MLC Election: ಕಾಂಗ್ರೆಸ್‌ ಸಭೆಯಿಂದ ಹೆಬ್ಬಾಳಕರ ದೂರವಾಗಿದ್ದಾದರೂ ಏಕೆ?

Published : May 26, 2022, 06:39 AM IST
MLC Election: ಕಾಂಗ್ರೆಸ್‌ ಸಭೆಯಿಂದ ಹೆಬ್ಬಾಳಕರ ದೂರವಾಗಿದ್ದಾದರೂ ಏಕೆ?

ಸಾರಾಂಶ

*  ಹಟ್ಟಿಹೊಳಿ ಸ್ಪರ್ಧಿಸಿದ್ದ ಎಂಎಲ್ಸಿ ಚುನಾವಣೆ ಪ್ರಚಾರಕ್ಕೆ ಗೈರಾಗಿದ್ದ ಹುಕ್ಕೇರಿ? *  ಪರೋಕ್ಷ ರವಾನಿಸಿದರೆ ಹೆಬ್ಬಾಳಕರ? *  ಚುನಾವಣೆಯ ಸಿದ್ಧತೆಯ ಭಾಗವಾಗಿ ನಡೆದ ಸಭೆ

ಜಗದೀಶ ವಿರಕ್ತಮಠ

ಬೆಳಗಾವಿ(ಮೇ.26): ವಾಯವ್ಯ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್‌ ಚುನಾವಣೆ ಕುರಿತು ಚರ್ಚಿಸಲು ಕಾಂಗ್ರೆಸ್‌ ಬೆಳಗಾವಿಯಲ್ಲಿ ಮೇ. 23ರಂದು ನಡೆಸಿದ ಸಭೆ ಕೂಡ ಭಿನ್ನಮತಕ್ಕೆ ಕಾರಣವಾಯಿತೇ ಎಂಬ ಅನುಮಾನ ಮೂಡುತ್ತಿದೆ.

ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಅವರು ಸಭೆಯಿಂದ ದೂರ ಉಳಿದಿರುವುದು ಈಗ ಬಹುಚರ್ಚಿತ ವಿಷಯವಾಗುತ್ತಿದೆ. ಸಭೆಯಿಂದ ಶಾಸಕಿ ದೂರ ಉಳಿಯಲು ಅಂತಹ ಪ್ರಬಲ ಕಾರಣಗಳೇನಾದರೂ ಇವೆಯೇ? ಅಥವಾ ಕ್ಷೇತ್ರದ ಅಭ್ಯರ್ಥಿಯ ಮೇಲಿನ ಸಿಟ್ಟು ಅವರನ್ನು ದೂರ ಉಳಿಯುವಂತೆ ಮಾಡಿತೆ? ಕ್ಷೇತ್ರದಲ್ಲಿದ್ದರೂ ಸಭೆಗೆ ಬಾರದಿರುವುದಕ್ಕೆ ಇರುವ ಕಾರಣವಾದರೂ ಏನು? ತಾವು ಸಭೆಯಲ್ಲಿ ಕಾಣಿಸಿಕೊಳ್ಳದೇ ಪುತ್ರನನ್ನು ಸಭೆಗೆ ಕಳುಹಿಸಿಕೊಟ್ಟು ಜಿಲ್ಲೆಯ ನಾಯಕರಿಗೆ ಕೊಟ್ಟಸಂದೇಶವಾದರೂ ಏನು ಎಂಬ ಹತ್ತು ಹಲವಾರು ಪ್ರಶ್ನೆಗಳು ಮೂಡುತ್ತಿವೆ.

MLC Elections: ಬೆಳಗಾವಿಯಲ್ಲಿ ಕಾಂಗ್ರೆಸ್ ಶಕ್ತಿ ಪ್ರದರ್ಶನ: ತಡವಾಗಿ ಬಂದ ಡಿಕೆಶಿ

ಪ್ರಸ್ತುತ ವಾಯವ್ಯ ಶಿಕ್ಷಕರ ಕ್ಷೇತ್ರಕ್ಕೆ ಮಾಜಿ ಸಚಿವ ಪ್ರಕಾಶ ಹುಕ್ಕೇರಿಯೇ ಕಾಂಗ್ರೆಸ್‌ ಅಭ್ಯರ್ಥಿ. ಹಳೆಯ ಮುನಿಸೇ ಶಾಸಕಿ ಹೆಬ್ಬಾಳಕರ ಅವರನ್ನು ಸಭೆಯಿಂದ ದೂರ ಇರುವಂತೆ ಮಾಡಿತೆ ಎಂಬ ಮಾತು ಕೂಡ ಕೇಳಿಬರುತ್ತಿದೆ. ಬಿಜೆಪಿಯಲ್ಲಿರುವ ನಾಯಕರ ಆಂತರಿಕ ಭಿನ್ನಮತ ಕಾಂಗ್ರೆಸ್‌ಗೂ ವ್ಯಾಪಿಸಿತೆ ಎನ್ನುವ ಅನುಮಾನ ಕೂಡ ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ.

