ಬೆಳಗಾವಿ ಗ್ರಾಮೀಣ: ಮರಾಠ ಅಸ್ತ್ರಕ್ಕೆ ಪಂಚಮಸಾಲಿ ಪ್ರತ್ಯಾಸ್ತ್ರ..!

By Kannadaprabha News  |  First Published Apr 11, 2023, 1:09 PM IST

ತಮ್ಮ ವಿರುದ್ಧ ಮಾಜಿ ಸಚಿವ ರಮೇಶ ಜಾರಕಿಹೊಳಿ ಮರಾಠ ಅಸ್ತ್ರ ಬಳಸಿದ್ದರೆ, ಅದಕ್ಕೆ ಪ್ರತಿಯಾಗಿ ತಮ್ಮದೇ ಸಮಾಜದ ಟ್ರಂಪ್‌ ಕಾರ್ಡ ಬಳಸುವ ಮೂಲಕ ತಿರುಗೇಟು ನೀಡಿದ ಹೆಬ್ಬಾಳಕರ. 


ಶ್ರೀಶೈಲ ಮಠದ

ಬೆಳಗಾವಿ(ಏ.11):  ಕರ್ನಾಟಕ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್‌ ಪಕ್ಷ ಅಣಿಯಾಗಿದ್ದು, ಜಿಲ್ಲೆಯ 18 ವಿಧಾನಸಭೆ ಕ್ಷೇತ್ರಗಳ ಪೈಕಿ 13 ಕ್ಷೇತ್ರಗಳಿಗೆ ಈಗಾಗಲೇ ಟಿಕೆಟ್‌ ಘೋಷಣೆ ಮಾಡಿದೆ. ಇನ್ನು ಐದು ಕ್ಷೇತ್ರಗಳು ಕಾಂಗ್ರೆಸ್‌ ಪಾಲಿಗೆ ಕಂಗಟ್ಟಾಗಿವೆ. ಗೋಕಾಕ ವಿಧಾನಸಭೆ ಕ್ಷೇತ್ರದಿಂದ ಅಚ್ಚರಿ ಅಭ್ಯರ್ಥಿ ಡಾ.ಮಹಾಂತೇಶ ಕಡಾಡಿ ಅವರಿಗೆ ಟಿಕೆಟ್‌ ಘೋಷಣೆ ಮಾಡಲಾಗಿದೆ. ಗೋಕಾಕ ಅಭ್ಯರ್ಥಿ ಘೋಷಣೆ ವಿಚಾರದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರಿಗೆ ಹಿನ್ನೆಡೆಯಾಗಿದೆ. ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಅವರ ಕೈ ಮೇಲಾಗಿದೆ. ಇಲ್ಲಿ ಲಿಂಗಾಯತ ಪಂಚಮಸಾಲಿ ಸಮುದಾಯದ ಕಡಾಡಿ ಅವರನ್ನು ಕಣಕ್ಕಿಳಿಸುವಲ್ಲಿ ಹೆಬ್ಬಾಳಕರ ನಡೆಸಿರುವ ತಂತ್ರ ಫಲಿಸಿದೆ. ಅಲ್ಲದೇ, ತಮ್ಮ ವಿರುದ್ಧ ಮಾಜಿ ಸಚಿವ ರಮೇಶ ಜಾರಕಿಹೊಳಿ ಮರಾಠ ಅಸ್ತ್ರ ಬಳಸಿದ್ದರೆ, ಅದಕ್ಕೆ ಪ್ರತಿಯಾಗಿ ಹೆಬ್ಬಾಳಕರ ತಮ್ಮದೇ ಸಮಾಜದ ಟ್ರಂಪ್‌ ಕಾರ್ಡ ಬಳಸುವ ಮೂಲಕ ತಿರುಗೇಟು ನೀಡಿದ್ದಾರೆ.

Tap to resize

Latest Videos

ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರು ಯಾವ ಆಧಾರದ ಮೇಲೆ ಗೋಕಾಕದಿಂದ ಕಡಾಡಿ ಅವರಿಗೆ ಟಿಕೆಟ್‌ ಸಿಕ್ಕಿದೆ ಎಂಬುದು ತಮಗೆ ಗೊತ್ತಿಲ್ಲ. ಆದಾಗ್ಯೂ ನಾವು ಪಕ್ಷದ ಹೈಕಮಾಂಡ್‌ ತೆಗೆದುಕೊಳ್ಳುವ ತೀರ್ಮಾನಕ್ಕೆ ಬದ್ಧರಾಗಬೇಕಾಗುತ್ತದೆ ಎಂದು ಪ್ರತಿಕ್ರಿಯೆಯನ್ನು ನೀಡಿದ್ದಾರೆ. ಗೋಕಾಕದಿಂದ ಅಶೋಕ ಪೂಜಾರಿ ಅವರಿಗೆ ಟಿಕೆಟ್‌ ಕೊಡಿಸುವುದಾಗಿ ಭರವಸೆ ನೀಡಿದ್ದರು. ಆದರೆ, ಅವರಿಗೆ ಕಾಂಗ್ರೆಸ್‌ ಕೊನೆ ಗಳಿಗೆಯಲ್ಲಿ ಟಿಕೆಟ್‌ ಘೋಷಣೆ ಮಾಡದೇ ಕೈಕೊಟ್ಟಿದೆ. ಕಾಂಗ್ರೆಸ್‌ ತೆಗೆದುಕೊಂಡಿರುವ ತೀರ್ಮಾನದಿಂದ ಅಶೋಕ ಪೂಜಾರಿ ರಾಜಕೀಯ ಭವಿಷ್ಯವೇ ಡೋಲಾಯಮಾನವಾಗಿದೆ. ತಮ್ಮ ಭವಿಷ್ಯದ ರಾಜಕೀಯದ ಕುರಿತು ಬೆಂಬಲಿಗರೊಂದಿಗೆ ಸಭೆ ನಡೆಸಿ, ತೀರ್ಮಾನ ಕೈಗೊಳ್ಳಲು ಪೂಜಾರಿ ತೀರ್ಮಾನಿಸಿದ್ದಾರೆ.

