ನಾಯ​ಕ​ತ್ವ ಬದ​ಲು, ಹೊಸ ಮುಖ​ಕ್ಕೆ ಮಣೆ: ಸಂತೋಷ್‌ ಹೇಳಿಕೆ ಸಂಚಲನ

By Kannadaprabha News  |  First Published May 2, 2022, 5:01 AM IST

* ಗುಜರಾತ್‌ ಸಿಎಂನೇ ಬದಲಿಸಿದ್ದೇವೆ

* ಪಾಲಿಕೆಗಳಲ್ಲಿ ಹೊಸಬರನ್ನು ಗೆಲ್ಲಿಸಿದ್ದೇವೆ: ಬಿಜೆಪಿಗ

* ಇದು ರಾಜ್ಯದಲ್ಲಿ ಸಿಎಂ ಬದಲಾವಣೆ ಸಂದೇಶ: ಸಿದ್ದು

* ಅಪಾರ್ಥ ಕಲ್ಪಿಸಬೇಡಿ: ಸಿ.ಟಿ.ರವಿ

* ಬೊಮ್ಮಾಯಿ ಬದಲಿಸಲು ಆರೆಸ್ಸೆಸ್‌ನಿಂದ ಯತ್ನ


ಮೈಸೂರು(ಮೇ.02): ‘ಗುಜರಾತ್‌ನಲ್ಲಿ ಮುಖ್ಯಮಂತ್ರಿ ಸೇರಿ ಇಡೀ ಸಂಪುಟವನ್ನೇ ಪುನಾರಚನೆ ಮಾಡಿದ್ದೇವೆ. ಗುಜರಾತ್‌, ದೆಹಲಿ ಪಾಲಿಕೆ ಚುನಾವಣೆಯಲ್ಲಿ ಹೊಸ ಮುಖಕ್ಕೆ ಮಣೆ ಹಾಕಿದ್ದರಿಂದ ಗೆದ್ದಿದ್ದೇವೆ. ಬಿಜೆಪಿಯಲ್ಲಿ ಇಂತಹ ಪ್ರಯೋಗಗಳು ಯಶಸ್ವಿಯಾಗಿವೆ’ ಎಂದು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಬಿ.ಎಲ್‌. ಸಂತೋಷ್‌ ನೀಡಿದ ಹೇಳಿ​ಕೆ ರಾಜ್ಯ​ದ​ಲ್ಲಿ ತೀವ್ರ ಸಂಚ​ಲನ ಮೂಡಿ​ಸಿದೆ. ರಾಜ್ಯ ವಿಧಾ​ನ​ಸಭೆ ಚುನಾ​ವಣೆಗೆ ಒಂದು ವರ್ಷ​ವಷ್ಟೇ ಇದೆ ಎನ್ನು​ವಾಗ ಪಕ್ಷದ ರಾಷ್ಟ್ರೀಯ ಮುಖಂಡ​ರೊಬ್ಬರು ನೀಡಿದ ಈ ಹೇಳಿಕೆ​ಯನ್ನು ರಾಜ್ಯ ಬಿಜೆ​ಪಿ​ಯಲ್ಲಿ ಬದ​ಲಾ​ವ​ಣೆಯ ಸಂದೇಶ ಎಂದು ಪ್ರತಿ​ಪಕ್ಷ ಕಾಂಗ್ರೆಸ್‌ ವಿಶ್ಲೇ​ಷಿ​ಸಿ​ದರೆ, ರಾಜ್ಯ ಬಿಜೆಪಿ ಮುಖಂಡರು ಮಾತ್ರ ಆ ರೀತಿಯ ಸಾಧ್ಯತೆ ಇಲ್ಲ ಎಂದು ಸ್ಪಷ್ಟನೆ ನೀಡಿ​ದ್ದಾ​ರೆ.

ಸಂತೋ​ಷ್‌ ಹೇಳಿ​ಕೆಯನ್ನು ಸ್ವಾಗ​ತಿ​ಸಿ​ರುವ ಮುಖ್ಯ​ಮಂತ್ರಿ ಬಸ​ವ​ರಾಜ ಬೊಮ್ಮಾಯಿ, ‘ಅವರು ಹೇಳಿದ್ದು ಸರಿ​ಯಾ​ಗಿಯೇ ಇದೆ. ಪಾಲಿಕೆ ಚುನಾ​ವ​ಣೆ​ ಕೇಂದ್ರಿ​ತವಾಗಿ ಆ ಹೇಳಿಕೆ ನೀಡಿ​ದ್ದಾ​ರೆ’ ಎಂದು ಸ್ಪಷ್ಟನೆ ನೀಡಿದರೆ, ಇದು ಸಾರ್ವ​ತ್ರಿಕ ಹೇಳಿಕೆ, ಯಾರೂ ಅಪಾರ್ಥ ಕಲ್ಪಿ​ಸೋದು ಬೇಡ ಎಂದು ಬಿಜೆಪಿ ಪ್ರಧಾನ ಕಾರ್ಯ​ದರ್ಶಿ ಸಿ.ಟಿ.​ರವಿ ಅಭಿ​ಪ್ರಾ​ಯ​ಪ​ಟ್ಟಿ​ದ್ದಾ​ರೆ. ಆದರೆ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಆರೆಸ್ಸೆ​ಸ್‌​ನ​ವರು ಬದ​ಲಾ​ಯಿ​ಸ​ಲು ಹೊರಟಿದ್ದಾರೆ ಎಂದು ಸಂತೋಷ್‌ ಅವ​ರ ಹೇಳಿ​ಕೆ​ಯನ್ನು ಮುಂದಿ​ಟ್ಟು​ಕೊಂಡು ಪ್ರತಿ​ಪಕ್ಷ ನಾಯಕ ಸಿದ್ದರಾಮಯ್ಯ ವಿಶ್ಲೇ​ಷ​ಣೆ ಮಾಡಿ​ದ್ದಾ​ರೆ.

