್ಲೆ, ಮಾಜಿ ಸಂಸದ ರಮೇಶ ಕತ್ತಿ ಹಾಗೂ ಕೆಎಲ್‍ಇ ಕಾಯಾಧ್ಯಕ್ಷ ಡಾ. ಪ್ರಭಾಕರ ಕೋರೆ ಅವರ ಕಣ್ಣು ಚಿಕ್ಕೋಡಿ ಕ್ಷೇತ್ರದ ಮೇಲೆ ನೆಟ್ಟಿದೆ. ರಾಜಕೀಯವಾಗಿ ತಮ್ಮದೇ ಪ್ರಭಾವ ಹೊಂದಿರುವ ಮೂರು ಕುಟುಂಬಗಳ ಮಧ್ಯೆ ನಡೆಯುತ್ತಿರುವ ಈ ಪೈಪೋಟಿ ಬಿಜೆಪಿ ಹೈಕಮಾಂಡ್‍ಗೆ ಬಿಸಿ ತುಪ್ಪವಾಗಿದೆ.

ಹಾಲಿ ಸಂಸದ ಅಣ್ಣಾಸಾಹೇಬ್ ಜೊಲ್ಲೆ ಈಗಾಗಲೇ ಚುನಾವಣೆಗೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಸಂಸದರ ಸಂಸ್ಕೃತಿ ಉತ್ಸವ ಆಯೋಜಿಸಿ ಪ್ರತಿಭಾನ್ವಿತ ಯುವ ಸಮೂಹಕ್ಕೆ ವೇದಿಕೆ ಕಲ್ಪಿಸುತ್ತಿದ್ದಾರೆ. ಅಲ್ಲದೇ ಚಿಕ್ಕೋಡಿ ಲೋಕಸಭೆ ಕ್ಷೇತ್ರದ ಎಲ್ಲ ವಿಧಾನಸಭೆ ಕ್ಷೇತ್ರಗಳಲ್ಲಿ ಸಂಸದರ ಟ್ರೋಪಿ ಮೂಲಕ ಕಬ್ಬಡ್ಡಿ ಸೇರಿದಂತೆ ಇನ್ನಿತರ ಕ್ರೀಡಾಕೂಟಗಳನ್ನು ಆಯೋಜಿಸುತ್ತಿದ್ದಾರೆ. ಆ ಮೂಲಕ ಯುವ ಸಮೂಹ ಸೆಳೆಯಲು ಸಂಸದ ಜೊಲ್ಲೆ ಕಸರತ್ತು ನಡೆಸುತ್ತಿದ್ದಾರೆ. ಹೈಕಮಾಂಡ್ ಮಟ್ಟದ ನಾಯಕರಾದ ಕೇಂದ್ರ ಗೃಹಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ ಜೊತೆಗೂ ಜೊಲ್ಲೆ ಕುಟುಂಬ ಒಳ್ಳೆಯ ಬಾಂಧವ್ಯ ಹೊಂದಿದೆ. ಈ ಕಾರಣಕ್ಕೆ ತಮಗೆ ಎರಡನೇ ಬಾರಿಗೆ ಚಿಕ್ಕೋಡಿ ಬಿಜೆಪಿ ಟಿಕೆಟ್ ಸಿಗುವ ವಿಶ್ವಾಸದಲ್ಲಿ ಅಣ್ಣಾಸಾಹೇಬ್ ಜೊಲ್ಲೆ ಇದ್ದಾರೆ.

