ಕರ್ನಾಟಕವಷ್ಟೇ ಅಲ್ಲದೇ ಇಡೀ ದೇಶದಾದ್ಯಂತ ಜಾತಿ ಗಣತಿ ಆಗಬೇಕಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು. ಚಿತ್ರದುರ್ಗ ಹೊರವಲಯ ಮಾದಾರ ಗುರುಪೀಠದ ಪಕ್ಕ ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟದವತಿಯಿಂದ ಆಯೋಜಿಸಲಾಗಿದ್ದ ಶೋಷಿತರ ಜಾಗೃತಿ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದರು.
ಚಿತ್ರದುರ್ಗ (ಜ.30): ಕರ್ನಾಟಕವಷ್ಟೇ ಅಲ್ಲದೇ ಇಡೀ ದೇಶದಾದ್ಯಂತ ಜಾತಿ ಗಣತಿ ಆಗಬೇಕಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು. ಚಿತ್ರದುರ್ಗ ಹೊರವಲಯ ಮಾದಾರ ಗುರುಪೀಠದ ಪಕ್ಕ ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟದವತಿಯಿಂದ ಆಯೋಜಿಸಲಾಗಿದ್ದ ಶೋಷಿತರ ಜಾಗೃತಿ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಎಲ್ಲ ಸಮುದಾಯಗಳನ್ನು ಒಟ್ಟಾಗಿ ತೆಗೆದುಕೊಂಡು ಹೋಗುವ ಹಾಗೂ ಸರ್ವರ ಬದುಕು ರೂಪಿಸಲು ಕಾಂಗ್ರೆಸ್ ಸರ್ಕಾರ ಬದ್ಧವಾಗಿದೆ ಎಂದರು.
ಚಿತ್ರದುರ್ಗದಲ್ಲಿ ನಡೆದಿರುವುದು ಬದಲಾವಣೆಯ ಸಮಾವೇಶ. ಕಾಂಗ್ರೆಸ್ ಈ ದೇಶದ ಶಕ್ತಿ. ನಾವು ಅಧಿಕಾರಕ್ಕೆ ಬಂದರೆ ಜನರೇ ಅಧಿಕಾರದಲ್ಲಿ ಇದ್ದಂತೆ. ದೇವರು ವರ, ಶಾಪ ಕೊಡುವುದಿಲ್ಲ. ಅವಕಾಶ ಮಾತ್ರ ನೀಡುತ್ತಾನೆ. ಬದುಕನ್ನು ನಾವೇ ಜಾಗೃತರಾಗಿ ರೂಪಿಸಿಕೊಳ್ಳಬೇಕು. ಯಶಸ್ಸು ಯಾರ ಸ್ವತ್ತಲ್ಲ. ಬಡವರಿಂದ ಎಲ್ಲರೂ ರಾಜನಾಗಬಹುದು, ಶ್ರೀಮಂತನೂ ಆಗಬಹುದು. ಮಹಾಭಾರತ, ರಾಮಾಯಣ, ಖುರಾನ್ ಧರ್ಮ ಗ್ರಂಥ. ಆದರೆ, ಸರ್ವರ ರಕ್ಷಣೆಗಾಗಿ ಇರುವ ಬಹುದೊಡ್ಡ ಗ್ರಂಥ ಸಂವಿಧಾನ. ಹೋರಾಟ ಮಾಡಿಕೊಂಡು ಬಂದಾಗ ಮಾತ್ರ ಪ್ರಗತಿ ಸಾಧ್ಯ ಎಂದರು.
