ವಿಶ್ವವೇ ಒಪ್ಪಿಕೊಂಡಿರುವ ಮೋದಿ ಅವರನ್ನು ಒಪ್ಪಿಕೊಳ್ಳುವುದಕ್ಕೆ, ಬಿಡುವುದಕ್ಕೆ ಎಚ್‌ಡಿಕೆ ಯಾರು?: ಈಶ್ವರಪ್ಪ
ಬಾಗಲಕೋಟೆ(ಜ.14): ಪ್ರಧಾನಿ ಮೋದಿ ಅವರು ವಿಶ್ವ ನಾಯಕ. ಅವರು ಇಡೀ ದೇಶಕ್ಕೆ ಸ್ಫೂರ್ತಿಯಾಗಿರುವ ವ್ಯಕ್ತಿ. ಅಂತಹ ವಿಶ್ವದ ನಾಯಕನ ಬಗ್ಗೆ ಹಗುರವಾಗಿ ಮಾತನಾಡುವುದು ಸರಿಯಲ್ಲ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು. ಕೂಡಲಸಂಗಮದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಶ್ವವೇ ಒಪ್ಪಿಕೊಂಡಿರುವ ಮೋದಿ ಅವರನ್ನು ಒಪ್ಪಿಕೊಳ್ಳುವುದಕ್ಕೆ, ಬಿಡುವುದಕ್ಕೆ ಕುಮಾರಸ್ವಾಮಿ ಯಾರು? ಕುಮಾರಸ್ವಾಮಿಗೆ ರಾಮನಗರ ಬಿಟ್ಟರೆ ಬೇರೆ ಏನೂ ಗೊತ್ತಿಲ್ಲ. ಮಂಡ್ಯವೇ ಅವರ ಕೂಪಮಂಡೂಕ. ಕುಮಾರಸ್ವಾಮಿ ಮಾಜಿ ಮುಖ್ಯಮಂತ್ರಿಯಾಗಿ ಕೇವಲ ಮಂಡ್ಯ, ಹಾಸನ ಎಂದರೇ ಹೇಗೆ? ಕೂಪಮಂಡೂಕ ಭಾವನೆಯಿಂದ ಹೊರಗಡೆ ಬಂದು ನೋಡಬೇಕು. ಕುಮಾರಸ್ವಾಮಿ ಮೋದಿ ಅಂತವರನ್ನು ಟೀಕೆ ಮಾಡಿ, ದೊಡ್ಡ ಮನುಷ್ಯ ಅನಿಸಿಕೊಳ್ಳಬಹುದು. ಕುಮಾರಸ್ವಾಮಿ ಸಿಎಂ ಆದವರು ಅವರನ್ನು ಟೀಕೆ ಮಾಡೋಕೆ ಹೋಗಲ್ಲ ಎಂದು ಈಶ್ವರಪ್ಪ ಟಾಂಗ್ ನೀಡಿದರು. ನಾನು ದೇವೇಗೌಡರ ಬಗ್ಗೆ ಮಾತನಾಡೋಕೆ ಹೋಗಲ್ಲ. ಏಕೆಂದರೆ, ದೇವೇಗೌಡರು ದೇಶಾದ್ಯಂತ ಈಜಾಡಿದವರು ಎಂದರು.
ಪಲಾಯನ ಸಿದ್ದಾಂತ ಜನರ ನಂಬಿಕೆ ಕಳೆದುಕೊಳ್ಳಲು ಕಾರಣ :
undefined
ಮಾಜಿ ಸಿಎಂ ಸಿದ್ದರಾಮಯ್ಯ ಕೋಲಾರ ಸ್ಪರ್ಧೆ ವಿಚಾರದ ಪ್ರಶ್ನೆಗೆ ಉತ್ತರಿಸಿದ ಅವರು, ಪ್ರಜಾಪ್ರಭುತ್ವದಲ್ಲಿ ಯಾರು ಬೇಕಾದರೂ ಎಲ್ಲಿಯಾದರೂ ಸ್ಪರ್ಧೆ ಮಾಡಬಹುದು. ಅದರಲ್ಲಿ ಏನು ತಪ್ಪಿದೆ. ಕಳೆದ ಬಾರಿ ಬಾದಾಮಿಯಿಂದ ಸ್ಪರ್ಧಿಸಿ ಗೆದ್ದರು. ಆದರೆ, ಅಲ್ಲಿಂದ ಯಾಕೆ ಹೋಗುತ್ತಿದ್ದಾರೆ ಗೊತ್ತಿಲ್ಲ. ಬಾದಾಮಿಯನ್ನು ಬಹಳ ಅಭಿವೃದ್ಧಿ ಮಾಡಿದ್ದರೇ, ಅಲ್ಲಿಂದಲ್ಲೇ ಸ್ಪರ್ಧಿಸಬೇಕಿತ್ತು. ಇಂದು ಸ್ಪರ್ಧಿಸಿ ನಾಳೆ ಬೇರೇಡೆಗೆ ಹೋಗುತ್ತಾರೆ ಎಂದರೇ ಕೋಲಾರ ಜನರಲ್ಲಿಯೂ ಈ ಭಾವನೆ ಮೂಡಿ ಸಿದ್ಧರಾಮಯ್ಯ ಅವರ ಸೋಲಿಗೆ ಕಾರಣವಾಗಬಹುದು. ಈ ರೀತಿ ಮಾಡುವುದರಿಂದ ಜನರಿಗೆ ರಾಜಕಾರಣಿಗಳ ಮೇಲಿನ ವಿಶ್ವಾಸ ಹೋಗುತ್ತದೆ. ಚುನಾವಣೆಯಲ್ಲಿ ಜಯ ಗಳಿಸಿದ ಕ್ಷೇತ್ರದ ಋುಣ ತೀರಿಸಬೇಕು ಎಂದು ತಿಳಿಸಿದರು.
