39 ಶಾಸಕರಿಗೆ ನಿಗಮಾಧ್ಯಕ್ಷ ಪಟ್ಟ: ಸುರ್ಜೇವಾಲಾ, ಸಿದ್ದು, ಡಿಕೆಶಿ ಸಭೆಯಲ್ಲಿ ಪಟ್ಟಿ ಫೈನಲ್‌!

By Kannadaprabha NewsFirst Published Nov 29, 2023, 7:03 AM IST
Highlights

ನಿಗಮ-ಮಂಡಳಿ ಅಧ್ಯಕ್ಷ ಹುದ್ದೆಗೆ ಕಡೆಗೂ ಮೊದಲ ಪಟ್ಟಿ ಆಖೈರುಗೊಂಡಿದ್ದು, ಅಚ್ಚರಿಯೆಂಬಂತೆ 39 ಮಂದಿ ಶಾಸಕರ ಹೆಸರು ಈ ಪಟ್ಟಿಯಲ್ಲಿದೆ. ನಿರೀಕ್ಷಿಸಿದಂತೆ ಕಾರ್ಯಕರ್ತರ ಹೆಸರು ಈ ಪಟ್ಟಿಯಲ್ಲಿ ಇಲ್ಲ. 

ಬೆಂಗಳೂರು (ನ.29): ನಿಗಮ-ಮಂಡಳಿ ಅಧ್ಯಕ್ಷ ಹುದ್ದೆಗೆ ಕಡೆಗೂ ಮೊದಲ ಪಟ್ಟಿ ಆಖೈರುಗೊಂಡಿದ್ದು, ಅಚ್ಚರಿಯೆಂಬಂತೆ 39 ಮಂದಿ ಶಾಸಕರ ಹೆಸರು ಈ ಪಟ್ಟಿಯಲ್ಲಿದೆ. ನಿರೀಕ್ಷಿಸಿದಂತೆ ಕಾರ್ಯಕರ್ತರ ಹೆಸರು ಈ ಪಟ್ಟಿಯಲ್ಲಿ ಇಲ್ಲ. ಮಂಗಳವಾರವೇ ಈ ಪಟ್ಟಿ ಹೈಕಮಾಂಡ್‌ಗೆ ರವಾನೆಯಾಗಿದ್ದು, ಒಪ್ಪಿಗೆ ದೊರೆತರೆ ಬೆಳಗಾವಿ ವಿಧಾನಮಂಡಲ ಅಧಿವೇಶನಕ್ಕೂ ಮೊದಲೇ ನಿಗಮ-ಮಂಡಳಿ ನೇಮಕ ಆದೇಶ ಹೊರಬೀಳುವ ಸಾಧ್ಯತೆಯಿದೆ. ತನ್ಮೂಲಕ ಹಲವು ಮಾಸಗಳಿಂದ ನಡೆದಿದ್ದ ನಿಗಮ-ಮಂಡಳಿ ನೇಮಕ ಕಸರತ್ತು ಮಂಗಳವಾರ ಪೂರ್ಣಗೊಂಡಿದೆ. ಈ ಪ್ರಕ್ರಿಯೆ ಮುಕ್ತಾಯಗೊಳಿಸಲು ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ನಗರಕ್ಕೆ ಆಗಮಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರೊಂದಿಗೆ ಸುದೀರ್ಘ ಸಮಾಲೋಚನೆ ನಡೆಸಿದರು.

