ಪುತ್ರನಿಗೆ ತಪ್ಪಿದ ಟಿಕೆಟ್‌: ಯಡಿಯೂರಪ್ಪರಿಂದ ಮೋಸ, ಈಶ್ವರಪ್ಪ ಆಕ್ರೋಶ

Published : Mar 14, 2024, 04:30 AM ISTUpdated : Mar 14, 2024, 01:49 PM IST
ಪುತ್ರನಿಗೆ ತಪ್ಪಿದ ಟಿಕೆಟ್‌: ಯಡಿಯೂರಪ್ಪರಿಂದ ಮೋಸ, ಈಶ್ವರಪ್ಪ ಆಕ್ರೋಶ

ಸಾರಾಂಶ

ತಮ್ಮ ಪುತ್ರ ಕೆ.ಇ.ಕಾಂತೇಶ್‌ ಗೆ ಹಾವೇರಿ ಲೋಕಸಭಾ ಕ್ಷೇತ್ರದ ಟಿಕೆಟ್ ತಪ್ಪುತ್ತಿದ್ದಂತೆ ತೀವ್ರ ಅಸಮಾಧಾನ ಗೊಂಡಿರುವ ಅವರು ಬಿ.ಎಸ್.ಯಡಿಯೂರಪ್ಪ ನನಗೆ ಮೋಸ ಮಾಡಿದರು ಎಂದೂ ಆಕ್ರೋಶ ಹೊರಹಾಕಿದ ಕೆ.ಎಸ್. ಈಶ್ವರಪ್ಪ 

ಶಿವಮೊಗ್ಗ(ಮಾ.14): ಈಗಲೂ ನನಗೆ ಬಿಜೆಪಿ ಪಕ್ಷ ತಾಯಿ ಇದ್ದಂತೆ. ಆದರೆ ಪಕ್ಷ ಕೆಲವೊಮ್ಮೆ ದಾರಿ ತಪ್ಪಿ ಹೋಗುತ್ತಿದೆ ಎಂದು ಅನಿಸಿದಾಗ ಕೆಲವೊಂದು ನಿರ್ಧಾರಗಳನ್ನು ಕೈಗೊಳ್ಳ ಬೇಕಾಗುತ್ತದೆ. ಈ ದೃಷ್ಟಿಯಲ್ಲಿ ನಾನು ರಾಜಕೀಯ ನಿರ್ಧಾರಕ್ಕೆ ಬರುವ ಸಾಧ್ಯತೆ ಇದೆ ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತಮ್ಮ ಪುತ್ರ ಕೆ.ಇ.ಕಾಂತೇಶ್‌ ಗೆ ಹಾವೇರಿ ಲೋಕಸಭಾ ಕ್ಷೇತ್ರದ ಟಿಕೆಟ್ ತಪ್ಪುತ್ತಿದ್ದಂತೆ ತೀವ್ರ ಅಸಮಾಧಾನ ಗೊಂಡಿರುವ ಅವರು ಬಿ.ಎಸ್.ಯಡಿಯೂರಪ್ಪ ನನಗೆ ಮೋಸ ಮಾಡಿದರು ಎಂದೂ ಆಕ್ರೋಶ ಹೊರಹಾಕಿದ್ದಾರೆ.

