ಬಿಜೆಪಿಗರಿಗೆ ರಾಜ್ಯ ಸರ್ಕಾರದಿಂದಲೇ ಛೀಮಾರಿ: ಈಶ್ವರ ಖಂಡ್ರೆ

By Kannadaprabha NewsFirst Published Dec 22, 2022, 11:00 PM IST
Highlights

ಅಕ್ರಮ ಎಂದು 8 ಸಾವಿರ ಮನೆಗಳ ಕಂತು ಬಿಡುಗಡೆಗೆ ತಡೆ ನೀಡಿದ್ದ ವಸತಿ ಇಲಾಖೆ, ಈಗ ದಾಖಲೆ ಪರಿಶೀಲಿಸಿ 2967 ಮನೆಗಳ ಕಂತಿನ ಹಣ ಬಿಡುಗಡೆ: ಈಶ್ವರ ಖಂಡ್ರೆ

ಬೀದರ್‌(ಡಿ.22):  ವಿವಿಧ ವಸತಿ ಯೋಜನೆಗಳಡಿ ಮಂಜೂರಾಗಿ ಹಂಚಿಕೆಯಾಗಿದ್ದ ಮನೆಗಳು ಅಕ್ರಮ, ಇದರಲ್ಲಿ ಈಶ್ವರ ಖಂಡ್ರೆ ಗೋಲ್‌ಮಾಲ್‌ ಮಾಡಿದ್ದಾರೆಂಬ ಇವರ ಆರೋಪವನ್ನು ಅವರದ್ದೆ ಸರ್ಕಾರ ತಿರಸ್ಕರಿಸಿ ಫಲಾನುಭವಿಗಳಿಗೆ ಕಂತಿನ ಹಣ ಬಿಡುಗಡೆ ಮಾಡಿದೆ ಎಂದು ಅಂಕಿ ಅಂಶಗಳನ್ನು ನೀಡಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಈಶ್ವರ ಖಂಡ್ರೆ ಹೇಳಿದರು. ಈ ಕುರಿತಂತೆ ಬುಧವಾರ ನಗರದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ವಿವಿಧ ವಸತಿ ಯೋಜನೆಗಳಡಿ 2018ರಲ್ಲಿ ಹಂಚಿಕೆಯಾಗಿದ್ದ 5859 ಮನೆಗಳ ಪೈಕಿ 2967 ಮನೆಗಳಿಗೆ ಸುಮಾರು 3 ಕೋಟಿ ರು. ಸರ್ಕಾರ ಬಿಡುಗಡೆ ಮಾಡಿದೆ. ಇತ್ತೀಚೆಗೆ ಸಾವಿರಾರು ಫಲಾನುಭವಿಗಳೊಂದಿಗೆ ಸೇರಿ ನಡೆಸಿದ್ದ ಪ್ರತಿಭಟನೆಗೆ ಜಯ ಸಿಕ್ಕಿದೆ ಎಂದರು.

ಈಗ ಭಾಲ್ಕಿ ತಾಲೂಕಿನಲ್ಲಿ ವಸತಿ ಅಕ್ರಮ ನಡೆದಿಲ್ಲ ಎಂಬುವದನ್ನು ಸರ್ಕಾರವೇ ಒಪ್ಪಿಕೊಂಡಿದೆ. ಅಕ್ರಮದ ನೆಪದಲ್ಲಿ ಹಿಡಿದಿಟ್ಟುಕೊಂಡಿದ್ದ ಫಲಾನುಭವಿಗಳ ಕಂತಿನ ಹಣ ಬಿಡುಗಡೆ ಮಾಡಿದೆ. ಹೀಗಾಗಿ ನನ್ನ ಮೇಲೆ ಆರೋಪ ಮಾಡಿದ್ದ ಹಾಲಿ ಕೇಂದ್ರ ಸಚಿವ ಭಗವಂತ ಖೂಬಾ, ಮಾಜಿ ಶಾಸಕ ಪ್ರಕಾಶ ಖಂಡ್ರೆ ಹಾಗೂ ಡಿ.ಕೆ. ಸಿದ್ರಾಮ್‌ ಅವರ ಬಣ್ಣ ಬಯಲಾಗಿದೆ ಎಂದು ಖಂಡ್ರೆ ತಿಳಿಸಿದ್ದಾರೆ.

ವಿಧಾನಸಭಾ ಚುನಾವಣೆಗೂ ಮುನ್ನವೇ ಜೆಡಿಎಸ್‌ನಲ್ಲಿ ಭಿನ್ನಮತ ಸ್ಫೋಟ..!

