ವಿಶ್ವವೇ ಭಾರತದತ್ತ ಮುಖ ಮಾಡುವಂತೆ ಮಾಡಿದ ಪ್ರಧಾನಿ ಮೋದಿ: ಸಂಸದ ಕರಡಿ

Published : Sep 16, 2022, 11:46 AM IST
ವಿಶ್ವವೇ ಭಾರತದತ್ತ ಮುಖ ಮಾಡುವಂತೆ ಮಾಡಿದ ಪ್ರಧಾನಿ ಮೋದಿ: ಸಂಸದ ಕರಡಿ

ಸಾರಾಂಶ

ಮೋದಿ ಆಡಳಿತದಲ್ಲಿ ಅಭಿವೃದ್ಧಿ ಮೈಲುಗಲ್ಲು, ರೈತ ಕಲ್ಯಾಣ, ರಾಷ್ಟ್ರೀಯ ಸುರಕ್ಷತೆ, ಆರ್ಥಿಕ ಸುಧಾರಣೆಗೆ ಆದ್ಯತೆ: ಸಂಗಣ್ಣ ಕರಡಿ 

ಕೊಪ್ಪಳ(ಸೆ.16):  ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ 8 ವರ್ಷದ ಆಡಳಿತದಲ್ಲಿ ದೇಶವು ಅಭಿವೃದ್ಧಿಯಲ್ಲಿ ಹಲವು ಮೈಲುಗಲ್ಲುಗಳನ್ನು ಸ್ಥಾಪಿಸಿ ವಿಶ್ವವೇ ಭಾರತದತ್ತ ಮುಖ ಮಾಡುವಂತೆ ಮಾಡಿದ್ದಾರೆ ಎಂದು ಸಂಸದ ಸಂಗಣ್ಣ ಕರಡಿ ಬಣ್ಣಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಹಲವು ಮಹತ್ವದ ಯೋಜನೆಗಳಿಗೆ ಚಾಲನೆ ನೀಡಿ ವಿಶ್ವವೇ ಗಮನ ಸೆಳೆಯುವಂತೆ ಮಾಡಿದೆ. ಸದೃಢ ಸ್ವಾವಲಂಬಿ, ಸಶಕ್ತ ಭಾರತ ಕಟ್ಟುವ ಕೆಲಸ ಮಾಡಿದ್ದಾರೆ. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಚಾಲನೆ, ಬ್ರೂ ರಿಯಾಂಗ್‌ ಒಪ್ಪಂದ, ರಕ್ಷಣಾ ಕ್ಷೇತ್ರದಲ್ಲಿ ಸುಧಾರಣೆ, ಅಂತ್ಯೋದಯ, ಕಾರಿಡಾರ್‌, ತ್ರಿವಳಿ ತಲಾಖ್‌, ರೈತ ಕಲ್ಯಾಣ ಕಾರ್ಯಕ್ರಮಗಳು, ಯುವ ಸಬಲೀಕರಣ, ತಂತ್ರಜ್ಞಾನ, ಮೂಲ ಸೌಕರ್ಯ, ನವಭಾರತ ನಾರಿಶಕ್ತಿ, ರಾಷ್ಟ್ರೀಯ ಸುರಕ್ಷತೆ ನೀತಿ, ಆರ್ಥಿಕ ಸುಧಾರಣೆಗಳು ಸೇರಿದಂತೆ ಪಿಎಂ ಕಿಸಾನ ಸೇರಿ ಹಲವು ಯೋಜನೆಗಳನ್ನು ರಾಜ್ಯ ಸರ್ಕಾರದ ಸಹಯೋಗದಲ್ಲಿ ಜಾರಿಗೊಳಿಸಿ ಜನರ ಕಲ್ಯಾಣಕ್ಕೆ ಶ್ರಮಿಸುತ್ತಿದ್ದಾರೆ ಎಂದರು.

ನಮ್ಮ ಕ್ಷೇತ್ರದಲ್ಲಿ ಸಿಂಗಟಾಲೂರು ಏತ ನೀರಾವರಿ ಯೋಜನೆಗೆ ಹಿಂದಿನ ಸರ್ಕಾರ ಏನೂ ಮಾಡಿರಲಿಲ್ಲ. ನಾವು ಯೋಜನೆಯಲ್ಲಿ ಮಾರ್ಪಾಡು ತಂದು ಚೇಂಬರ್‌ ಮಾದರಿ ನೀರಾವರಿಗೆ ಒತ್ತು ನೀಡಿದ್ದೇವೆ. ಇನ್ನು ಕೊಪ್ಪಳ ಏತ ನೀರಾವರಿಗೆ ಹಿಂದಿನ ಸರ್ಕಾರ ನಿರ್ಲಕ್ಷ್ಯ ವಹಿಸಿತ್ತು. ರಾಜ್ಯ ಸರ್ಕಾರ ಯೋಜನೆಗೆ ಒತ್ತು ನೀಡಿದೆ. ಇನ್ನೆರಡು ತಿಂಗಳಲ್ಲಿ ಸಿಎಂರಿಂದ ನೀರಾವರಿಗೆ ಚಾಲನೆ ಕೊಡಿಸುವ ಸಿದ್ಧತೆಯಲ್ಲಿದ್ದೇವೆ. ತಿಂಗಳಲ್ಲಿ ಸಿಂಗಟಾಲೂರು ಏತ ನೀರಾವರಿ ಯೋಜನೆಗೆ ಟೆಂಡರ್‌ ಆರಂಭವಾಗಲಿದೆ ಎಂದರು.