'ಮಾಜಿ ಸಿಎಂ ಸಿದ್ದರಾಮಯ್ಯಗೆ ಬಾದಾಮಿಯೇ ಸುರಕ್ಷಿತ'
ಶ್ರೀಮಂತರಿಗೆ ಮೀಸಲಾತಿ ನಾನು ಒಪ್ಪಲ್ಲ :
ಎಸ್ಟಿ ಮೀಸಲಾತಿ ಹೋರಾಟದಲ್ಲಿ ನಾನು ಕೂಡ ಭಾಗಿಯಾಗಿದ್ದೇನೆ. ನನ್ನ ಜಾತಿಯವರ ಪರ ನಾನು ನಿಂತಿದ್ದೇನೆ. ಎಸ್ಟಿಹೋರಾಟಕ್ಕೆ ಕಾಗಿನೆಲೆ ಶ್ರೀಗಳ ಆಮಂತ್ರಣಕ್ಕೆ, ಗೌರವ ನೀಡಿ ಹೋಗಿದ್ದೆ. ಮೀಸಲಾತಿ ಎಂಬುವುದು ತೀರ ಹಿಂದುಳಿದವರಿಗೆ ಬೇಕು ಎನ್ನುವುದು ಡಾ.ಬಿ.ಆರ್.ಅಂಬೇಡ್ಕರ ಅವರ ಇಚ್ಛೆಯಾಗಿತ್ತು. ಮೀಸಲಾತಿ ಹತ್ತು ವರ್ಷವಿದ್ದರೇ ಸಾಕು ಎಂಬ ನಿಲುವು ಹೊಂದಿತ್ತು. ಆದರೆ ಪ್ರಸ್ತುತ ಎಲ್ಲ ಜಾತಿಯವರ ನಮ್ಮ ಸಮುದಾಯಕ್ಕೆ ಮೀಸಲಾತಿ ಬೇಕು ಎನ್ನುವಂತಾಗಿದೆ. ಮೀಸಲಾತಿ ಹೋರಾಟ ಎನ್ನುವುದು ಫ್ಯಾನ್ಸಿ ಆಗಿದೆ. ಕಡು ಬಡವರಿಗೆ ಮೀಸಲಾತಿ ಸಿಕ್ಕರೇ, ಅನುಕೂಲವಾಗುತ್ತದೆ. ಶ್ರೀಮಂತರಿಗೆ ಮೀಸಲಾತಿ ಬೇಕು ಎನ್ನುವ ಸಿದ್ದಾಂತ ನಾನು ಒಪ್ಪುವುದಿಲ್ಲ ಎಂದು ಕೆ.ಎಸ.ಈಶ್ವರಪ್ಪ ತಿಳಿಸಿದರು.
