40 ಪರ್ಸೆಂಟ್ ಕಮಿಷನ್ ಮಾತ್ರವಲ್ಲ, ಜನರಿಂದಲೂ ರಕ್ತ ಹೀರಿದಂತೆ ಲಂಚ ಕೀಳುತ್ತಿದ್ದಾರೆ. ವಿಧವಾ ವೇತನ, ಪಿಂಚಣಿ ಪಡೆಯಲೂ ಸಾವಿರಾರು ರು. ನೀಡಬೇಕು. ಹೀಗಾಗಿ ಇಂತಹ ಸರ್ಕಾರ ಬೇಡ ಎಂದು ಜನರು ತೀರ್ಮಾನಿಸಿದ್ದಾರೆ ಎಂದು ಡಿ.ಕೆ.ಶಿವಕುಮಾರ್ ಅಭಿಪ್ರಾಯಪಟ್ಟಿದ್ದಾರೆ.
ಬೆಂಗಳೂರು (ಫೆ.05): ‘ಪ್ರಜಾಧ್ವನಿ ಯಾತ್ರೆಗೆ ಜನರಿಂದ ನಿರೀಕ್ಷೆಗೂ ಮೀರಿ ಸ್ಪಂದನೆ ವ್ಯಕ್ತವಾಗಿದ್ದು, ರಾಜ್ಯದಲ್ಲಿನ ಭ್ರಷ್ಟ ಸರ್ಕಾರದ ವಿರುದ್ಧ ಜನ ರೋಸಿ ಹೋಗಿದ್ದಾರೆ. ಒಂದು ಪೋಡಿ ಮಾಡಲು 40 ಸಾವಿರ ರು. ಕೊಡಬೇಕಾದ ದುಸ್ಥಿತಿಯಿದೆ. ಹೀಗಾಗಿ ಜನರು ವಸ್ತುನಿಷ್ಠವಾಗಿ ಯೋಚಿಸಿ ಸರ್ಕಾರ ಕಿತ್ತೊಗೆಯಲು ನಿರ್ಧರಿಸಿದ್ದಾರೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅಭಿಪ್ರಾಯಪಟ್ಟಿದ್ದಾರೆ.
ಶನಿವಾರ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 40 ಪರ್ಸೆಂಟ್ ಕಮಿಷನ್ ಮಾತ್ರವಲ್ಲ, ಜನರಿಂದಲೂ ರಕ್ತ ಹೀರಿದಂತೆ ಲಂಚ ಕೀಳುತ್ತಿದ್ದಾರೆ. ವಿಧವಾ ವೇತನ, ಪಿಂಚಣಿ ಪಡೆಯಲೂ ಸಾವಿರಾರು ರು. ನೀಡಬೇಕು. ಹೀಗಾಗಿ ಇಂತಹ ಸರ್ಕಾರ ಬೇಡ ಎಂದು ಜನರು ತೀರ್ಮಾನಿಸಿದ್ದಾರೆ ಎಂದರು.
Prajadwani Bus Yatra: ಸಿದ್ದರಾಮಯ್ಯ, ಡಿಕೆಶಿ ಪ್ರತ್ಯೇಕ ಬಸ್‌ಯಾತ್ರೆಗೆ ಜನಸ್ತೋಮ
ಸಹಿ ಹಾಕಿ ಗ್ಯಾರಂಟಿ: ನಾವು ಬಿಜೆಪಿಯವರಂತೆ ಕೊಟ್ಟ ಮಾತು ತಪ್ಪುವವರಲ್ಲ. ಹೀಗಾಗಿಯೇ ಜನರಿಗೆ ಗ್ಯಾರಂಟಿ ಪತ್ರದಲ್ಲಿ ಸಹಿ ಹಾಕಿ ಯಾವ್ಯಾವ ಯೋಜನೆಗಳನ್ನು ಮಾಡುತ್ತೇವೆ ಎಂಬುದನ್ನು ತಿಳಿಸುತ್ತಿದ್ದೇವೆ. ಉಚಿತ ವಿದ್ಯುತ್ ಯೋಜನೆ, ಮನೆಯೊಡತಿಗೆ ಮಾಸಿಕ 2 ಸಾವಿರ ರು. ನೀಡುವ ಯೋಜನೆಗಳು ಶೇ.90ರಷ್ಟುಜನರಿಗೆ ಅನುಕೂಲವಾಗುತ್ತವೆ. ಹೀಗಾಗಿಯೇ ಜನ ಬದಲಾವಣೆ ಬಯಸಿದ್ದಾರೆ ಎಂದು ಹೇಳಿದರು.
