ಧಾರ್ಮಿಕ ದತ್ತಿ ಕಾಯ್ದೆ ತಿದ್ದುಪಡಿ ಮಾಡಿದವರೇ ಬಿಜೆಪಿಯವರು. ಈ ಕಾಯ್ದೆ ಜಾರಿಗೆ ತಂದಿದ್ದೇ ವಿಜಯೇಂದ್ರ ಅವರ ಅಪ್ಪ, ಯಡಿಯೂರಪ್ಪ ಅವರೇ 2011ರಲ್ಲಿ ಈ ಕಾಯ್ದೆ ತಂದಿದ್ದು ಎಂದು ಸಾರಿಗೆ ಹಾಗೂ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.
ಬಾಗಲಕೋಟೆ (ಫೆ.25): ಧಾರ್ಮಿಕ ದತ್ತಿ ಕಾಯ್ದೆ ತಿದ್ದುಪಡಿ ಮಾಡಿದವರೇ ಬಿಜೆಪಿಯವರು. ಈ ಕಾಯ್ದೆ ಜಾರಿಗೆ ತಂದಿದ್ದೇ ವಿಜಯೇಂದ್ರ ಅವರ ಅಪ್ಪ, ಯಡಿಯೂರಪ್ಪ ಅವರೇ 2011ರಲ್ಲಿ ಈ ಕಾಯ್ದೆ ತಂದಿದ್ದು ಎಂದು ಸಾರಿಗೆ ಹಾಗೂ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಹೇಳಿದರು. ಜಿಲ್ಲೆಯ ಹೂಲಗೇರಿ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಕರ್ನಾಟಕ ಹಿಂದು ಧಾರ್ಮಿಕ ಸಂಸ್ಥೆಗಳು ಧರ್ಮಾದಾಯ ದತ್ತಿಗಳ ಕಾಯ್ದೆಗೆ ತಿದ್ದುಪಡಿ ಮಾಡುತ್ತಿರುವುದಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ವಿರೋಧ ಮಾಡುತ್ತಿರುವುದಕ್ಕೆ ಪ್ರತಿಕ್ರಿಯಿಸಿದ ಅವರು ಈ ರೀತಿ ತಿರುಗೇಟು ನೀಡಿದರು.
ಮೊದಲು ಎಲ್ಲ ದೇವಸ್ಥಾನಕ್ಕೆ ಶೇ.5 ತೆರಿಗೆ ಇತ್ತು. ಯಡಿಯೂರಪ್ಪನವರು ₹10 ಲಕ್ಷಕ್ಕಿಂತ ಹೆಚ್ಚು ಆದಾಯ ಇರುವ ದೇವಸ್ಥಾನಗಳಿಗೆ ಶೇ.10 ರಷ್ಟು ಟೂಲ್ ಫಂಡ್ ಮಾಡಿದರು. ವಿಧಾನಸಭೆಯಲ್ಲಿ ಬಿಜೆಪಿಯವರೇ ಸ್ವಾಗತ ಮಾಡಿದ್ದಾರೆ ಎಂದು ತಿಳಿಸಿದ ಸಚಿವರು, 40 ಸಾವಿರ ಜನ ಅರ್ಚಕರು, ನೌಕರರಿದ್ದಾರೆ. ಅವರ ಕುಟುಂಬಗಳಿಗೆ ಸಹಾಯ ಮಾಡುವ ಕೆಲಸ ಮಾಡುತ್ತಿದ್ದೇವೆ. ಪ್ರತಿ ವರ್ಷ 1200 ಸಿ ದರ್ಜೆ ದೇವಸ್ಥಾನಗಳಿಗೆ ಅನುದಾನ ಕೊಡುತ್ತೇವೆ. ಇದಕ್ಕೂ ಮುಂಚೆ ಯಾಕೆ ಕೊಡಲಿಲ್ಲ ಎಂದು ಪ್ರಶ್ನಿಸಿದರು.