ಏಕೆ ಚಡಪಡಿಸ್ತೀಯ ಅಣ್ಣಾ?: ಸವದಿಗೆ ರಮೇಶ್‌ ಜಾರಕಿಹೊಳಿ ಟಾಂಗ್‌

ಮಾಜಿ ಸಚಿವ ರಮೇಶ ಜಾರಕಿಹೊಳಿ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಹಾಲಿ ಶಾಸಕಿ ಲಕ್ಷ್ಮೇ ಹೆಬ್ಬಾಳಕರ ವಿರುದ್ಧ ಬಹಿರಂಗವಾಗಿಯೇ ಪ್ರಚಾರಕ್ಕಿಳಿದಿದ್ದಾರೆ. ಹೆಬ್ಬಾಳಕರ ಅವರನ್ನು ಸೋಲಿಸುವುದಿಯೂ ಪಣತೊಟ್ಟಿದ್ದಾರೆ. ಒಂದು ಕಾಲದಲ್ಲಿ ರಮೇಶ ಮತ್ತು ಲಕ್ಷ್ಮೇ ಆಪ್ತರಾಗಿದ್ದರೂ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಇಬ್ಬರೂ ಈಗ ಬದ್ಧ ರಾಜಕೀಯ ವೈರಿಗಳು. ಬೆಳಗಾವಿ ಗ್ರಾಮೀಣದಲ್ಲಿ ಮರಾಠ ಮತಗಳೇ ನಿರ್ಣಾಯಕ. ಹಾಗಾಗಿ, ತಮ್ಮ ಆಪ್ತ ನಾಗೇಶ ಮನ್ನೋಳಕರ ಅವರಿಗೆ ಟಿಕೆಟ್‌ ನೀಡುವಂತೆ ರಮೇಶ ಜಾರಕಿಹೊಳಿ ಬಿಜೆಪಿ ಹೈಕಮಾಂಡ್‌ ಮೇಲೆ ಒತ್ತಡ ಹೇರುತ್ತಿದ್ದಾರೆ. ರಮೇಶ ವೈಯಕ್ತಿಕವಾಗಿ ಎಷ್ಟೇ ವಾಗ್ದಾಳಿ ನಡೆಸಿದರೂ ಮೌನವೇ ಅದಕ್ಕೆ ಉತ್ತರ ಎನ್ನುವಂತೆ ಹೆಬ್ಬಾಳಕರ ತಮ್ಮ ಪಾಡಿಗೆ ತಾವು ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. ಪಕ್ಷ ಬಯಸಿದರೆ ಗೋಕಾಕ ಕ್ಷೇತ್ರದಿಂದ ಸ್ಪರ್ಧಿಸುವುದಾಗಿಯೂ ಹೆಬ್ಬಾಳಕರ ಎಚ್ಚರಿಕೆ ಸಂದೇಶವನ್ನು ನೀಡಿದ್ದರು. ಗೋಕಾಕ ಕ್ಷೇತ್ರದಿಂದ ರಮೇಶ ಜಾರಕಿಹೊಳಿ ವಿರುದ್ಧ ಪ್ರಬಲ ಸಮುದಾಯವಾದ ಲಿಂಗಾಯತ ಸಮುದಾಯಕ್ಕೆ ಸೇರಿದ ಡಾ.ಮಹಾಂತೇಶ ಕಡಾಡಿ ಅವರನ್ನು ಕಣಕ್ಕಿಳಿಸುವ ಮೂಲಕ ಹೆಬ್ಬಾÙಕರ ಅವರನ್ನು ರಮೇಶ ಜಾರಕಿಹೊಳಿ ಅವರಿಗೆ ಶಾಕ್‌ ನೀಡಿದ್ದಾರೆ.

