
ಲೋಕಾಪುರ (ಡಿ.04): ಕಳೆದ ಎರಡು ವರ್ಷಗಳಿಂದ ಹದಗೆಟ್ಟ ಕಾಂಗ್ರೆಸ್ ಸರ್ಕಾರದ ಆಡಳಿತ ನೋಡಿ ಜನತೆ ಬೇಸತ್ತಿದ್ದಾರೆ. ಇದು ರಾಜ್ಯದಲ್ಲೇ ಕಾಂಗ್ರೆಸ್ ಪಕ್ಷದ ಕೊನೆಯ ಸರ್ಕಾರ. ರಾಜ್ಯದಲ್ಲಿ ಇನ್ನು ಮುಂದೆ ಕಾಂಗ್ರೆಸ್ ಅಧಿಕಾರಕ್ಕೆ ಬರುವುದಿಲ್ಲ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಹೇಳಿದರು. ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಮತ್ತು ಡಿಸಿಎಂ ತಮ್ಮ ಕುರ್ಚಿ ಕಾದಾಟದಲ್ಲಿ ರಾಜ್ಯದ ಅಭಿವೃದ್ಧಿ ಮರೆತಿದ್ದಾರೆ. ದಲಿತ ಮತ್ತು ಹಿಂದುಳಿದ ವರ್ಗದ ಜನರಿಗೆ ಈ ಸರ್ಕಾರದಲ್ಲಿ ಮೋಸವಾಗಿದೆ. ರೈತರು ಬಾಯಿ ಬಾಯಿ ಬಡಿದುಕೊಳ್ಳುತ್ತಿದ್ದಾರೆ. ಹಳ್ಳಿಗಳ ಅಭಿವೃದ್ಧಿ ಕುಂಠಿತವಾಗಿವೆ ಎಂದರು.
ಪಟ್ಟಣದ ಜನರು ಕುಡಿಯುವ ನೀರಿಗೆ ಪರಿತಪಿಸುತ್ತಿದ್ದಾರೆ. ಮೆಕ್ಕೆ ಜೋಳ, ಕಬ್ಬು, ಉಳ್ಳಾಗಡ್ಡಿ ಬೆಳೆಗಳ ಬಗ್ಗೆ ಈ ಸರ್ಕಾರ ಗಮನ ಕೊಡುತ್ತಿಲ್ಲ. ರೈತರಿಗಾಗಿ ಹೊಸ ಯೋಜನೆಗಳನ್ನು ಜಾರಿಗೆ ತರದೇ ಕುರ್ಚಿಗಾಗಿ ಕಚ್ಚಾಡುತ್ತಿದ್ದಾರೆ. ರಾಜ್ಯದ ಅಭಿವೃದ್ಧಿ ಕುರಿತು ಮಾತನಾಡದೇ ಕೇವಲ ಕೇಂದ್ರದ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಮುಖ್ಯಮಂತ್ರಿ ಬದಲಾವಣೆ, ನಾಟಿಕೋಳಿ, ಬ್ರೇಕ್‌ಫಾಸ್ಟ್, ಲಂಚ್ ಇದರಲ್ಲೇ ಕಾಲಹರಣ ಮಾಡುತ್ತಿದ್ದಾರೆ. ಆಡಳಿತ ನಿಷ್ಕ್ರಿಯವಾಗಿದೆ. ಕರ್ನಾಟಕದ ಜನತೆ ಕಂಗಾಲಾಗಿದ್ದಾರೆ.
ಕಾಂಗ್ರೆಸ್ ನಾಯಕರು ಕೇವಲ ಕುರ್ಚಿಗಾಗಿ ಪ್ರತಿನಿತ್ಯ ಹೋರಾಟ ಮಾಡಿ ದೆಹಲಿಯಲ್ಲಿ ಠಿಕಾಣಿ ಹೂಡುತ್ತಿದ್ದಾರೆ. ಮುಂದಿನ ದಿನಮಾನಗಳಲ್ಲಿ ಕಾಂಗ್ರೆಸ್ ನಾಯಕರೇ ಈ ಸರ್ಕಾರವನ್ನು ಕೆಡವುತ್ತಾರೆ ಎಂದು ವಾಗ್ದಾಳಿ ನಡೆಸಿದರು. ಸ್ವತಃ ಎಐಸಿಸಿ ಅಧ್ಯಕ್ಷರೇ ನನ್ನ ಬಳಿ ಏನೂ ಇಲ್ಲ. ಎಲ್ಲವನ್ನು ಹೈಕಮಾಂಡ್ ನಿರ್ಣಯ ಎಂದು ಅಸಹಾಯಕತೆ ತೋಡಿಕೊಂಡಿದ್ದಾರೆ. ಅಷ್ಟರಮಟ್ಟಿಗೆ ಕಾಂಗ್ರೆಸ್ ಪಕ್ಷ ನಿಶಕ್ತವಾಗಿದೆ. ಮಹಾತ್ಮಾ ಗಾಂಧೀಜಿಯವರು ಸ್ವಾತಂತ್ರ್ಯ ನಂತರ ಕಾಂಗ್ರೆಸ್ ಅನ್ನು ವಿಸರ್ಜಿಸಬೇಕು ಎಂದು ಕರೆ ನೀಡಿದ್ದರು. ಅದರಂತೆ ಇಂದು ದೇಶದ ತೆಲಂಗಾಣ ಹಾಗೂ ಕರ್ನಾಟಕವನ್ನು ಹೊರತುಪಡಿಸಿ ಮಿಕ್ಕೆಲ್ಲ ರಾಜ್ಯಗಳಲ್ಲೂ ಕಾಂಗ್ರೆಸ್ ವಿಸರ್ಜನೆಯಾಗಿದೆ. ಮುಂದಿನ ಬಾರಿ ನಮ್ಮ ರಾಜ್ಯದಲ್ಲಿಯೂ ಕಾಂಗ್ರೆಸ್ ವಿಸರ್ಜನೆಯಾಗುವುದು ಖಚಿತ ಎಂದು ಭವಿಷ್ಯ ನುಡಿದರು.
ರಾಜ್ಯದ ಆರ್ಥಿಕ ಪರಿಸ್ಥಿತಿ ಹದಗೆಟ್ಟು ಹೋಗಿದೆ. ಶಾಸಕರು, ಅನುದಾನಕ್ಕೆ ಪಟ್ಟು ಹಿಡಿದಾಗ ಆಡಳಿತ ಪಕ್ಷದ ಶಾಸಕರಿಗೆ ₹50 ಕೋಟಿ ಹಾಗೂ ವಿಪಕ್ಷ ಶಾಸಕರಿಗೆ ₹25 ಕೋಟಿ ಅನುದಾನ ನೀಡುವುದಾಗಿ ತಿಳಿಸಿದ್ದಾರೆ. ಅದು ಕನ್ನಡಿಯೊಳಗಿನ ಗಂಟು. ಅವರು ಘೋಷಣೆ ಮಾಡಿರುವ ಅನುದಾನ ಬಿಡುಗಡೆ ಮಾಡಲು ಖಜಾನೆಯಲ್ಲಿ ದುಡ್ಡೆ ಇಲ್ಲಾ ಎಂದು ವ್ಯಂಗ್ಯವಾಡಿದರು. ಈ ವೇಳೆ ಶೇಖರಗೌಡ ಪಾಟೀಲ, ಶ್ರೀನಿವಾಸ ಹೂಗಾರ, ಅನೀಲ ಹಂಚಾಟೆ, ಹಣಮಂತ ಪೂಜಾರ ಇನ್ನಿತರರು ಇದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.