ಸುಳ್ಳಿನ ಬಿಜೆಪಿ ಕಾರ್ಖಾನೆಗೆ ಅಭಿವೃದ್ಧಿ ಉತ್ತರ: ಸಿಎಂ ಸಿದ್ದರಾಮಯ್ಯ
ಧಾರ್ಮಿಕ ದತ್ತಿ ಕಾಯ್ದೆ ತಿದ್ದುಪಡಿ ಮಾಡಿದವರೇ ಬಿಜೆಪಿಯವರು. ಸೆಕ್ಷನ್ 19ರಲ್ಲಿ 2011ರಲ್ಲಿ ಬೇರೆ ಧಾರ್ಮಿಕ ಸಂಸ್ಥೆಗಳಿಗೆ ಹಣ ಕೊಡಬಹುದು ಎಂದು ಬಿಜೆಪಿಯವರೆ ತಿದ್ದುಪಡಿ ಮಾಡಿದರು. ಈಗ ಅದನ್ನು ಕೇವಲ ಸಿ ದರ್ಜೆ ದೇವಸ್ಥಾನಗಳಿಗೆ ಮಾತ್ರ ಕೊಡಬೇಕು ಎಂದು ನಾವು ಬಂದೋಬಸ್ತ್ ಮಾಡಿದ್ದೇವೆ. ಹೆಚ್ಚುವರಿ ಹಣ ಬರುವುದರಲ್ಲಿ 1 ಸಾವಿರ ಸಿ ದರ್ಜೆ ದೇವಸ್ಥಾನಗಳಿಗೆ ₹25 ಕೋಟಿ ಹಣ ಬಿಡುಗಡೆ ಕೊಡುತ್ತೇವೆ. ₹ 7 ಕೋಟಿ ವೆಚ್ಚದಲ್ಲಿ 40 ಸಾವಿರ ಅರ್ಚಕರಿಗೆ ₹5 ಲಕ್ಷ ವಿಮೆ ಮಾಡಿಸುತ್ತೇವೆ. ಅರ್ಚಕರ ಮಕ್ಕಳ ವಿದ್ಯಾಭ್ಯಾಸಕ್ಕೆ ₹5 ಕೋಟಿ ಶಿಷ್ಯವೇತನ, ಅರ್ಚಕರ ಮೂರು ಸಂಘದವರು ಮನೆ ನಿರ್ಮಿಸಿಕೊಳ್ಳಲು ₹15 ಕೋಟಿ ತೆಗೆದಿಟ್ಟಿದ್ದೇವೆ ಎಂದರು.
ದತ್ತಿ ಕಾಯ್ದೆ ಮುಸ್ಲಿಮರ ಮಸೀದಿಗಳಿಗೂ ಅನ್ವಯವಾಗುತ್ತಾ? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಅವರಿಗೆ ಒಂದು ಪೈಸಾ ಕೋಡೋದಿಲ್ಲ. ಈ ಕಾಯ್ದೆ ಬಂದಿದ್ದು 1997ರಲ್ಲಿ. ಆದರೆ ಜಾರಿಯಾಗಿದ್ದು 2003ರಲ್ಲಿ. 2011ರಲ್ಲಿ ಈ ಕಾಯ್ದೆಗೆ ತಿದ್ದುಪಡಿ ತಂದು ಧಾರ್ಮಿಕ ಪರಿಷತ್ ಗೆ ಕೊಟ್ಟಿದ್ದೇ ಯಡಿಯೂರಪ್ಪನವರು ಎಂದರು. ನಾನು ಹಿಂದು ಧಾರ್ಮಿಕ ಪರಿಷತ್‌ಗೆ ಮಂತ್ರಿ. ಅವರದ್ದು ಬೇರೆ ನಮ್ಮದು ಬೇರೆ ಕಾನೂನು ಇರುತ್ತಾ? ದೇವಸ್ಥಾನಗಳ ಹಣ ಮಸೀದಿಗಳಿಗೆ ಹೋಗಲ್ಲ. 34 ಸಾವಿರ ಚಿಲ್ಲರೆ ದೇವಸ್ಥಾನಗಳಿಂದ ಬರುವ ಹಣದಲ್ಲಿ ಒಂದು ಪೈಸೆಯನ್ನೂ ಬೇರೆ ಧರ್ಮಗಳಿಗೆ ಕೊಡಲು ಆಗಲ್ಲ. ಬೇರೆ ಧರ್ಮ ಅಲ್ಲ, ಒಂದು ದೇವಸ್ಥಾನದ ಹಣ ಇನ್ನೊಂದು ದೇವಸ್ಥಾನಕ್ಕೂ ಕೊಡೋಕೆ ಬರಲ್ಲ.
