* ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಗಂಡಸ್ತನದ ಹೇಳಿಕೆ
* ಕುಮಾರಸ್ವಾಮಿ ವಿರುದ್ಧ ಸಿಡಿದೆದ್ದ ಬಿಜೆಪಿ ನಾಯಕರು
* ಕುಮಾರಸ್ವಾಮಿಯವರಿಗೆ ಒಂದೆರಡಲ್ಲ, ಮೂರು-ಮೂರು ಕಡೆ ಗಂಡಸ್ತನ ತೋರಿಸುವುದು ಗೊತ್ತು ಎಂದ ಈಶ್ವರಪ್ಪ
ಬೆಂಗಳೂರು, (ಮಾ.31): ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ (Basavaraj Bommai) ಗಂಡಸ್ತನದ ಬಗ್ಗೆ ಮಾತನಾಡಿರುವ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ (HD Kumaraswamy) ವಿರುದ್ಧ ಬಿಜೆಪಿ ನಾಯಕರು ಸಿಡಿದೆದ್ದಿದ್ದಾರೆ.
ಹಲಾಲ್ ಬ್ಯಾನ್, ವ್ಯಾಪಾರ ಬ್ಯಾನ್, ಹಿಜಾಬ್ ಹೀಗೆ ಸರಣಿ ವಿವಾದಗಳ ಬಗ್ಗೆ ಇಷ್ಟು ದಿನ ಸೂಕ್ಷ್ಮವಾಗಿ ಪ್ರತಿಕ್ರಿಯಿಸುತ್ತಿದ್ದ ಕುಮಾರಸ್ವಾಮಿ ಇವತ್ತು ಏಕಾಏಕಿ ಜ್ವಾಲಾಮುಖಿಯಂತೆ ಸ್ಫೋಟಿಸಿದ್ದಾರೆ. ಸಿಎಂಗೆ ಗಂಡಸ್ತನದ ಸವಾಲು ಹಾಕಿದ್ದಾರೆ. ಇದಕ್ಕೆ ಬಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಇನ್ನು ಈ ಬಗ್ಗೆ ಮಾತನಾಡಿದ ಈಶ್ವರಪ್ಪ, ಗಂಡಸ್ತನವನ್ನು ಯಾವುದಕ್ಕೆ ಬಳಸಬೇಕು ಅನ್ನೋದು ಕುಮಾರಸ್ವಾಮಿಯವರಿಗೆ ಚೆನ್ನಾಗಿ ಗೊತ್ತಿದೆ. ಒಂದಲ್ಲ, ಎರಡಲ್ಲ ಮೂರುಕಡೆ ಗಂಡಸ್ತನ ಬಳಸುವುದು ಅವರಿಗೆ ಚೆನ್ನಾಗಿ ಗೊತ್ತು. ಆದರೆ, ಗಂಡಸ್ತನವನ್ನು ಎಲ್ಲ ಕಡೆ ಬಳಸುವ ಬಗ್ಗೆ ಯೋಚನೆ ಮಾಡಬಾರದು. ಅವರೊಬ್ಬ ಪ್ರಬುಧ್ಧ ಮತ್ತು ಹಿರಿಯ ರಾಜಕಾರಣಿ ಅಗಿದ್ದಾರೆ. ಹಿಂದೆ ಅವರು ಮುಖ್ಯಮಂತ್ರಿಯಾಗಿದ್ದ ಅವರು ಇನ್ನೊಬ್ಬ ಮುಖ್ಯಮಂತ್ರಿಯನ್ನು ಉದ್ದೇಶಿಸಿ ಗಂಡಸ್ತನದಂಥ ಪದಬಳಕೆ ಮಾಡಬಾರದು ಎಂದರು.
