ಶಾಸಕ ಎಚ್‌.ಸಿ.ಬಾಲಕೃಷ್ಣ ಪ್ರಧಾನಿ ಮೋದಿ ಬಳಿ ಕ್ಷಮೆ ಕೇಳಲಿ: ಎಂ.ಪಿ.ರೇಣುಕಾಚಾರ್ಯ

Published : Nov 29, 2023, 08:03 AM IST
ಶಾಸಕ ಎಚ್‌.ಸಿ.ಬಾಲಕೃಷ್ಣ ಪ್ರಧಾನಿ ಮೋದಿ ಬಳಿ ಕ್ಷಮೆ ಕೇಳಲಿ: ಎಂ.ಪಿ.ರೇಣುಕಾಚಾರ್ಯ

ಸಾರಾಂಶ

ರಾಜ್ಯದಲ್ಲಿ ಕೆಲವರು ಸಚಿವ ಸ್ಥಾನಕ್ಕಾಗಿ ಪ್ರಧಾನಿ ಮೋದಿ ಅವರ ಬಗ್ಗೆ ಹಗುರ ಮಾತನಾಡುತಿದ್ದಾರೆ. ಪುಲ್ವಾಮ ದಾಳಿಗೆ ಪ್ರಧಾನಿಯವರೇ ನೇರ ಹೊಣೆ ಎಂಬಂತೆ ಶಾಸಕ ಸಿ.ಎಸ್.ಬಾಲಕೃಷ್ಣ ಮಾತನಾಡಿರುವುದು ಖಂಡನೀಯ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೇಳಿದರು.

ತುಮಕೂರು (ನ.29): ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಹಿರಿಯ ಶ್ರೀಗಳ ಗದ್ದುಗೆಗೆ ಪೂಜೆ ಸಲ್ಲಿಸಿ, ಕಿರಿಯ ಶ್ರೀಗಳ ಆಶೀರ್ವಾದ ಪಡೆದರು. ಈ ವೇಳೆ ಮಾತನಾಡಿದ ಅವರು, ಸಿದ್ದಗಂಗಾ ಮಠಕ್ಕೂ ನನಗೂ ಅವಿನಾಭ ಸಂಬಂಧವಿದೆ. ಹಾಗಾಗಿ, ಆಗಿಂದಾಗ್ಗೆ ಮಠಕ್ಕೆ ಬರುವುದು ನನಗೆ ವಾಡಿಕೆ. ಕಳೆದ ಬಾರಿ ಬಿಜೆಪಿ ರಾಜ್ಯಾಧ್ಯಕ್ಷರಾಗಿರುವ ಬಿ.ವೈ.ವಿಜಯೇಂದ್ರ ಅವರೊಂದಿಗೆ ಬಂದಾಗ ತರಾತುರಿಯಲ್ಲಿ ಅವರೊಟ್ಟಿಗೆ ಹೊರಟು ಹೋಗಿದ್ದೆ. ಹಾಗಾಗಿ, ಈ ಬಾರಿ ಒಬ್ಬನೇ ಬಂದು, ಕೆಲ ಹೊತ್ತು ಮಠದಲ್ಲಿ ಕಾಲ ಕಳೆದಿದ್ದೇನೆ. ಇದರಲ್ಲಿ ಯಾವುದೇ ವಿಶೇಷ ವಿಲ್ಲ ಎಂದರು.

ರಾಜ್ಯದಲ್ಲಿ ಕೆಲವರು ಸಚಿವ ಸ್ಥಾನಕ್ಕಾಗಿ ಪ್ರಧಾನಿ ಮೋದಿ ಅವರ ಬಗ್ಗೆ ಹಗುರ ಮಾತನಾಡುತಿದ್ದಾರೆ. ಪುಲ್ವಾಮ ದಾಳಿಗೆ ಪ್ರಧಾನಿಯವರೇ ನೇರ ಹೊಣೆ ಎಂಬಂತೆ ಶಾಸಕ ಎಚ್‌.ಸಿ.ಬಾಲಕೃಷ್ಣ ಮಾತನಾಡಿರುವುದು ಖಂಡನೀಯ ಎಂದರು. ಪುಲ್ವಾಮ ದಾಳಿಗೆ ಬದಲಾಗಿ, ನಡೆದ ಸರ್ಜಿಕಲ್ ಸ್ಟೈಕ್‌ ನ್ನು ಇಡೀ ವಿಶ್ವವೇ ನೋಡಿದೆ. ಈ ರೀತಿ ಮಾತನಾಡುವುದರಿಂದಲೇ ಜನತೆ 2014ರಲ್ಲಿ ಕಾಂಗ್ರೆಸ್ 33 ಸೀಟು, 2019 44 ಸೀಟು ಕೊಟ್ಟಿದ್ದರು. ಈ ಬಾರಿ ಅದಕ್ಕಿಂತಲೂ ಕಡಿಮೆ ಬರಲಿದೆ. ಕಾಂಗ್ರೆಸ್ ಕೇಂದ್ರದಲ್ಲಿ ಅಧಿಕಾರದಲ್ಲಿದ್ದಾಗ ಯೋಧರಿಗೆ ಸ್ವಾತಂತ್ರ ನಿರ್ಧಾರ ಕೈಗೊಳ್ಳುವ ಅವಕಾಶ ಇರಲಿಲ್ಲ. 

