ಕಾಂಗ್ರೆಸ್ ಪಕ್ಷ ವಿಶೇಷವಾಗಿ ಹಿಂದುಳಿದ ಜನರ ಅಭಿವೃದ್ಧಿಗೆ ಪೂರಕವಾಗಿ ಯೋಜನೆ ರೂಪಿಸುತ್ತದೆ. ಅದೇ ಬಿಜೆಪಿ ಜಾತಿ ಧರ್ಮದ ಮೇಲೆ ರಾಜಕಾರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದ ಮಧು ಬಂಗಾರಪ್ಪ
ಬೆಳಗಾವಿ(ಡಿ.14): ಬಿಜೆಪಿಯವರು ಜಾತಿ ಜಾತಿಗಳನ್ನು, ಧರ್ಮಗಳನ್ನು ಒಡೆದಿದ್ದಾರೆ. ಇದೀಗ ರೈತರನ್ನು ಒಡೆಯುತ್ತಿದ್ದಾರೆ. ಒಡೆದು ಆಳುವ ನೀತಿಯಲ್ಲಿಯೇ ಅವರು ಕೆಲಸ ಮಾಡುತ್ತಿದ್ದಾರೆ ಎಂದು ಕೆಪಿಸಿಸಿ ಒಬಿಸಿ ಘಟಕದ ರಾಜ್ಯಾಧ್ಯಕ್ಷ ಮಧು ಬಂಗಾರಪ್ಪ ಆರೋಪಿಸಿದರು.
ನಗರದ ಕಾಂಗ್ರೆಸ್ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ರೈತರ ಸಬ್ಸಿಡಿ ಯೋಜನೆ ರದ್ದುಗೊಳಿಸಲಾಗಿದೆ. ವಿದ್ಯುತ್ ಖಾಸಗೀಕರಣಗೊಳಿಸಿ ರೈತರಿಗೆ ಕೊಡುವ ಉಚಿತ ವಿದ್ಯುತ್ ಅನ್ನು ಹೊಡೆಯುವ ಹುನ್ನಾರ ನಡೆಸಲಾಗಿದೆ. ಕಾಂಗ್ರೆಸ್ ಪಕ್ಷ ವಿಶೇಷವಾಗಿ ಹಿಂದುಳಿದ ಜನರ ಅಭಿವೃದ್ಧಿಗೆ ಪೂರಕವಾಗಿ ಯೋಜನೆ ರೂಪಿಸುತ್ತದೆ. ಅದೇ ಬಿಜೆಪಿ ಜಾತಿ ಧರ್ಮದ ಮೇಲೆ ರಾಜಕಾರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ನಮ್ಮ ತಂದೆ ಬಂಗಾರಪ್ಪ ಅವರ ಮಾರ್ಗದರ್ಶನದಲ್ಲಿ ಕೆಲಸ ಮಾಡಿದ್ದೇನೆ. ಕಾಂಗ್ರೆಸ್ ಪಕ್ಷ ಹೆಚ್ಚಿನ ಜವಾಬ್ದಾರಿ ಕೂಡಾ ಕೊಟ್ಟಿದೆ. ಚುನಾವಣೆ ಪ್ರಣಾಳಿಕೆ ಸಿದ್ದಪಡಿಸುವ ಸಮಿತಿಯಲ್ಲಿ ಉಪಾಧ್ಯಕ್ಷನಾಗಿ ಕೆಲಸ ಮಾಡಿದ್ದೇನೆ. ಇದರ ಜೊತೆಗೆ ಒಬಿಸಿ ಘಟಕದ ಅಧ್ಯಕ್ಷ ಸ್ಥಾನವನ್ನು ನನಗೆ ನೀಡಿದ್ದಾರೆ ಎಂದು ಅವರು ಹೇಳಿದರು.
