
ಬೆಂಗಳೂರು (ನ.02): ಪಕ್ಷದ ರಾಜ್ಯಾಧ್ಯಕ್ಷ ಹುದ್ದೆ ಮತ್ತು ಪ್ರತಿಪಕ್ಷ ನಾಯಕನ ಆಯ್ಕೆ ಬಾಕಿ ಉಳಿದಿರುವ ಮಧ್ಯೆಯೇ ಬಿಜೆಪಿ ವರಿಷ್ಠರು ರಾಜ್ಯ ಘಟಕದ ಮೂವರು ಇತರ ಹಿಂದುಳಿದ ವರ್ಗದ (ಒಬಿಸಿ) ನಾಯಕರಿಗೆ ದೆಹಲಿಗೆ ಬರುವಂತೆ ಸೂಚನೆ ನೀಡಿರುವುದು ಕುತೂಹಲ ಮೂಡಿಸಿದೆ. ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ, ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಸಂಸದ ಪಿ.ಸಿ.ಮೋಹನ್ ಅವರಿಗೆ ಸೂಚನೆ ಬಂದಿದ್ದು, ಗುರುವಾರ ಬೆಳಗ್ಗೆ ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ. ಆದರೆ, ಈ ನಾಯಕರು ಯಾರನ್ನು ಭೇಟಿ ಮಾಡುತ್ತಾರೆ ಎಂಬುದರ ಮಾಹಿತಿಯಿಲ್ಲ. ಪಕ್ಷದ ಕಚೇರಿಗೆ ಆಗಮಿಸುವಂತೆ ಇವರಿಗೆ ಎರಡು ದಿನಗಳ ಹಿಂದೆ ದೂರವಾಣಿ ಮೂಲಕ ಸಂದೇಶ ತಲುಪಿದೆ. ಪಕ್ಷದ ಕಚೇರಿಯಲ್ಲೇ ಸಭೆ ಇದೆ ಎಂದು ಮೂಲಗಳು ತಿಳಿಸಿವೆ.
ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಪ್ರಬಲ ಲಿಂಗಾಯತ, ಒಕ್ಕಲಿಗ ಸಮುದಾಯಗಳ ಜತೆಗೆ ಇತರ ಹಿಂದುಳಿದ ವರ್ಗಗಳ ಒಲವು ಗಳಿಸುವ ಬಗ್ಗೆ ಇದೀಗ ಪಕ್ಷದಲ್ಲಿ ಆಂತರಿಕವಾಗಿ ಚರ್ಚೆ ನಡೆಯುತ್ತಿದೆ. ಮೇಲಾಗಿ ರಾಜ್ಯಾಧ್ಯಕ್ಷ ಹಾಗೂ ಪ್ರತಿಪಕ್ಷದ ನಾಯಕ ಹುದ್ದೆಗಳಿಗೆ ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯಗಳ ನಾಯಕರ ಹೆಸರುಗಳು ಮಾತ್ರ ಚರ್ಚೆಯಾಗುತ್ತಿರುವ ಬಗ್ಗೆ ಪಕ್ಷದ ಹಿಂದುಳಿದ ವರ್ಗಗಳ ಮುಖಂಡರು ಹಾಗೂ ಕಾರ್ಯಕರ್ತರಲ್ಲಿ ಅಸಮಾಧಾನ ಹೊಗೆಯಾಡುತ್ತಿರುವುದೂ ವರಿಷ್ಠರ ಕಿವಿಗೆ ತಲುಪಿದೆ ಎನ್ನಲಾಗಿದೆ.
ಡಿಕೆಶಿ, ಭೈರತಿ, ಪಾಟೀಲ್ ರಾಜೀನಾಮೆ ನೀಡಲಿ: ಕೆ.ಎಸ್.ಈಶ್ವರಪ್ಪ ಆಗ್ರಹ
ಇದೇ ವೇಳೆ ಇದೇ ತಿಂಗಳಾಂತ್ಯದಲ್ಲಿ ಹಿಂದುಳಿದ ವರ್ಗಗಳ ಆಯೋಗವು ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ವರದಿಯನ್ನು (ಜಾತಿ ಜನಗಣತಿ ವರದಿ) ರಾಜ್ಯ ಸರ್ಕಾರಕ್ಕೆ ಸಲ್ಲಿಸಲಿದ್ದು, ಅದನ್ನು ಸ್ವೀಕರಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಹಿರಂಗವಾಗಿಯೇ ಹೇಳಿರುವುದು ಬಿಜೆಪಿ ವರಿಷ್ಠರನ್ನು ಯೋಚನೆಗೀಡು ಮಾಡಿದೆ. ಹೀಗಾಗಿ, ಈ ವರದಿಯಿಂದ ಬಿಜೆಪಿಗೆ ಏನೇನು ಅನುಕೂಲ ಹಾಗೂ ಅನಾನುಕೂಲವಾಗಬಹುದು ಎಂಬುದರ ಬಗ್ಗೆ ರಾಜ್ಯದ ಹಿಂದುಳಿದ ವರ್ಗಗಳ ನಾಯಕರೊಂದಿಗೆ ಸಮಾಲೋಚನೆ ನಡೆಸಲು ವರಿಷ್ಠರು ಬಯಸಿರಬಹುದು ಎಂಬ ಮಾತೂ ಕೇಳಿಬಂದಿದೆ.
ಬಿಜೆಪಿ ಸ್ವತಂತ್ರವಾಗಿ ಅಧಿಕಾರಕ್ಕೆ ತರಲು ಈಶ್ವರಪ್ಪ ಕೊಡುಗೆಯೇನು: ಆಯನೂರು ಮಂಜುನಾಥ್
ದೆಹಲಿ ಭೇಟಿಗೆ ಪೂರಕವಾಗಿ ಈಶ್ವರಪ್ಪ ಅವರು ಬುಧವಾರ ಪಕ್ಷದ ರಾಜ್ಯ ಘಟಕದ ಕಚೇರಿಗೆ ಆಗಮಿಸಿ ಸಂಘಟನಾ ಪ್ರಧಾನ ಕಾರ್ಯದರ್ಶಿ ಜಿ.ವಿ.ರಾಜೇಶ್ ಅವರೊಂದಿಗೆ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಮಾತುಕತೆ ನಡೆಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದ ಸೂಚನೆ ಮೇರೆಗೆ ನಾನು ಗುರುವಾರ ದೆಹಲಿಗೆ ಹೋಗುತ್ತಿದ್ದೇನೆ. ನನ್ನ ಜೊತೆಗೆ ಕೋಟ ಶ್ರೀನಿವಾಸ ಪೂಜಾರಿ ಮತ್ತು ಪಿ.ಸಿ.ಮೋಹನ್ ಅವರನ್ನೂ ಕರೆದಿದ್ದಾರೆ. ಆದರೆ, ಯಾಕೆ ಎಂಬುದು ಮಾತ್ರ ಗೊತ್ತಿಲ್ಲ. ದೆಹಲಿಗೆ ಹೋದ ಮೇಲೆಯೇ ಗೊತ್ತಾಗುತ್ತದೆ ಎಂದು ತಿಳಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.