Latest Videos

undefined

ಕಾಂಗ್ರೆಸ್‌ ಪಂಚ ಗ್ಯಾರಂಟಿ ಯೋಜನೆಗಳ ಸದ್ಬಳಕೆ ಮಾಡಿಕೊಳ್ಳಿ: ಸಚಿವ ಸತೀಶ್‌ ಜಾರಕಿಹೊಳಿ

ಎಸ್‌ಸಿ ಮೀಸಲು ಕ್ಷೇತ್ರದಿಂದ ಸಾಮಾನ್ಯ ಕ್ಷೇತ್ರವಾಗಿ ಪರಿವರ್ತನೆ: 
2009ರ ಚುನಾವಣೆಗೂ ಮುನ್ನ ಚಿಕ್ಕೋಡಿ ಕ್ಷೇತ್ರ ಎಸ್.ಸಿ ಮೀಸಲು ಕ್ಷೇತ್ರವಾಗಿತ್ತು. ಇದೇ ಕ್ಷೇತ್ರದಿಂದ ವಿಜಯಪುರ ಹಾಲಿ ಸಂಸದ ರಮೇಶ ಜಿಗಜಿಣಗಿ ಮೂರು ಸಲ ಸಂಸದರಾಗಿದ್ದರು. 2009ರ ನಂತರ ಈ ಕ್ಷೇತ್ರ ಸಾಮಾನ್ಯ ಕ್ಷೇತ್ರವಾಗಿ ಪರಿವರ್ತನೆ ಆಯಿತು. 2008ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೂ ಮ್ಯಾಜಿಕ್ ಸಂಖ್ಯೆ ತಲುಪಿರಲಿಲ್ಲ. ಪಕ್ಷೇತರ ಶಾಸಕರ ಸಹಾಯಕದಿಂದ ಅಂದು ಬಿಜೆಪಿ ಸರ್ಕಾರ ರಚಿಸಿತ್ತು. ಬಿಎಸ್‍ವೈ ಸಿಎಂ ಕೂಡ ಆಗಿದ್ದರು. ಆ ಸಂದರ್ಭದಲ್ಲಿ ಜೆಡಿಎಸ್‍ನಲ್ಲಿದ್ದ ಉಮೇಶ ಕತ್ತಿ ಬಿಜೆಪಿ ಸೇರಿದರು. ತಮಗೆ ಮಂತ್ರಿ ಮಾಡಬೇಕು, ಸಹೋದರನಿಗೆ ಚಿಕ್ಕೋಡಿ ಟಿಕೆಟ್ ಕೊಡಬೇಕು ಎಂದು ಬೇಡಿಕೆ ಇಟ್ಟಿದ್ದರು. ಇದಕ್ಕೆ ಅಸ್ತು ಎಂದಿದ್ದ ಬಿಜೆಪಿ ಹೈಕಮಾಂಡ್ ಉಮೇಶ ಕತ್ತಿ ಅವರನ್ನು ಕೃಷಿ ಮಂತ್ರಿ ಮಾಡುವ ಜೊತೆಗೆ ರಮೇಶ ಕತ್ತಿಗೆ ಬಿಜೆಪಿ ಟಿಕೆಟ್ ಕೂಡ ನೀಡಿತ್ತು. ಆಗ ರಮೇಶ ಕತ್ತಿ ಚಿಕ್ಕೋಡಿ ಕ್ಷೇತ್ರದಿಂದ ಗೆದ್ದಿದ್ದರು. 

ರಮೇಶ್ ಕತ್ತಿ ಬೇಡಿಕೆ ಏನು? 

ಇನ್ನು 2014ರ ಚುನಾವಣೆಯಲ್ಲಿ ರಮೇಶ ಕತ್ತಿ ಅಲ್ಪ ಮತಗಳ ಅಂತರದಿಂದ ಕಾಂಗ್ರೆಸ್ ಅಭ್ಯರ್ಥಿ ಪ್ರಕಾಶ ಹುಕ್ಕೇರಿ ವಿರುದ್ಧ ಸೋತಿದ್ದರು. 2019ರ ಚುನಾವಣೆಯಲ್ಲಿ ರಮೇಶ ಕತ್ತಿಗೆ ಕೋಕ್ ನೀಡಿದ ಹೈಕಮಾಂಡ್ ಅಣ್ಣಾಸಾಹೇಬ್ ಜೊಲ್ಲೆಗೆ ಟಿಕೆಟ್ ನೀಡಿತ್ತು. ಆಗ ಅಸಮಾಧಾನಗೊಂಡಿದ್ದ ಕತ್ತಿ ಬ್ರದರ್ಸ್‍ಗೆ ಮನವೊಲಿಸಲು ಸ್ವತಃ ಬಿಎಸ್‍ವೈ ಬೆಳಗಾವಿಗೆ ಬಂದಿದ್ದರು. ರಾಜ್ಯಸಭೆ ಚುನಾವಣೆಯಲ್ಲಿ ಟಿಕೆಟ್ ನೀಡುವ ಭರವಸೆ ನೀಡಿದ್ದರು. ಆದರೆ, ರಾಜ್ಯಸಭೆ ಚುನಾವಣೆಯಲ್ಲಿ ಹಾಲಿ ಸದಸ್ಯ ಡಾ. ಪ್ರಭಾಕರ ಕೋರೆ, ರಮೇಶ ಕತ್ತಿ ಪರಿಗಣಿಸದೇ ಬಿಜೆಪಿ ಹೈಕಮಾಂಡ್ ಈರಣ್ಣ ಕಡಾಡಿಗೆ ಮಣೆ ಹಾಕಿತ್ತು. ಈ ಕಾರಣಕ್ಕೆ ರಮೇಶ ಕತ್ತಿ ಇದೀಗ ಚಿಕ್ಕೋಡಿ ಟಿಕೆಟ್‍ಗೆ ಬೇಡಿಕೆ ಇಡುತ್ತಿದ್ದಾರೆ. ಈಗಾಗಲೇ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಬಿ.ಎಲ್ ಸಂತೋಷ ಕೂಡ ಭೇಟಿ ಆಗಿ ಬಂದಿದ್ದಾರೆ. ಬಿ.ಎಸ್‌. ಯಡಿಯೂರಪ್ಪ ಹಾಗೂ ವಿಜಯೇಂದ್ರ ಜೊತೆಗೆ ಆತ್ಮೀಯರಾಗಿರುವ ರಮೇಶ ಕತ್ತಿ ಈ ಸಲ ಟಿಕೆಟ್ ಸಿಗುವ ನಿರೀಕ್ಷೆಯಲ್ಲಿದ್ದಾರೆ.