undefined
ಗಡಿ ವಿವಾದ ಕಿಚ್ಚಿನ ಮಧ್ಯೆ ಬೆಳಗಾವಿಗೆ ಮಹಾರಾಷ್ಟ್ರ ಎನ್‌ಸಿಪಿ ಶಾಸಕ ರೋಹಿತ ಪವಾರ ಭೇಟಿ
ಒಬಿಸಿ ಘಟಕದ ಅಧ್ಯಕ್ಷನಾದ ನಂತರ ರಾಜ್ಯವನ್ನು ಸುತ್ತಿ ಪಕ್ಷ ಸಂಘಟನೆ ಮಾಡುವ ಕಾರ್ಯವನ್ನು ಮಾಡುತ್ತಿದ್ದೇನೆ. ಚುನಾವಣೆಯಲ್ಲಿ ಮತಗಳನ್ನು ಗಮನಿಸಿದಾಗ ಶೇ.52 ರಿಂದ 58 ರಷ್ಟುಮತಗಳು ಓಬಿಸಿ ಅವರದ್ದೆ ಇರುತ್ತದೆ. ಈ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಪ್ರವಾಸ ಕೈಗೊಂಡಿದ್ದೇನೆ. ಈ ಸಂದರ್ಭದಲ್ಲಿ ಓಬಿಸಿ ಸಮುದಾಯದ ಜನರನ್ನು ಒಗ್ಗೂಡಿಸುವ ಕೆಲಸ ಮಾಡಲಾಗುವುದು. ಇದಕ್ಕೆ ಪೂರಕವಾಗಿ ಜಿಲ್ಲೆಯಾದ್ಯಂತ ಓಬಿಸಿ ಸಮಾವೇಶಗಳನ್ನು ನಡೆಸಲಾಗುವುದು. ಬಳಿಕ ಮಧ್ಯಕರ್ನಾಟಕದಲ್ಲಿ ರಾಜ್ಯಮಟ್ಟದ ಓಬಿಸಿ ಸಮಾವೇಶನಡೆಸಲಾಗುವುದು ಎಂದು ಅವರು ಹೇಳಿದರು.
ಕಾಂಗ್ರೆಸ್ ಜಿಲ್ಲಾ ಮಟ್ಟದಲ್ಲಿ ಪ್ರಣಾಳಿಕೆಯನ್ನು ಸಿದ್ಧಪಡಿಸುತ್ತಿದೆ. ಅದರಂತೆ ಬೆಳಗಾವಿ ಗಡಿ ವಿಚಾರಕ್ಕೆ ಸಂಬಂಧಿಸಿದಂತೆ ಯಾವುದೇ ರಾಜಿ ಇಲ್ಲ. ಕಾಂಗ್ರಸ್ ಕನ್ನಡಿಗರ ಪರವಾಗಿದೆ. ಈ ಗಡಿ ವಿಚಾರವನ್ನು ಪ್ರಣಾಳಿಕೆಯಲ್ಲಿ ಸೇರ್ಪಡೆ ಮಾಡಲಾಗುವುದು. ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಕೇಂದ್ರ ಗೃಹ ಸಚಿವ ಅಮಿತ ಶಾ ಕರ್ನಾಟಕ, ಮಹಾರಾಷ್ಟ್ರ ಉಭಯ ರಾಜ್ಯಗಳ ಮುಖ್ಯಮಂತ್ರಿ ಜೊತೆಗೆ ಸಭೆ ನಡೆಸಲಿದ್ದಾರೆ. ಆದರೆ, ಅಮಿತ್ ಶಾ ಅವರೇ ಚುವುಟುತ್ತಾರೆ, ಅವರೇ ರಮಿಸುತ್ತಾರೆ ಎಂದು ವ್ಯಂಗ್ಯವಾಡಿದರು. ಸುದ್ದಿಗೋಷ್ಠಿಯಲ್ಲಿ ಶಾಸಕ ಗಣೇಶ ಹುಕ್ಕೇರಿ, ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಕಾಂಗ್ರೆಸ್ ಜಿಲ್ಲಾ ಗ್ರಾಮೀಣ ಅಧ್ಯಕ್ಷ ವಿನಯ ನಾವಲಗಟ್ಟಿ ಮೊದಲಾದವರು ಉಪಸ್ಥಿತರಿದ್ದರು.