Halal Row: ಸಿಎಂ ಬೊಮ್ಮಾಯಿಯವರೇ, ಗಂಡಸ್ತನ ಇದ್ದರೆ ಇದನ್ನೆಲ್ಲಾ ತಡೆಯಿರಿ: ಎಚ್‌ಡಿಕೆ
ಮುಖ್ಯಮಂತ್ರಿಯಾಗಿದ್ದವರಿಗೆ ಹೀಗೆ ಮಾತಾಡುವುದು ಶೋಭೆ ತರುವುದಿಲ್ಲ. ಅವರಾಡಿದ ಮಾತುಗಳನ್ನು ಉಗ್ರವಾಗಿ ಖಂಡಿಸುತ್ತೇನೆ ಎಂದ ಈಶ್ವರಪ್ಪನವರು, ಕುಮಾರಸ್ವಾಮಿಯವರ ಪದಬಳಕೆ ಮನಸ್ಸಿಗೆ ತುಂಬಾ ನೋವನ್ನುಂಟು ಮಾಡಿದೆ ಅಂತ ಹೇಳಿದರು.
ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಮತ್ತು ಅವರ ಸರ್ಕಾರವನ್ನು ಟೀಕಿಸುವ ಭರದಲ್ಲಿ ಗಂಡಸ್ತನವಿದ್ದರೆ ಹಲಾಲ್ ಕಟ್ ಮಾಂಸ ಮಾರಾಟ ಮತ್ತು ಮುಸ್ಲಿಂ ವ್ಯಾಪಾರಿಗಳಿಗೆ ಜಾತ್ರೆ ಮತ್ತು ಹಿಂದೂ ದೇವಾಲಯಗಳ ಆವರಣದಲ್ಲಿ ನಿಷೇಧ ಹೇರಿರುವುದನ್ನು ತಡೆಯಲಿ ಎಂದು ಸವಾಲು ಹಾಕಿ ಪರಿತಪಿಸುವಂತಾಗಿದೆ. ಬಿಜೆಪಿ ನಾಯಕರೆಲ್ಲ ಅವರನ್ನು ಒಂದೇ ಸಮ ಟೀಕಿಸುತ್ತಿದ್ದಾರೆ.
ಹೇಳಿಕೆಗೆ ವಿಷಾದ ವ್ಯಕ್ತಪಡಿಸಿದ ಎಚ್‌ಡಿಕೆ
ಹಿಜಾಬ್(Hijab) ವಿವಾದ ಶುರುವಾದಾಗಿನಿಂದ ರಾಜ್ಯದಲ್ಲಿ ಒಂದಲ್ಲಾ ಒಂದು ಸರಣಿ ವಿವಾದಗಳು ಹುಟ್ಟುತ್ತಲೇ ಇವೆ. ಸರಣಿ ವಿವಾದಗಳಿಂದ ರಾಜ್ಯದಲ್ಲಿ ಹಿಂದೂ, ಮುಸ್ಲಿಂ(Hindu-Muslim) ಸಮುದಾಯದ ಮಧ್ಯೆ ಬಿರುಕು ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಇಂದು ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಗಂಡಸ್ತನ ಇದ್ರೆ ಎಲ್ಲವನ್ನೂ ನಿಲ್ಲಿಸಿ. ವಿಹೆಚ್‌ಪಿ, ಬಜರಂಗದಳದವರು ಸಮಾಜ ಘಾತುಕರು, ಪೋಲಿಗಳು. ಕಾಂಗ್ರೆಸ್ನವರಿಗೆ ತಾಕತ್ತಿಲ್ಲ ಎಂದು ಸಿಎಂ ಬೊಮ್ಮಾಯಿಗೆ(Basavaraj Bommai) ಗಂಡಸ್ತನ ಇದ್ರೆ ಕ್ರಮ ಕೈಗೊಳ್ಳಲಿ ಎಂದು ಸವಾಲು ಹಾಕಿದ್ದರು. ಈ ಹೇಳಿಕೆಯ ಬಳಿಕ ಬಿಜೆಪಿ ಮುಖಂಡರು ಹೆಚ್ಡಿಕೆ ವಿರುದ್ಧ ವಾಗ್ದಾಳಿ ನಡೆಸಿದ್ದರು. ಆದ್ರೆ ಈಗ ಹೆಚ್ಡಿ ಕುಮಾರಸ್ವಾಮಿ ಗಂಡಸ್ತನ ಹೇಳಿಕೆಗೆ ವಿಷಾದ ವ್ಯಕ್ತಪಡಿಸಿದ್ದಾರೆ.