ಪ್ರಚಾರದಿಂದ ದೂರ ಉಳಿದಿದ್ದ ಹುಕ್ಕೇರಿ:

ಕಳೆದ ಡಿಸೆಂಬರ್‌ನಲ್ಲಿ ಜರುಗಿದ ವಿಧಾನ ಪರಿಷತ್‌ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಸಹೋದರ ಹಾಗೂ ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದ ಚನ್ನರಾಜ ಹಟ್ಟಿಹೊಳಿ ಪರವಾಗಿ ಪ್ರಚಾರ ಕಾರ್ಯದಿಂದ ಪ್ರಕಾಶ ಹುಕ್ಕೇರಿ ಅವರು ಅಂತರ ಕಾಯ್ದುಕೊಂಡಿದ್ದರು ಎಂಬ ಆರೋಪ ಇತ್ತು. ಆ ಸಂದರ್ಭದಲ್ಲಿ ಸ್ಥಳೀಯ ಸಂಸ್ಥೆಯಿಂದ ವಿಧಾನ ಪರಿಷತ್‌ಗೆ ಪ್ರಬಲ ಟಿಕೆಟ್‌ ಆಕಾಂಕ್ಷಿಯಾಗಿದ್ದ ಪ್ರಕಾಶ ಹುಕ್ಕೇರಿಗೆ ಟಿಕೆಟ್‌ ಕೈತಪ್ಪಿತ್ತು. ಇದೇ ಕಾರಣಕ್ಕೆ ಅಂದಿನ ಕಾಂಗ್ರೆಸ್‌ ಅಭ್ಯರ್ಥಿ ಪರವಾಗಿ ಪ್ರಚಾರ ಕಾರ್ಯದಲ್ಲಿ ತೊಡಗದಿರುವುದು ಕಂಡುಬಂದಿತ್ತು. ಇದರಿಂದ ನಾಯಕರು ಹುಕ್ಕೇರಿ ಅವರ ಮನವೊಲಿಸುವ ಯತ್ನ ಮಾಡಿದ್ದರು. ಜತೆಗೆ ಮುಂಬರುವ ದಿನಗಳಲ್ಲಿ ಇದನ್ನು ಸರಿಪಡಿಸುವ ಭರವಸೆ ಕೂಡ ನೀಡಿದ್ದರು. ಆದರೂ ಹುಕ್ಕೇರಿ ಅವರು ಪ್ರಚಾರ ಕಾರ್ಯದಿಂದ ಅಂತರ ಕಾಯ್ದುಕೊಂಡಿದ್ದರು. ಕೊನೆಗೆ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಅವರು, ಚನ್ನರಾಜ ಹಟ್ಟಿಹೊಳಿ ನನ್ನ ಸಹೋದರ ಎನ್ನುವ ಬದಲಾಗಿ ಕಾಂಗ್ರೆಸ್‌ನ ಅಧಿಕೃತ ಅಭ್ಯರ್ಥಿ ಎಂದು ಭಾವಿಸಿಕೊಂಡು, ಗೆಲ್ಲುವ ನಿಟ್ಟಿನಲ್ಲಿ ಪ್ರಚಾರ ನಡೆಸುವಂತೆ ಮನವಿ ಮಾಡಿಕೊಂಡಿದ್ದರು ಎನ್ನಲಾಗಿದೆ. ಆದರೆ, ಹುಕ್ಕೇರಿ ಅವರು ಮತದಾನ ಸಮೀಪಿಸುತ್ತಿದ್ದಂತೆ ಕೊನೆಗಳಿಗೆಯಲ್ಲಿ ಪ್ರಚಾರ ಕಾರ್ಯದಲ್ಲಿ ತೊಡಗಿದ್ದರು. ಆದರೂ ಆ ಸಂದರ್ಭದಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದ ಚನ್ನರಾಜ ಹಟ್ಟಿಹೊಳಿ ಅವರೇ ಗೆಲವು ಸಾಧಿಸಿದ್ದರು.

ಕಾಂಗ್ರೆಸ್‌ಗೆ ಮತ್ತೊಂದು ಶಾಕ್‌: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದ ಬಂಡಾಯ ನಾಯಕ!