Tap to resize

Latest Videos

ಸಂತೋಷ್‌ ಹೇಳಿ​ದ್ದೇ​ನು?:

ಮೈಸೂ​ರಿನ ರಿಯೋ ಮೆರೀಡಿಯನ್‌ ಹೋಟೆಲ್‌ ಸಭಾಂಗಣದಲ್ಲಿ ಶನಿ​ವಾರ ದಕ್ಷಿಣ ಪದವೀಧರರ ಕ್ಷೇತ್ರ ಚುನಾವಣೆ ಸಂಬಂಧ ಮುಖಂಡರ ಸಭೆಯಲ್ಲಿ ಮಾತನಾಡಿದ ಬಿ.ಎಲ್‌. ಸಂತೋಷ್‌ ಅವರು, ದೆಹಲಿ, ಗುಜರಾತ್‌ ನಗರಪಾಲಿಕೆ ಚುನಾ​ವ​ಣೆ​ಯಲ್ಲಿ ಬಿಜೆಪಿ ನಡೆಸಿದ ಪ್ರಯೋಗ ಯಶಸ್ವಿಯಾಗಿದೆ. ಹಾಲಿ ಶಾಸಕರು, ಕುಟುಂಬಸ್ಥರನ್ನು ಹೊರಗಿಟ್ಟು ಚುನಾವಣೆ ಎದುರಿಸಿದ್ದೇ​ವೆ. ಹೊಸ ಮುಖಗಳಿಗೆ ಮಣೆ ಹಾಕಿದ್ದೇ ಬಿಜೆಪಿ ಅಧಿಕಾರಕ್ಕೇರಲು ಕಾರಣವಾಗಿ​ದೆ. ದೆಹಲಿ ಪಾಲಿಕೆ ಚುನಾವಣೆಯಲ್ಲಿ ಹಾಲಿ ಸದಸ್ಯರಿಗೇ ಟಿಕೆಟ್‌ ನೀಡಲಿಲ್ಲ. ಗುಜರಾತ್‌ ಪಾಲಿಕೆ ಚುನಾವಣೆಗಳಲ್ಲಿ ಎರಡು ಬಾರಿ ಗೆದ್ದಿರುವವರನ್ನೂ ನಿವೃತ್ತಿ ಮಾಡಿದ್ದೇವೆ. ಹೊಸ ಕಾರ್ಯಕರ್ತರಿಗೆ ಟಿಕೆಟ್‌ ಕೊಟ್ಟು ಅಧಿಕಾರಕ್ಕೇರಿದ್ದೇವೆ. ಬಿಜೆಪಿಯಲ್ಲಿ ಮಾತ್ರ ಇಂಥ ಪ್ರಯೋಗಗಳು ನಡೆಯುತ್ತವೆ ಎಂದು ಹೇಳಿದ್ದರು. ಅಲ್ಲದೆ, ಗುಜ​ರಾ​ತ್‌​ನಲ್ಲಿ ಮುಖ್ಯ​ಮಂತ್ರಿ ಸೇರಿ ಇಡೀ ಕ್ಯಾಬಿ​ನೆಟ್‌ ಅನ್ನೇ ಪುನರ್‌ ರಚಿ​ಸಿ​ದ್ದೆವು ಎಂದು ತಿಳಿ​ಸಿ​ದ್ದ​ರು.

