ಕಾಂಗ್ರೆಸ್‌ನಲ್ಲಿ ಆಂತರಿಕ ಕಚ್ಚಾಟದಿಂದ ರಾಜ್ಯದ ಆಡಳಿತ ಕುಸಿತ: ಬಿ.ವೈ.ವಿಜಯೇಂದ್ರ

Published : Dec 04, 2025, 08:09 PM IST
by vijayendra

ಸಾರಾಂಶ

ಕಾಂಗ್ರೆಸ್‌ನಲ್ಲಿ ಆಂತರಿಕ ಕಚ್ಚಾಟದಿಂದ ರಾಜ್ಯದ ಆಡಳಿತ ಯಂತ್ರ ಸಂಪೂರ್ಣ ಕುಸಿದಿದೆ. ಈ ನಾಡಿನ ರೈತರ ಬಗ್ಗೆ ಸರ್ಕಾರ ಅಸೆಡ್ಡೆ ತೋರುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆರೋಪಿಸಿದರು.

ಜಗಳೂರು (ಡಿ.04): ವಾರದಲ್ಲಿ ಮೂರು ದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ದೆಹಲಿಗೆ ಹೋದರೆ, ಡಿಸಿಎಂ ಡಿ.ಕೆ.ಶಿವಕುಮಾರ್ ಸಹ ದೆಹಲಿಗೆ ಹೋಗಿ ಕುಳಿತುಕೊಳ್ಳುತ್ತಾರೆ. ಕಾಂಗ್ರೆಸ್‌ನಲ್ಲಿ ಆಂತರಿಕ ಕಚ್ಚಾಟದಿಂದ ರಾಜ್ಯದ ಆಡಳಿತ ಯಂತ್ರ ಸಂಪೂರ್ಣ ಕುಸಿದಿದೆ. ಈ ನಾಡಿನ ರೈತರ ಬಗ್ಗೆ ಸರ್ಕಾರ ಅಸೆಡ್ಡೆ ತೋರುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆರೋಪಿಸಿದರು. ವಿಜಯನಗರ ಜಿಲ್ಲೆಯ ಉಜ್ಜಿನಿ ಶ್ರೀ ಮರುಳಸಿದ್ದೇಶ್ವರ ದೇವಸ್ಥಾನಕ್ಕೆ ಹೋಗುವ ಮಾರ್ಗ ಮಧ್ಯೆ ಜಗಳೂರು ಪಟ್ಟಣದಲ್ಲಿ ಮಾಜಿ ಶಾಸಕ ಎಸ್.ವಿ.ರಾಮಚಂದ್ರ ನಿವಾಸಕ್ಕೆ ಭೇಟಿ ನೀಡಿದ ವೇಳೆ ಪತ್ರಕರ್ತರೊಂದಿಗೆ ಅವರು ಮಾತನಾಡಿದರು.

ಕಾಂಗ್ರೆಸ್‌ ಸರ್ಕಾರ ಅಹಿಂದಾ ಹೆಸರಿನಲ್ಲಿ ಅಧಿಕಾರಕ್ಕೆ ಬಂದು ಅಲ್ಪ ಸಂಖ್ಯಾತರನ್ನು ಓಲೈಕೆ ಮಾಡಿಕೊಂಡು, ಎಲ್ಲ ಹಿಂದುಳಿದ ಸಮುದಾಯಕ್ಕೆ ಅನ್ಯಾಯ ಮಾಡುತ್ತಿದೆ. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್‌ ರಾಜ್ಯದಲ್ಲಿ ಅಭಿವೃದ್ಧಿ ಬಗ್ಗೆ ಚಕಾರವೆತ್ತುತ್ತಿಲ್ಲ. ಅತಿವೃಷ್ಟಿ ಸಂದರ್ಭ ಕೃಷಿ ಸಚಿವರಿರಲಿ, ಕಂದಾಯ ಸಚಿವರು ಪ್ರವಾಸ ಮಾಡಲಿಲ್ಲ ಎಂದರು. ಕಬ್ಬು ಬೆಳೆಗಾರರು ಬೀದಿಗಿಳಿದು ಹೋರಾಟ ಮಾಡಿದರೂ ಸರ್ಕಾರ ಸಮಸ್ಯೆಗೆ ಸ್ಪಂದಿಸಲಿಲ್ಲ. ಬಿಜೆಪಿಯಿಂದ ಹೋರಾಟ ಆರಂಭಿಸಿದಾಗ ಎಚ್ಚೆತ್ತ ಸಿಎಂ ಸಿದ್ದರಾಮಯ್ಯ ರೈತರು, ಕಬ್ಬು ಕಾರ್ಖಾನೆ ಮಾಲೀಕರ ಸಭೆ ನಡೆಸಿ ಟನ್‌ಗೆ ₹2300 ಅಂತ ತೀರ್ಮಾನ ಮಾಡಿದರು.

