ಸಾಗರ ಕದನ: ಹಾಲಪ್ಪ-ಬೇಳೂರು ಮೊದಲ ಸಲ ಮುಖಾಮುಖಿಯಾಗ್ತಾರಾ?

By Kannadaprabha News  |  First Published Apr 11, 2023, 12:50 PM IST

ಪಕ್ಷದೊಳಗಿನ ವಿರೋಧದ ನಡುವೆಯೂ ಬೇಳೂರು ಗೋಪಾಲಕೃಷ್ಣಗೆ ‘ಕೈ’ ಟಿಕೆಟ್‌, ಗೆಲುವಿನ ಹಣೆಬರಹ ಬದಲಿಸಲು ಆಮ್‌ಆದ್ಮಿಯ ದಿವಾಕರ್‌ ಸಜ್ಜು. 


ಗೋಪಾಲ್‌ ಯಡಗೆರೆ

ಶಿವಮೊಗ್ಗ(ಏ.11):  ಒಂದು ಕಾಲದಲ್ಲಿ ಬಂಗಾರಪ್ಪನವರ ಶಿಷ್ಯಂದಿರಾಗಿ ರಾಜಕಾರಣ ಪ್ರವೇಶಿಸಿ, ಬಳಿಕ ಎರಡು ದಿಕ್ಕಿನಲ್ಲಿ, ಪರಸ್ಪರ ಆರೋಪ-ಪ್ರತ್ಯಾರೋಪ ಮಾಡುತ್ತಲೇ ರಾಜಕಾರಣ ಮಾಡುತ್ತಿರುವ ಹಾಲಿ ಶಾಸಕ ಹರತಾಳು ಹಾಲಪ್ಪ ಹಾಗೂ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಇದೀಗ ಮೊದಲ ಬಾರಿಗೆ ಸಾಗರ ವಿಧಾನಸಭಾ ಕ್ಷೇತ್ರದಲ್ಲಿ ಮುಖಾಮುಖಿಯಾಗುವ ಸಾಧ್ಯತೆ ದಟ್ಟವಾಗಿದೆ. ಇನ್ನು, ಆಮ್‌ಆದ್ಮಿ ಪಕ್ಷದ ದಿವಾಕರ್‌ ಅವರು ಗಳಿಸುವ ಮತ, ಇವರ ಗೆಲುವಿನ ಹಣೆಬರಹ ಬದಲಿಸಬಹುದು ಎಂಬ ಲೆಕ್ಕಾಚಾರ ಕೂಡ ಇಲ್ಲಿದೆ.

Tap to resize

Latest Videos

ಪಕ್ಷದೊಳಗಿನ ಬಂಡಾಯದ ನಡುವೆಯೂ ಕಾಂಗ್ರೆಸ್‌ ಟಿಕೆಟ್‌ ಗಿಟ್ಟಿಸುವಲ್ಲಿ ಬೇಳೂರು ಗೋಪಾಲಕೃಷ್ಣ ಯಶಸ್ಸು ಸಾಧಿಸಿದ್ದಾರೆ. ಪ್ರಭಾವಿ ನಾಯಕ ಕಾಗೋಡು ತಿಮ್ಮಪ್ಪನವರನ್ನೇ ಹಿಂದಿಕ್ಕಿ, ಸದ್ದಿಲ್ಲದೆ ಕಾಂಗ್ರೆಸ್‌ ಟಿಕೆಟ್‌ ಗಿಟ್ಟಿಸಿರುವ ಬೇಳೂರು ಗೋಪಾಲಕೃಷ್ಣಗೆ ಬೆಂಬಲಿಗರು ಸಾಕಷ್ಟಿರಬಹುದು. ಆದರೆ, ಪಕ್ಷದ ಮುಖಂಡರಲ್ಲಿ ಸಾಕಷ್ಟುಮಂದಿ ವಿರೋಧಿಗಳಿದ್ದಾರೆ. ಸ್ವತ: ಕಾಗೋಡು ತಿಮ್ಮಪ್ಪ ಅವರೇ ಬೇಳೂರು ಗೋಪಾಲಕೃಷ್ಣಗೆ ಟಿಕೆಟ್‌ ಕೊಡಬೇಡಿ ಎಂದಿದ್ದರು. ಆದರೆ, ಟಿಕೆಟ್‌ ಘೋಷಣೆಯಾದಾಗ ತಮ್ಮ ಸೋದರಳಿಯನೂ ಆಗಿರುವ ಬೇಳೂರು ಗೋಪಾಲಕೃಷ್ಣ ಅವರ ಬಾಯಲ್ಲಿ ಸಿಹಿ ಇಟ್ಟು ಹರಸಿ ಕಳುಹಿಸಿದ್ದಾರೆ. ಆ ಮೂಲಕ ಪಕ್ಷ ನಿಷ್ಟೆಮೊದಲು ಎಂಬ ಸಂದೇಶ ಸಾರಿದ್ದಾರೆ.