ಮೂಲಗಳ ಪ್ರಕಾರ, 25 ಮಂದಿ ಶಾಸಕರು ಹಾಗೂ 15 ಮಂದಿ ಕಾರ್ಯಕರ್ತರನ್ನು ಮೊದಲ ಪಟ್ಟಿಯಲ್ಲಿ ಅಂತಿಮಗೊಳಿಸುವ ಉದ್ದೇಶ ನಾಯಕತ್ವಕ್ಕೆ ಇತ್ತು. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೊದಲ ಹಂತದಲ್ಲಿ ಶಾಸಕರನ್ನು ಮಾತ್ರ ನೇಮಕ ಮಾಡಿ, ಲೋಕಸಭಾ ಚುನಾವಣೆ ನಂತರ ಕಾರ್ಯಕರ್ತರನ್ನು ನೇಮಕ ಮಾಡಬೇಕು ಎಂದು ಮಂಡಿಸಿದ ವಾದಕ್ಕೆ ಸುರ್ಜೇವಾಲಾ ಒಪ್ಪಿಗೆ ಸೂಚಿಸಿದರು ಎನ್ನಲಾಗಿದೆ. ಅನಂತರ ನಡೆದ ಮಾತುಕತೆಯ ವೇಳೆ, ಪಟ್ಟಿಯಲ್ಲಿದ್ದ 25 ಶಾಸಕರ ಸಂಖ್ಯೆ ಕ್ರಮೇಣ ಹೆಚ್ಚಿದೆ. ವಾಸ್ತವವಾಗಿ ನಿಗಮ-ಮಂಡಳಿ ನೇಮಕವನ್ನು ಶಾಸಕರಿಗೆ ಶೇ. 30 ಹಾಗೂ ಕಾರ್ಯಕರ್ತರಿಗೆ ಶೇ. 70ರ ಪ್ರಮಾಣದಲ್ಲಿ ಹಂಚಿಕೆ ಮಾಡಬೇಕು ಎಂದು ಹೈಕಮಾಂಡ್‌ ರಾಜ್ಯ ನಾಯಕತ್ವಕ್ಕೆ ನಿರ್ದೇಶಿಸಿತ್ತು.

Latest Videos

ಮಹಡಿ ಕಟ್ಟಿ 1ಕ್ಕಷ್ಟೇ ತೆರಿಗೆ ಕಟ್ಟಿದರೆ ನಡೆಯಲ್ಲ: ಡಿಕೆಶಿ ಖಡಕ್ ಎಚ್ಚರಿಕೆ

ಆದರೆ, ಗ್ಯಾರಂಟಿ ಕಾರ್ಯಕ್ರಮಗಳ ಹೊರೆಯಿಂದಾಗಿ ಶಾಸಕರ ಕ್ಷೇತ್ರಗಳಿಗೆ ಅಪೇಕ್ಷಿಸಿದಷ್ಟು ಅನುದಾನ ನೀಡಲು ಸಾಧ್ಯವಾಗದಿರುವುದು ಹಾಗೂ ಸಚಿವ ಸ್ಥಾನ ದೊರೆಯದ ಬಗ್ಗೆ ಹಲವು ಹಿರಿಯ ಶಾಸಕರು ಹೊಂದಿದ್ದ ಅಸಮಾಧಾನವನ್ನು ನೀಗಿಸುವ ಉದ್ದೇಶದಿಂದ ಶಾಸಕರಿಗೆ ನಿಗಮ-ಮಂಡಳಿಯಲ್ಲಿ ಹೆಚ್ಚಿನ ಸ್ಥಾನ ನೀಡಲು ತೀರ್ಮಾನಿಸಲಾಯಿತು ಎನ್ನಲಾಗಿದೆ. ಹೀಗಾಗಿ ಪಟ್ಟಿಯಲ್ಲಿ ಶಾಸಕರ ಸಂಖ್ಯೆ ಅಂತಿಮವಾಗಿ 39ಕ್ಕೆ ತಲುಪಿತು ಎಂದು ಹೇಳಲಾಗಿದೆ. ಮೂಲಗಳ ಪ್ರಕಾರ, ಈ ಸಂಖ್ಯೆಯೂ ಅಂತಿಮವಲ್ಲ. ರಾಜ್ಯ ನಾಯಕತ್ವ ಸಿದ್ಧಪಡಿಸಿ ಹೈಕಮಾಂಡ್‌ಗೆ ರವಾನಿಸಿರುವ ಈ ಪಟ್ಟಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಹೈಕಮಾಂಡ್‌ ಕೂಡ ಕೆಲ ಬದಲಾವಣೆ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.

