ಕೆಪಿಟಿಸಿಎಲ್‌ ಪರೀಕ್ಷೆ ಅಕ್ರಮ ರಾಜ್ಯ ಸರ್ಕಾರದ ಸಾಧನೆ: ಡಿಕೆಶಿ

By Govindaraj SFirst Published Aug 23, 2022, 5:15 AM IST
Highlights

ಕೆಪಿಟಿಸಿಎಲ್‌ ಕಿರಿಯ ಸಹಾಯಕ ಹುದ್ದೆ ನೇಮಕಾತಿಗೆ ನಡೆದ ಪರೀಕ್ಷೆಯಲ್ಲೂ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ. ಇದು ಸರ್ಕಾರದ ಹಗರಣಗಳ ಸಾಧನೆಯೇ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ವ್ಯಂಗ್ಯವಾಡಿದ್ದಾರೆ. 

ಬೆಂಗಳೂರು (ಆ.23): ಕೆಪಿಟಿಸಿಎಲ್‌ ಕಿರಿಯ ಸಹಾಯಕ ಹುದ್ದೆ ನೇಮಕಾತಿಗೆ ನಡೆದ ಪರೀಕ್ಷೆಯಲ್ಲೂ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ. ಇದು ಸರ್ಕಾರದ ಹಗರಣಗಳ ಸಾಧನೆಯೇ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ವ್ಯಂಗ್ಯವಾಡಿದ್ದಾರೆ. ಈ ಬಗ್ಗೆ ಟ್ವೀಟ್‌ ಮಾಡಿರುವ ಅವರು, ತಂದೆ-ಮಗ ಪರೀಕ್ಷಾ ಕೇಂದ್ರಕ್ಕೆ ಬಂದು ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿದ್ದಾರೆ. ಇದು ಸರ್ಕಾರದ ಸಾಧನೆಯೇ. ಬಿಜೆಪಿ ಆಡಳಿತಾವಧಿಯಲ್ಲಿ ಹಗರಣಗಳ ಸಂಖ್ಯೆ ಆಕಾಶದತ್ತ ಮುಖ ಮಾಡುತ್ತಲೇ ಇದೆ. ಪ್ರತಿಯೊಂದು ವಿಚಾರಕ್ಕೂ ‘ಕಠಿಣ ಕ್ರಮ’ ಕೈಗೊಳ್ಳುವ ಸರ್ಕಾರ ಈ ವಿಚಾರದಲ್ಲಿ ಮೌನವವ್ರತ ಆಚರಿಸುತ್ತಿದೆಯೇ ಎಂದು ಪ್ರಶ್ನಿಸಿದ್ದಾರೆ.

ನಿರುದ್ಯೋಗ ಸಮಸ್ಯೆ ಎಲ್ಲರ ಊಹೆಗೂ ಮೀರಿ ಬೆಳೆಯುತ್ತಿದೆ. ಹೀಗಿರುವಾಗ ಇಂತಹ ಹಗರಣಗಳು ಪದೇ ಪದೇ ನಡೆಯುತ್ತಿದ್ದರೆ ಉದ್ಯೋಗಾಕಾಂಕ್ಷಿಗಳ ಗತಿಯೇನು. ಕಠಿಣ ಕ್ರಮ ಎನ್ನುವುದು ಬಿಜೆಪಿ ಸರ್ಕಾರದ ಮಾತಿಗೆ ಸೀಮಿತವಾಗಿರದೆ ಅನುಷ್ಠಾನಕ್ಕೆ ಬರಬೇಕು ಎಂದು ಶಿವಕುಮಾರ್‌ ಒತ್ತಾಯಿಸಿದ್ದಾರೆ. ಕೆಪಿಟಿಸಿಎಲ್‌ ಪರೀಕ್ಷಾ ಅಕ್ರಮದಲ್ಲಿ ಭಾಗಿಯಾದವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಮುಂದೆ ಇಂತಹ ಪ್ರಮಾದ ನಡೆಯದಂತೆ ಸರ್ಕಾರ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಧರ್ಮ ವಿಭಜನೆ ಬಗ್ಗೆ ನಾನೂ ವಿರೋಧಿಸಿದ್ದೆ, ಅದು ತಪ್ಪು ಎಂದಿದ್ದೆ: ಡಿಕೆಶಿ

ಕೆಪಿಟಿಸಿಎಲ್‌ ಪರೀಕ್ಷೆಯಲ್ಲೂ ಅಕ್ರಮ, ಸರ್ಕಾರಕ್ಕೆ ಜನರಿಗಿಂತ ಸಿನಿಮಾ ಮುಖ್ಯ, ಗಾಂಜಾ ಮತ್ತು ಡ್ರಗ್ಸ್‌ ಹಾವಳಿ ತಡೆಗಟ್ಟಲು ಕ್ರಮ ಕೈಗೊಂಡಿಲ್ಲ ಎಂದು ಸರ್ಕಾರದ ವಿರುದ್ಧ ಕಾಂಗ್ರೆಸ್‌, ಸರಣಿ ಟ್ವೀಟ್‌ ಮಾಡಿ ತರಾಟೆ ತೆಗೆದುಕೊಂಡಿದೆ. ಶೇ.40 ಕಮಿಷನ್‌ ಲೂಟಿಯಿಂದ ದಲಿತರು, ಹಿಂದುಳಿದವರ ಅಭಿವೃದ್ಧಿಯಾಗುತ್ತಿಲ್ಲ. ಗಂಗಾ ಕಲ್ಯಾಣ ಯೋಜನೆಯಲ್ಲಿ ಸ್ವಯಂ ಕಲ್ಯಾಣ ಆಗಿರುವುದರಿಂದ ಅರ್ಹ ಫಲಾನುಭವಿಗಳಿಗೆ ಯೋಜನೆ ತಲುಪುತ್ತಿಲ್ಲ. ಹಣ ನೀಡದಿದ್ದರೆ ಕಡತಗಳು ಕದಲುವುದಿಲ್ಲ ಎಂಬ ಹೈಕೋರ್ಚ್‌ ಹೇಳಿಕೆ ಆಡಳಿತದಲ್ಲಿನ ಭ್ರಷ್ಟೋತ್ಸವಕ್ಕೆ ಮಾಡಿದ ಕಪಾಳಮೋಕ್ಷವಾಗಿದೆ ಎಂದು ಕಾಂಗ್ರೆಸ್‌ ಹರಿಹಾಯ್ದಿದೆ.