ಕಾಪ್ಟರ್ ಯಾತ್ರೆ ಮಾಡಲಿ: ಬಿಜೆಪಿಯವರ ರಥಯಾತ್ರೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ರಥಯಾತ್ರೆ ಆದರೂ ಮಾಡಲು ಹೆಲಿಕಾಪ್ಟರ್ ಯಾತ್ರೆ ಆದರೂ ಮಾಡಲಿ ಏನೂ ಆಗುವುದಿಲ್ಲ. ನಾವು ಜನರ ಹೃದಯದಲ್ಲಿದ್ದೇವೆ. ಜನರು ಅವಕಾಶಕ್ಕಾಗಿ ಕಾಯುತ್ತಿದ್ದಾರೆ. ಜನರನ್ನು ದೋಚಿದ ಹಣದಲ್ಲಿ ಬಿಜೆಪಿಯವರು ಏನೇ ಮಾಡಿದರೂ ಜನರು ಸಹಿಸುವುದಿಲ್ಲ ಎಂದು ಹೇಳಿದರು. ಸಿ.ಡಿ. ವಿಚಾರವಾಗಿ ರಮೇಶ್ ಜಾರಕಿಹೊಳಿ ಅವರು ಅಮಿತ್ ಶಾ ಭೇಟಿ ಮಾಡಿದ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದರು.
ಎಲ್ಲರೂ ಒಗ್ಗಟಾಗಿದ್ದೇವೆ, ಮುನಿಯಪ್ಪ, ಪರಮೇಶ್ವರ್‌ಗೆ ಮುನಿಸಿಲ್ಲ: ಡಿ.ಕೆ.ಶಿವಕುಮಾರ್
ರಮೇಶ್ ಕುಮಾರ್ ಗೈರಿಗೆ ವಿಶೇಷ ಅರ್ಥ ಬೇಕಿಲ್ಲ: ಶುಕ್ರವಾರ ಕುರುಡುಮಲೆಯಲ್ಲಿ ನಡೆದ 2ನೇ ಹಂತದ ಪ್ರಜಾಧ್ವನಿ ಉದ್ಘಾಟನೆಗೆ ರಮೇಶ್ ಕುಮಾರ್ ಬಂದಿಲ್ಲ ಎಂಬುದಕ್ಕೆ ವಿಶೇಷ ಅರ್ಥ ಬೇಕಿಲ್ಲ. ಕಾರ್ಯಕ್ರಮದಲ್ಲಿ ಮೂರು ಜನರ ಮೇಲೆ ಭಾಷಣ ಮಾಡಲಾಗಲ್ಲ. ಹೀಗಾಗಿ ರಮೇಶ್ ಕುಮಾರ್, ಕೃಷ್ಣ ಬೈರೇಗೌಡ ಅವರೆಲ್ಲರೂ ತಮ್ಮ ಹಾಗೂ ಪಕ್ಕದ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಕೃಷ್ಣ ಬೈರೇಗೌಡ ಅವರ ಕ್ಷೇತ್ರದಲ್ಲಿದ್ದಾರೆ. ಸಿದ್ದರಾಮಯ್ಯ ಅವರ ಜತೆ ಅಥವಾ ನನ್ನ ಜತೆ ಎಲ್ಲರೂ ಬರಲು ಆಗುತ್ತದೆಯೇ? ನಮ್ಮಲ್ಲಿ ಯಾವುದೇ ಸಮಸ್ಯೆಯಿಲ್ಲ. ತಲೆಕೆಡಿಸಿಕೊಳ್ಳಬೇಡಿ ಎಂದು ಸ್ಪಷ್ಟಪಡಿಸಿದರು.