ಕಾಂಗ್ರೆಸ್ ಸರ್ಕಾರ ಜಾರಿ ಮಾಡಿರುವ ಗ್ಯಾರಂಟಿ ಯೋಜನೆಗಳಿಂದ ಪ್ರಭಾವಿತನಾಗಿದ್ದೇನೆ ಮತ್ತು ನಗರದಲ್ಲಿ ಅಭಿವೃದ್ಧಿ ಮಾಡುವುದಕ್ಕೆ ಕಾಂಗ್ರೆಸ್ ಸೇರಿದ್ದೇನೆ. ಯಾವುದೇ ಷರತ್ತು ಇಲ್ಲದೆ ಕಾಂಗ್ರೆಸ್ ಸೇರಿದ್ದು, ಪಕ್ಷದ ಅಭ್ಯರ್ಥಿಯ ಗೆಲುವಿಗಾಗಿ ಶ್ರಮಿಸುತ್ತೇನೆ ಎಂದ ರಾಜಶೇಖರ ಆಡೂರು
ಕೊಪ್ಪಳ(ಮಾ.31): ಸಂಸದ ಸಂಗಣ್ಣ ಕರಡಿ ಕಟ್ಟಾ ಬೆಂಬಲಿಗ ಹಾಗೂ ಕೊಪ್ಪಳ ನಗರಸಭೆ 11ನೇ ವಾರ್ಡಿನ ಬಿಜೆಪಿ ಸದಸ್ಯ ರಾಜಶೇಖರ ಆಡೂರು ಶನಿವಾರ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ ಮತ್ತು ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ ಹಿಟ್ನಾಳ ಗೆಲುವಿಗೆ ಶ್ರಮಿಸುವುದಾಗಿ ಹೇಳಿದ್ದಾರೆ. ನಗರದ ತಮ್ಮ ನಿವಾಸದಲ್ಲಿ ನಡೆದ ಸರಳ ಸಮಾರಂಭದಲ್ಲಿ ಶಾಸಕ ರಾಘವೇಂದ್ರ ಹಿಟ್ನಾಳ ಕಾಂಗ್ರೆಸ್ ಪಕ್ಷದ ಶಾಲು ಹಾಕುವ ಮೂಲಕ ಸ್ವಾಗತಿಸಿದರು.
ಬಳಿಕ ಮಾತನಾಡಿದ ರಾಜಶೇಖರ ಆಡೂರು ಅವರು, ನಾನು ಕಳೆದ ಆರು ತಿಂಗಳ ಹಿಂದೆಯೇ ಕಾಂಗ್ರೆಸ್ ಸೇರುವ ನಿರ್ಧಾರ ಮಾಡಿದ್ದೆ. ಸಂಗಣ್ಣರಿಗೆ ಟಿಕೆಟ್ ತಪ್ಪಿದ್ದರಿಂದ ನಾನು ಬಿಜೆಪಿ ತೊರೆದಿಲ್ಲ ಎಂದು ಸ್ಪಷ್ಟಪಡಿಸಿದರು.
ಕಾಂಗ್ರೆಸ್ ಸರ್ಕಾರ ಜಾರಿ ಮಾಡಿರುವ ಗ್ಯಾರಂಟಿ ಯೋಜನೆಗಳಿಂದ ಪ್ರಭಾವಿತನಾಗಿದ್ದೇನೆ ಮತ್ತು ನಗರದಲ್ಲಿ ಅಭಿವೃದ್ಧಿ ಮಾಡುವುದಕ್ಕೆ ಕಾಂಗ್ರೆಸ್ ಸೇರಿದ್ದೇನೆ. ಯಾವುದೇ ಷರತ್ತು ಇಲ್ಲದೆ ಕಾಂಗ್ರೆಸ್ ಸೇರಿದ್ದು, ಪಕ್ಷದ ಅಭ್ಯರ್ಥಿಯ ಗೆಲುವಿಗಾಗಿ ಶ್ರಮಿಸುತ್ತೇನೆ ಎಂದರು.
undefined
Lok Sabha Election 2024: ಸಂಗಣ್ಣ ಕರಡಿ ಜೊತೆ ಬಿಎಸ್‌ವೈ, ವಿಜಯೇಂದ್ರ ಮತ್ತೆ ಚರ್ಚೆ!
