
ಬೆಂಗಳೂರು (ಫೆ.25): ಕೇಂದ್ರದಿಂದ ರಾಜ್ಯಕ್ಕೆ ಆಗಿರುವ ಅನ್ಯಾಯದ ವಿರುದ್ದ ರಾಜ್ಯ ಸರ್ಕಾರ ತಂದಿರುವ ನಿರ್ಣಯವನ್ನು ಬೆಂಬಲಿಸುವ ಮೂಲಕ ಬಿಜೆಪಿಯವರು ರಾಜ್ಯದ ಪರ ನಿಲ್ಲಬೇಕು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ವಿಧಾನಸೌಧದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು ಕಾನೂನು ಚೌಕಟ್ಟಿನಲ್ಲೇ ಈ ಅನ್ಯಾಯದ ವಿರುದ್ಧ ನಿರ್ಣಯ ಅಂಗೀಕರಿಸಿ ಕೇಂದ್ರ ಸರ್ಕಾರಕ್ಕೆ ಕಳುಹಿಸುತ್ತೇವೆ. ಬಿಜೆಪಿಯವರು ಈ ನಿರ್ಣಯ ಬೆಂಬಲಿಸುವ ಮೂಲಕ ರಾಜ್ಯದ ಪಾಲಿನ ತೆರಿಗೆ, ಅನುದಾನ, ಬರ ಪರಿಹಾರವನ್ನು ನ್ಯಾಯಯುತವಾಗಿ ನೀಡುವಂತೆ ಕೇಂದ್ರಕ್ಕೆ ಒತ್ತಾಯಿಸಬೇಕೆಂದರು.
ಐಟಿ ಕಂಪನಿಗಳಲ್ಲಿ ಕನ್ನಡಿಗರಿಗೆ ನಿರ್ದಿಷ್ಟ ಹುದ್ದೆಗಳನ್ನು ಮೀಸಲಿಡಬೇಕೆಂಬ ವಿಚಾರಕ್ಕೆ ಉದ್ಯಮಿ ಮೋಹನದಾಸ್ ಪೈ ವಿರೋಧ ವ್ಯಕ್ತಪಡಿಸಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ ಯಾವುದೇ ಆದೇಶವನ್ನು ಸರ್ಕಾರ ಹೊರಡಿಸಿಲ್ಲ. ಕೆಲವು ಕನ್ನಡ ಸಂಘಟನೆಯ ಸದಸ್ಯರು ಸಚಿವರನ್ನು ಭೇಟಿಯಾಗಿ ಈ ಬಗ್ಗೆ ಮನವಿ ಸಲ್ಲಿಸಿದ್ದಾರೆ ಎಂದರು.
ತಲೆಕೆಡಿಸಿಕೊಳ್ಳಲ್ಲ: ರಾಜ್ಯಸಭಾ ಚುನಾವಣೆ ಸಂಬಂಧ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿ ಮಾಡಿ ಏನೇನು ಚರ್ಚಿಸಿದ್ದಾರೆ, ಯಾವೆಲ್ಲಾ ಶಾಸಕರಿಗೆ ಕರೆ ಮಾಡಿದ್ದಾರೆ ಗೊತ್ತಿದೆ. ನಮ್ಮ ಬಳಿ ಇರುವ ಹೆಚ್ಚುವರಿ ಮತಗಳಿಗೆ ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಡಿ.ಕೆ.ಶಿವಕುಮಾರ್ ಹೇಳಿದರು. 138 ಜನ ಶಾಸಕರು ನಮ್ಮ ಜೊತೆ ಇದ್ದಾರೆ, ಜನಾರ್ದನ ರೆಡ್ಡಿ ಅವರಿಗೂ ಮತ ಹಾಕುವಂತೆ ಮನವಿ ಮಾಡುತ್ತೇನೆ.
ಧಾರ್ಮಿಕ ದತ್ತಿ ಕಾಯ್ದೆಗೆ ತಿದ್ದುಪಡಿ ತಂದಿದ್ದೇ ಯಡಿಯೂರಪ್ಪ: ಸಚಿವ ರಾಮಲಿಂಗಾರೆಡ್ಡಿ
ಅಧಿವೇಶನದ ನಂತರ ಖಾಸಗಿ ಹೋಟೆಲ್‌ನಲ್ಲಿ ಶಾಸಕಾಂಗ ಪಕ್ಷದ ಸಭೆ ನಡೆಸಿ ಅಣಕು ಮತದಾನ ನಡೆಸುತ್ತೇವೆ. ನಮ್ಮ ಮನೆಯನ್ನು ಎಷ್ಟು ಬಿಗಿ ಮಾಡಿಕೊಳ್ಳಬೇಕೊ ಅದನ್ನು ಮಾಡುತ್ತೇವೆ. ಇತರೆ ಪಕ್ಷದವರು ಸಂಪರ್ಕದಲ್ಲಿರುವುದನ್ನು ಬಹಿರಂಗಗೊಳಿಸುವುದಿಲ್ಲ ಎಂದರು. ಸಚಿವ ಎಚ್.ಸಿ.ಮಹದೇವಪ್ಪ ಅವರು ದಲಿತ ಮುಖ್ಯಮಂತ್ರಿ ವಿಚಾರವನ್ನು ಮುನ್ನೆಲೆಗೆ ತಂದಿರುವ ಬಗ್ಗೆ ಸೋಮವಾರ ರಾಜ್ಯಕ್ಕೆ ಬರಲಿರುವ ಪಕ್ಷದ ಪ್ರಧಾನ ಕಾರ್ಯದರ್ಶಿಗಳನ್ನು ಕೇಳಿ ಎಂದು ಉತ್ತರಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.