ರಾಜ್ಯದಲ್ಲಿ ಗಾಂಜಾ ಮತ್ತು ಡ್ರಗ್ಸ್‌ ಹಾವಳಿ ಹೆಚ್ಚಾಗಿದ್ದು ತಡೆಗಟ್ಟಲು ಕ್ರಮ ಕೈಗೊಳ್ಳುತ್ತಿಲ್ಲ. ಜನದ್ರೋಹಿ ಬಿಜೆಪಿ ಸರ್ಕಾರಕ್ಕೆ ಸಿನಿಮಾಗಳಿಗೆ ಪ್ರಚಾರ ನೀಡುವುದೇ ಮುಖ್ಯವಾಗಿದೆ. ಪಾವಗಡ ಬಸ್‌ ಅಪಘಾತವಾದಾಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆರ್‌ಆರ್‌ಆರ್‌ ಸಿನಿಮಾ ವೀಕ್ಷಿಸುತ್ತಿದ್ದರು. ಅತಿವೃಷ್ಟಿಯಿಂದ ಜನರು ಕಂಗೆಟ್ಟಿರುವಾಗ ಕೃಷಿ ಸಚಿವ ಬಿ.ಸಿ.ಪಾಟೀಲ್‌ ಲೈಫ್‌ 360, ಗಾಳಿಪಟ-2 ಸಿನಿಮಾ ವೀಕ್ಷಿಸಿದ್ದಾರೆ ಎಂದು ಕಾಂಗ್ರೆಸ್‌ ಕಿಡಿಕಾರಿದೆ.

ಕಾಂಗ್ರೆಸಿಗರು ಇನ್ನೂ ಬದುಕಿದ್ದೇವೆ: ವಿಜಯಪುರದ ಕಾಂಗ್ರೆಸ್‌ ಕಚೇರಿಗೆ ಸಾವರ್ಕರ್‌ ಫೋಟೊ ಅಂಟಿಸಿದ ಘಟನೆ ವಿರುದ್ಧ ರಾಜ್ಯ ಕಾಂಗ್ರೆಸ್‌ ನಾಯಕರು ಕಿಡಿಕಾರಿದ್ದಾರೆ. ದೇಶದಲ್ಲಿ ಕಾಂಗ್ರೆಸಿಗರು ಇನ್ನೂ ಬದುಕಿದ್ದು, ರಾಜ್ಯದಲ್ಲಿ ಶಾಂತಿ ಕಾಪಾಡಬೇಕು ಎಂಬ ಏಕೈಕ ಉದ್ದೇಶದಿಂದ ಸುಮ್ಮನಿದ್ದೇವೆ ಎಂದು ಬಿಜೆಪಿ ಮತ್ತು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಅಂತೂ ನಮ್ಮ ಪಕ್ಷ ಅಧಿಕಾರಕ್ಕೆ ಬರುತ್ತದೆ ಎಂದಾಯ್ತಲ್ವ?: ಡಿಕೆಶಿ

ಘಟನೆ ಕುರಿತು ಮಾತನಾಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌, ಕಾಂಗ್ರೆಸ್‌ ಕಚೇರಿಗೆ ಸಾವರ್ಕರ್‌ ಫೋಟೊ ಅಂಟಿಸಿದ ಘಟನೆ ವಿಚಾರವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉತ್ತರ ನೀಡಬೇಕು. ರಾಜ್ಯದಲ್ಲಿ ಶಾಂತಿ ಕಾಪಾಡಬೇಕಿರುವುದು ಮುಖ್ಯಮಂತ್ರಿಗಳ ಜವಾಬ್ದಾರಿ. ದೇಶದಲ್ಲಿ ಕಾಂಗ್ರೆಸಿಗರು ಇನ್ನೂ ಬದುಕಿದ್ದಾರೆ. ಶಾಂತಿ, ಸೌಹಾರ್ದತೆ, ಅಹಿಂಸಾ ತತ್ವವನ್ನು ಮಹಾತ್ಮಾ ಗಾಂಧಿ ಅವರು ನಮಗೆ ಕಲಿಸಿಕೊಟ್ಟಿದ್ದಾರೆ. ನಾವು ಪ್ರಚೋದನಕಾರಿ ಹೇಳಿಕೆ ನೀಡಿ, ಕಾಂಗ್ರೆಸಿಗರನ್ನು ಎತ್ತಿ ಕಟ್ಟಿ, ಕಪ್ಪು ಬಾವುಟ ಹಿಡಿಯಿರಿ ಎಂದು ಹೇಳುವ ಅಗತ್ಯವಿಲ್ಲ. ರಾಜ್ಯದಲ್ಲಿ ಶಾಂತಿ ಕಾಪಾಡಬೇಕು ಎಂಬ ಏಕೈಕ ಉದ್ದೇಶದಿಂದ ಸುಮ್ಮನಿದ್ದೇವೆ ಎಂದರು.

click me!