ರಾಜ್ಯ ಕಾಂಗ್ರೆಸ್‌ ನಾಯಕರಿಂದ ಒಗ್ಗಟ್ಟಿನ ಜಪ!

By Suvarna NewsFirst Published Jan 5, 2020, 8:23 AM IST
Highlights

ರಾಜ್ಯ ಕಾಂಗ್ರೆಸ್‌ ನಾಯಕರಿಂದ ಒಗ್ಗಟ್ಟಿನ ಜಪ| ಕೆಪಿಸಿಸಿ ಅಧ್ಯಕ್ಷ, ಸಿಎಲ್‌ಪಿ ನಾಯಕರ ಹುದ್ದೆಗೆ ಹೈಕಮಾಂಡ್‌ ಯಾರನ್ನೇ ನೇಮಿಸಿದರೂ ಬೆಂಬಲ| ಹಿರಿಯ ನಾಯಕರ ಸಭೆಯಲ್ಲಿ ಒಮ್ಮತದ ತೀರ್ಮಾನ| ಕೆಪಿಸಿಸಿ ಹುದ್ದೆಗೆ ರಾಜ್ಯದಿಂದ ಯಾರನ್ನೂ ಶಿಫಾರಸು ಮಾಡುವುದಿಲ್ಲ| ಸಿದ್ದು, ದಿನೇಶ್‌ ರಾಜೀನಾಮೆ ಬಗ್ಗೆ ನಿರ್ಧಾರ ಕೈಗೊಳ್ಳಲು ಹೈಕಮಾಂಡ್‌ಗೆ ಆಗ್ರಹ

ಬೆಂಗಳೂರು[ಜ.05]: ಹೈಕಮಾಂಡ್‌ ಸೂಚನೆ ಮೇರೆಗೆ ರಾಜ್ಯ ಕಾಂಗ್ರೆಸ್‌ ನಾಯಕರು ಒಗ್ಗಟ್ಟು ಪ್ರದರ್ಶಿಸಿದ್ದು, ಕೆಪಿಸಿಸಿ ಅಧ್ಯಕ್ಷ ಹಾಗೂ ಸಿಎಲ್‌ಪಿ ನಾಯಕರ ಕುರಿತು ಹೈಕಮಾಂಡ್‌ ಕೈಗೊಳ್ಳುವ ತೀರ್ಮಾನಕ್ಕೆ ಬದ್ಧರಾಗಿ ಕೆಲಸ ಮಾಡುವ ತೀರ್ಮಾನ ಕೈಗೊಂಡಿದ್ದಾರೆ.

ಹೈಕಮಾಂಡ್‌ ಸೂಚನೆ ಮೇರೆಗೆ ಕೆಪಿಸಿಸಿ ಮಾಜಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್‌ ನಿವಾಸದಲ್ಲಿ ರಾಜ್ಯ ಕಾಂಗ್ರೆಸ್‌ನ ಎಲ್ಲ ಪ್ರಮುಖ ನಾಯಕರು ಸಭೆ ಸೇರಿದ್ದರು. ಈ ಸಭೆಯಲ್ಲಿ ಪಕ್ಷ ಸಂಕಷ್ಟದಲ್ಲಿರುವ ಈ ಹಂತದಲ್ಲಿ ಯಾವುದೇ ಹುದ್ದೆ ಅಥವಾ ಹಿಂದಿನ ವಿಚಾರಗಳನ್ನು ಮನಸ್ಸಿನಲ್ಲಿಟ್ಟುಕೊಂಡು ಬಹಿರಂಗವಾಗಿ ಭಿನ್ನಮತ ಪ್ರದರ್ಶನಕ್ಕೆ ಮುಂದಾಗಬಾರದು. ಜತೆಗೆ, ಕೆಪಿಸಿಸಿ ಅಧ್ಯಕ್ಷ ಹುದ್ದೆಯೂ ಸೇರಿದಂತೆ ಯಾವುದೇ ಹುದ್ದೆಯ ಬಗ್ಗೆ ನೇರವಾಗಿ ಹೈಕಮಾಂಡ್‌ನ ಮುಂದೆ ಬೇಡಿಕೆಯಿಡುವುದು ಬೇಡ ಮತ್ತು ಅಂತಿಮವಾಗಿ ಹೈಕಮಾಂಡ್‌ ಯಾರನ್ನೇ ಯಾವುದೇ ಹುದ್ದೆಗೆ ನೇಮಕ ಮಾಡಿದರೂ ಅವರಿಗೆ ಸಂಪೂರ್ಣ ಬೆಂಬಲ ನೀಡಿ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಲು ದುಡಿಯಬೇಕು ಎಂಬ ತೀರ್ಮಾನ ಕೈಗೊಳ್ಳಲಾಯಿತು.

