
ಬೆಂಗಳೂರು, (ಅ.14): ಈ ಬಾರಿಯ ಉಪಚುನಾವಣೆಯನ್ನು ಬಿ.ಎಸ್ ಯಡಿಯೂರಪ್ಪ ಅವರ ರಾಜ್ಯ ಸರ್ಕಾರವನ್ನು ಅಥವಾ ಮೋದಿ ಅವರ ಕೇಂದ್ರ ಸರ್ಕಾರ ಬೀಳಿಸಲು ಎದುರಿಸುತ್ತಿಲ್ಲ. ಬದಲಿಗೆ ಎರಡೂ ಸರ್ಕಾರಗಳಿಗೆ ಸಂದೇಶ ರವಾನಿಸಲು ಈ ಚುನಾವಣೆ ಎದುರಿಸುತ್ತೇದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.
ರಾಜರಾಜೇಶ್ವರಿ ನಗರ ಉಪಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಎಚ್ ಅವರು ನಾಮಪತ್ರ ಸಲ್ಲಿಸಿದ ನಂತರ ಮಾಧ್ಯಮಗಳ ಜತೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ರಾಜರಾಜೇಶ್ವರಿ ನಗರ ಉಪಚುನಾವಣೆಗೆ ಕಾಂಗ್ರೆಸ್ ಪಕ್ಷದ ನಮ್ಮೆಲ್ಲ ನಾಯಕರು ಸೇರಿ ವಿದ್ಯಾವಂತ, ಯುವ ಹೆಣ್ಣು ಮಗಳನ್ನು ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದರು.
ಬಿಜೆಪಿ ನಾಯಕರುಗಳಿಗೆ ಸವಾಲು ಹಾಕಿದ ಡಿಕೆ ಶಿವಕುಮಾರ್
ಈ ಕ್ಷೇತ್ರದ ಮತದಾರರು ಬಹಳ ವಿದ್ಯಾವಂತ, ಪ್ರಜ್ಞಾವಂತ ಹಾಗೂ ಬುದ್ಧಿವಂತರಿದ್ದಾರೆ. ಇಲ್ಲಿನ ಮತದಾರರು ಎರಡು ಬಾರಿ ಸತತವಾಗಿ ಕಾಂಗ್ರೆಸ್ ಅಭ್ಯರ್ಥಿಯನ್ನು ಆಯ್ಕೆ ಮಾಡಿದ್ದಾರೆ. ಈ ಬಾರಿಯೂ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಲಿದ್ದಾರೆ. ಈ ಹಿಂದೆ ಇದ್ದ ಅಭ್ಯರ್ಥಿ ಯಾಕೆ ಹೋದರು ಎಂಬ ಬಗ್ಗೆ ಈಗ ಚರ್ಚೆ ಮಾಡುವುದಿಲ್ಲ. ಮತದಾರ ಕಳೆದ ಚುನಾವಣೆಯಲ್ಲಿ ಪಕ್ಷಕ್ಕೆ ನೀಡಿದ್ದಕ್ಕಿಂತ ಹೆಚ್ಚಿನ ಮತ ನೀಡಿ ನಮ್ಮ ಅಭ್ಯರ್ಥಿಯನ್ನು ಆಯ್ಕೆ ಮಾಡುತ್ತಾರೆ ಎಂಬ ವಿಶ್ವಾಸವಿದೆ. ಈ ಕ್ಷೇತ್ರದ ಜನರ ನಂಬಿಕೆ ಉಳಿಸಿಕೊಂಡು ನಾವು ಕೆಲಸ ಮಾಡುತ್ತೇವೆ ಎಂದು ಭರವಸೆ ನೀಡಿದರು.
ಇನ್ನು ಡಿಜೆ ಹಳ್ಳಿ, ಕೆ.ಜೆ ಹಳ್ಳಿ ಗಲಾಟೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಈ ಪ್ರಕರಣದಲ್ಲಿ ಕಾಂಗ್ರೆಸ್ ನವರು ಇಲ್ಲಾ. ಕಾಂಗ್ರೆಸೇತರರು ಮಾಡಿರುವ ಗಲಾಟೆ. ಬಿಜೆಪಿ ಸರ್ಕಾರ ಹೆದರಿಸಿ ಬೆದರಿಸಿ ರಾತ್ರೋ ರಾತ್ರಿ ಕಾಂಗ್ರೆಸ್ ನವರ ಹೆಸರು ಸೇರಿಸಿದ್ದಾರೆ. ನಮ್ಮನ್ನ ಬೆದರಿಸುವ ತಂತ್ರ ಮಾಡುತ್ತಿದ್ದಾರೆ. ಪರಮೇಶ್ವರ ಅವರನ್ನ ಕರೆದು ಸಿಬಿಐ ತನಿಖೆ ಮಾಡಿದೆ. ನಮ್ಮಿಬ್ಬರು ಶಾಸಕರನ್ನ ತನಿಖೆ ಮಾಡಿದ್ದಾರೆ. ಈ ಬೆದರಿಕೆಗೆಲ್ಲಾ ನಾವು ಬಗ್ಗಲ್ಲ ಖಡಕ್ ಆಗಿ ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.