152 ಕೋಟಿಯಲ್ಲಿ ಕೆ.ಸಿ.ಜನರಲ್ ಆಸ್ಪತ್ರೆ ಮೇಲ್ದರ್ಜೆಗೆ: ಸಿಎಂ ಸಿದ್ದರಾಮಯ್ಯ
ಐದು ಕೈ ಮುಷ್ಠಿ ಸೇರಿ ಗಟ್ಟಿಯಾಯಿತು. ಐದು ಗ್ಯಾರಂಟಿ ಸೇರಿ ಶಕ್ತಿಯಾಯಿತು. ಇದರಿಂದ ಕಾಂಗ್ರೆಸ್ ಬಲಗೊಂಡಿತು. ಕಮಲದ ದಳ ಉದುರಿ ಹೋಯಿತು. ಬಡವರ ಪರವಾಗಿ ಕಾಂಗ್ರೆಸ್ ದೇಶದಲ್ಲಿ ಹಲವಾರು ಕಾರ್ಯಕ್ರಮ ಹಾಕಿಕೊಂಡು ಜಾರಿಗೆ ತಂದಿದೆ. ಕಾಂಗ್ರೆಸ್ ಶಕ್ತಿ ಏನೆಂಬುದ ಜನ ತಿಳಿದುಕೊಂಡಿದ್ದಾರೆ ಎಂದರು. ಸಚಿವ ಮಧು ಬಂಗಾರಪ್ಪ ಮಾತನಾಡಿ, ಅಧಿಕಾರ ಬರಲು, ಕೆಳಗಿಳಿಸಲು ನಿಮ್ಮ ಶಕ್ತಿ ಏನೆಂಬುದನ್ನು ತೋರಿಸಿದ್ದೀರಿ. ನೀವೆಲ್ಲರೂ ಸಂಘಟಿತರಾದ ಪರಿಣಾಮ ಸರ್ಕಾರವೇ ನಿಮ್ಮ ಮುಂದೆ ಬಂದು ನಿಂತಿದೆ. ಶೋಷಿತ, ಹಿಂದುಳಿದ ಸಮುದಾಯದವರಿಗೆ ಉನ್ನತ ಸ್ಥಾನಮಾನ ನೀಡುವ ಕೆಲಸ ಯಾವ ಪಕ್ಷ ಮಾಡಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಿ ಎಂದರು.
ಸಚಿವ ಶಿವರಾಜ್ ತಂಗಡಗಿ ಮಾತನಾಡಿ, ಕಾಂತರಾಜ ವರದಿ ವಿರೋಧಿಸುವವರಿಗೆ ನಿಮ್ಮ ಸಂಘಟನಾ ಶಕ್ತಿಕರೆಂಟ್ ಶಾಕ್ ಕೊಟ್ಟಿದೆ. ಶೋಷಿತ, ದಲಿತ, ಹಿಂದುಳಿದ, ಜನಸಾಮಾನ್ಯರ ಪರ ಸಿಎಂ ಇದ್ದಾರೆ. ಕೇಂದ್ರ ಸರ್ಕಾರ ಮಾತನಾಡುತ್ತಿದೆಯೇ ಹೊರತು ನಿಮ್ಮ ಪರವಿಲ್ಲ. ಆದರೆ, ನೀವು ಅವರ ಪರವಾಗಿ ಕೆಲಸ ಮಾಡಿದ್ದೀರಿ. ಇಡಬ್ಲ್ಯುಎಸ್ ಮೇಲ್ವರ್ಗದ ಪರವಿದೆಯೇ ಹೊರತು ಶೋಷಿತರಿಗಾಗಿ ಅಲ್ಲ. ಲೋಕಸಭಾ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರ ಕೈ ಬಲಪಡಿಸುವ ಮೂಲಕ ದೊಡ್ಡ ಸಂದೇಶ ನೀಡಬೇಕಿದೆ.
