ಸದ್ಯ ಉಪ ಚುನಾವಣೆಗೆ ದಿನಾಂಕ ನಿಗದಿಯಾಗಿದ್ದು, ರಾಜಕೀಯ ನಾಯಕರ ಆರೋಪ-ಪ್ರತ್ಯಾರೋಪಗಳು ಆರಂಭವಾಗಿದ್ದು, ಹಳೇ ಜೋಡಿತ್ತೆಗಳು ಇದೀಗ ಜಂಗಿ ಕುಸ್ತಿಗೆ ಇಳಿದಿದ್ದಾರೆ. ಅಲ್ಲದೇ ಮುಂಬರುವ ಚುನಾವಣೆಗೆ ಗೆಳೆಯನ ವಿರುದ್ಧ ಕುಮಾರಸ್ವಾಮಿ ತೊಡೆತಟ್ಟಿದ್ದಾರೆ.
ರಾಮನಗರ, (ಅ.14): ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಅಣ್ಣತಮ್ಮಂದಿರಂತೆ ಇದ್ದ ಎಚ್.ಡಿ ಕುಮಾರಸ್ವಾಮಿ ಹಾಗೂ ಡಿ.ಕೆ ಶಿವಕುಮಾರ್ ನಡುವೆ ಶೀತಲ ಸಮರ ಏರ್ಪಟ್ಟಿದೆ.
ಇಂದು (ಬುಧವಾರ) ರಾಮನಗರದಲ್ಲಿ ಮಾತನಾಡಿದ ಮಾಜಿ ಸಿಎಂ ಎಚ್ಡಿಕೆ, ಕೆಲವರು ನನಗೆ ಸ್ಲೋ ಪಾಯ್ಸನ್ ಕೊಡುತ್ತಿದ್ದಾರೆ, ಏನೋ ನಮ್ಮಿಂದಲೇ ಕುಮಾರಸ್ವಾಮಿಗೆ ರಕ್ಷಣೆ ಸಿಕ್ಕಿತು. ಅವರ ಸರ್ಕಾರ ಉಳಿಯಲು ನಾವೇ ಕಾರಣ ಅನ್ನುವ ರೀತಿ ಪ್ರಚಾರ ತೆಗೆದುಕೊಂಡರು ಎಂದು ಹೆಸರು ಹೇಳಿದೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್‌ಗೆ ಟಾಂಗ್ ಕೊಟ್ಟರು.
ಮುನಿಸು ಸರಿ ಮಾಡಲು ಪತ್ನಿ ಜೊತೆಗೆ ದಿಢೀರ್ ತೆರಳಿದ್ರು ಎಚ್‌ಡಿಕೆ
ಸರ್ಕಾರ ಉಳಿಯಲು ನಾವೇ ಕಾರಣ ಎನ್ನುವ ಜೊತೆಗೆ ನನಗೆ ಆತ್ಮೀಯತೆ ತೋರಿದರು. ಅದೆಲ್ಲವೂ ನನಗೆ ಗೊತ್ತಿದೆ. ಈ ಬಾರಿ ನಾವು ಯಾವುದೇ ರೀತಿಯಾಗಿ ಮೈಮರೆಯಲ್ಲ, ಹಾಗಾಗಿಯೇ ಈ ಬಾರಿ ರಾಮನಗರ ಜಿಲ್ಲೆಯಲ್ಲಿ ಎಲ್ಲಾ ಚುನಾವಣೆಯಲ್ಲಿಯೂ ನಾನೇ ಇರುತ್ತೇನೆ ಎಂದು ಪರೋಕ್ಷವಾಗಿ ಡಿಕೆಶಿ ವಿರುದ್ಧ ವಾಗ್ದಾಳಿ ನಡೆಸಿದರು.
ಗ್ರಾ.ಪಂ, ಜಿ.ಪಂ, ತಾ.ಪಂ ಚುನಾವಣೆಗಳ ಜವಾಬ್ದಾರಿ ನಾನೇ ವಹಿಸಿಕೊಳ್ಳುತ್ತೇನೆ. ರಾಮನಗರ, ಚನ್ನಪಟ್ಟಣ, ಮಾಗಡಿ ಜೊತೆಗೆ ಕನಕಪುರದಲ್ಲೂ ಚುನಾವಣೆ ಮಾಡುತ್ತೇವೆ, ಈಗಲೂ ಸಹ ಕನಕಪುರದಲ್ಲಿ ಯಾರೇ ಅಭ್ಯರ್ಥಿಯಾದರೂ 50-60 ಸಾವಿರ ಮತಗಳಿವೆ. ನಾನು ಕಳೆದ 15 ವರ್ಷದಿಂದ ಯಾವುದೇ ಲೋಕಲ್ ಚುನಾವಣೆ ಮಾಡಿಲ್ಲ ಎಂದರು.