200 ಜೆಡಿಎಸ್ ಮುಖಂಡರು ಕಾಂಗ್ರೆಸ್‌ಗೆ : ಇದೇ ನನ್ನ ರಾಜಕೀಯ ಎಂದ ಡಿಕೆಶಿ

By Kannadaprabha NewsFirst Published Oct 17, 2020, 7:59 AM IST
Highlights

ಪರಸ್ಪರ ವಾಕ್ಸಮರ ನಡೆಸುತ್ತಿರುವ ಹಳೆ ಜೋಡೆತ್ತುಗಳಲ್ಲಿ ಇದೀಗ ದೊಡ್ಡ ಬಿರುಕು ಕಾಣಿಸಿಕೊಂಡಿದೆ. ಅದೇನೆಂದರೆ ಇದೀಗ ದೊಡ್ಡ ಶಾಕ್ ನೀಡಲಾಗಿದೆ. 

ಬೆಂಗಳೂರು (ಅ.17):  ಡಿ.ಕೆ.ಶಿವಕುಮಾರ್‌ ಒಕ್ಕಲಿಗರ ಕಿಂದರಿಜೋಗಿಯೇ ಎಂಬ ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರ ಹೇಳಿಕೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ತಿರುಗೇಟು ನೀಡಿದ್ದು, ‘ನನಗೆ ಮೊದಲಿನಿಂದಲೂ ಜಾತಿ ಮೇಲೆ ರಾಜಕೀಯ ಮಾಡಲು ಇಷ್ಟವಿಲ್ಲ. ನಾನು ಕೆಪಿಸಿಸಿ ಅಧ್ಯಕ್ಷ ಹಾಗೂ ನನಗೆ ಕಾಂಗ್ರೆಸ್‌ ಪಕ್ಷವೇ ಜಾತಿ’ ಎಂದು ಹೇಳಿದ್ದಾರೆ.

ಗುರುವಾರ ಚುನಾವಣಾ ಪ್ರಚಾರದಲ್ಲಿ ಮಾತನಾಡಿದ್ದ ಎಚ್‌.ಡಿ.ಕುಮಾರಸ್ವಾಮಿ, ‘ಕೆಪಿಸಿಸಿ ಅಧ್ಯಕ್ಷರಾದ ತಕ್ಷಣ ಒಕ್ಕಲಿಗ ಸಮುದಾಯದ ಮುಖಂಡರನ್ನು ಸೆಳೆಯಲು ಡಿ.ಕೆ.ಶಿವಕುಮಾರ್‌ ಯತ್ನಿಸುತ್ತಿದ್ದಾರೆ. ಅವರು ಕರೆದ ತಕ್ಷಣ ಹೋಗಲು ಅವರು ಒಕ್ಕಲಿಗರ ಕಿಂದರಿಜೋಗಿಯೇ? ಅವರು ಸಮುದಾಯಕ್ಕೆ ನೀಡಿರುವ ಕೊಡುಗೆ ಏನು ಎಂದು ಪ್ರಶ್ನಿಸಿದ್ದರು.

RR ನಗರ ಬೈ ಎಲೆಎಕ್ಷನ್: ರಹಸ್ಯವಾಗಿ ಅಪರೇಷನ್ ಹಸ್ತ ಪ್ರಯೋಗಿಸಿ ಎಚ್‌ಡಿಕೆಗೆ ಶಾಕ್ ಕೊಟ್ಟ ಡಿಕೆಶಿ ..