ಸಚಿವ ದಿನೇಶ್ ಗುಂಡೂರಾವ್ ಮಾತನಾಡಿ, ರಾಜ್ಯದಲ್ಲಿ ಜನಪರ, ಸಾಮಾಜಿಕ ನ್ಯಾಯದ ಪರವಾದ ಸರ್ಕಾರವಿದೆ. ಸಾಮಾಜಿಕ ನ್ಯಾಯಕ್ಕೆ ಒತ್ತು ನೀಡಿರುವ ಸರ್ಕಾರವಾಗಿದೆ. ಎಲ್ಲಾ ವರ್ಗಕ್ಕೂ ಸಾಮಾಜಿಕ ನ್ಯಾಯ ನೀಡುವ ಕೆಲಸ ಹಿಂದೆಯೂ ಸಿದ್ದರಾಮಯ್ಯ ನೀಡಿದ್ದರು. ಅಲ್ಪಸಂಖ್ಯಾತರ ಅನುದಾನ ಹೆಚ್ಚಳಗೊಳಿಸಿದರು ಎಂದರು. ಸಚಿವ ನಾಗೇಂದ್ರ ಮಾತನಾಡಿ, ಕೇಂದ್ರ ಮತ್ತು ರಾಜ್ಯದ ನಾಯಕರಾಗಲಿ, ಮುಖ್ಯಮಂತ್ರಿ ವಿರುದ್ಧ ಮಾತನಾಡಿದರೆ, ಮನೆಗೆ ಕಳುಹಿಸಲು ಶೋಷಿತರು ಸಿದ್ಧರಿದ್ದಾರೆ ಎಂಬುದಕ್ಕೆ ಈ ಸಮಾವೇಶ ನಿದರ್ಶನವಾಗಿದೆ. ನಿಮ್ಮೆಲ್ಲರಿಗೂ ಶಿಕ್ಷಣ, ಆರೋಗ್ಯ, ಆರ್ಥಿಕ ಬಲ ತುಂಬುವಲ್ಲಿ ಸರ್ಕಾರ ಬದ್ಧವಿದೆ. ಅದೇ ರೀತಿ ಕಾಂತರಾಜ್ ಆಯೋಗದ ವರದಿ ಜಾರಿಗೊಳಿಸುವ ವಿಶ್ವಾಸವಿದೆ.
ನಿತೀಶ್ ಕುಮಾರ್ ಬಗ್ಗೆ ವೈಯಕ್ತಿಕ ಟೀಕೆ ಮಾಡಿಲ್ಲ: ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ
ಸಚಿವ ಸತೀಶ್ ಜಾರಕಿಹೊಳಿ ಮಾತನಾಡಿ, ಕಳೆದುಕೊಂಡ ಹಕ್ಕು ಮತ್ತು ಅಧಿಕಾರ ಪಡೆಯಲು ನಡೆಸುತ್ತಿರುವ ಸಮಾವೇಶ ಇದಾಗಿದೆ. ಮುಂದಿನ ಹೋರಾಟದ ರೂಪುರೇಷೆಗಳಿಗೂ ಸನ್ನದ್ಧವಾಗಿದೆ. ಸಾವಿರಾರು ವರ್ಷಗಳಿಂದ ವಂಚಿತವಾಗಿರುವ ಸಮಾಜಗಳು ಜಾಗೃತರಾಗಿ ಬರುವಂತ ದಿನಗಳಲ್ಲಿ ಒಗ್ಗಟ್ಟಾಗಿ ಸೌಲಭ್ಯ ಪಡೆಯಬೇಕಿದೆ. ಹಿಂದೆ ದೇವರಾಜ ಅರಸು, ಬಂಗಾರಪ್ಪ, ಈಗ ಸಿದ್ದರಾಮಯ್ಯ ನಮ್ಮ ನಾಯಕರು. ಸಮುದಾಯಗಳನ್ನು ಮೇಲೆತ್ತುವ ಕೆಲಸವನ್ನು ಗ್ಯಾರಂಟಿಗಳ ಮೂಲಕ ಮಾಡಿದ್ದಾರೆ. ಅವರ ಶಕ್ತಿ ಬಲಪಡಿಸಿದಷ್ಟು ಹಿಂದುಳಿದ ಸಮುದಾಯಗಳಿಗೆ ಅನುಕೂಲವಾಗಲಿದೆ ಎಂದರು.