ಇದೇ ವೇಳೆ, ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಹಾಗೂ ಶಾಸಕಾಂಗ ಪಕ್ಷದ ಅಧ್ಯಕ್ಷ ಸಿದ್ದರಾಮಯ್ಯ ಅವರು ತಮ್ಮ ಹುದ್ದೆಗಳಿಗೆ ನೀಡಿರುವ ರಾಜೀನಾಮೆ ಕುರಿತು ಸೂಕ್ತ ನಿರ್ಧಾರ ಕೈಗೊಳ್ಳುವಂತೆ ಹೈಕಮಾಂಡನ್ನು ಆಗ್ರಹಿಸಲು ಸಭೆಯಲ್ಲಿ ನಿರ್ಧರಿಸಲಾಯಿತು. ಈ ವಿಚಾರವನ್ನು ಹೈಕಮಾಂಡ್‌ ಮುಂದೂಡುತ್ತಿರುವುದರಿಂದ ಅನಗತ್ಯ ಗೊಂದಲ ನಿರ್ಮಾಣವಾಗುತ್ತಿದೆ. ಹೀಗಾಗಿ ಈ ರಾಜೀನಾಮೆ ಕುರಿತು ಸ್ಪಷ್ಟನಿರ್ಧಾರ ಕೈಗೊಳ್ಳುವಂತೆ ಹೈಕಮಾಂಡನ್ನು ಕೋರಬೇಕು ಎಂಬ ತೀರ್ಮಾನವನ್ನು ಸಭೆಯಲ್ಲಿ ಹಿರಿಯ ನಾಯಕರು ಕೈಗೊಂಡರು.

ಶನಿವಾರ ಸಂಜೆ ಪರಮೇಶ್ವರ್‌ ನಿವಾಸದಲ್ಲಿ ನಡೆದ ಸಭೆಗೆ ಕಾಂಗ್ರೆಸ್‌ನ ಹದಿನೆಂಟು ಮಂದಿ ಹಿರಿಯ ನಾಯಕರಿಗೆ ಆಹ್ವಾನ ನೀಡಲಾಗಿತ್ತು. ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌, ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಬಹುತೇಕ ನಾಯಕರು ಹಾಜರಿದ್ದರು. ಡಿ.ಕೆ. ಶಿವಕುಮಾರ್‌ ಅವರು ತಮ್ಮ ಪತ್ನಿಯ ಜನ್ಮ ದಿನಾಚರಣೆ ಪ್ರಯುಕ್ತ ಸಭೆಯಿಂದ ಬೇಗ ನಿಗರ್ಮಿಸಿದರು. ಉಳಿದಂತೆ ವೈಯಕ್ತಿಕ ಕಾರಣಗಳಿಗಾಗಿ ಕೆ.ಜೆ. ಜಾಜ್‌ರ್‍, ಎಚ್‌.ಕೆ. ಪಾಟೀಲ್‌ ಹಾಗೂ ರಮೇಶ್‌ ಕುಮಾರ್‌ ಅವರು ಪೂರ್ವಾನುಮತಿ ಪಡೆದು ಗೈರು ಹಾಜರಾಗಿದ್ದರು.

ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳ ಬಗ್ಗೆ ಚರ್ಚೆಯೇ ಬಾರದಂತೆ ನೋಡಿಕೊಳ್ಳಲಾಯಿತು. ಉಳಿದಂತೆ ಎಲ್ಲಾ ನಾಯಕರೂ ಮುಂದೆ ಬಿಬಿಎಂಪಿ, ಗ್ರಾಮ ಪಂಚಾಯ್ತಿ ಸೇರಿ ಹಲವು ಚುನಾವಣೆಗಳು ಇವೆ. ದೇಶಾದ್ಯಂತ ಪೌರತ್ವ ತಿದ್ದುಪಡಿ ಕಾಯಿದೆಯಂತಹ ಸೂಕ್ಷ್ಮ ವಿಚಾರಗಳ ಬಗೆಗಿನ ಹೋರಾಟಗಳು ನಡೆಯುತ್ತಿವೆ. ಇಂತಹ ಸಂದರ್ಭದಲ್ಲಿ ನಮ್ಮಲ್ಲಿ ಬಿರುಕು ಇರುವುದಾಗಿ ಬಿಂಬಿಸುವುದು ಬೇಡ. ಎಲ್ಲಾ ವಿಚಾರದಲ್ಲೂ ಪಕ್ಷದ ನಾಯಕರೆಲ್ಲರೂ ಒಟ್ಟಾಗಿ ಹೋರಾಟ ಮಾಡಬೇಕು. ನಾವು ಒಟ್ಟಾಗಿದ್ದೇವೆ ಎಂದು ಸಂದೇಶ ನೀಡಿ ಕಾರ್ಯಕರ್ತರಿಗೆ ಹುರುಪು ತುಂಬಬೇಕು ಎಂದು ನಿರ್ಧರಿಸಿದರು.