ಕರಡಿ ಕಾಂಗ್ರೆಸ್‌ಗೆ ಬರುತ್ತಾರೋ ಇಲ್ಲವೋ ಎಂಬುದು ನನಗೆ ಗೊತ್ತಿಲ್ಲ, ಅವರು ನನ್ನ ಜೊತೆಗೆ ಈ ಕುರಿತು ಮಾತನಾಡಿಯೂ ಇಲ್ಲ. ನಾನು ಅವರ ಬೆಂಬಲಿಗ ಮತ್ತು ಬಿಜೆಪಿ ಸದಸ್ಯನೂ ಆಗಿದ್ದೆ. ಶಾಂತಿ ಮತ್ತು ಸೌಹಾರ್ದ ಬದುಕಿಗೆ, ಸರ್ವ ಜನಾಂಗದ ಶಾಂತಿಯ ತೋಟ ಕಾಂಗ್ರೆಸ್ ಪಕ್ಷವೇ ಸೂಕ್ತ ಎಂದು ನಾನು ಇಲ್ಲಿ ಸೇರಿದ್ದೇನೆ ಎಂದರು.
ಕರಡಿ ಬೆಂಬಲಿಗ ಕಾಂಗ್ರೆಸ್‌ಗೆ:
ಕರಡಿ ಅವರೊಂದಿಗೆ ಸುಮಾರು 25 ವರ್ಷಗಳಿಂದ ಇದ್ದ ಸೈಯದ್ ನಾಸೀರುದ್ದೀನ್ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾದರು. ಸಂಗಣ್ಣ ಜೆಡಿಎಸ್ ಪಕ್ಷದಲ್ಲಿದ್ದಾಗಿನಿಂದ ಜೊತೆಯಲ್ಲಿಯೇ ಇದ್ದವರು ಬಿಜೆಪಿಗೆ ಹೋದರೂ ಸಹ ಅವರ ಜೊತೆಯಲ್ಲಿ ಇದ್ದರು. ಈಗ ಅವರಿಗೆ ಟಿಕೆಟ್ ಕೈತಪ್ಪಿದ್ದರಿಂದ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದಾರೆ. ಕೊಪ್ಪಳ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ರಾಜಶೇಖರ ಹಿಟ್ನಾಳ, ಶಾಸಕ ರಾಘವೇಂದ್ರ ಹಿಟ್ನಾಳ, ಅಸಿಫ್ ಅಲಿ, ಕೆ.ಎಂ. ಸಯ್ಯದ್, ಕಾಟನ್ ಪಾಶಾ, ರಾಮಣ್ಣ ಚೌಡ್ಕಿ, ಕೃಷ್ಣಾ ಇಟ್ಟಂಗಿ, ಪ್ರಸನ್ ಗಡಾದ ಮೊದಲಾದವರು ಇದ್ದರು.
ಕರಡಿಗೂ ಆಹ್ವಾನ: ರಾಘವೇಂದ್ರ ಹಿಟ್ನಾಳ
ಟಿಕೆಟ್ ಕೈ ತಪ್ಪಿರುವ ಕರಡಿ ಅವರೊಂದಿಗೆ ಸೌಜನ್ಯಯುತವಾಗಿ ಮಾತನಾಡಿದ್ದೇವೆ. ಸುಮಾರು 38 ವರ್ಷಗಳ ಸುದೀರ್ಘ ರಾಜಕೀಯ ಅನುಭವ ಇರುವ ಅವರಿಗೆ ಟಿಕೆಟ್ ತಪ್ಪಬಾರದಿತ್ತು. ಈಗ ಅವರನ್ನು ಪಕ್ಷಕ್ಕೆ ಆಗಮಿಸುವಂತೆ ಆಹ್ವಾನ ಮಾಡಿದ್ದೇವೆ, ಬಂದರೆ ಸ್ವಾಗತ ಎಂದು ಶಾಸಕ ರಾಘವೇಂದ್ರ ಹಿಟ್ನಾಳ ಹೇಳಿದರು. ನಗರದಲ್ಲಿ ಪಕ್ಷ ಸೇರ್ಪಡೆ ಕಾರ್ಯಕ್ರಮದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬರುವುದು, ಬಿಡುವುದು ಅವರಿಗೆ ಬಿಟ್ಟಿರುವ ವಿಚಾರ ಎಂದರು.
ಕೊಪ್ಪಳ ನಗರಸಭೆ ಸದಸ್ಯ ರಾಜಶೇಖರ ಆಡೂರು ಈಗ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಉಳಿದಂತೆ ಇನ್ನು ನಾಲ್ಕಾರು ಸದಸ್ಯರು ಶೀಘ್ರದಲ್ಲಿಯೇ ಬಿಜೆಪಿ ತೊರೆದು ಕಾಂಗ್ರೆಸ್ ಸೇರಲಿದ್ದಾರೆ. ಈಗಲೇ ಯಾರು, ಎಷ್ಟು ಬಿಜೆಪಿ ಸದಸ್ಯರು ಬರುತ್ತಾರೆ ಎಂದು ಹೇಳುವುದಿಲ್ಲ, ಶೀಘ್ರದಲ್ಲಿಯೇ ಎಲ್ಲವೂ ನಿಮಗೆ ಗೊತ್ತಾಗುತ್ತದೆ ಎಂದರು.
ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಅಸಮಾಧಾನಗೊಂಡಿದ್ದಾರೆ ಎನ್ನುವುದು ಸರಿಯಲ್ಲ, ಗಂಗಾವತಿಯಲ್ಲಿ ಎರಡು-ಮೂರು ಗುಂಪುಗಳು ಇರುವುದರಿಂದ ಸಮಸ್ಯೆಯಾಗಿದೆ. ಅದೆಲ್ಲವನ್ನು ಪಕ್ಷದ ಹೈಕಮಾಂಡ್ ಶೀಘ್ರದಲ್ಲಿಯೇ ಸರಿಪಡಿಸಲಿದೆ ಎಂದರು
ಇಕ್ಬಾಲ್ ಅನ್ಸಾರಿ ಈಗಾಗಲೇ ಸಿಎಂ ಅವರನ್ನು ಸಹ ಭೇಟಿಯಾಗಿದ್ದಾರೆ. ಅವರ ಜೊತೆಗೆ ಭಿನ್ನಾಭಿಪ್ರಾಯ ಇದ್ದ ನಾಯಕರು ಸಹ ಜೊತೆಯಾಗಿಯೇ ಭೇಟಿಯಾಗಿದ್ದಾರೆ, ಎಲ್ಲವೂ ಸುಖಾಂತ್ಯವಾಗಲಿದೆ ಎಂದರು.
ಕುಷ್ಟಗಿಯ ಹಸನಸಾಬ ದೋಟಿಹಾಳರನ್ನು ಕಾಡಾ ಅಧ್ಯಕ್ಷರಾಗಿ ನೇಮಕ ಮಾಡಿರುವುದು ಮತ್ತು ಇಕ್ಬಾಲ್ ಅನ್ಸಾರಿ ಅಸಮಾಧಾನಗೊಂಡಿರುವುದಕ್ಕೂ ಯಾವುದೇ ಸಂಬಂಧ ಇಲ್ಲ ಎಂದರು. ವನಬಳ್ಳಾರಿಯಲ್ಲಿ ಸಭೆ ಮಾಡಿದ್ದನ್ನು ಬೇರೆ ಪಕ್ಷದವರು ತಪ್ಪಾಗಿ ಅರ್ಥೈಸುತ್ತಿದ್ದಾರೆ. ಇದೆಲ್ಲವೂ ಬಗೆಹರಿಯಲಿದೆ ಎಂದರು.
ಸಂಗಣ್ಣ ಕರಡಿ ಬಿಜೆಪಿ ಬಿಡಲ್ಲ, ಸ್ಪರ್ಧೆ ಮಾಡಲ್ಲ: ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ
ಸಿಎಂ ಸಿದ್ದರಾಮಯ್ಯ ಅವರ ಬಳಿ ನಾನು ಇರುವಾಗಲೇ ಗಂಗಾವತಿ ವಿಧಾನಪರಿಷತ್ ಮಾಜಿ ಸದಸ್ಯ ಎಚ್.ಆರ್. ಶ್ರೀನಾಥ ಆಗಮಿಸಿದ್ದರು. ರಾಯಚೂರಿನವರ ಜೊತೆಯಲ್ಲಿ ಬಂದಿದ್ದರು. ನಾನು ಅವರನ್ನು ಕರೆದುಕೊಂಡು ಹೋಗಿದ್ದೇನೆ ಎಂದು ತಪ್ಪಾಗಿ ಹೇಳಲಾಗುತ್ತದೆ ಎಂದರು.
ನಗರಸಭೆ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿ, ಬಿಜೆಪಿಯನ್ನು ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದಾರೆ ಎಂದರೆ ಕಾಂಗ್ರೆಸ್ ಪರವಾಗಿ ಗಾಳಿ ಬೀಸಿದೆ. ಕೊಟ್ಟ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿರುವುದರಿಂದ ಕೇಂದ್ರದಲ್ಲಿಯೂ ಅಧಿಕಾರಕ್ಕೆ ಬಂದರೆ ಕೊಟ್ಟ ಗ್ಯಾರಂಟಿ ಜಾರಿ ಮಾಡುತ್ತಾರೆ ಎನ್ನುವ ವಿಶ್ವಾಸ ಬಂದಿದೆ ಎಂದು ಕೊಪ್ಪಳ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ ಹಿಟ್ನಾಳ ತಿಳಿಸಿದ್ದಾರೆ.