ಮಹಡಿ ಕಟ್ಟಿ 1ಕ್ಕಷ್ಟೇ ತೆರಿಗೆ ಕಟ್ಟಿದರೆ ನಡೆಯಲ್ಲ: ಡಿಕೆಶಿ ಖಡಕ್ ಎಚ್ಚರಿಕೆ

ಆದರೆ, ಮೋದಿ ಅವರಿಗೆ ಸೇನಾ ದಂಡನಾಯಕರಿಗೆ ಸಂಪೂರ್ಣ ಸ್ವಾತಂತ್ರ ನೀಡಿದ್ದಾರೆ. ಸಿ.ಎಸ್.ಬಾಲಕೃಷ್ಣ ತಮ್ಮ ಹೇಳಿಕೆಯನ್ನು ವಾಪಸ್ ಪಡೆದು, ಪ್ರಧಾನಿಗಳ ಕ್ಷಮೆ ಕೇಳಬೇಕೆಂದು ರೇಣುಕಾಚಾರ್ಯ ಆಗ್ರಹಿಸಿದರು. ನೆಹರು, ಇಂದಿರಾಗಾಂಧಿ ಕಾಲದಲ್ಲಿ ದೇಶದಲ್ಲಿ ಏನಾಗಿದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಬ್ರಿಟಿಷರಿಗೆ ಹೋಲಿಕೆ ಮಾಡುವುದು ಎಷ್ಟು ಸರಿ ಎಂಬುದನ್ನು ನೀವು ಆತ್ಮಾವಲೋಕನ ಮಾಡಿಕೊಳ್ಳಿ ಎಂದು ಕಾಂಗ್ರೆಸ್ ಮುಖಂಡರಿಗೆ ತೀರುಗೇಟು ನೀಡಿದರು. ಈಗಾಗಲೇ ಡಿಕೆಶಿ ಅವರ ವಿರುದ್ಧ ಇದ್ದ ಸಿಬಿಐ ವಿಚಾರಣೆ ವಾಪಸ್ ಪಡೆದಿರುವುದನ್ನು ಪ್ರಶ್ನಿಸಿ ಯತ್ನಾಳ್ ಹೈಕೋರ್ಟ್‌ ಮೆಟ್ಟಿಲು ಹತ್ತಿದ್ದಾರೆ. 

ಯತ್ನಾಳ್ ಹಿರಿಯರಿದ್ದು, ಯೋಚಿಸಿ ನಿರ್ಧಾರ ತೆಗೆದುಕೊಂಡಿದ್ದಾರೆ. ಸೋಮಣ್ಣ ದೆಹಲಿಗೆ ಹೋಗಿ ಚರ್ಚೆ ಮಾಡುವುದಕ್ಕೆ ನಮ್ಮ ವಿರೋಧವಿಲ್ಲ. ಅವರ ಬಗ್ಗೆ ಗೌರವವಿದೆ. ಆದರೆ, ಯಡಿಯೂರಪ್ಪ ಅವರ ಬಗ್ಗೆ ಮಾತನಾಡುವ ನೈತಿಕತೆ ಅವರಿಗಿಲ್ಲ. ಯಡಿಯೂರಪ್ಪ ಏನು ಅಧಿಕಾರಕ್ಕಾಗಿ ಕಾಂಗ್ರೆಸ್ ಪಕ್ಷದಿಂದ ಬಂದವರೇ ಎಂದು ಪ್ರಶ್ನಿಸಿದ ರೇಣಕಾಚಾರ್ಯ, ಯಡಿಯೂರಪ್ಪ ಮೂಲತಃ ಸಂಘ ಪರಿವಾರದವರು. ಬಿಜೆಪಿ ಕಟ್ಟಿ ಬೆಳೆಸಿದ್ದಾರೆ. ಒಂದು ಕ್ಷೇತ್ರ ಗೆದ್ದಿರಲಿಲ್ಲ. ಶಿಕಾರಿಪುರದಲ್ಲಿ ತೆಲೆ ಒಡೆದರೂ ಬಿಡದೆ ಪಕ್ಷ ಕಟ್ಟಿ ಬೆಳೆಸಿದ್ದಾರೆ. ಅವರ ಬಗ್ಗೆ ಮಾತನಾಡುವ ನೈತಿಕತೆ ಪಕ್ಷದ ನಾಯಕರಿಗೂ ಇಲ್ಲ ಎಂದರು.