ಬೆಳಗಾವಿ ಗ್ರಾಮೀಣದಲ್ಲಿ 95 ಸಾವಿರ ಮರಾಠ ಸಮುದಾಯದ ಮತಗಳಿದ್ದರೆ, ಗೋಕಾಕದಲ್ಲಿ 90 ಸಾವಿರ ಲಿಂಗಾಯತ ಮತಗಳಿವೆ. ಎರಡೂ ಕ್ಷೇತ್ರಗಳಲ್ಲಿ ಮರಾಠ ಮತ್ತು ಲಿಂಗಾಯತ ಮತಗಳೇ ನಿರ್ಣಾಯಕ. ಹಾಗಾಗಿ ಗೋಕಾಕ ಕ್ಷೇತ್ರದಿಂದ ಡಾ.ಮಹಾಂತೇಶ ಕಡಾಡಿ ಅವರಿಗೆ ಟಿಕೆಟ್‌ ಕೊಡಿಸುವಲ್ಲಿ ಲಕ್ಷ್ಮೇ ಹೆಬ್ಬಾಳಕರ ಕೊನೆಗೂ ಯಶಸ್ವಿಯಾಗಿದ್ದಾರೆ. ಈ ಬೆಳವಣಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರಿಗೂ ಶಾಕ್‌ ಕೊಟ್ಟಿದೆ.

ಲಿಂಗಾಯತರಿಗೆ ಮಣೆ

ವಿಧಾನಸಭೆಯಲ್ಲಿ ಗೆದ್ದು ಅಧಿಕಾರದ ಚುಕ್ಕಾಣಿ ಹಿಡಿಯಲು ರಣತಂತ್ರ ರೂಪಿಸಿರುವ ಕಾಂಗ್ರೆಸ್‌ ಬೆಳಗಾವಿ ಜಿಲ್ಲೆಯಲ್ಲಿ ಲಿಂಗಾಯತ ಸಮುದಾಯಕ್ಕೆ ಹೆಚ್ಚಿನ ಮಣೆಹಾಕಿದೆ. ಈಗ ಟಿಕೆಟ್‌ ಘೋಷಣೆ ಮಾಡಿರುವ 13 ಕ್ಷೇತ್ರಗಳ ಪೈಕಿ 8 ಕ್ಷೇತ್ರದಲ್ಲಿ ಲಿಂಗಾಯತರಿಗೆ ಟಿಕೆಟ್‌ ಘೋಷಿಸಲಾಗಿದೆ. ಬೆಳಗಾವಿ ಗ್ರಾಮೀಣ, ಗೋಕಾಕ, ಕಾಗವಾಡ, ಚಿಕ್ಕೋಡಿ- ಸದಲಗಾ, ಹುಕ್ಕೇರಿ, ರಾಮದುರ್ಗ, ಕಿತ್ತೂರು, ಬೈಲಹೊಂಗಲ ಕ್ಷೇತ್ರದಲ್ಲಿ ಲಿಂಗಾಯತರಿಗೆ ಮಣೆಹಾಕಲಾಗಿದೆ. ಏಕೆಂದರೆ ಇಲ್ಲಿ ಲಿಂಗಾಯತ ಮತಗಳೇ ನಿರ್ಣಾಯಕ. ನಿಪ್ಪಾಣಿ, ಖಾನಾಪುರ -ಮರಾಠ, ಯಮಕನಮರಡಿ- ಪರಿಶಿಷ್ಟಪಂಗಡ, ಕುಡಚಿ- ಪರಿಶಿಷ್ಟಜಾತಿ, ಸವದತ್ತಿ- ಬ್ರಾಹ್ಮಣ ಸಮುದಾಯಕ್ಕೆ ಆದ್ಯತೆ ನೀಡಲಾಗಿದೆ.

ಅಥಣಿ ಟಿಕೆಟ್‌ ಬಿಕ್ಕಟ್ಟು: ಬಿಜೆಪಿಗೆ ಇಕ್ಕಟ್ಟು..!

ಇನ್ನು ಐದು ಕ್ಷೇತ್ರಗಳ ಅಭ್ಯರ್ಥಿ ಆಯ್ಕೆ ಕಂಗ್ಗಟ್ಟಾಗಿದೆ. ಬೆಳಗಾವಿ ಉತ್ತರ, ಬೆಳಗಾವಿ ದಕ್ಷಿಣ, ಅಥಣಿ, ರಾಯಬಾಗ, ಅರಬಾವಿ ಕ್ಷೇತ್ರಗಳಿಗೆ ಅಭ್ಯರ್ಥಿ ಅಂತಿಮ ಆಯ್ಕೆ ನಡೆಯಬೇಕಿದೆ. ಇಲ್ಲಿ ಕಾಂಗ್ರೆಸ್‌ ಅಳೆದುತೂಗಿ ತನ್ನ ಅಭ್ಯರ್ಥಿಗಳನ್ನು ಘೋಷಿಸುವ ಸಾಧ್ಯತೆಗಳಿವೆ. ಈ ಕ್ಷೇತ್ರದಲ್ಲಿ ಮತ್ತೆ ಯಾವ ಸಮುದಾಯಕ್ಕೆ ಆದ್ಯತೆ ನೀಡಲಾಗುತ್ತದೆ ಎಂಬುದನ್ನು ಕಾಯ್ದುನೋಡಬೇಕು.

ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.

click me!