• ಬೆಳಗಾವಿ ನಗರದ ಮತಗಟ್ಟೆಗಳಿಗೆ ಬಿಜೆಪಿ ಶಾಸಕ ಅನಿಲ್ ಬೆನಕೆ ಭೇಟಿ
• ಮತಗಟ್ಟೆಯೊಳಗೆ ತೆರಳಿ ಮೊಬೈಲ್‌ನಲ್ಲಿ ಮಾತನಾಡಿದ ಶಾಸಕ
• ಮತದಾರರಿಗೆ ಇರುವ ನಿಯಮ ಶಾಸಕರಿಗೆ ಅನ್ವಯಿಸಲ್ವಾ?
ಮಹಾಂತೇಶ ಕುರಬೇಟ್, ಏಷ್ಯಾನೆಟ್ ಸುವರ್ಣನ್ಯೂಸ್, ಬೆಳಗಾವಿ
ಬೆಳಗಾವಿ(ಜೂ.13): ವಾಯುವ್ಯ ಪದವೀಧರ, ಶಿಕ್ಷಕರ ಕ್ಷೇತ್ರಕ್ಕೆ ಇಂದು ಬಿರುಸಿನ ಮತದಾನ ನಡೆಯುತ್ತಿದ್ದು ಬಿಜೆಪಿ ಶಾಸಕ ಅನಿಲ್ ಬೆನಕೆ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ. ಬೆಳಗಾವಿ ನಗರದ ಮತಗಟ್ಟೆಗಳಿಗೆ ಭೇಟಿ ನೀಡಿ ಪರಿಶೀಲಿಸುತ್ತಿದ್ದ ಬೆಳಗಾವಿ ಉತ್ತರ ಬಿಜೆಪಿ ಶಾಸಕ ಅನಿಲ್ ಬೆನಕೆ ವಿಶ್ವೇಶ್ವರಯ್ಯ ನಗರದ ಸರ್ಕಾರಿ ಶಾಲೆಯ ಮತಗಟ್ಟೆಗೆ ಭೇಟಿ ನೀಡಿ ಮತಕೇಂದ್ರದೊಳಗೆ ತೆರಳಿದರು.
ಮತ ಕೇಂದ್ರದ ಒಳಗೆ ತೆರಳುವ ವೇಳೆ ಮತದಾರರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಹಾಗೂ ಮೊಬೈಲ್ ತಗೆದುಕೊಂಡು ಹೋಗಬಾರದೆಂಬ ನಿಯಮ ಇದೆ. ಆದ್ರೆ ಶಾಸಕ ಅನಿಲ್ ಬೆನಕೆ ಮಾಸ್ಕ್ ಧರಿಸದೇ ಮೊಬೈಲ್‌ನೊಂದಿಗೆ ಮತಗಟ್ಟೆಗೆ ತೆರಳಿ ಮಾತುಕತೆ ನಡೆಸಿದ್ದು ಸಹ ಕಂಡ ಬಂತು. ಮತದಾರರಿಗೆ ಇರುವ ನಿಯಮ ಜನಪ್ರತಿನಿಧಿಗಳಿಗೆ ಅನ್ವಯಿಸಲ್ವಾ ಅಂತಾ ಸಾರ್ವಜನಿಕ ವಲಯದಲ್ಲಿ ಚರ್ಚೆ ನಡೆದಿದೆ.
ಕಾಂಗ್ರೆಸ್‌ನವರು ಒಂದು ಮತಕ್ಕೆ 10 ಸಾವಿರ ಕೊಡ್ತಿದ್ದಾರಂತೆ
ಇದಕ್ಕೂ ಮುನ್ನ ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕ ಅನಿಲ್ ಬೆನಕೆ, 'ವಾಯುವ್ಯ ಪದವೀಧರ, ಶಿಕ್ಷಕರ ಕ್ಷೇತ್ರಕ್ಕೆ ಮತದಾನ ನಡೆಯುತ್ತಿದೆ. ವಿಶ್ವೇಶ್ವರಯ್ಯ ನಗರದಲ್ಲಿ ಬಹಳಷ್ಟು ಮತದಾರ ಇರೋದ್ರಿಂದ ಮೊದಲು ಇಲ್ಲಿಗೆ ಭೇಟಿ ನೀಡಿರುವೆ. ಬಹಳಷ್ಟು ಜನರು ಮತದಾನ ಮಾಡಲು ಮುಂದೆ ಬಂದಿದ್ದಾರೆ. ನಿನ್ನೆ ಕಾಂಗ್ರೆಸ್ ಅಭ್ಯರ್ಥಿ ಹಣ ಹಂಚಿಕೆ ಬಗ್ಗೆ ಮಾಧ್ಯಮಗಳಲ್ಲಿ ಬಂದಿದೆ. ವಾಮಮಾರ್ಗದಿಂದ ಮತಗಳನ್ನು ಗಳಿಸುವುದು ತಪ್ಪು. ಶಿಕ್ಷಕರ ಕ್ಷೇತ್ರದಲ್ಲಿ ಈ ತರಹ ಆಗೋತ್ತಿರೋದು ನೋವಿನ ಸಂಗತಿ. ನಿನ್ನೆ ಚುನಾವಣಾ ಆಯೋಗಕ್ಕೆ ನಾವು ದೂರು ನೀಡಿದ್ದೇವೆ.ಈ ಬಗ್ಗೆ ವಿಜಯಪುರದಲ್ಲಿ ಕೇಸ್ ಸಹ ದಾಖಲಾಗಿದೆ.
ಇನ್ನು ಬಿಜೆಪಿಯವರು ಮತದಾರರಿಗೆ ಬೆಳ್ಳಿ ತಟ್ಟೆ, ಸ್ಮಾರ್ಟ್ ವಾಚ್ ನೀಡುತ್ತಿದ್ದಾರೆ ಎಂಬುದಕ್ಕೆ ಪ್ರತಿಕ್ರಿಯಿಸಿದ ಅನಿಲ್ ಬೆನಕೆ, 'ಮತದಾರರಿಗೆ ನಾವೇನೂ ಕೊಡುವುದಿಲ್ಲ. ಕಾಂಗ್ರೆಸ್‌ನವರು ಒಂದು ವೋಟ್‌ಗೆ ಹತ್ತು ಸಾವಿರ ರೂ. ನೀಡ್ತಿದ್ದಾರೆ ಎಂಬ ಚರ್ಚೆ ನಡೀತಿದೆ. ಶಿಕ್ಷಕರಿಗೆ ದುಡ್ಡು ನೀಡಿ ಮತ ಪಡೆಯುವಂತಹ ಬೆಳವಣಿಗೆ ಆಗಬಾರದು. ನಗರದ ಎಲ್ಲಾ ಮತಗಟ್ಟೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುವೆ' ಎಂದರು.