ಶುಕ್ರವಾರ ಕಾಂಗ್ರೆಸ್‌ ಕಚೇರಿಯಲ್ಲಿ ರಾಜರಾಜೇಶ್ವರಿನಗರದ ಜೆಡಿಎಸ್‌ ಮುಖಂಡ ಬೆಟ್ಟಸ್ವಾಮಿ ಗೌಡ ಸೇರಿದಂತೆ 200ಕ್ಕೂ ಹೆಚ್ಚು ಜೆಡಿಎಸ್‌ ಮುಖಂಡರನ್ನು ಕಾಂಗ್ರೆಸ್‌ಗೆ ಸೇರ್ಪಡೆ ಮಾಡಿಕೊಂಡು ಮಾತನಾಡಿದ ಡಿ.ಕೆ.ಶಿವಕುಮಾರ್‌, ‘ನಾನು ಹಿಂದೆಯೂ ಜಾತಿ ವಿಚಾರದಲ್ಲಿ ರಾಜಕೀಯ ಮಾಡಿಲ್ಲ, ಮುಂದೆಯೂ ಮಾಡುವುದಿಲ್ಲ. ನನಗೆ ಕಾಂಗ್ರೆಸ್‌ ಪಕ್ಷವೇ ಜಾತಿ’ ಎಂದು ಸ್ಪಷ್ಟಪಡಿಸಿದರು.

ನಾನು ಒಕ್ಕಲಿಗ, ಆದರೆ ಜಾತಿ ರಾಜಕೀಯ ಮಾಡಲ್ಲ:

ಕುಮಾರಸ್ವಾಮಿ ಅವರ ಕರ್ತವ್ಯ ಅವರು ಮಾಡುತ್ತಾರೆ, ನಮ್ಮ ಕರ್ತವ್ಯ ನಾವು ಮಾಡುತ್ತೇವೆ. ಅವರು ನನ್ನ ಬಗ್ಗೆ ಏಕೆ ಟೀಕೆ ಮಾಡುತ್ತಿದ್ದಾರೆ ಎಂಬುದು ನನಗೆ ಗೊತ್ತಿಲ್ಲ. ಅವರು ಕೊಡುವ ಸಲಹೆಯನ್ನು ಸ್ವೀಕಾರ ಮಾಡುತ್ತೇನೆ. ಆದರೆ, ನಾನು ಹುಟ್ಟಿನಿಂದ ಒಕ್ಕಲಿಗ. ನನ್ನ ತಂದೆ-ತಾಯಿ ಒಕ್ಕಲಿಗರು. ಶಾಲೆಗೆ ಸೇರಿಸುವಾಗ ಒಕ್ಕಲಿಗ ಎಂದು ಕೊಟ್ಟಿದ್ದಾರೆ. ನಾನು ಹುಟ್ಟಿನಿಂದಲೂ ಒಕ್ಕಲುತನ ಮಾಡುವವನು. ಆದರೆ ಜಾತಿ ಮೇಲೆ ರಾಜಕೀಯ ಮಾಡಲು ನನಗೆ ಇಷ್ಟವಿಲ್ಲ. ನನಗೆ ನನ್ನ ಪಕ್ಷವೇ ಜಾತಿ ಎಂದು ಹೇಳಿದರು.

ಜೆಡಿಎಸ್‌ಗೆ ಆರ್‌.ಆರ್‌.ನಗರದಲ್ಲಿ ಶಕ್ತಿ ಇಲ್ಲ:

ಜೆಡಿಎಸ್‌ಗೆ ರಾಜರಾಜೇಶ್ವರಿನಗರ ಕ್ಷೇತ್ರದಲ್ಲಿ ಶಕ್ತಿ ಇಲ್ಲ. 1983ರಲ್ಲಿ ಜನತಾಪಕ್ಷದಿಂದ ಶ್ರೀನಿವಾಸ್‌ ಗೆದ್ದ ಬಳಿ ಇಲ್ಲಿ ಜನತಾದಳ ಗೆದ್ದಿಲ್ಲ. ಈ ಬಾರಿಯೂ ಕಾಂಗ್ರೆಸ್‌ ಪಕ್ಷವೇ ಗೆಲ್ಲಲಿದೆ. ರಾಜರಾಜೇಶ್ವರಿನಗರದಲ್ಲಿ ಜೆಡಿಎಸ್‌ ಸಮಾಧಿ ಮಾಡಲಾಗುತ್ತಿದೆ ಎಂಬ ಆರೋಪ ನಿರಾಧಾರ. ನಾವು ಯಾವ ಪಕ್ಷದ ಸಮಾಧಿಯನ್ನೂ ಮಾಡುವುದಿಲ್ಲ. ಕುಮಾರಸ್ವಾಮಿ ಯಾರನ್ನು ಉದ್ದೇಶಿಸಿ ಇದನ್ನು ಹೇಳಿದರೋ ಗೊತ್ತಿಲ್ಲ ಎಂದರು.