3 ಹಂತದಲ್ಲಿ ನೇಮಕಾತಿ: ನಿಗಮ-ಮಂಡಳಿಗೆ ಒಟ್ಟು ಮೂರು ಹಂತಗಳಲ್ಲಿ ನೇಮಕ ಮಾಡಲು ಈ ವೇಳೆ ತೀರ್ಮಾನಿಸಲಾಗಿದೆ ಎನ್ನಲಾಗಿದೆ. ಮೊದಲ ಪಟ್ಟಿ ಹೊರಬಿದ್ದ ನಂತರ ತೀವ್ರ ಪ್ರತಿರೋಧ ಅಥವಾ ಅಸಮಾಧಾನ ಕೇಳಿ ಬಂದರೆ ಜನವರಿ ವೇಳೆಗೆ ಮತ್ತೊಂದು ಪಟ್ಟಿ ಹೊರಬರಬಹುದು. ಅಂತಿಮವಾಗಿ ಲೋಕಸಭೆ ಚುನಾವಣೆ ನಂತರ ಮೂರನೇ ಪಟ್ಟಿ ಹೊರಬರಬಹುದು. ಮೊದಲ ಪಟ್ಟಿಗೆ ತೀವ್ರ ಪ್ರತಿರೋಧ ಕೇಳಿಬಾರದ ಪಕ್ಷದಲ್ಲಿ ಎರಡು ಹಾಗೂ ಮೂರನೇ ಪಟ್ಟಿಗಳ ಬಿಡುಗಡೆ ಲೋಕಸಭಾ ಚುನಾವಣೆಯ ನಂತರವೇ ನಡೆಯುವ ಸಾಧ್ಯತೆಯಿದೆ ಎನ್ನಲಾಗಿದೆ.

ಹೈಕಮಾಂಡ್‌ ಒಪ್ಪಿಗೆ ನಂತರ ಆದೇಶ- ಸಿಎಂ: ಸುರ್ಜೇವಾಲಾ ಅವರೊಂದಿಗಿನ ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಗಮ-ಮಂಡಳಿ ಅಧ್ಯಕ್ಷರ ಆಯ್ಕೆ ಅಂತಿಮಗೊಳಿಸಲಾಗಿದೆ. ಅಧ್ಯಕ್ಷರ ಪಟ್ಟಿಯನ್ನು ಸಿದ್ಧಪಡಿಸಿ ಕೇಂದ್ರ ನಾಯಕರಿಗೆ ಕಳುಹಿಸಲಾಗಿದ್ದು, ಹೈಕಮಾಂಡ್‌ ಒಪ್ಪಿಗೆ ದೊರೆತ ಕೂಡಲೆ ಅಧ್ಯಕ್ಷರ ನೇಮಕ ಆದೇಶ ನೀಡಲಾಗುವುದು ಎಂದರು. ಮೊದಲ ಹಂತದಲ್ಲಿ ಶಾಸಕರು, ಎರಡು ಮತ್ತು ಮೂರನೇ ಹಂತದಲ್ಲಿ ಪಕ್ಷದ ಕಾರ್ಯಕರ್ತರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗುವುದು. ಆ ಕುರಿತು ಸಭೆಯಲ್ಲೂ ಚರ್ಚಿಸಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದರು.

ಸಚಿವರ ವಿರುದ್ಧ ಮತ್ತೆ ಶಾಸಕ ಲೆಟರ್‌ಬಾಂಬ್‌: ಸಿಎಂಗೆ ಕೈ ಶಾಸಕ ಬಿ.ಆರ್‌.ಪಾಟೀಲ್‌ ಪತ್ರ

ನಿಗಮ-ಮಂಡಳಿ ಅಧ್ಯಕ್ಷರ ಆಯ್ಕೆ ಅಂತಿಮಗೊಳಿಸಲಾಗಿದೆ. ಪಟ್ಟಿಯನ್ನು ಕೇಂದ್ರ ನಾಯಕರಿಗೆ ಕಳುಹಿಸಲಾಗಿದೆ. ಹೈಕಮಾಂಡ್‌ ಒಪ್ಪಿಗೆ ದೊರೆತ ಕೂಡಲೇ ಆದೇಶ ನೀಡಲಾಗುವುದು. ಮೊದಲ ಹಂತದಲ್ಲಿ ಶಾಸಕರು, ಎರಡು ಮತ್ತು ಮೂರನೇ ಹಂತದಲ್ಲಿ ಕಾರ್ಯಕರ್ತರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗುವುದು.
- ಸಿದ್ದರಾಮಯ್ಯ, ಮುಖ್ಯಮಂತ್ರಿ

click me!