ಡಿಸಿಎಂ ಸ್ಥಾನ ಪಕ್ಷದ ನಿರ್ಧಾರ| ಪಕ್ಷಕ್ಕಾಗಿ ತ್ಯಾಗ ಮಾಡಲು ಸಿದ್ಧ: ಶ್ರೀರಾಮುಲು
ನವದೆಹಲಿ[ಜ.04]: ನನಗೆ ಉಪಮುಖ್ಯಮಂತ್ರಿ ನೀಡಬೇಕೆಂಬುದು ಅಭಿಮಾನಿಗಳ ಬೇಡಿಕೆಯಾಗಿದ್ದು ಈ ಬಗ್ಗೆ ಪಕ್ಷವೇ ತೀರ್ಮಾನ ತೆಗೆದುಕೊಳ್ಳುತ್ತದೆ ಎಂದು ಪುನರುಚ್ಚರಿಸಿರುವ ಆರೋಗ್ಯ ಸಚಿವ ಶ್ರೀರಾಮುಲು, ಪಕ್ಷ ಕಷ್ಟಪಟ್ಟು ಅಧಿಕಾರಕ್ಕೆ ಬಂದಿರುವುದರಿಂದ ನಿಷ್ಠಾವಂತ ಕಾರ್ಯಕರ್ತನಾದ ನಾನು ಪಕ್ಷಕ್ಕಾಗಿ ತ್ಯಾಗ ಮಾಡಬೇಕಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಇದೇ ವೇಳೆ ವಾಲ್ಮೀಕಿ ಸಮುದಾಯದಲ್ಲಿ ಸ್ಪರ್ಧೆ ಬೇಡ ಎಂಬ ಕಾರಣಕ್ಕೆ ರಮೇಶ್ ಜಾರಕಿಹೊಳಿಗೆ ಉಪಮುಖ್ಯಮಂತ್ರಿ ಸ್ಥಾನ ಕೊಡಬೇಡಿ ಎಂದು ಹೇಳುವುದಿಲ್ಲ ಎಂದೂ ತಿಳಿಸಿದ್ದಾರೆ.
ದೆಹಲಿಯ ಕರ್ನಾಟಕ ಭವನದಲ್ಲಿ ಶುಕ್ರವಾರ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ನಾನು ಉಪಮುಖ್ಯಮಂತ್ರಿಯಾಗಬೇಕು ಎಂದು ಜನರು, ಅಭಿಮಾನಿಗಳು ಬೇಡಿಕೆ ಇಡುತ್ತಿದ್ದಾರೆ. ನಾನು ಅವರ ಹೇಳಿಕೆಗಳನ್ನು, ಪ್ರತಿಭಟನೆಗಳನ್ನು ತಡೆಯುವ ಪ್ರಯತ್ನ ಮಾಡಿದ್ದೇನೆ. ಆದರೂ ಪ್ರತಿಭಟನಾಕಾರರು ಪ್ರೀತಿಯಿಂದ ಬೇಡಿಕೆ ಮಂಡಿಸುತ್ತಿದ್ದಾರೆ. ಈ ಬಗ್ಗೆ ಪಕ್ಷವು ಒಂದು ತೀರ್ಮಾನ ತೆಗೆದುಕೊಳ್ಳುತ್ತದೆ. ನಾನು ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿದ್ದು ಪಕ್ಷದ ವ್ಯಾಪ್ತಿಯಲ್ಲಿ ಕೆಲಸ ಮಾಡುತ್ತೇನೆ ಎಂದು ರಾಮುಲು ಹೇಳಿದರು.