ಭಾಲ್ಕಿಯನ್ನು ಗುಡಿಸಲು ಮುಕ್ತ ಮಾಡಲು ನಾನು ನಡೆಸಿದ ಪ್ರಯತ್ನಗಳಿಗೆ ರಾಜಕೀಯ ದ್ವೇಷದಿಂದ ವಿನಾಕಾರಣ ತಡೆಯೊಡ್ಡುತ್ತ ಬಂದಿರುವ ಈ ಮೂವರು ಬಿಜೆಪಿ ನಾಯಕರು ಬಡವರನ್ನು ಅನಗತ್ಯವಾಗಿ ಸಂಕಷ್ಟಕ್ಕೆ ಸಿಲುಕಿಸಿ ಪೈಶಾಚಿಕ ತೃಪ್ತಿ ಅನುಭವಿಸಿದ್ದಾರೆ. ವಸತಿ ರಹಿತರ ಕಂತಿನ ಹಣವನ್ನು ತಡೆಹಿಡಿದಿದ್ದರ ಬಗ್ಗೆ ವಿಧಾನಸಭೆಯ ಸಾರ್ವಜನಿಕ ಲೆಕ್ಕ ಪತ್ರ ಸಮಿತಿಗೆ ಮನವಿ ಸಲ್ಲಿಸಿದ ನಂತರ ಈಗ ಸರ್ಕಾರವೇ 150 ಚದರಡಿ ಜಾಗದಲ್ಲಿ ಮನೆ ಕಟ್ಟಿರುವ ಬಡವರಿಗೂ ಕಂತಿನ ಹಣ ನೀಡುವಂತೆ ನಿಯಮಕ್ಕೆ ತಿದ್ದುಪಡಿ ಮಾಡಿದೆ. ಈಗ ಭಾಲ್ಕಿ ಕ್ಷೇತ್ರದ ಸುಮಾರು 2990ಕ್ಕೂ ಹೆಚ್ಚು ಅರ್ಹ ಫಲಾನುಭವಿಗಳಿಗೆ ಹಣ ಬಿಡುಗಡೆಯಾಗುತ್ತಿದ್ದು ಇದು ತಮ್ಮ ಹೋರಾಟಕ್ಕೆ ಸಂದ ಜಯ ಎಂದು ಹೇಳಿದರು.

ಒಟ್ಟು 17 ಸಾವಿರ ಮನೆಗಳ ಪೈಕಿ ಇಲ್ಲಿವರೆಗೆ ಬಹುತೇಕ 14 ಸಾವಿರ ಮನೆಗಳ ಕಂತಿನ ಹಣ ಬಿಡುಗಡೆಯಾಗಿದ್ದು, ಅನರ್ಹ ಎಂದು ಗುರುತಿಸಿ ಕಂತು ತಡೆ ಹಿಡಿಯಲಾಗಿ 5859 ಮನೆಗಳ ಪೈಕಿ 2967 ಮನೆಗಳಿಗೆ ಕಂತಿನ ಹಣ ಇದೀಗ ಬಿಡುಗಡೆ ಮಾಡಿದ್ದು ಇನ್ನುಳಿದ 2443 ಮನೆಗಳ ಫಲಾನುಭವಿಗಳಿಗೆ ಕಂತಿನ ಹಣ ಬಿಡುಗಡೆಯಾಗಬೇಕಿದೆ. ಈ ಪೈಕಿ ಮೂರ್ನಾಲ್ಕು ಪ್ರತಿಷ್ಠಿತ ನಿಯಮ ಬಾಹಿರವಾಗಿರಬಹುದು ಅಂಥವರಿಗೆ ಶಿಕ್ಷೆಯಾಗಲಿ. ಆದರೆ, ಬೆರಳೆಣಿಕೆಯಷ್ಟುಜನರಿಗಾಗಿ ಸಾವಿರಾರು ಬಡ ಜನರ ಕಂತಿನ ಹಣ ತಡೆ ಹಿಡಿಯಲು ನಾವು ಬಿಡಲ್ಲ, ಇದಕ್ಕಾಗಿಯೂ ಮುಂದೆ ಹೋರಾಟಕ್ಕಿಳಿಯುತ್ತೇವೆ ಎಂದು ಖಂಡ್ರೆ ತಿಳಿಸಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಬಸವರಾಜ ಜಾಬಶೆಟ್ಟಿ, ಪ್ರಧಾನ ಕಾರ್ಯದರ್ಶಿ ದತ್ತಾತ್ರೆಯ ಮೂಲಗೆ ಇದ್ದರು.

click me!