ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ರಾಯಚೂರು ಜಿಲ್ಲೆಯ ಸಿಂಧನೂರಿಗೆ ಭೇಟಿ ನೀಡಿ, ಕಾರ್ಯಕರ್ತರನ್ನು ಹುರಿದುಂಬಿಸಲು ರಾಜ್ಯದ 7 ಜಿಲ್ಲೆಗಳಲ್ಲಿ ಪ್ರವಾಸ ಮಾಡಿದ್ದಾಗಿ ತಿಳಿಸಿದರು. ಮುಂಬರುವ ತಾಪಂ, ಜಿಪಂ ಚುನಾವಣೆಗಳಿಗೆ ಸಂಬಂಧಿಸಿದಂತೆ ಸಭೆ ನಡೆಸಿದ್ದು, ರಾಜ್ಯಾದ್ಯಂತ ಕಾರ್ಯಕರ್ತರನ್ನು ಸಂಘಟಿಸುತ್ತಿರುವುದಾಗಿಯೂ ಹೇಳಿದರು.
ರಾಯಚೂರು (ಜ.5): ನಾನು ಜೆಡಿಎಸ್ ಕಾರ್ಯಕರ್ತರಲ್ಲೊಬ್ಬ ಎಂದು ಭಾವಿಸಿದ್ದೇನೆ. ನಮ್ಮ ಕಾರ್ಯಕರ್ತರನ್ನು ಹುರಿದುಂಬಿಸಲು ಈಗಾಗಲೇ ರಾಜ್ಯದ 7 ಜಿಲ್ಲೆಗಳಲ್ಲಿ ಪ್ರವಾಸ ಮಾಡಿದ್ದೇನೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು.
ಇಂದು ರಾಯಚೂರು ಜಿಲ್ಲೆ ಸಿಂಧನೂರಿಗೆ ಭೇಟಿ ನೀಡಿದ್ದ ವೇಳೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕೆಲವೇ ದಿನಗಳಲ್ಲಿ ತಾಪಂ, ಜಿಪಂ ಚುನಾವಣೆ ಬರಲಿವೆ. ಚುನಾವಣೆಯಲ್ಲಿ ಸ್ಪರ್ಧೆಗೆ ಸಂಬಂಧಿಸಿದಂತೆ ಸಭೆ ನಡೆಸಿದ್ದೇವೆ. ರಾಜ್ಯಾದ್ಯಂತ ಕಾರ್ಯಕರ್ತರನ್ನು ಸಂಘಟಿಸುವ ಕಾರ್ಯ ಮಾಡುತ್ತಿದ್ದೇವೆ ಎಂದರು.
ಇದನ್ನೂ ಓದಿ: 'ಏಯ್ ಯಶ್ಪಾಲ್ ಸುವರ್ಣ ಕೇಳುಸ್ಕೋತಿದ್ದೀಯಾ? ನಾಳೆ ನೀನೂ ಸಿಎಂ ಆಗಬಹುದು ಎಂದ ಸಿದ್ದರಾಮಯ್ಯ!
ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷ ಬದಲಾವಣೆ ವಿಚಾರವಾಗಿ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ನಿಖಿಲ್ ಕುಮಾರಸ್ವಾಮಿ, ನಾನು ಯಾವತ್ತೂ ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷ ಆಗಬೇಕು, ಆಗುತ್ತೇನೆ ಎಂದು ಎಲ್ಲಿಯೂ ಹೇಳಿಲ್ಲ. ಅಲ್ಲದೆ ನಾನು ಅಧ್ಯಕ್ಷ ಸ್ಥಾನಕ್ಕಾಗಿ, ಇನ್ಯಾವುದೋ ಹುದ್ದೆಗಾಗಿ ಹಪಾಹಪಿ ಪಡುವವನಲ್ಲ. ನನಗೆ ನಮ್ಮ ಪಕ್ಷದ ಕಾರ್ಯಕರ್ತರು ನನಗೆ ಹೃದಯದಲ್ಲಿ ಸ್ಥಾನ ಕೊಟ್ಟಿದ್ದಾರೆ. ಪಕ್ಷದ ರಾಜ್ಯಾಧ್ಯಕ್ಷರಾಗಲು ಅನುಭವಸ್ಥರು ಇದ್ದಾರೆ, ನಮ್ಮ ಪಕ್ಷದಲ್ಲಿ ಬಹಳಷ್ಟು ಜನ ಹಿರಿಯರಿದ್ದಾರೆ. ಪಕ್ಷದಲ್ಲಿ ನಾನೊಬ್ಬ ಕಾರ್ಯಕರ್ತ ಮಾತ್ರ. ಪಕ್ಷ ಸಂಘಟಿಸುವುದು ನನ್ನ ಕೆಲಸವಾಗಿದೆ. ಹೀಗಾಗಿ ಈ ಸಮಯದಲ್ಲಿ ರಾಜ್ಯಾಧ್ಯಕ್ಷ ಸ್ಥಾನ ವಿಚಾರ ಅಪ್ರಸ್ತುತ ಎಂದರು.