ಸರ್ಕಾರಕ್ಕೂ ಈ ದೇವಸ್ಥಾನಗಳ ಹಣ ಬರಲ್ಲ. ದೇವಸ್ಥಾನದ ಹೆಸರಿನಲ್ಲಿಯೇ ಪ್ರತ್ಯೇಕ ಅಕೌಂಟ್ ಮಾಡಲಾಗಿರುತ್ತದೆ. ಮುಜರಾಯಿ ಇಲಾಖೆಗೂ ಈ ಹಣ ಬರಲ್ಲ. ಧಾರ್ಮಿಕ ಪರಿಷತ್‌ಗೆ ಮಾತ್ರ ಶುಲ್ಕ ಬರುತ್ತೆ ಎಂದು ಸಚಿವರು ವಿವರಿಸಿದರು. ಸರ್ಕಾರದ ಬೊಕ್ಕಸ ಖಾಲಿಯಾಗಿದೆ. ಹೀಗಾಗಿ ದೇವಸ್ಥಾನಗಳ ಹುಂಡಿಗೆ ಕೈ ಹಾಕಿದ್ದಾರೆ ಎಂಬ ವಿಜಯೇಂದ್ರ ಅವರ ಆರೋಪಕ್ಕೆ ಉತ್ತರಿಸಿದ ಅವರು, ಈ ಹಿಂದೆ ಸರ್ಕಾರದ ಹುಂಡಿ ತುಂಬಿಹೋಗಿತ್ತಲ್ಲ, ಆಗ ಯಾಕಪ್ಪ ಈ ದೇವಸ್ಥಾನಗಳಿಗೆ ಕೊಡಲಿಲ್ಲ ಎಂದು ತಿರುಗೇಟು ನೀಡಿದರು.
ಸಾರಾಯಿ ನಿಷೇಧದಿಂದ ಅತಂತ್ರ ಆದವರ ಮಕ್ಕಳಿಗೆ ಮದ್ಯ ಮಳಿಗೆ ಲೈಸನ್ಸ್?: ಆರ್.ಬಿ.ತಿಮ್ಮಾಪುರ
ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆಯೇ ಬಿಜೆಪಿಯವರಿಂದ ಕಾಂಗ್ರೆಸ್ ನಾಯಕರಿಗೆ ಗಾಳ ಹಾಕುರುವ ಕುರಿತು ಪ್ರತಿಕ್ರಿಯಿಸಿದ ಸಚಿವರು, ರಾಜ್ಯದಲ್ಲಿ ಬಿಜೆಪಿ ಮುಳುಗಿಹೋಗಿದೆ. ಅವರ ಬಗ್ಗೆ ಯಾರಿಗೂ ವಿಶ್ವಾಸ ಇಲ್ಲ. ಬಿಜೆಪಿ ಸವಕಲು ನಾಣ್ಯವಾಗಿದೆ. ಅವರ ಬಗ್ಗೆ ಯಾಕೆ ತಲೆ ಕೆಡಿಸಿಕೊಳ್ಳೋದು ಬಿಡಿ ಎಂದು ಹೇಳಿದರು.