ಹುನಗುಂದ ಹೋರಾಟ: ಬಿಜೆಪಿ-ಕಾಂಗ್ರೆಸ್‌ ನೇರ ಹಣಾಹಣಿಗೆ ಪಕ್ಷೇತರರ ಅಡ್ಡಿ

ಇತ್ತ ಬಿಜೆಪಿಯಲ್ಲಿ ಹಾಲಿ ಶಾಸಕ ಹರತಾಳು ಹಾಲಪ್ಪನವರು ತಮಗೆ ಟಿಕೆಟ್‌ ಖಚಿತ ಎಂದುಕೊಂಡಿದ್ದಾರೆ. ಆದರೆ, ಪಕ್ಷದ ಕಾರ್ಯಕರ್ತರಿಗೆ ಮನ್ನಣೆ ನೀಡುವುದಿಲ್ಲ ಎನ್ನುವ ಆರೋಪ ಇವರ ಮೇಲಿದೆ. ಮೂಲ ಬಿಜೆಪಿಗರು ಕೆಲವರು ಹಾಲಪ್ಪಗೆ ಟಿಕೆಟ್‌ ಬೇಡ ಎನ್ನುತ್ತಿದ್ದಾರೆ. ಬ್ರಾಹ್ಮಣ-ಲಿಂಗಾಯತ ವೇದಿಕೆ ಕೂಡ ಹಾಲಪ್ಪನವರನ್ನು ವಿರೋಧಿಸುತ್ತಿದೆ. ಜೊತೆಗೆ, ಚೇತನ್‌ರಾಜ್‌ ಕಣ್ಣೂರು ಸಹ ಬಿಜೆಪಿ ಟಿಕೆಟ್‌ಗೆ ಆಕಾಂಕ್ಷಿಯಾಗಿದ್ದಾರೆ.

ಈ ಇಬ್ಬರು ಕಲಿಗಳ ನಡುವೆ ಆಮ್‌ಆದ್ಮಿ ಪಕ್ಷದ ಅಭ್ಯರ್ಥಿಯಾಗಿ ಹೈಕೋರ್ಟ್‌ ವಕೀಲರೂ, ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಮೊದಲ ಅವಧಿಯಲ್ಲಿ ಕಾನೂನು ಸಲಹೆಗಾರರೂ ಆಗಿ ಹೆಸರು ಮಾಡಿದ್ದ ಕೆ.ದಿವಾಕರ್‌ ಸ್ಪರ್ಧಿಸುತ್ತಿದ್ದಾರೆ. ಇವರು ಯಾರ ಓಟ್‌ ಬ್ಯಾಂಕ್‌ಗೆ ಕೈ ಹಾಕುತ್ತಾರೆ ಎಂಬುದು ಕುತೂಹಲ ಮಾತ್ರವಲ್ಲ, ಇದು ಫಲಿತಾಂಶದಲ್ಲಿ ನಿರ್ಣಾಯಕ ಕೂಡ ಆಗಲಿದೆ.