ಅದೂ ಸಹ ಇನ್ನು ಬಗೆಹರಿದಿಲ್ಲ. ಮೆಕ್ಕೆಜೋಳ, ಭತ್ತ ಖರೀದಿ ಕೇಂದ್ರ ಬಗ್ಗೆ ಸರಕಾರ ತೀರ್ಮಾನ ತೆಗೆದುಕೊಂಡಿಲ್ಲ. ಸರ್ಕಾರದಲ್ಲೇ ಗೊಂದಲಮಯ ವಾತಾವರಣ ನಿರ್ಮಾಣವಾಗಿದೆ ಎಂದು ಟೀಕಿಸಿದರು. ಶಾಸಕ ಅಜಯ್ ಸಿಂಗ್ ಸಿಎಂ ಬದಲಾವಣೆ ಡಿಸೆಂಬರ್, ಜನವರಿ, ಫೆಬ್ರವರಿ ಎಂದು ಸ್ಫೋಟಕ ಹೇಳಿಕೆ ನೀಡಿದ್ದಾರಲ್ಲ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ, ಸಿದ್ದರಾಮಯ್ಯನವರ ಕುರ್ಚಿ ಅಭದ್ರವಾಗಿದೆ ಎಂದು ಎಲ್ಲರೂ ಒಪ್ಪಿಕೊಂಡಂತಾಗಿದೆ. ಆನಂತರ ಯಾರು ಸಿಎಂ ಆಗ್ತಾರೆ ಎಂಬುದು ಪ್ರಶ್ನಾರ್ಥಕವಾಗಿದೆ. ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳ ಹೆಸರು ಹೆಸರು ಹೇಳಿಕೊಂಡು ರಾಜ್ಯದಲ್ಲಿ ಅಭಿವೃದ್ಧಿ ಕೆಲಸ ಮಾಡುತ್ತಿಲ್ಲ. ಯಾರೇ ಬಂದರೂ ಅಭಿವೃದ್ಧಿ ಮಾಡುವುದಿಲ್ಲ ಎಂಬುದು ಪರಮಸತ್ಯ ಎಂದು ವಿಜಯೇಂದ್ರ ಛಾಟಿ ಬೀಸಿದರು.

ಈ ವೇಳೆ ಮಾಜಿ ಶಾಸಕರಾದ ಎಸ್.ವಿ.ರಾಮಚಂದ್ರ, ಎಚ್.ಪಿ.ರಾಜೇಶ್, ಬಿಜೆಪಿ ಮಂಡಲ ಅಧ್ಯಕ್ಷ ಎ.ಎಂ.ಆರಾಧ್ಯ, ಬಿಜೆಪಿ ಮುಖಂಡರಾದ ಪಲ್ಲಾಗಟ್ಟೆ ಮಹೇಶ್, ಅರಿಶಿಣಗುಂಡಿ ರಾಜಣ್ಣ, ಕಟ್ಟಿಗೆಹಳ್ಳಿ ಮಂಜುನಾಥ್, ಸೊಕ್ಕೆ ನಾಗರಾಜ್, ಬಿಸ್ತುವಳ್ಳಿ ಬಾಬು, ದೇವಿಕೆರೆ ಶಿವಕುಮಾರಸ್ವಾಮಿ, ಅರಸಿಕೆರೆ ಭಾಗದ ಕೆಂಚನಗೌಡ, ಸಿದ್ದಪ್ಪ, ಮುರುಗೇಶ್, ಬಾಣೇಶ್ ಸೇರಿದಂತೆ ನೂರಾರು ಕಾರ್ಯಕರ್ತರು ಇದ್ದರು.