ಮೋದಿ ಮತ್ತೆ ಪ್ರಧಾನಿಯಾಗಲು ಶ್ರಮ: ನಳಿನ್‌ ಕುಮಾರ್ ಕಟೀಲ್‌

ಬಿಜೆಪಿ ಪಕ್ಷ ಉಳಿಯಬೇಕು. ಭವಿಷ್ಯದಲ್ಲಿ ಇದಕ್ಕೆ ಇನ್ನೂ ಉಜ್ವಲ ಭವಿಷ್ಯ ರೂಪುಗೊಳ್ಳಬೇಕು ಎಂಬ ಉದ್ದೇಶ ನಮ್ಮದು. ಪಕ್ಷ ತನ್ನ ಅಂಕುಡೊಂಕು ತಿದ್ದಿಕೊಳ್ಳಬೇಕು. ಈ ವಿಷಯದಲ್ಲಿ ರಾಜ್ಯದಲ್ಲೀಗ ಚರ್ಚೆ ಆರಂಭವಾಗಿದೆ ಎಂದ ಅವರು, ಪಕ್ಷದ ದೋಷಗಳು ಸರಿ ಹೋಗಬೇಕಾಗಿದೆ. ನಾನು ಸ್ಪರ್ಧೆ ಮಾಡುವುದರಿಂದ ಒಳ್ಳೆಯದಾಗುತ್ತದೆಯೋ, ಕೆಟ್ಟದ್ದಾಗುತ್ತದೆಯೋ ಎಂಬುದು ಕೂಡ ಚರ್ಚೆಯಾಗಿದೆ ಎಂದವರು ಹೇಳಿದರು.

ಇನ್ನು, ಮಾಧ್ಯಮಗಳಿಗೆ ಇರುವ ಕುತೂಹಲ ರಾಜ್ಯದ ಜನತೆಗೂ ಇದೆ. ಆದರೆ ನಾನು ಇದುವರೆಗೆ ಎಲ್ಲಿಯೂ ಪಕ್ಷ ಬಿಡುವ ಅಥವಾ ಸ್ವತಂತ್ರವಾಗಿ ಸ್ಪರ್ಧಿಸುವ ಮಾತನಾಡಿಲ್ಲ. ನಾನು ಇಂದು ಕರೆದ ಪತ್ರಿಕಾಗೋಷ್ಠಿ ಕುರಿತು ಹೈಕಮಾಂಡ್‌ ನ ಕೆಲ ನಾಯಕರಿಗೂ ಕುತೂಹಲ ಮೂಡಿರಲಿಕ್ಕೆ ಸಾಕು. ಆದರೆ ನಾನು ಈ ಕ್ಷಣದಲ್ಲಿ ಏನನ್ನೂ ಹೇಳುವುದಿಲ್ಲ ಎಂದರು.

ಇನ್ನು, ಗೋಷ್ಠಿಯುದ್ದಕ್ಕೂ ಪ್ರಧಾನಿ ನರೇಂದ್ರ ಮೋದಿಯವರನ್ನು ಹೊಗುಳುತ್ತಾ, ಅವರ ಆಳ್ವಿಕೆ ಮುಂದುವರೆಯಬೇಕೆನ್ನುತ್ತಲೇ ತಮ್ಮ ನಿಲುವನ್ನು ಕೂಡ ಸ್ಪಷ್ಟ ವಾಗಿ ಹೇಳದೆ ಹೋದರೂ, ಪರೋಕ್ಷವಾಗಿ ರಾಜಕೀಯ ನಿರ್ಧಾರವೊಂದನ್ನು ಶೀಘ್ರ ಕೈಗೊಳ್ಳುವ ಸೂಚನೆ ನೀಡಿದರು.

ನನಗೆ ಎಂಪಿ ಆಗಬೇಕು ಅಥವಾ ಅಧಿಕಾರ ಬೇಕು ಎಂಬ ಹಪಾಹಪಿ ಇಲ್ಲ. ಕುರ್ಚಿಗಾಗಿ ಕೂಡ ಚಟುವಟಿಕೆ ನಡೆಯುತ್ತಿಲ್ಲ. ನನ್ನ ರಾಜಕೀಯ ಭವಿಷ್ಯ ಮತ್ತು ರಾಜ್ಯದ ಭವಿಷ್ಯಕ್ಕಾಗಿ ಮಾತ್ರ ಕೆಲವೊಂದು ಘಟನೆಗಳು ನಡೆಯಬಹುದು ಎಂದು ಸೂಚ್ಯವಾಗಿಯೇ ಹೇಳಿದರು.

