ಶಾಮನೂರು ಪ್ರಶ್ನೆಗೆ ಸಿಎಂ ಸಿದ್ದರಾಮಯ್ಯ ಉತ್ತರಿಸಲಿ: ಬೊಮ್ಮಾಯಿ

By Kannadaprabha News  |  First Published Oct 8, 2023, 11:01 AM IST

ಲಿಂಗಾಯತ ಅಧಿಕಾರಿಗಳ ವಿಚಾರದಲ್ಲಿ ಅಖಿಲ ಭಾರತ ವೀರಶೈವ ಮಹಾಸಭೆ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಎತ್ತಿರುವಂತಹ ಪ್ರಶ್ನೆಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಉತ್ತರ ಕೊಡಬೇಕು ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಗ್ರಹಿಸಿದರು.


ಹುಬ್ಬಳ್ಳಿ (ಅ.08): ಲಿಂಗಾಯತ ಅಧಿಕಾರಿಗಳ ವಿಚಾರದಲ್ಲಿ ಅಖಿಲ ಭಾರತ ವೀರಶೈವ ಮಹಾಸಭೆ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಎತ್ತಿರುವಂತಹ ಪ್ರಶ್ನೆಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಉತ್ತರ ಕೊಡಬೇಕು ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಗ್ರಹಿಸಿದರು. ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜಾತಿಯ ಕರಿನೆರಳು ಆಡಳಿತದ ಮೇಲೆ ಬೀಳುತ್ತದೆ. ಇದು ಒಳ್ಳೆಯ ಆಡಳಿತದ ಲಕ್ಷಣವಲ್ಲ. ಆಡಳಿತದ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದು ತಿಳಿಸಿದರು.

ಕಾಂಗ್ರೆಸ್ ಮೊದಲಿನಿಂದಲೂ ಎಡವಟ್ಟು ಮಾಡಿಕೊಂಡು ಬರುತ್ತಿದೆ. ವರ್ಗಾವಣೆ ವಿಷಯದಲ್ಲಿ ಬಹಳಷ್ಟು ಅಸಮಾಧಾನಕ್ಕೆ ಈಡಾಗಿದೆ. ಎಲ್ಲ ಸಮಾಜಕ್ಕೂ ನ್ಯಾಯ ಕೊಡುತ್ತೇವೆ ಅಂತ ಹೇಳಿದ್ದರು. ಆದರೆ ಅದು ಆಗಿಲ್ಲ‌. ಈಗ ಬೇರೆ ಬೇರೆ ರೂಪದಲ್ಲಿ ಹೊರಗೆ ಬರುತ್ತಿದೆ. ಕಾಂಗ್ರೆಸ್ ಶಾಸಕ ಶಾಮನೂರು ಶಿವಶಂಕರಪ್ಪ ಎತ್ತಿರುವಂತಹ ಪ್ರಶ್ನೆಗಳಿಗೆ ಸಿಎಂ ಉತ್ತರ ಕೊಡಬೇಕು ಎಂದರು.

Tap to resize

Latest Videos

ಬಿಜೆಪಿಗೆ ಕಾಂಗ್ರೆಸ್‌ ಬಗ್ಗೆ ಭಯ ಹುಟ್ಟಿರುವುದು ಪೋಸ್ಟರ್‌ನಿಂದ ಸ್ಪಷ್ಟ: ಡಿಕೆಶಿ

ಜಾತಿಗಣತಿಯಲ್ಲ: ರಾಜ್ಯ ಸರ್ಕಾರ ಜಾತಿ ಗಣತಿ ಬಿಡುಗಡೆ ಮಾಡುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಾವು 2014- 15ರಲ್ಲಿ ಶೈಕ್ಷಣಿಕ ಮತ್ತು ಆರ್ಥಿಕತೆಯ ಗಣತಿಗೆ ಆಜ್ಞೆ ಮಾಡಿದ್ದೆವು. ಎಲ್ಲೂ ಜಾತಿ ಗಣತಿ ಮಾಡಲು ಹೇಳಿರಲಿಲ್ಲ‌. ಎಲ್ಲರಿಗೂ ಕೂಡ ಗೊತ್ತಿದೆ ಇದು ಜಾತಿಗಣತಿಯಲ್ಲ ಎಂದು ಹೇಳಿದರು.