ನಾನು, ಕಾಂಗ್ರೆಸ್ ಪಕ್ಷದಲ್ಲಿ ಇದ್ದಿದ್ದರೆ ಮಂತ್ರಿಯಾಗಿರುತ್ತಿದ್ದೆ ಎಂದು ಕೆಲವರ ಬಳಿ ಸೋಮಣ್ಣ ಮಾತನಾಡಿದ್ದಾರೆ. ಕಾಂಗ್ರೆಸ್ ನವರು ಇವರಿಗೆ ಏನು ಸ್ಥಾನಮಾನ ಕೊಟ್ಟಿದ್ದರು. ಸೋಮಣ್ಣ, ಹಿಂದೆ ಬಂದಿಖಾನೆ ಸಚಿವರಾಗಿದ್ದರು. ಯಡಿಯೂರಪ್ಪ ಎಲ್ಲಾ ಸ್ಥಾನಮಾನ ನೀಡಿ ಗೌರವ ನೀಡಿದ್ದಾರೆ. ಎರಡು ಕಡೆ ಸ್ಪರ್ಧಿಸಿ ಎಂದು ಯಡಿಯೂರಪ್ಪ ಹೇಳಿದ್ದರೇ, ಮೇಲಿನವರು ಹೇಳಿದ್ದು, ಸಿದ್ದರಾಮಯ್ಯ ವಿರುದ್ಧ ನಿಂತು ಗೆದ್ದರೆ ಸಿ.ಎಂ.ಆಗ್ತಿನಿ ಎಂಬ ಭ್ರಮೆಯಲ್ಲಿ ಸ್ಪರ್ಧೆಗೆ ಒಪ್ಪಿಕೊಂಡಿದ್ದರು. ಅವತ್ತೇ ಈ ಮಾತು ಹೇಳಬೇಕಾಗಿತ್ತು. ನಾವು ಸೋತ್ತಿದ್ದೇವೆ. ಸೋತ ತಕ್ಷಣ ಯಡಿಯೂರಪ್ಪ ವಿರುದ್ಧ ಮಾತನಾಡುವುದು ಸರಿಯಲ್ಲ. ನೀವು ಸೋತು ಎಲ್ಲೋ ಇದ್ದಾಗ, ನಿಮ್ಮ ಕಣ್ಣೀರು ಒರೆಸಿ ವಿಧಾನಪರಿಷತ್ ಸದಸ್ಯರನ್ನಾಗಿ ಮಾಡಿ, ಕೇಳಿದ ಖಾತೆ ಕೊಟ್ಟಿದ್ದು ಅಪರಾಧವೇ? ಯಾವ ನೈತಿಕತೆ ಇಟ್ಟುಕೊಂಡು ಯಡಿಯೂರಪ್ಪನವರ ಬಗ್ಗೆ ಮಾತನಾಡುತ್ತಿರಿ ಎಂದು ಕಿಡಿಕಾರಿದರು.