ಪಕ್ಷಕ್ಕೆ ಸೇರ್ಪಡೆಯಾದವರನ್ನು ಉದ್ದೇಶಿಸಿ ಮಾತನಾಡಿದ ಅವರು ಬೆಟ್ಟಸ್ವಾಮಿ ಗೌಡ ಶಾಸಕರಾಗಲು ಶಕ್ತಿ ಇರುವವರು. ಇಂದು ನಮ್ಮ ಪಕ್ಷಕ್ಕೆ ಸೇರ್ಪಡೆಯಾಗಿರುವುದು ರಾಜರಾಜೇಶ್ವರಿನಗರದಲ್ಲಿ ಪಕ್ಷದ ಬಲ ಹೆಚ್ಚಿಸಿದೆ. ದೇಶ ಹಾಗೂ ರಾಜ್ಯಗಳನ್ನು ಆಳಿದ ಬಹುತೇಕ ಮಹನೀಯರು ಕಾಂಗ್ರೆಸ್‌ ಪಕ್ಷದಿಂದಲೇ ತಮ್ಮ ನಾಯಕತ್ವ ಬೆಳೆಸಿಕೊಂಡಿದ್ದಾರೆ. ಈ ದೊಡ್ಡ ಇತಿಹಾಸ ಇರುವ ನಮ್ಮ ಪಕ್ಷದ ಧ್ವಜ ಧರಿಸುವುದೇ ಒಂದು ಮಹಾಭಾಗ್ಯ ಹೇಳಿದರು.

ಈ ವೇಳೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್‌, ಬೆಂಗಳೂರು ಗ್ರಾಮಾಂತರ ಸಂಸದ ಡಿ.ಕೆ.ಸುರೇಶ್‌, ಮುಖಂಡರಾದ ಹನುಮಂತರಾಯಪ್ಪ ಸೇರಿ ಹಲವರು ಹಾಜರಿದ್ದರು.
 
ಶಾಸಲ ಅಖಂಡ ವಿರುದ್ಧ ಡಿಕೆಶಿ ಕಿಡಿ

ಡಿ.ಜೆ.ಹಳ್ಳಿ ಮತ್ತು ಕೆ.ಜಿ.ಹಳ್ಳಿ ಗಲಭೆ ಪ್ರಕರಣದಲ್ಲಿ ಮಾಜಿ ಮೇಯರ್‌ ಸಂಪತ್‌ ರಾಜ್‌ರನ್ನು ಉಚ್ಚಾಟಿಸಬೇಕು ಎಂದು ಹೇಳಿದ್ದ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಹೇಳಿಕೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಖಂಡ ಶ್ರೀನಿವಾಸ ಮೂರ್ತಿ ಅವರು ಯಾರನ್ನು ಉಚ್ಚಾಟಿಸಬೇಕು ಎಂಬುದನ್ನು ಬಿಜೆಪಿ ಹಾಗೂ ಮಾಧ್ಯಮಗಳ ಎದುರು ಮಾತನಾಡಬಾರದು. ಮಾಧ್ಯಮಗಳ ಎದುರು ಮಾತನಾಡುವುದು ಶಿಸ್ತಲ್ಲ. ಅವರಿಗೆ ಏನೇ ನೋವಿದ್ದರೂ ನನ್ನ ಬಳಿ ಬಂದು ಮಾತನಾಡಲಿ. ಯಾರನ್ನು ಉಚ್ಚಾಟಿಸಬೇಕು ಎಂಬುದನ್ನು ನಿರ್ಧಾರ ಮಾಡುವುದು ಪಕ್ಷ ಎಂದು ಸ್ಪಷ್ಟಪಡಿಸಿದರು.

click me!