ಸಮಾಜ ಘಾತಕ ಶಕ್ತಿಗಳಿಗೆ ಪ್ರಚೋದನೆ: ಕಾಂಗ್ರೆಸ್ ಸರ್ಕಾರ ಬಂದಾಗೆಲ್ಲ ಆಡಳಿತವನ್ನು ಸುಸೂತ್ರವಾಗಿ ನಡೆಸಲು ಆಗುವುದಿಲ್ಲ. ಒಂದು ವರ್ಗವನ್ನು ಪೊಲೀಸರು ಮುಟ್ಟಬಾರದು ಅಂತ ಪರೋಕ್ಷವಾಗಿ ಸಂದೇಶ ಹೋಗಿರುತ್ತದೆ. ಸಮಾಜಘಾತಕ ಶಕ್ತಿಗಳಿಗೆ ಕಾನೂನು, ಪೊಲೀಸ್‌ ಸರ್ಕಾರದ ಭಯ ಇಲ್ಲ. ಕೋಲಾರದಲ್ಲಿ ಘಟನೆ ನಡೆದಿತ್ತು. ಹೀಗಾಗಿ ಶಿವಮೊಗ್ಗದಲ್ಲಿ ಪೂರ್ವ ಬಂದೋಬಸ್ತ್ ಮಾಡಬೇಕಿತ್ತು. ಈದ್ ಮಿಲಾದ್ ಮೆರವಣಿಗೆಯಲ್ಲಿ ಬಂದೋಬಸ್ತ್ ಯಾಕೆ ಮಾಡಲಿಲ್ಲ. ಸರ್ಕಾರ ಬಂದ ನಂತರ ಸಮಾಜಘಾತಕ ಶಕ್ತಿಗಳಿಗೆ ಪ್ರಚೋದನೆ ಸಿಗುತ್ತಿದೆ ಎಂದು ಹೇಳಿದರು.

ಸರ್ಕಾರ ಜೀವಂತವಾಗಿಲ್ಲ: ಬರ ಪರಿಸ್ಥಿತಿ ನಿರ್ವಹಣೆ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ರೈತರ ಪಾಲಿಗೆ ಈ ಸರ್ಕಾರ ಸತ್ತಂತಿದೆ. ಬರಪರಿಸ್ಥಿತಿಯನ್ನು ಸರಿಯಾಗಿ ನಿಭಾಯಿಸುತ್ತಿಲ್ಲ ಬರೀ ಹೇಳಿಕೆಯಲ್ಲೇ ಇವರ ಸರ್ಕಾರ ಆಡಳಿತ ನಡೆಸುತ್ತಿದೆ. ಹೇಳಿಕೆಯಿಂದ ಬರ ನಿಭಾಯಿಸಲು ಸಾಧ್ಯವಿಲ್ಲ. ಬರಗಾಲ ಎದುರಾಗಿ 3 ತಿಂಗಳಾಯಿತು. ಮುಂಗಾರು ಬೆಳೆನಾಶವಾಗಿ ರೈತರು ಕಂಗಾಲಾಗಿದ್ದಾರೆ. ಆದರೂ ಬರ ನಿಭಾಯಿಸಲು ನಯಾಪೈಸೆಯನ್ನೂ ಬಿಡುಗಡೆ ಮಾಡಿಲ್ಲ. ಕುಡಿಯುವ ನೀರಿನ ಸಮಸ್ಯೆಯಂತೂ ಹೇಳತೀರದು ಎಂದು ಕಿಡಿಕಾರಿದರು.