ಸಾರ್ವ​ತ್ರಿ​ಕ​ವಾಗಿ ಹೇಳಿ​ದ್ದಾ​ರೆ​-ಸಿ.ಟಿ.​ರ​ವಿ:

ಬಿ.ಎಲ್‌. ಸಂತೋಷ್‌ ಅವರ ಹೇಳಿಕೆ ಬಗ್ಗೆ ಯಾವುದೇ ಅಪಾರ್ಥ ಕಲ್ಪಿಸುವುದು ಬೇಡ. ಅವರು ನಿರ್ದಿ​ಷ್ಟ​ವಾದ ಕ್ಷೇತ್ರ​ವನ್ನು ಉದ್ದೇ​ಶಿಸಿ ಹೇಳಿಲ್ಲ, ಸಾರ್ವ​ತ್ರಿ​ಕ​ವಾಗಿ ಹೇಳಿ​ದ್ದಾರೆ ಎಂದಿ​ರುವ ಬಿಜೆಪಿ ಪ್ರಧಾನ ಕಾರ್ಯ​ದರ್ಶಿ ಸಿ.ಟಿ.​ರವಿ ಅವ​ರು, ನಮ್ಮ ಪಕ್ಷ ನಿಂತ ನೀರಲ್ಲ, ಹೊಸ ಪ್ರಯೋಗಗಳಿಗೆ ಒಡ್ಡಿ​ಕೊ​ಳ್ಳು​ತ್ತಲೇ ಇರು​ತ್ತೇವೆ ಎಂದೂ ತಿಳಿ​ಸಿ​ದ್ದಾ​ರೆ.

ನಾವು ಪ್ರಯೋಗಶೀಲ​ತೆಗೆ ಹೆಚ್ಚಿನ ಒತ್ತು ನೀಡು​ತ್ತೇವೆ, ಯಾವ ಕ್ಷೇತ್ರ​ದಲ್ಲಿ ಹಳ​ಬರು ಗೆಲ್ಲುವ ಸಾಧ್ಯತೆ ಕಡಿಮೆ ಇರು​ತ್ತ​ದೆಯೋ ಅಲ್ಲಿ ಬದ​ಲಾ​ವ​ಣೆ ಆಗ​ಲಿದೆ. ಹಾಗಂತ ಎಲ್ಲ​ರನ್ನು ಬದ​ಲಾ​ಯಿಸಿ ಬಿಡು​ತ್ತೇವೆ ಎಂದಲ್ಲ ಎಂದು ಸ್ಪಷ್ಟ​ಪ​ಡಿ​ಸಿ​ದ್ದಾರೆ.

ಸಂತೋಷ್‌ ಅವರ ಹೇಳಿ​ಕೆ​ಯಿಂದ ಪಕ್ಷ​ದಲ್ಲಿ ಲಾಬಿ ಮಾಡು​ವ ಅನೇ​ಕ​ರಿಗೆ ಆತಂಕ ಶುರು​ವಾ​ಗಿದೆ ಎಂದು ಶಾಸಕ ಬಸ​ವ​ನ​ಗೌಡ ಪಾಟೀಲ ಯತ್ನಾಳ್‌ ಹೇಳಿ​ದರೆ, ಕುಟುಂಬ ರಾಜ​ಕಾ​ರಣ ಇಲ್ಲ. ಸಂತೋಷ್‌ ಅವರು ಹೇಳಿ​ದಂತೆ ರಾಜ್ಯ​ದಲ್ಲಿ ಈಗಾ​ಗಲೇ ನಾಯ​ಕತ್ವ ಬದ​ಲಾ​ವಣೆ ಮಾಡಲಾ​ಗಿದೆ ಎಂದು ಸಂಸದ ಸಿದ್ದೇ​ಶ್ವರ್‌ ತಿಳಿ​ಸಿ​ದ್ದಾ​ರೆ.

ಸಿಎಂ ಬದ​ಲಾ​ವ​ಣೆ-ಸಿದ್ದು:

ಸಂತೋಷ್‌ ಅವರ ಹೇಳಿ​ಕೆ​ ರಾಜ್ಯ​ದಲ್ಲಿ ಮುಖ್ಯ​ಮಂತ್ರಿ ಬದ​ಲಾ​ವಣೆ ಆಗ​ಲಿ​ರುವ ಸಂದೇಶ ಎಂದು ಪ್ರತಿ​ಪಕ್ಷ ನಾಯಕ ಸಿದ್ದ​ರಾ​ಮಯ್ಯ ವಿಶ್ಲೇ​ಷಿ​ಸಿ​ದ್ದಾ​ರೆ. ಮುಖ್ಯಮಂತ್ರಿ ಬೊಮ್ಮಾಯಿ ಆರ್‌ಎಸ್‌ಎಸ್‌ನವರÜಲ್ಲ, ಜನತಾ ಪರಿ​ವಾ​ರ​ದಿಂದ ಬಂದ​ವರು. ಹೀಗಾಗಿ, ಆರೆ​ಸ್ಸೆ​ಸ್‌​ನ​ವ​ರು ಅವ​ರನ್ನು ಬದಲಾಯಿಸಲು ಹೊರಟಿದ್ದಾರೆ ಎಂದು ಅಭಿ​ಪ್ರಾ​ಯ​ಪ​ಟ್ಟಿ​ದ್ದಾ​ರೆ. ನಮ್ಮ ಜತೆ​ಗಿ​ದ್ದರೂ ಬೊಮ್ಮಾಯಿ ನಮ್ಮ ಪಟ್ಟುಗಳನ್ನು ಕಲಿಯಲಿಲ್ಲ ಎಂದು ತಿಳಿ​ಸಿ​ದ್ದಾ​ರೆ.

click me!