ಜನಾಂಗಕ್ಕೆ ಮುಜುಗರ ಆದರೂ ತ್ಯಾಗ ಮಾಡಲೇ ಬೇಕು. ಪಕ್ಷ ಕಷ್ಟಪಟ್ಟು ಪಕ್ಷ ಅಧಿಕಾರಕ್ಕೆ ಬಂದಿದೆ. ಹಾಗಾಗಿ ನಾನು ಪಕ್ಷಕ್ಕಾಗಿ ತ್ಯಾಗ ಮಾಡಬೇಕಾಗುತ್ತದೆ. ನಮ್ಮ ಸಮುದಾಯದಲ್ಲಿ ಸ್ಪರ್ಧೆ ಬೇಡ. ರಮೇಶ್ ಜಾರಕಿಹೊಳಿಗೆ ಉಪಮುಖ್ಯಮಂತ್ರಿ ಸ್ಥಾನ ಕೊಡಬೇಡಿ ಎಂದು ಹೇಳುವುದಿಲ್ಲ ಎಂದರು.
ಸಿದ್ದುಗೆ ಬಾಯಿಚಪಲ:
ಪ್ರಧಾನಿ ಮೋದಿ ಗುರುವಾರ ತುಮಕೂರಲ್ಲಿ ಮಾಡಿದ ಭಾಷಣಕ್ಕೆ ವಿಪಕ್ಷ ನಾಯಕ ಸಿದ್ದರಾಮಯ್ಯ ಮಾಡಿರುವ ಟೀಕೆಗೆ ತಿರುಗೇಟು ನೀಡಿರುವ ಶ್ರೀರಾಮುಲು, ಸಿದ್ದರಾಮಯ್ಯ ಬಾಯಿ ಚಪಲಕ್ಕೆ ಮಾತನಾಡುತ್ತಾರೆ ಎಂದು ಹೇಳಿದರು. ಕೇಂದ್ರ ಸರ್ಕಾರವು ರಾಜ್ಯಕ್ಕೆ ಎನ್‌ಡಿಆರ್‌ಎಫ್ ಮತ್ತು ಎಸ್ಡಿಆರ್‌ಎಫ್‌ನ ಮಾರ್ಗದರ್ಶಿ ಸೂತ್ರದಡಿ ಹಣ ನೀಡಿದೆ. ಆದರೆ ಸಿದ್ದರಾಮಯ್ಯ ಮೊಸರಲ್ಲಿ ಕಲ್ಲು ಹುಡುಕುತ್ತಾರೆ. ಯುಪಿಎ ಸರ್ಕಾರದಿಂದ ಯಾವ ಅನುದಾನವೂ ಬಂದಿಲ್ಲ. ಬಾಯಿ ಚಪಲಕ್ಕೆ ಸಿದ್ದರಾಮಯ್ಯ ಮಾತನಾಡುತ್ತಾರೆ. ಪ್ರವಾಹದಿಂದ ಹೆಚ್ಚು ನಷ್ಟಆಗಿದ್ದಕ್ಕೆ ಮುಖ್ಯಮಂತ್ರಿಗಳು ಹೆಚ್ಚಿನ ಬೇಡಿಕೆ ಇಟ್ಟಿದ್ದಾರೆ. ಆದರೆ ನಿಯಮಗಳನ್ನು ಮೀರಿ ನೀಡಲು ಸಾಧ್ಯವಿಲ್ಲ ಎಂದು ರಾಮುಲು ಅವರು ಪ್ರಧಾನ ಮಂತ್ರಿಗಳನ್ನು ಸಮರ್ಥಿಸಿಕೊಂಡಿದ್ದಾರೆ.
ಸಿದ್ಧಗಂಗಾ ಮಠದಲ್ಲಿ ದೇಶದ ಪ್ರಧಾನಿಗಳು ಗಡಿ ವಿಚಾರದ ಬಗ್ಗೆ ಮಾತನಾಡಿದ್ದು ಸರಿಯಿದ್ದು ಈ ರೀತಿ ವಿಚಾರಗಳಲ್ಲಿ ಮಕ್ಕಳಿಗೆ ಅರಿವು ಮೂಡಿಸುವ ಕೆಲಸವನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಮಾಡಿದ್ದಾರೆ ಎಂದು ರಾಮುಲು ಅಭಿಪ್ರಾಯಪಟ್ಟರು.