ತಮ್ಮ ಪುತ್ರನಿಗೆ ತಾವು ಮೊದಲು ಟಿಕೆಟ್ ಕೇಳಿರಲಿಲ್ಲ. ಸ್ವತಃ ಯಡಿಯೂರಪ್ಪ ಅವರೇ ಹಾವೇರಿಯಲ್ಲಿ ಉದಾಸಿ ತಾವು ರಾಜಕೀಯದಿಂದ ನಿವೃತ್ತಿ ಹೊಂದುತ್ತೇನೆ ಎಂದು ಹೇಳಿದ ಬಳಿಕ ಕಾಂತೇಶ್ ಅಲ್ಲಿಂದ ಸ್ಪರ್ಧಿಸಲಿ. ಅವನಿಗೆ ಟಿಕೆಟ್ ಕೊಡಿಸಿ, ಗೆಲ್ಲಿಸಿಕೊಂಡು ಬರುವುದು ನನ್ನ ಜವಾಬ್ದಾರಿ ಎಂದಿದ್ದರು. ಹೀಗಾಗಿ ಆ ಕ್ಷೇತ್ರ ದಲ್ಲಿ ಓಡಾಡಿ ಪಕ್ಷ ಸಂಘಟಿಸಿದ್ದೇವೆ ಎಂದವರು ಹೇಳಿದರು.

ಯಡಿಯೂರಪ್ಪ ಮೋಸ ಮಾಡಿದರು:

ಟಿಕೆಟ್‌ ಪಟ್ಟಿ ಪ್ರಕಟಗೊಳ್ಳುತ್ತಿದ್ದಂತೆ ಮೊದಲ ಪ್ರತಿಕ್ರಿಯೆ ನೀಡಿದ ಈಶ್ವರಪ್ಪ, ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಹಾವೇರಿ ಕ್ಷೇತ್ರದಿಂದ ಕಾಂತೇಶ್‌ಗೆ ಟಿಕೆಟ್ ಕೊಡಿಸಿ ಗೆಲ್ಲಿಸಿಕೊಂಡು ಬರುವುದಾಗಿ ಹೇಳಿದ್ದರು. ಈಗ ಅವರು ಮಾತಿಗೆ ತಪ್ಪಿದ್ದಾರೆ ಎಂದು ದೂರಿದರು. ಇನ್ನು, ಕಾಂತೇಶ್ ಪರ ಅಮಿತ್‌ ಶಾ ಜೊತೆ ಮಾತನಾಡುತ್ತೇನೆ. ಈಶ್ವರಪ್ಪ ನನ್ನ ಜೊತೆ ಬರಲಿ ಎಂಬ ಮಾತೆಗಳೆಲ್ಲ ಬರೀ ನಾಟಕ. ಇದುವರೆಗೆ ನಾಟಕದ ಮಾತುಗಳನ್ನೇ ಆಡಿದರು ಎಂದು ಯಡಿಯೂರಪ್ಪ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

15ಕ್ಕೆ ಹಿತೈಷಿಗಳ ಸಭೆ, ನಿರ್ಧಾರ:

 ತಮ್ಮ ಪುತ್ರನಿಗೆ ಹಾವೇರಿ ಟಿಕೆಟ್ ದೊರಕದ ಹಿನ್ನೆಲೆ ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ತಮ್ಮ ಮುಂದಿನ ನಡೆಯ ಕುರಿತು ನಿರ್ಧಾರ ಕೈಗೊಳ್ಳಲು ಮಾ.15ರ ಶುಕ್ರವಾರ ಸಂಜೆ ನಗರದ ಬಾಲರಾಜ ಅರಸ್ ರಸ್ತೆಯಲ್ಲಿರುವ ಬಂಜಾರ ಸಮುದಾಯ ಭವನದಲ್ಲಿ ತಮ್ಮ ಬೆಂಬಲಿಗರ ಸಭೆ ಕರೆದಿದ್ದಾರೆ. ಸಭೆಯಲ್ಲಿ ನಾನು ಭಾಗವಹಿಸುವೆ. ಸಭೆಯಲ್ಲಿ ಬೆಂಬಲಿಗರು, ಹಿತೈಷಿಗಳು ಕೊಡುವ ಸಲಹೆಯನ್ನು ಪರಿಗಣಿಸಿ, ಹಿರಿಯರ ಜೊತೆ ಚರ್ಚಿಸಿ ಮುಂದಿನ ರಾಜಕೀಯ ನಿರ್ಧಾರ ಕೈಗೊಳ್ಳುತ್ತೇನೆ ಎಂದವರು ತಿಳಿಸಿದರು.