ಪುತ್ರನ ಪರ ಡಾ.ಪ್ರಭಾಕರ ಕೋರೆ ಲಾಬಿ:
ದೇಶದ ಪ್ರತಿಷ್ಠಿತ ಕೆಎಲ್‍ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಬಿಜೆಪಿಯಿಂದಲೇ ಎರಡು ಸಲ ರಾಜ್ಯಸಭೆ ಸದಸ್ಯರಾಗಿದ್ದರು. ಕಳೆದ ಚುನಾವಣೆಯಲ್ಲಿ ಕೋರೆ ಬದಲಿಗೆ ಮೂರು ದಶಕಗಳ ಕಾಲ ಪಕ್ಷಕ್ಕಾಗಿ ದುಡಿದಿದ್ದ ಈರಣ್ಣ ಕಡಾಡಿಗೆ ಬಿಜೆಪಿ ಅವಕಾಶ ಕರುಣಿಸಿ ಕಾರ್ಯಕರ್ತರ ಬೆಂಬಲಕ್ಕೆ ನಾವಿದ್ದೇವೆ ಎಂಬ ಸ್ಪಷ್ಟ ಸಂದೇಶವನ್ನು ಬಿಜೆಪಿ ರವಾನಿಸಿತ್ತು. ಇದೀಗ ರಾಜ್ಯಸಭೆಯಲ್ಲಿ ಅವಕಾಶ ನಿರಾಕರಿಸಿದರೂ ಡಾ. ಕೋರೆ ಬಿಜೆಪಿ ಜೊತೆಗಿದ್ದಾರೆ. ಈ ಕಾರಣಕ್ಕೆ ಚಿಕ್ಕೋಡಿ ಕ್ಷೇತ್ರದ ಬಿಜೆಪಿ ಟಿಕೆಟ್ ತಮ್ಮ ಪುತ್ರ ಹಾಗೂ ಉದ್ಯಮಿ ಅಮಿತ್ ಕೋರೆಗೆ ನೀಡುವಂತೆ ಪಟ್ಟು ಹಿಡಿದಿದ್ದಾರೆ.

ಕುಮಾರಪರ್ವತ ಚಾರಣಕ್ಕೂ ಆನ್‌ಲೈನ್‌ ಬುಕ್ಕಿಂಗ್ ಕಡ್ಡಾಯ: ಅರಣ್ಯ ಸಚಿವ ಈಶ್ವರ ಖಂಡ್ರೆ

ಇನ್ನು ಅಮಿತ್‌ ಕೋರೆ ಅವರಿಗೆ ಲೋಕಸಭಾ ಟಿಕೆಟ್ ನೀಡುವ ಸಂಬಂಧ ಈಗಾಗಲೇ ಕೇಂದ್ರ ಸಚಿವ ನಿತೀನ್ ಗಡ್ಕರಿ, ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮೂಲಕ ಬಿಜೆಪಿ ಹೈಕಮಾಂಡ್‍ಗೂ ತಮ್ಮ ಮನವಿ ಸಮರ್ಪಿಸಿದ್ದಾರೆ. ಜಿಲ್ಲೆಯಲ್ಲಿ ಕತ್ತಿ, ಕೋರೆ, ಜೊಲ್ಲೆ ಮೂರೂ ಪ್ರಭಾವಿ ಲಿಂಗಾಯತ ಕುಟುಂಬಗಳೇ. ಈ ಮೂರು ಕುಟುಂಬಗಳನ್ನು ವಿಶ್ವಾಸಕ್ಕೆ ಪಡೆದುಕೊಂಡೇ ಟಿಕೆಟ್ ಘೊಷಿಸಬೇಕಾದ ಅನಿವಾರ್ಯತೆಯೂ ಬಿಜೆಪಿಗಿದೆ. ಇಲ್ಲವಾದರೆ ಬಿಜೆಪಿಗೆ ನಷ್ಟವಾಗುವ ಸಾಧ್ಯತೆ ಇದ್ದು, ಕಮಲ ನಾಯಕರ ನಡೆಯುತ್ತ ಜಿಲ್ಲೆಯ ಜನರ ಚಿತ್ತ ಮೂಡಿದೆ.

click me!