
ಬೆಂಗಳೂರು (ಜೂ.11): ‘ಬಿಜೆಪಿಯವರು ಇಲ್ಲಿಯವರೆಗೆ ಮತಕಳ್ಳತನ ಮಾಡುತ್ತಿದ್ದರು. ಈಗ ರಾಜ್ಯಸಭೆ ಸ್ಥಾನಗಳನ್ನೇ ಕಳ್ಳತನ ಮಾಡಿ ಮತ ಚೋರಿ ಜತೆಗೆ ಸೀಟು ಚೋರಿ ಶುರು ಮಾಡುವ ಕೀಳು ಮಟ್ಟಕ್ಕೆ ಬಿಜೆಪಿಯವರು ಇಳಿದಿದ್ದಾರೆ’ ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಟೀಕಿಸಿದ್ದಾರೆ.
ಕೆಪಿಸಿಸಿ ಅಧ್ಯಕ್ಷ(KPCC President)ರಾದ ಬಳಿಕ ಮೊದಲ ಬಾರಿಗೆ ಕೆಪಿಸಿಸಿ ಕಚೇರಿಗೆ ಆಗಮಿಸಿದ ಅವರು ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಬಿಜೆಪಿಯವರಿಗೆ ಚುನಾವಣಾ ಅಕ್ರಮಗಳು ಹೊಸತಲ್ಲ. ಎರಡು ತಿಂಗಳ ಹಿಂದೆ ಹರಿಯಾಣದಲ್ಲಿ ರಾಜ್ಯಸಭೆ ಚುನಾವಣೆ ಮಾಡುವಾಗ 37 ಮತಗಳಲ್ಲಿ ನಮಗೆ ಅಗತ್ಯವಿದ್ದದ್ದು 31 ಮಾತ್ರ. ಆಗ 4 ಮತ ಅಸಿಂದುಗೊಳಿಸಿದ್ದರಿಂದ ನಮಗೆ ಸಿಕ್ಕಿದ್ದು 27 ಮತ ಮಾತ್ರ. ಇನ್ನು 2016ರ ಚುನಾವಣೆಯಲ್ಲಿ ನಮ್ಮ 14 ಮತಗಳನ್ನು ಅಸಿಂಧುಗೊಳಿಸಿ ಬಿಜೆಪಿ ಸದಸ್ಯರನ್ನು ಗೆಲ್ಲಿಸಿದ್ದರು. ಹೀಗಾಗಿ ಇದೇನು ಹೊಸತಲ್ಲ. ಪ್ರಜಾತಂತ್ರವನ್ನು ಸಂಪೂರ್ಣವಾಗಿ ನೆಲಸಮ ಮಾಡಲು ಕುತಂತ್ರ, ಷಡ್ಯಂತ್ರ ಮಾಡುತ್ತಿದ್ದಾರೆ. ಸಂವಿಧಾನ ಮೀರಿ ಕೆಲಸ ಮಾಡಲು ಮುಂದಾಗಿದ್ದಾರೆ. ನಾವು ಇದನ್ನು ಖಂಡಿಸುತ್ತೇವೆ ಎಂದು ತಿಳಿಸಿದರು.
ಆರ್ಎಸ್ಎಸ್ ನೋಂದಣಿ ವಿಚಾರವಾಗಿ ಸಚಿವ ಪ್ರಿಯಾಂಕ್ ಖರ್ಗೆ ಅವರ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಹರಿಪ್ರಸಾದ್, ‘ಪ್ರಿಯಾಂಕ್ ಖರ್ಗೆ ಅವರು ಗೃಹ ಸಚಿವರು, ಸರ್ಕಾರದ ಭಾಗ, ಸಂವಿಧಾನದ ವ್ಯಾಪ್ತಿಯಲ್ಲಿ ಅವರಿಗೆ ಅಧಿಕಾರವಿದೆ. ಸಂವಿಧಾನದ ಅಡಿ ಅವರು ಕೈಗೊಳ್ಳುವ ಕ್ರಮಕ್ಕೆ ನಾನು ಸಹಮತ ವ್ಯಕ್ತಪಡಿಸುತ್ತೇನೆ’ ಎಂದು ತಿಳಿಸಿದರು.