ಪಕ್ಷ ನನಗೆ ಸಂಸ್ಕಾರ ಕಲಿಸಿದೆ. ಯಾವುದೇ ವಿಷಯವನ್ನು ನಾಲ್ಕುಗೋಡೆ ಮಧ್ಯೆ ಚರ್ಚಿಸುವಂತೆ ಪಾಠ ಹೇಳಿದೆ. ಹೀಗಾಗಿ ಇಂತಹ ವಿಷಯದಲ್ಲಿ ಈಗ ನಾನು ಬಹಿರಂಗವಾಗಿ ಏನೂ ಹೇಳುವುದಿಲ್ಲ ಎಂದರು. ರಾಜ್ಯಾದ್ಯಂತ ಅಭಿಮಾನಿಗಳು, ಬೆಂಬಲಿಗರು, ಹಿತೈಷಿಗಳು ದೂರವಾಣಿ ಕರೆ ಮಾಡಿ ಆತಂಕ ವ್ಯಕ್ತಪಡಿಸುತ್ತಿ ದ್ದಾರೆ. ನಿಮಗೆ ಅನ್ಯಾಯವಾಗುತ್ತಿದೆ ಎಂದು ಹೇಳು ತ್ತಿದ್ದಾರೆ. ಬೇರೆಯದೇ ರಾಜಕೀಯ ನಿರ್ಧಾರ ಕೈಗೊಳ್ಳಿ, ಸ್ವತಂತ್ರವಾಗಿ ಸ್ಪರ್ಧಿಸಿ ಎಂದು ಹೇಳುತ್ತಿದ್ದಾರೆ. ಆದರೆ ನಾನು ಇದುವರೆಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ತಿಳಿಸಿದರು.

ರಾಘವೇಂದ್ರ ಬೆಂಬಲಿಗರಿಂದ ಸಂಭ್ರಮಾಚರಣೆ

ಶಿವಮೊಗ್ಗ: ಹಾಲಿ ಸಂಸದ ಬಿ. ವೈ.ರಾಘವೇಂದ್ರ ಅವರಿಗೆ ಶಿವಮೊಗ್ಗ ಲೋಕಸಭಾ ಟಿಕೆಟ್‌ ಘೋಷಣೆಯಾಗುತ್ತಿದ್ದಂತೆ ಅವರ ಅಭಿಮಾನಿಗಳು ಮತ್ತು ಬೆಂಬಲಿಗರು ರಾಘವೇಂದ್ರ ಅವರ ವಿನೋಬನಗರದ ಮನೆಯೆದುರು ಸಂಭ್ರಮಾಚರಣೆ ನಡೆಸಿದರು.
ರಾಘವೇಂದ್ರ ಅವರನ್ನು ಹೆಗಲ ಮೇಲೆ ಹೊತ್ತು ಸಂಭ್ರಮಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಪಕ್ಷ ನನ್ನ ಕೆಲಸ ಗುರುತಿಸಿ ಪುನಃ ಟಿಕೆಟ್‌ ನೀಡಿದೆ. ಈ ಮೂಲಕ ಇನ್ನಷ್ಟು ಜವಾಬ್ದಾರಿ ಹೆಚ್ಚಿದೆ. ಕೆಲಸ ಮಾಡುವ ಹುಮ್ಮನಸ್ಸು ಕೂಡ ಹೆಚ್ಚಿದೆ ಎಂದರು.

ಕಳೆದ ಬಾರಿಗಿಂತ ಹೆಚ್ಚಿನ ಮತಗಳ ಅಂತರದಿಂದ ಗೆಲ್ಲುವುವುದು ನಿಶ್ಚಿತ. ಕಾರ್ಯಕರ್ತರ ಪರಿಶ್ರಮ, ಹಿರಿಯರ ಆಶೀರ್ವಾದದಿಂದ ಪಕ್ಷದ ವರಿಷ್ಠರ ನಂಬಿಕೆ ಯನ್ನು ಉಳಿಸಿಕೊಳ್ಳುತ್ತೇನೆ. ಪ್ರಧಾನಿ ನರೇಂದ್ರ ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿಸುವುದು ನಮ್ಮೆಲ್ಲರ ಗುರಿ ಎಂದರು.