ಬೆಂಗ್ಳೂರು ಬಿಡು, ಕ್ಷೇತ್ರದಲ್ಲಿ ಸುತ್ತಾಡು: ಸಂಸದ ಕರಡಿ ಪುತ್ರ ಅಮರೇಶಗೆ ಸಿಎಂ ಬೊಮ್ಮಾಯಿ ಸೂಚನೆ

ಗಿಣಗೇರಾ- ಮಹೆಬೂಬ ನಗರ ರೈಲ್ವೆ ಯೋಜನೆ ನನೆಗುದಿಗೆ ಬಿದ್ದಿತ್ತು. ಈಗ ಅದಕ್ಕೆ ವೇಗ ದೊರೆತಿದ್ದು, ಕಾರಟಗಿವರೆಗೂ ರೈಲು ಓಡಲಿದೆ. ಮುಂದಿನ ವರ್ಷದ ಫೆಬ್ರವರಿಯೊಳಗೆ ಸಿಂಧನೂರಿಗೆ ರೈಲು ಓಡಿಸುವ ಯೋಜನೆಯಿದೆ. ಕುಷ್ಟಗಿಗೂ ಫೆಬ್ರವರಿಯಲ್ಲಿ ರೈಲು ಓಡಿಸುವ ಯೋಜನೆಯಲ್ಲಿದ್ದೇವೆ. ಇದಲ್ಲದೇ 30 ಬೆಡ್‌ಗಳ ಇಎಸ್‌ಐ ಆಸ್ಪತ್ರೆ ಮಂಜೂರಾಗಿದ್ದು, ವಿಶೇಷ ತಂಡ ಕೊಪ್ಪಳಕ್ಕೆ ಆಗಮಿಸಿ ಸ್ಥಳ ಪರಿಶೀಲನೆ ನಡೆಸುತ್ತಿದೆ. ಜಿಲ್ಲೆಗೆ ಎರಡು ಹೊಸ ರೈಲ್ವೆ ಯೋಜನೆಗಳು ಮಂಜೂರಾಗಿವೆ. ಹೆದ್ದಾರಿ ರಸ್ತೆ ನಿರ್ಮಾಣಕ್ಕೆ ನಮ್ಮ ಸರ್ಕಾರ ಹೆಚ್ಚು ಒತ್ತು ಕೊಟ್ಟಿದ್ದು, ರಾಷ್ಟ್ರೀಯ ಹೆದ್ದಾರಿ ರಸ್ತೆಗಳ ನಿರ್ಮಾಣಕ್ಕೆ ಒತ್ತು ನೀಡಿದೆ. ಇದಲ್ಲದೇ ಜಿಲ್ಲೆಗೆ ವಿಮಾನ ನಿಲ್ದಾಣ ಮಂಜೂರಾಗಿದೆ. ಅಂಜನಾದ್ರಿಗೆ .100 ಕೋಟಿ ಘೋಷಣೆ ಮಾಡಿದೆ. ನೀಲನಕ್ಷೆ ಸಿದ್ಧವಾಗಿ ಕಾಮಗಾರಿಗೆ ಸಿಎಂ ಚಾಲನೆ ನೀಡಿದ್ದಾರೆ. ಪ್ರವಾಸೋದ್ಯಮ ಅಭಿವೃದ್ಧಿಗೆ ಸರ್ಕಾರ ಒತ್ತು ನೀಡುತ್ತಿದೆ. ಜಿಲ್ಲೆಗೆ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಸಿಎಂ ಘೋಷಣೆ ಮಾಡಿದ್ದಾರೆ. ಸದ್ಯ 5 ಎಕರೆ ಜಮೀನು ಅಗತ್ಯವಿದ್ದು, ಜಿಲ್ಲಾಡಳಿತ ಜಮೀನು ಸ್ವಾಧೀನಕ್ಕೂ ಸಿದ್ಧತೆ ನಡೆಸಿದೆ ಎಂದರು.

ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸೆ. 17ರಂದು ಜನ್ಮದಿನದ ಪ್ರಯುಕ್ತ ಸೇವಾ ಪಾಕ್ಷಿಕ ಹಮ್ಮಿಕೊಂಡಿದ್ದು ಗುಡಿ- ಗುಂಡಾರಗಳಲ್ಲಿ ಹೋಮ, ಹವನ ನಡೆಸದೇ ಜನ ಸೇವೆ ಮಾಡುವ ನಿರಂತರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಅಂತ ಸಂಸದ ಸಂಗಣ್ಣ ಕರಡಿ ತಿಳಿಸಿದ್ದಾರೆ. 

ಪ್ರಧಾನಿ ಜನ್ಮದಿನದ ಪ್ರಯುಕ್ತ ಸೇವಾ ಪಾಕ್ಷಿಕ

ಬಿಜೆಪಿ ಮುಖಂಡರ ಸಿದ್ದೇಶ ಯಾದವ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸೆ. 17ರಂದು ಜನ್ಮದಿನದ ಪ್ರಯುಕ್ತ ಸೇವಾ ಪಾಕ್ಷಿಕ ಹಮ್ಮಿಕೊಂಡಿದ್ದು, ಸೆ. 17ರಿಂದ ಅ. 2ರ ವರೆಗೂ ವಿವಿಧ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ ಎಂದರು. ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ನವೀನ ಗುಳಗಣ್ಣನವರ್‌, ಮಹೇಶ ಹಾದಿಮನಿ, ಮಹೇಶ ಅಂಗಡಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ವಂದೇ ಮಾತರಂ ಚರ್ಚೆ ವೇಳೆ ಶಾ ವರ್ಸಸ್‌ ಖರ್ಗೆ
24,300 ಹುದ್ದೆ ಭರ್ತಿಗೆ ಆರ್ಥಿಕ ಇಲಾಖೆ ಅಸ್ತು : ಯಾವ ಇಲಾಖೆಯ ಎಷ್ಟು ಹುದ್ದೆ ?