‘ಮುಂದಿನ 2 ವರ್ಷ ಕಾಂಗ್ರೆಸ್ ಕಾರ್ಯಕರ್ತರ ವರ್ಷ. ಎರಡು ವರ್ಷ ವಿಧಾನಸಭೆ, ನಂತರದ ಒಂದು ವರ್ಷ ಲೋಕಸಭೆ ಚುನಾವಣೆಯಲ್ಲಿ ನಾವು ಹೋರಾಟ ಮಾಡಿ ಬಿಜೆಪಿ ಹಾಗೂ ಆಸ್‌ಎಸ್ಎಸ್ ಅನ್ನು ಮಣಿಸಬೇಕು’ ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ನಡೆದ ಕಾರ್ಯಕರ್ತರ ಸಭೆ ಉದ್ದೇಶಿಸಿ ಮಾತನಾಡಿ, ‘ಕಾಂಗ್ರೆಸ್ ಪಕ್ಷದಲ್ಲಿ ಸ್ಥಿತಿವಂತರಿದ್ದರೂ ಕಾಂಗ್ರೆಸ್ ಬಡವರ ಪಕ್ಷ. ಇಡೀ ದೇಶದಲ್ಲಿ ಕಾಂಗ್ರೆಸ್ ಬಳಿ ಇರುವುದು ₹700 ಕೋಟಿ ಮಾತ್ರ. ಆದರೆ ಬಿಜೆಪಿ ಬಳಿ ₹10,000 ಕೋಟಿ ಇದೆ. ಹೀಗಾಗಿ ನನಗೆ ಶಾಲು, ಹೂವು ಕೊಡುವ ಬದಲು ಪಕ್ಷಕ್ಕೆ ಹಣ ಹಾಕಿ, ಪಕ್ಷದ ಖಜಾನೆ ತುಂಬಲಿ’ ಎಂದು ಕಾರ್ಯಕರ್ತರು ಹಾಗೂ ಮುಖಂಡರಿಗೆ ಬಿ.ಕೆ. ಹರಿಪ್ರಸಾದ್ ಕರೆ ನೀಡಿದರು.
ನಾವು ಕಾಂಗ್ರೆಸ್ ಪಕ್ಷಕ್ಕಾಗಿ ದುಡಿದಿದ್ದೇವೆ, ನಮಗೆ ಅಧಿಕಾರ ಸಿಗುತ್ತೋ, ಇಲ್ಲವೋ ಎಂಬ ಭಾವನೆ ಬೇಡ. ಜಿಬಿಎ ಚುನಾವಣೆಯಲ್ಲಿ ಒಳ್ಳೆಯ ಕಾರ್ಯಕರ್ತ ಗೆಲ್ಲುವ ಅರ್ಹತೆ ಇದ್ದರೆ, ಹಣವಿಲ್ಲದಿದ್ದರೂ ನಿಮಗೆ ಟಿಕೆಟ್ ಸಿಗುವುದು ಗ್ಯಾರಂಟಿ. 2001ರಲ್ಲಿ ಬೆಂಗಳೂರು ಪಾಲಿಕೆ ಚುನಾವಣೆ ನಡೆಸಲು ನನಗೆ ಜವಾಬ್ದಾರಿ ನೀಡಿದ್ದರು. ಹೊಟೇಲ್ ವೇಯ್ಟರ್, ಕಸ ಗುಡಿಸುವವರು ಸೇರಿ ಸಣ್ಣ ಸಮುದಾಯದವರಿಗೆ ಟಿಕೆಟ್ ಕೊಟ್ಟಾಗ ಎಲ್ಲರೂ ಅಚ್ಚರಿಗೊಂಡಿದ್ದರು. ಆ ಎಲ್ಲರೂ ಗೆದ್ದಿದ್ದರು ಎಂದು ಹರಿಪ್ರಸಾದ್ ನೆನೆದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.