ಮಾತನಾಡುವ ಭರದಲ್ಲಿ ಗಂಡಸ್ತನದ ಕುರಿತು ಹೇಳಿದ್ದೇನೆ. ಕೂಡಲೇ ಅದನ್ನ ಸರಿ ಮಾಡಿಕೊಂಡಿದ್ದೇನೆ. ನನ್ನ ಪದ ಬಳಕೆ ನೋವು ತಂದಿದ್ರೆ ಸಾರ್ವಜನಿಕವಾಗಿ ವಿಷಾದ ವ್ಯಕ್ತಪಡಿಸುತ್ತೇನೆ ಎಂದಿದ್ದಾರೆ. ಈದ್ಗಾ ಮೈದಾನದಲ್ಲಿ ಅಮಾಯಕ ಮಕ್ಕಳ ಬಲಿದಾನ. ಇದನ್ನು ನೋಡಿದ ಮೇಲೆ ನನಗೆ ರೋಷ ಉಕ್ಕಿ ಬಂತು. ಆವೇಶದಲ್ಲಿ ನಾನು ಗಂಡಸ್ತನ ಎಂದು ಮಾತನಾಡಿದ್ದೇನೆ. ನನ್ನ ಪದ ಬಳಕೆ ನೋವು ತಂದಿದ್ರೆ ವಿಷಾದ ವ್ಯಕ್ತಪಡಿಸ್ತೇನೆ. ಆಗಲೇ ಪದ ಬಳಕೆ ಬಗ್ಗೆ ಅನ್ಯಥಾ ಭಾವಿಸಬೇಡಿ ಅಂದಿದ್ದೇನೆ ಎಂದು ಗಂಡಸ್ತನ ಹೇಳಿಕೆಗೆ ಕುಮಾರಸ್ವಾಮಿ ವಿಷಾದ ವ್ಯಕ್ತಪಡಿಸಿದ್ದಾರೆ.
ಇನ್ನು ಇದೇ ವೇಳೆ ಮಾತನಾಡಿರುವ ಕುಮಾರಸ್ವಾಮಿ, ಕುವೆಂಪು ಕೊಟ್ಟ ಸಂದೇಶ ಬಿಜೆಪಿ, ಭಜರಂಗದಳದವರು ಧೂಳಿಪಟ ಮಾಡಲು ಹೋಗ್ತಿದ್ದೀರಾ. ವಿಗ್ರಹ ಮುಸ್ಲಿಮರು ಕೆತ್ತಿದ್ದಾರೆ ಅದನ್ನ ವಿ.ಎಚ್.ಪಿ ಅವ್ರು ಏನ್ ಮಾಡ್ತೀರಾ. ಹಾಲಾಲ್ ಮಾಡಿದ್ದು ನಾವು ಇಷ್ಟು ವರ್ಷ ತಿಂದಿದ್ದೇವೆ ಏನ್ ಮಾಡೋಣ ಹೇಳಿ. ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಮೋದಿ ಕೈಕೆಳಗೆ ಸೋಶಿಯಲ್ ಮೀಡಿಯಾ ಹ್ಯಾಂಡಲ್ ಮಾಡೋ ಮಹಿಳೆಯೊಬ್ಬರು ಚುನಾವಣೆ ಉಸ್ತುವಾರಿಗೆ ಬಂದವರು ಮೀಟ್ ಮಾಂಸ ಕೇಳಿದ್ರು ಅಂತ ಹೇಳಿದ್ದಾರೆ. ಇವ್ರು ಗೋ ಹತ್ಯೆ ಇದು ಅಂತ ಮಾತಾಡ್ತಾರೆ. ಯಾರ ಬಳಿ ಇವೆಲ್ಲ ಹೇಳ್ತೀರಾ. ಹೀಗಾಗಿ ನಾನು ಹೋರಾಟ ಮಾಡೋಕೆ ನಿರ್ಧಾರ ಮಾಡಿದ್ದೇನೆ ಎಂದರು