ಬಾದಾಮಿಯಿಂದ ಸ್ಪರ್ಧಿಸಿ: ಸಿದ್ದರಾಮಯ್ಯಗೆ ಹಾಲೆಂಡ್ ಕನ್ನಡಿಗನ ಮನವಿ
ಮಂತ್ರಿಯಾಗುವಾಸೆ ನನ್ನಗಿಲ್ಲ :
ಈ ಬಾರಿ ಸಂಪುಟ ವಿಸ್ತರಣೆಯಾಗಲ್ಲ. ಯಾಕೆ ಎಲ್ಲರೂ ಮಂತ್ರಿ ಆಗಬೇಕು. ಯಾಕೆ ಎಲ್ಲರೂ ಎಂಎಲ್‌ಎ ಆಗಬೇಕು. ಪಕ್ಷದ ಕಾರ್ಯಕರ್ತ ಎಂಬ ಪದವನ್ನು ಸಾಯುವರೆಗೂ ತಪ್ಪಿಸಲೂ ಸಾಧ್ಯವಿಲ್ಲ. ನಮ್ಮ ರಾಜ್ಯದಲ್ಲಿ ಒಂದೂ ಬಾರಿಯೂ ಬಿಜೆಪಿಗೆ ಪೂರ್ಣ ಬಹುಮತ ಬಂದಿಲ್ಲ. ಪೂರ್ಣ ಬಹುಮತ ನೀಡಿದಿದ್ದರೇ, ಈ ರೀತಿ ಪರಿಸ್ಥಿತಿ ಬರುತ್ತಿರಲಿಲ್ಲ. ಈ ಭಾರಿ ರಾಜ್ಯದ ಜನತೆ ಬಿಜೆಪಿಗೆ ಪೂರ್ಣ ಬಹುಮತ ನೀಡುತ್ತಾರೆ ಎಂಬ ವಿಶ್ವಾಸ ನನಗಿದೆ. ಪೂರ್ಣ ಬಹುಮತವಿದ್ದರೇ ನಮ್ಮನ್ನ ಮಂತ್ರಿ ಮಾಡುವ ಸ್ವಾತಂತ್ರ್ಯ ನಮ್ಮವರಿಗೆ ಇರುತ್ತಿತ್ತು. ವಲಸಿಗರಿಗೆ, ಸೀನಿಯರ್ಸ್‌ಗೆ, ಜಾತಿವಾರು ಮಂತ್ರಿ ಸ್ಥಾನ ನೀಡದಿದ್ದರೇ ಹೇಗೆ ಎಂಬ ಪ್ರಶ್ನೆ ಬರುತ್ತದೆ. ನಾನು ಮಂತ್ರಿಯಾಗಲೇಬೇಕು ಎಂಬ ಉದ್ದೇಶ ಹೊಂದಿಲ್ಲ. ಹಲವು ಖಾತೆಗಳನ್ನು ನಿಭಾಯಿಸಿದ ಅನುಭವ ನನ್ನಗಿದೆ. ಮಂತ್ರಿ ಸ್ಥಾನ ಕೊಟ್ಟರೇ ಸಂತೋಷ. ಇಲ್ಲವೇ ಮಂತ್ರಿಯಾಗಲೇಬೇಕು ಎಂಬ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.
ರವಿನ ಬಂಧಿಸಿದ ನಂತರ ಗುಂಡೂರಾವ್ ಹಣೆಬರಹ ಏನು :
ಸ್ಯಾಂಟ್ರೊ ರವಿ ಎಂತಹ ಲಂಪಟರು ತಲೆಹಿಡುಕರು ಬಿಜೆಪಿಯಲ್ಲಿದ್ದಾರೆ ಎಂಬ ದಿನೇಶ ಗುಂಡೂರಾವ್ ಅವರ ಟ್ವೀಟ್‌ಗೆ ಪ್ರತಿಕ್ರಿಯಿಸಿದ ಈಶ್ವರಪ್ಪ, ಸ್ಯಾಂಟ್ರೋ ರವಿಯನ್ನು ಇವತ್ತಲ್ಲ ನಾಳೆ ಅರೆಸ್ಟ್ ಮಾಡುತ್ತೇವೆ. ಆದರೆ, ಅರೆಸ್ಟ್ ಮಾಡಿದ ಮೇಲೆ ದಿನೇಶ ಗುಂಡೂರಾವ್ ಹಣೆಬಹರ ಏನು.? ನಮ್ಮ ರಾಜ್ಯದ ಎಷ್ಟುಜನ ಹೆಣ್ಣು ಮಕ್ಕಳನ್ನು ಕರೆದುಕೊಂಡು ಹಾಳು ಮಾಡಿದ್ದಾರೆ. ನಮ್ಮ ದೇಶದ ಹೆಣ್ಣು ಮಕ್ಕಳು, ವಿದೇಶದ ಹೆಣ್ಣು ಮಕ್ಕಳನ್ನು ಎಷ್ಟುಜನರು ಹಾಳು ಮಾಡಿದ್ದಾರೆ ಎಂಬುವುದು ಸ್ಯಾಂಟ್ರೋ ರವಿ ಬಂಧನದ ಬಳಿಕವೇ ತಿಳಿಯುತ್ತದೆ ಎಂದು ತಿಳಿಸಿದರು.