ಅನಗತ್ಯವಾಗಿ ಕೇಂದ್ರಕ್ಕೆ ಬೊಟ್ಟು ಮಾಡಿ ತೋರಿಸುವ ಕೆಲಸ ಮಾಡುತ್ತಿದ್ದಾರೆ.‌ ರಾಜ್ಯ ಸರ್ಕಾರದ ಬಳಿ ವಿಕೋಪ ನಿಧಿ ಈಗಾಗಲೇ ಇದೆ. ಕೂಡಲೇ ಅದನ್ನು ಬಿಡುಗಡೆ ಮಾಡಿ, ಆಮೇಲೆ ಕೇಂದ್ರದಿಂದ ತೆಗೆದುಕೊಳ್ಳಿ. ನಾವು ನಿಮ್ಮ ಜೊತೆ ಇರುತ್ತೇವೆ ಎಂದು ಸಲಹೆ ಮಾಡಿದರು. ನಮ್ಮ ಅವಧಿಯಲ್ಲಿ ಪ್ರವಾಹ ಬಂತು. ನಾವು ಕೇಂದ್ರಕ್ಕಾಗಿ ಕಾಯುತ್ತ ಕೂರಲಿಲ್ಲ. ಸರ್ಕಾರ ಜೀವಂತ ಇದೆಯೋ ಇಲ್ಲವೋ ಎಂಬುದು ಸಂಕಷ್ಟದಲ್ಲೇ ಗೊತ್ತಾಗುವುದು ಎಂದರು. ಇತ್ತ ಬರಕ್ಕೂ ಹಣ ಬಿಡುಗಡೆಯಾಗುತ್ತಿಲ್ಲ. ಅತ್ತ ಅಭಿವೃದ್ಧಿಗೂ ಹಣ ಬಿಡುಗಡೆಯಾಗಿಲ್ಲ. ಆಸ್ಪತ್ರೆ, ಶಾಲೆ, ರಸ್ತೆ ನಿರ್ವಹಣೆಗೂ ಹಣ ಬಿಡುಗಡೆ ಮಾಡಿಲ್ಲ. ಇಂತಹ ದರಿದ್ರ ಸ್ಥಿತಿ ಸರ್ಕಾರಕ್ಕೆ ಬಂದಿದೆ ಎಂದು ವಾಗ್ದಾಳಿ ನಡೆಸಿದರು.

ತುಷ್ಠೀಕರಣ ರಾಜಕೀಯ: ಹುಬ್ಬಳ್ಳಿಯಲ್ಲಿ ನಡೆದ ಗಲಭೆ ಅಪರಾಧಿಗಳನ್ನು ಬಿಡುಗಡೆ ಮಾಡಿ ಅಂತ ಹೇಳುತ್ತಿದ್ದಾರೆ. ಈ ಮೂಲಕ ಮತ್ತೆ ತುಷ್ಠೀಕರಣ ರಾಜಕಾರಣ ಮಾಡುತ್ತಿದ್ದಾರೆ ಎಂದರು.

ಶಾಮನೂರು ಸತ್ಯವನ್ನೇ ಹೇಳಿದ್ದಾರೆ, ರಾಜ್ಯ ಸರ್ಕಾರ ಚಿಂತಿಸಲಿ: ಜೋಶಿ

ಮದ್ಯದಂಗಡಿ ಗೊಂದಲ: ಪಂಚಾಯಿತಿಗೊಂದು ಮದ್ಯದ ಅಂಗಡಿ ತೆರೆಯುವುದನ್ನು ನಾವು ಮೊದಲೇ ವಿರೋಧ ಮಾಡಿದ್ದೇವೆ. ಜನ ಕೂಡ ವಿರೋಧ ಮಾಡಿದ್ದಾರೆ. ಗೃಹಲಕ್ಷ್ಮೀ ಅಂತ ದುಡ್ಡು ಕೊಟ್ಟು, ಅದರ ಎರಡು ಪಟ್ಟು ಆ ಸಂಸಾರದಿಂದ ಕಿತ್ತುಕೊಳ್ಳುವಂಥ ಕೆಲಸ ಸರ್ಕಾರ ಮಾಡುತ್ತಿದೆ. ಸರ್ಕಾರ ಅಬಕಾರಿ ನೀತಿಗಳನ್ನು ಮುಚ್ಚಿ ಹಾಕುವಂತಹ ಕೆಲಸ ಮಾಡುತ್ತಿದೆ ಎಂದರು,. ಮುಖ್ಯಮಂತ್ರಿಗಳು ಹೊಸ ಬಾರ್ ಲೈಸೆನ್ಸ್ ಕೊಡುವುದಿಲ್ಲ ಅಂತ ಹೇಳುತ್ತಾರೆ. ಉಪಮುಖ್ಯಮಂತ್ರಿಗಳು ಆಯಕಟ್ಟು ಜಾಗದಲ್ಲಿ ಬಾರ್ ಮಾಡಬೇಕಾಗುತ್ತದೆ ಅಂತ ಹೇಳುತ್ತಾರೆ. ಇವರ ನಿರ್ಣಯ ಗೊಂದಲದ ಗೂಡಾಗಿದೆ. ಸಿಎಂ ಮಾಡುವ ನಿರ್ಣಯಗಳಿಗೆ ಡಿಸಿಎಂ ವಿರೋಧ ಮಾಡುತ್ತಿದ್ದಾರೆ. ಈ ಸರ್ಕಾರ ಜನರಿಗಂತೂ ಒಳ್ಳೆಯದನ್ನು ಮಾಡುವುದಿಲ್ಲ ಎಂದರು.

click me!