ಇದೀಗ ವಾಯವ್ಯ ಶಿಕ್ಷಕರ ಕ್ಷೇತ್ರದಿಂದ ಪ್ರಕಾಶ ಹುಕ್ಕೇರಿ, ಪದವೀಧರ ಕ್ಷೇತ್ರದಿಂದ ಸುನೀಲ ಸಂಕ ಅವರನ್ನು ಅಭ್ಯರ್ಥಿಗಳನ್ನಾಗಿ ಕಾಂಗ್ರೆಸ್‌ ಘೋಷಿಸಿದ್ದು, ಅದಕ್ಕೆ ಪೂರ್ವಭಾವಿಯಾಗಿ ಕಾಂಗ್ರೆಸ್‌ ಕಾರ್ಯಕರ್ತರ ಸಭೆಯನ್ನು ಬೆಳಗಾವಿಯಲ್ಲಿ ಆಯೋಜಿಸಿತ್ತು. ಚುನಾವಣೆಯ ಸಿದ್ಧತೆಯ ಭಾಗವಾಗಿ ಸಭೆಯನ್ನು ನಡೆಸಲಾಯಿತು. ಆದರೆ, ಪ್ರಬಲ ಲಿಂಗಾಯತ ಸಮುದಾಯದ ನಾಯಕಿ, ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಅವರು ಸಭೆಯಿಂದ ದೂರ ಉಳಿಯುವ ಮೂಲಕ ಹಿಂದೆ ಆಗಿರುವ ಘಟನೆಯನ್ನು ಮರೆತಿಲ್ಲವೆ? ಅಥವಾ ಅಂತರ ಕಾಯ್ದುಕೊಳ್ಳುವ ಮೂಲಕ ಪರೋಕ್ಷ ಸಂದೇಶ ರವಾನಿಸಿದರೆ ಎಂಬ ಅನುಮಾನ ಕೂಡ ಈಗ ಕಂಡುಬರುತ್ತಿದೆ.

ಜಿಲ್ಲಾ ಕಾಂಗ್ರೆಸ್‌ನಲ್ಲಿ ಯಾವುದೇ ಭಿನ್ನಮತ ಇಲ್ಲ. ಎರಡೂ ಕ್ಷೇತ್ರಗಳ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಸಂದರ್ಭದಲ್ಲಿ ನಾನೂ ಸಭೆಯಲ್ಲಿದ್ದೆ. ಎಲ್ಲರೂ ಒಮ್ಮತದಿಂದ ಪ್ರಕಾಶ ಹುಕ್ಕೇರಿ ಹಾಗೂ ಸುನೀಲ್‌ ಸಂಕ ಅವರನ್ನು ಆಯ್ಕೆ ಮಾಡಿದ್ದಾರೆ. ವಿಧಾನ ಪರಿಷತ್‌ ಚುನಾವಣೆ ಹಿನ್ನೆಲೆ ಕ್ಷೇತ್ರದಲ್ಲಿ ಕಾರ್ಯಕರ್ತರೊಂದಿಗೆ ಸಭೆ ಆಯೋಜಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಮುಖಂಡರು ಆಯೋಜಿಸಿದ್ದ ಸಭೆಗೆ ಹಾಜರಾಗಲು ಆಗಿಲ್ಲ. ಅಲ್ಲದೇ ಸಹೋದರ ಚನ್ನರಾಜ್‌ ಹಟ್ಟಿಹೊಳಿ ಪೂರ್ವ ನಿಗದಿ ಸಭೆ ಇರುವುದರಿಂದ ಬೆಂಗಳೂರಿಗೆ ಹೋಗಿದ್ದಾರೆ. ಈ ಹಿನ್ನೆಲೆಯಲ್ಲಿ ಸಭೆಗೆ ಪುತ್ರ ಮೃಣಾಲ್‌ನನ್ನು ಕಳುಹಿಸಲಾಗಿತ್ತು. ಕಾಂಗ್ರೆಸ್‌ ಅಭ್ಯರ್ಥಿಗಳ ಗೆಲುವಿಗೆ ಶಕ್ತಿಮೀರಿ ನಾನು ಮತ್ತು ಸಹೋದರ ಶ್ರಮಿಸುತ್ತೇವೆ. ಇದರಲ್ಲಿ ಯಾವುದೇ ಅನುಮಾನ ಬೇಡ ಅಂತ  ಬೆಳಗಾವಿ ಗ್ರಾಮೀಣ ಮತಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ತಿಳಿಸಿದ್ದಾರೆ.  
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ರೈಲ್ವೆ ಮೂಲಸೌಕರ್ಯ ಅಭಿವೃದ್ಧಿಪಡಿಸಲು ಮೋದಿಯಿಂದ ಬದ್ಧತೆಯ ಕಾರ್ಯ: ಸಂಸದ ಬಿ.ವೈ.ರಾಘವೇಂದ್ರ
ಹೈಕಮಾಂಡ್‌ ನಿರ್ಧಾರವೇ ಅಂತಿಮ: ಸಿಎಂ ಬದಲು ವಿಚಾರಕ್ಕೆ ಸಿದ್ದರಾಮಯ್ಯ ಪ್ರತಿಕ್ರಿಯೆ