ಬಿ.ವೈ.ವಿಜಯೇಂದ್ರ ಮತ್ತು ಆರ್.ಅಶೋಕ್ ಆಯ್ಕೆಯನ್ನು ಕೆಲವರು ಅಡ್ಜಸ್ಮೆಂಟ್ ರಾಜಕಾರಣ ಎಂದು ಹೇಳುತಿದ್ದಾರೆ. ಇದು ಸರಿಯಲ್ಲ. ವಿಜಯೇಂದ್ರನ ಆಯ್ಕೆ ಮಾಡಿದ್ದು ಪಕ್ಷದ ಹೈಕಮಾಂಡ್, ಆರ್.ಅಶೋಕ್ ಅವರನ್ನು ಆಯ್ಕೆ ಮಾಡಿದ್ದು ಶಾಸಕಾಂಗ ಸಭೆ. ಅದನ್ನು ಸ್ವಾಗತಿಸಬೇಕು. ನಾನು, ಸಹ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ ಸೇರಿದಂತೆ ಹಲವರನ್ನು ಭೇಟಿಯಾಗಿದ್ದು ನಿಜ. ಯಾರನ್ನು ಕದ್ದು ಮುಚ್ಚಿ ಭೇಟಿ ಮಾಡಿಲ್ಲ. ಕ್ಷೇತ್ರದ ಅನುದಾನ ಕಡಿತ ಮಾಡಿದ್ದಕ್ಕೆ ಭೇಟಿ ಮಾಡಿ ಮಾತುಕತೆ ನಡೆಸಿದ್ದೇನೆ. ಬಿಜೆಪಿ ರಾಜ್ಯಾಧ್ಯಕ್ಷರನ್ನು ಶೀಘ್ರ ಆಯ್ಕೆ ಮಾಡಬೇಕು ಎಂದು ಒತ್ತಾಯಿಸಿದ್ದೇನೆ ಹೊರತು ಬಿಜೆಪಿ ಬಿಡುವ ಮಾತು ಆಡಿರಲಿಲ್ಲ. ಮೋದಿ, ಅಮಿತ್ ಷಾ ವಿರುದ್ಧ ಒಂದು ಮಾತು ಆಡಿರಲಿಲ್ಲ. ಹಾಗೆನಾದರೂ ಮಾತನಾಡಿದ್ದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಸವಾಲು ಹಾಕಿದರು.

ಸಚಿವರ ವಿರುದ್ಧ ಮತ್ತೆ ಶಾಸಕ ಲೆಟರ್‌ಬಾಂಬ್‌: ಸಿಎಂಗೆ ಕೈ ಶಾಸಕ ಬಿ.ಆರ್‌.ಪಾಟೀಲ್‌ ಪತ್ರ

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರಿಗೆ ಸಂಘಟನೆ ಮಾಡುವ ಶಕ್ತಿ ಇಲ್ಲವೇ ? ಅವರು ಯಡಿಯೂರಪ್ಪ ಅವರ ಮಗನಾಗಿ ಹುಟ್ಟಿದ್ದೇ ತಪ್ಪೇ, ಎಲ್ಲಾ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ಗೆಲ್ಲಿಸಿಕೊಂಡು ಬಂದಿದ್ದಾರೆ. ಯುವ ಮೋರ್ಚಾ ರಾಜ್ಯಾಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ. ವಿಜಯೇಂದ್ರ ಆಯ್ಕೆ ಟೀಕಿಸುವುದು ಅಮಿತ್ ಷಾ, ನಡ್ಡಾಗೆ ಅಪಮಾನ ಮಾಡಿದಂತೆ, ದಾವಣಗೆರೆಯಲ್ಲಿ ಸರ್ವೇ ನಡೆಸಲಿ, ಮತದಾರರು ಯಾರ ಹೆಸರು ಹೆಚ್ಚಿಗೆ ಹೇಳುತ್ತಾರೋ ಅವರಿಗೆ ಟಿಕೆಟ್ ನೀಡಲಿ ಎಂದ ಅವರು ಮಠದಲ್ಲಿ ಕಟ್ಟಡ ಕಟ್ಟಿದರೆ ಅದರ ಉದ್ಘಾಟನೆ ಮಾಡಲಿ, ಅದನ್ನು ಬಿಟ್ಟು ರಾಜಕೀಯ ಮಾಡುವುದನ್ನು ಬಿಡಲಿ ಎಂದು ಸೋಮಣ್ಣ ಅವರಿಗೆ ಸಲಹೆ ನೀಡಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಮತ್ತು ಬೆಳಗಾವಿ ವಿಭಜನೆ; ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಹತ್ವದ ಮಾಹಿತಿ
ಗ್ಯಾರಂಟಿ ಹೆಸರಿನಲ್ಲಿ ಕಾಲಹರಣ ಮಾಡುವ ಕೆಲಸ ಆಗುತ್ತಿದೆ: ಛಲವಾದಿ ನಾರಾಯಣಸ್ವಾಮಿ