ಕೆಪಿಸಿಸಿ ಅಧ್ಯಕ್ಷರ ನೇಮಕ, ಶಾಸಕಾಂಗ ಪಕ್ಷದ ನಾಯಕರ ನೇಮಕದ ಬಗ್ಗೆ ನಾವು ಯಾವುದೇ ನಿರ್ಧಾರ ತೆಗೆದುಕೊಳ್ಳುವುದು ಬೇಡ. ಹೈಕಮಾಂಡ್‌ ಭೇಟಿ ವೇಳೆ ಸಲಹೆ ನೀಡುವುದೂ ಬೇಡ. ವೀಕ್ಷಕರು ನೀಡಿರುವ ವರದಿ ಆಧಾರದ ಮೇಲೆ ಹೈಕಮಾಂಡ್‌ ಸೂಕ್ತ ಕ್ರಮ ಕೈಗೊಳ್ಳಲು ಅವಕಾಶ ನೀಡಬೇಕು. ಹೈಕಮಾಂಡ್‌ ನಿರ್ಧಾರಕ್ಕೆ ಪೂರಕವಾಗಿ ನಡೆದುಕೊಳ್ಳಬೇಕು ಎಂದು ನಿರ್ಧಾರ ತೆಗೆದುಕೊಂಡರು ಎಂದು ಮೂಲಗಳು ತಿಳಿಸಿವೆ.

ನಾವೆಲ್ಲಾ ಒಟ್ಟಾಗಿದ್ದೇವೆ: ಪರಂ

ರಾಜ್ಯ ಕಾಂಗ್ರೆಸ್‌ ನಾಯಕರೆಲ್ಲರೂ ಒಟ್ಟಾಗಿದ್ದೇವೆ. ಸಭೆಯಲ್ಲಿ ಯಾರು ಅಧ್ಯಕ್ಷರಾಗಬೇಕೆಂಬ ಬಗ್ಗೆ ಚರ್ಚೆಯಾಗಿಲ್ಲ. ಆಕಾಂಕ್ಷಿಗಳ ಬಗ್ಗೆಯೂ ಚರ್ಚೆಯಾಗಿಲ್ಲ. ಈ ಬಗ್ಗೆ ಹೈಕಮಾಂಡ್‌ ಅಂತಿಮ ನಿರ್ಧಾರ ಮಾಡಲಿದೆ.

- ಡಾ.ಜಿ.ಪರಮೇಶ್ವರ್‌, ಮಾಜಿ ಡಿಸಿಎಂ

ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೈಕಮಾಂಡ್‌ ಸೂಚನೆಯಂತೆ ಹಿರಿಯ ನಾಯಕರ ಸಭೆ ಕರೆಯಲಾಗಿತ್ತು. ಮುಂಬರುವ ಚುನಾವಣೆ ಸೇರಿದಂತೆ ಪ್ರಸಕ್ತ ವಿದ್ಯಮಾನಗಳ ಬಗ್ಗೆ ಅಭಿಪ್ರಾಯ ಪಡೆದಿದ್ದೇವೆ. ನಾಯಕರ ಅಭಿಪ್ರಾಯಗಳನ್ನು ಹೈಕಮಾಂಡ್‌ಗೆ ನೀಡಲಾಗುವುದು. ಮುಂದೆ ಗ್ರಾಮ ಪಂಚಾಯ್ತಿ, ಬಿಬಿಎಂಪಿ ಚುನಾವಣೆಗಳು ಬರುತ್ತಿದ್ದು, ಅವುಗಳಿಗೆ ತಯಾರಾಗಬೇಕಿದೆ. ಅಧ್ಯಕ್ಷರು, ಪ್ರತಿಪಕ್ಷದ ನಾಯಕರ ಬಗ್ಗೆ ನಿರ್ಧಾರವಾದರೆ ಮುಂದಿನ ಚಟುವಟಿಕೆ ನಡೆಸಲು ದಾರಿ ಸುಗಮವಾಗಲಿದೆ. ಹೀಗಾಗಿ ಆದಷ್ಟುಬೇಗ ಗೊಂದಲ ಬಗೆಹರಿಯಲಿದೆ ಎಂದು ನಿರೀಕ್ಷಿಸಿದ್ದೇವೆ. ಹೈಕಮಾಂಡ್‌ ಸೂಚಿಸಿದ ದಿನ ನಾವೆಲ್ಲರೂ ದೆಹಲಿಗೆ ತೆರಳಲಿದ್ದು, ಹೈಕಮಾಂಡ್‌ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದೆ ಎಂದರು.

ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷರು, ಆಕಾಂಕ್ಷಿಗಳ ಬಗ್ಗೆ ಚರ್ಚೆಯಾಗಿಲ್ಲ. ಶಾಸಕಾಂಗ ಪಕ್ಷದ ನಾಯಕ ಹಾಗೂ ವಿಪಕ್ಷ ನಾಯಕರ ಸ್ಥಾನ ಪ್ರತ್ಯೇಕಗೊಳಿಸುವ ಬಗ್ಗೆಯೂ ಚರ್ಚೆ ನಡೆದಿಲ್ಲ ಎಂದು ಸ್ಪಷ್ಟಪಡಿಸಿದರು.

click me!