ನನಗೆ ಟಿಕೆಟ್‌ ಸಿಕ್ಕಿದ್ದು ಕಾರ್ಯಕರ್ತರಿಗೆ ಸಿಕ್ಕಂತೆ: ವಿಜಯಪುರ ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ಹರ್ಷ

ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಟಿ.ಡಿ.ಮೇಘರಾಜ್, ಡಾ.ಧನಂಜಯ್ ಸರ್ಜಿ,ಮಂಗೋಟೆ ರುದ್ರೇಶ್, ಮಾಲತೇಶ್ ಮತ್ತಿತರರು ಉಪಸ್ಥಿತರಿದ್ದರು.

2009 ರಲ್ಲಿ ಮಾಜಿ ಸಿ.ಎಂ.ಎಸ್.ಬಂಗಾರಪ್ಪನವರ ವಿರುದ್ಧ ಮೊದಲ ಬಾರಿಗೆ ಸ್ಪರ್ಧಿಸಿ 50 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸುವ ಮೂಲಕ ರಾಷ್ಟ್ರ ರಾಜಕಾರಣ ಪ್ರವೇಶಿಸಿದ್ದ ರಾಘವೇಂದ್ರ ಅವರು 2018 ರಲ್ಲಿ ಸಂಸದರಾಗಿದ್ದ ಯಡಿಯೂರಪ್ಪ ರಾಜೀನಾಮೆ ನೀಡಿದ ಕಾರಣ ನಡೆದ ಉಪ ಚುನಾವಣೆಯಲ್ಲಿ ಸ್ಪರ್ಧಿಸಿ ಮಧು ಬಂಗಾರಪ್ಪ ಅವರನ್ನು ಸೋಲಿಸಿದ್ದರು. ನಂತರ 201 ರ ಲೋಕಸಭಾ ಚುನಾವಣೆಯಲ್ಲಿ ಪುನಃ ಸ್ಪರ್ಧಿಸಿ ಸುಮಾರು ಎರಡೂ ಕಾಲು ಲಕ್ಷ ಮತಗಳ ಅಂತರದಿಂದ ಮಧು ಬಂಗಾರಪ್ಪ ಅವರನ್ನು ಸೋಲಿಸಿ ಗೆಲುವಿನ ಪತಾಕೆ ಹಾರಿಸಿದ್ದರು. ಇದೀಗ ಪುನಃ ಆಯ್ಕೆ ಬಯಸಿ ಕಣಕ್ಕೆ ಇಳಿದಿದ್ದಾರೆ. ಟಿಕೆಟ್‌ ಪ್ರಕಟಗೊಳ್ಳುತ್ತಿದ್ದಂತೆ ಹಾಲಿ ಸಂಸದ ಬಿ.ವೈ.ರಾಘವೇಂದ್ರ ಅವರನ್ನು ಹೆಗಲ ಮೇಲೆ ಹೊತ್ತು ಅವರ ಅಭಿಮಾನಿಗಳು ಸಂಭ್ರಮಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಬೆಳಗಾವಿಯ 31 ಕೃಷ್ಣಮೃಗ ಸಾವಿಗೆ ಸಿಬ್ಬಂದಿ ನಿರ್ಲಕ್ಷ್ಯ ಕಾರಣವಲ್ಲ: ಸಚಿವ ಈಶ್ವರ್ ಖಂಡ್ರೆ
ಸಿಎಂ ರೇಸಲ್ಲಿ ಡಿಕೆಶಿ ಒಬ್ಬರೇ ಇಲ್ಲ, ಎಚ್‌ಕೆ, ಪರಂ, ಎಂಬಿಪಾ ಕೂಡ ಅರ್ಹ ಇದ್ದಾರೆ: ಕೆ.ಎನ್‌.ರಾಜಣ್ಣ