ಡಿಕೆಶಿ ಬಿಜೆಪಿ ಸೇರುತ್ತಾರೆ ಅನ್ನೊದೇ ಅರ್ಥಹೀನ

ಡಿ.ಕೆ.ಶಿವಕುಮಾರ್ ಬಿಜೆಪಿ ಸೇರುತ್ತಾರೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಎಲ್ಲವೂ ಅರ್ಥಹೀನ ಮತ್ತು ತರ್ಕಹೀನ ಚರ್ಚೆಗಳು. ಜನರು ನಮ್ಮನ್ನು ವಿರೋಧ ಪಕ್ಷದಲ್ಲಿ ಕೂರಿಸಿದ್ದಾರೆ. ಪ್ರತಿಪಕ್ಷದಲ್ಲಿ ಕುಳಿತುಕೊಂಡು ಯಾವ ರೀತಿ ಕೆಲಸ ಮಾಡಬೇಕೋ ಅದನ್ನು ನಮ್ಮ ಪಕ್ಷ ಮಾಡುತ್ತಿದೆ ಎಂದರು. ನಿಮ್ಮದೇ ಪಕ್ಷದ ಶಾಸಕ ರಮೇಶ್ ಜಾರಕಿಹೊಳಿ ನೇತೃತ್ವದಲ್ಲಿ ನಿಮ್ಮ ವಿರುದ್ಧ ದೆಹಲಿಗೆ ಒಂದು ತಂಡವೇ ಹೋಗಿದೆ ಎನ್ನಲಾಗುತ್ತಿದೆಯಲ್ಲ ಎಂಬ ಪ್ರಶ್ನೆಗೆ ವಿಜಯೇಂದ್ರ ಪ್ರತಿಕ್ರಿಯಿಸಿ, 'ನಾನೇ ಅವರಿಗೆ ವಿಮಾನ ಟಿಕೆಟ್ ಮಾಡಿಸಿಕೊಟ್ಟಿದ್ದು' ಎಂದು ಟಾಂಟ್ ನೀಡಿ, ನಗೆ ಚಟಾಕಿ ಹಾರಿಸಿದರು.

ರೆಬಲ್ ಟೀಂ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಭೇಟಿ ಮಾಡಿದ್ದಾರೆ ಎಂಬ ಪ್ರಶ್ನೆಗೆ ಎಚ್‌ಡಿಕೆ ಕೇಂದ್ರ ಸಚಿವರಿದ್ದಾರೆ. ಅವರನ್ನು ಯಾರು ಬೇಕಾದರೂ ಭೇಟಿ ಮಾಡಬಹುದು. ಬೆಳಗಾವಿ ಅಧಿವೇಶನದ ಮೊದಲ ದಿನವೇ ಡಿ.8ರಂದೇ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ. ಕಬ್ಬು, ಮೆಕ್ಕೆಜೋಳ, ಭತ್ತ ಸೇರಿ ಎಲ್ಲ ರೈತರು ಸಮಸ್ಯೆಗಳ ಸುಳಿಯಲ್ಲಿದ್ದಾರೆ. ಎಲ್ಲ ನೀರಾವರಿ ಯೋಜನೆಗಳ ಕುರಿತು ವಿಪಕ್ಷ ನಾಯಕ ಆರ್.ಅಶೋಕ್, ಎಚ್‌ಡಿಕೆ ಸೇರಿದಂತೆ ಎಲ್ಲರೂ ಚರ್ಚೆ ಮಾಡುತ್ತೇವೆ ಎಂದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

'ಸತೀಶಣ್ಣ ಸಣ್ಣ ಮಗುವಿದ್ದಂತೆ, ಸಮುದಾಯಕ್ಕೆ ಅನ್ಯಾಯವಾದಗಲೂ ಕೇಳಲ್ಲ': ಜಾರಕಿಹೊಳಿ ವಿರುದ್ಧ ಶ್ರೀರಾಮುಲು ವಾಗ್ದಾಳಿ!
ಸಿಎಂ ಬದಲಾವಣೆ ವಿಚಾರದಲ್ಲಿ ಸಿದ್ದು ಬಿಟ್ಟು ಉಳಿದವರ ಮಾತು ನಗಣ್ಯ: ಡಿ.ಕೆ.ಶಿವಕುಮಾರ್