ಕ್ಷೇತ್ರದ ಹಿನ್ನೆಲೆ:

1972ರಲ್ಲಿ ಮೊದಲ ಬಾರಿಗೆ ಕಾಗೋಡು ತಿಮ್ಮಪ್ಪ ಅವರು ಸೋಷಿಯಲ್‌ ಪಕ್ಷದಿಂದ, ಬಳಿಕ, 83ರಲ್ಲಿ ಕಾಂಗ್ರೆಸ್‌ನಿಂದ ಗೆಲುವು ಸಾಧಿಸಿದರು. 1978ರಲ್ಲಿ ಎಲ್‌.ಟಿ.ತಿಮ್ಮಪ್ಪ ಹೆಗಡೆಯವರು ಇಂದಿರಾ ಕಾಂಗ್ರೆಸ್‌ನಿಂದ ಗೆದ್ದರೆ, 1985ರಲ್ಲಿ ಜನತಾಪಕ್ಷದಿಂದ ಧರ್ಮಪ್ಪ ವಿಜಯ ಸಾಧಿಸಿದರು. ಬಳಿಕ, ಸತತವಾಗಿ 1999ರವರೆಗೂ ಕಾಗೋಡು ತಿಮ್ಮಪ್ಪ ಇಲ್ಲಿ ಗೆಲ್ಲುತ್ತಲೇ ಬಂದರು. 2004ರಲ್ಲಿ ಮೊದಲ ಬಾರಿಗೆ ಬೇಳೂರು ಗೋಪಾಲಕೃಷ್ಣ ಅವರು ತಮ್ಮ ಮಾವ ಕಾಗೋಡು ತಿಮ್ಮಪ್ಪ ಅವರನ್ನು ಸೋಲಿಸಿ ಬಿಜೆಪಿ ಖಾತೆ ತೆರೆದರು. 2008ರಲ್ಲಿ ಪುನ: ಗೆದ್ದರು. 2013ರಲ್ಲಿ ಕಾಗೋಡು ತಿಮ್ಮಪ್ಪ ಗೆದ್ದರೆ, 2018ರಲ್ಲಿ ಹರತಾಳು ಹಾಲಪ್ಪ ಕೊನೆಗಳಿಗೆಯಲ್ಲಿ ಇಲ್ಲಿಗೆ ವಲಸೆ ಬಂದು ಬಿಜೆಪಿಯಿಂದ ಗೆದ್ದಿದ್ದು ಇತಿಹಾಸ. ಕ್ಷೇತ್ರದಲ್ಲಿ ಒಟ್ಟು ಮೂರು ಬಾರಿ ಬಿಜೆಪಿ ಗೆದ್ದಿದೆ.

ಬಿಜೆಪಿಗೆ ಸೆಡ್ಡು ಹೊಡೆಯುತ್ತಾರಾ ಕೋಳಿವಾಡ ಪುತ್ರ?: ಹಾಲಿ ಶಾಸಕ ಅರುಣಕುಮಾರ್‌ಗೆ ಟಿಕೆಟ್‌ ಬಹುತೇಕ ನಿಶ್ಚಿತ

ಜಾತಿವಾರು ಲೆಕ್ಕಾಚಾರ:

ಅಂದಾಜು 2,43,000 ಮತದಾರರ ಪೈಕಿ, ಸುಮಾರು 60 ಸಾವಿರದಷ್ಟುಮತದಾರರಿರುವ ಈಡಿಗ, 30 ಸಾವಿರದಷ್ಟಿರುವ ಬ್ರಾಹ್ಮಣ, ಸುಮಾರು 60 ಸಾವಿರದಷ್ಟಿರುವ ಹಿಂದುಳಿದ ವರ್ಗ ಇಲ್ಲಿನ ಪ್ರಬಲ ಮತಬ್ಯಾಂಕ್‌ ಆಗಿದೆ. ಒಂದು ಕಾಲದಲ್ಲಿ ಕಾಂಗ್ರೆಸ್‌ ಜೊತೆಗಿದ್ದ ಈಡಿಗ ಸಮುದಾಯ ಈಗ ಹಂಚಿ ಹೋಗಿದೆ. ಬ್ರಾಹ್ಮಣ ವರ್ಗ ಕೂಡ ನಿರ್ದಿಷ್ಟಪಕ್ಷಕ್ಕೆ ಎಂದು ನಿಲ್ಲುತ್ತಿಲ್ಲ. ಲಿಂಗಾಯತರು ಕೂಡ ಸುಮಾರು 15 ಸಾವಿರದಷ್ಟಿದ್ದಾರೆ.

ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.

click me!