ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅವೈಜ್ಞಾನಿಕವಾಗಿ 5 ಗ್ಯಾರಂಟಿಗಳ ಅಮಿಷವೊಡ್ಡಿ ಮತ ಪಡೆದು ಆಡಳಿತ ಚುಕ್ಕಾಣಿ ಹಿಡಿದಿದೆ. ಅಧಿಕಾರಕ್ಕೆ ಬಂದು 15 ದಿನಗಳು ಕಳೆದರೂ ಭರವಸೆಗಳನ್ನು ಈಡೇರಿಸಲು ಕರಾರುಗಳನ್ನು ಹಾಕುವ ಮೂಲಕ ವಂಚಿಸಲು ಮುಂದಾಗಿದೆ.
ಕೋಲಾರ (ಜೂ.03): ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅವೈಜ್ಞಾನಿಕವಾಗಿ 5 ಗ್ಯಾರಂಟಿಗಳ ಅಮಿಷವೊಡ್ಡಿ ಮತ ಪಡೆದು ಆಡಳಿತ ಚುಕ್ಕಾಣಿ ಹಿಡಿದಿದೆ. ಅಧಿಕಾರಕ್ಕೆ ಬಂದು 15 ದಿನಗಳು ಕಳೆದರೂ ಭರವಸೆಗಳನ್ನು ಈಡೇರಿಸಲು ಕರಾರುಗಳನ್ನು ಹಾಕುವ ಮೂಲಕ ವಂಚಿಸಲು ಮುಂದಾಗಿದೆ. ಇದರ ವಿರುದ್ಧ ಮತದಾರರಲ್ಲಿ ಅಕ್ರೋಶ ವ್ಯಕ್ತವಾಗಿದೆ, ಮುಂದಿನ ಲೋಕಸಭಾ ಚುನಾವಣೆಯಲ್ಲಿ ಇದರ ವಿರುದ್ಧ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಸಂಸದ ಎಸ್.ಮುನಿಸ್ವಾಮಿ ಎಚ್ಚರಿಸಿದರು. ನಗರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಗ್ಯಾರಂಟಿ ಸೌಲಭ್ಯಗಳನ್ನು ಎಲ್ಲರಿಗೂ ನೀಡುವುದಾಗಿ ತಿಳಿಸಿತ್ತು.
ಈಗ ಕರಾರುಗಳನ್ನು ಹಾಕುವ ಮೂಲಕ ಲಗಾಮು ಹಾಕುತ್ತಿದ್ದಾರೆ. ಇದನ್ನು ಚುನಾವಣೆಗೆ ಮೊದಲೇ ತಿಳಿಸಿದ್ದರೆ ಅವರು ಅಧಿಕಾರಕ್ಕೆ ಬರಲು ಸಾಧ್ಯವಾಗುತ್ತಿರಲ್ಲಿಲ್ಲ ಎಂದು ಅಭಿಪ್ರಾಯಪಟ್ಟರು. ಕರಾರು ಮೂಲಕ ಜನತೆಗೆ ವಂಚನೆ: ಮನೆಯ ಒಡತಿಗೆ 2 ಸಾವಿರ ಕೊಡುತ್ತೇನೆ ಎಂದು ಕುಟುಂಬದಲ್ಲಿ ಮಹಿಳೆಯರ ನಡುವೆ ಭಿನ್ನಾಭಿಪ್ರಾಯ ಉಂಟು ಮಾಡಿದ್ದಾರೆ. ಉಚಿತ ಬಸ್ ಪ್ರಯಾಣ ಎಂದು ಹೇಳಿ ಈಗ 50 ಕಿ.ಮೀ ಮಾತ್ರ ಎಂದು ಸೀಮಿತ ಮಾಡುತ್ತಿದ್ದಾರೆ. ಪ್ರತಿ ಮನೆಗೆ 200 ಯೂನಿಟ್ ವಿದ್ಯುತ್ ಹೇಳಿ ಈಗಾ ಬಾಡಿಗೆ ಮನೆಯವರಿಗೆ ವಿದ್ಯುತ್ ಕೊಡಲಾಗುವುದಿಲ್ಲ. 201 ಯೂನಿಟ್ ಆದರೆ ಪೂರ್ಣ ಬಿಲ್ಲು ಪಾವತಿಸಬೇಕು ಇತ್ಯಾದಿಗಳ ಕರಾರುಗಳು ಹಾಕುತ್ತಿರುವುದು ವಂಚನೆ ಮಾಡಿದಂತಾಗಿದೆ ಎಂದು ಟೀಕಿಸಿದರು.
ಸಿರಿಗೆರೆ ತರಳಬಾಳು ಮಠಕ್ಕೆ ಎಸ್.ಎಸ್.ಮಲ್ಲಿಕಾರ್ಜುನ ಭೇಟಿ: ಶ್ರೀಗಳ ಆಶೀರ್ವಾದ ಪಡೆದ ಸಚಿವ
ಕಾಂಗ್ರೆಸ್ ಅಧಿಕಾರ ಚುಕ್ಕಾಣಿ ಹಿಡಿಯಲು ಅವೈಜ್ಞಾನಿಕವಾಗಿ ಆಶ್ವಾಸನೆಗಳನ್ನು ನೀಡುವ ಮೂಲಕ ರಾಜ್ಯವನ್ನು ದಿವಾಳಿ ಮಾಡಲು ಮುಂದಾಗಿದೆ. ನಿರುದ್ಯೋಗಿಗಳಿಗೆ ಸ್ಟೈಫಂಡ್ ನೀಡುವುದಾಗಿ ತಿಳಿಸಿದ್ದಾರೆ. ಆದರೆ ಈಗ ಇದಕ್ಕೂ ಅರ್ಜಿ ಹಾಕಿದ ಮೂರು ತಿಂಗಳ ಒಳಗೆ ಸಿಗದಿದ್ದರೆ, ಪದವಿ ಪಡೆದು ಮೂರು ವರ್ಷವಾಗಿರಬೇಕು ಸೇರಿದಂತೆ ಕೆಲವು ಕರಾರುಗಳನ್ನು ಹಾಕುವ ಮೂಲಕ ನಿರಾಶೆಯುಂಟು ಮಾಡುತ್ತಿದ್ದಾರೆ. ಇದರ ವಿರುದ್ಧ ಸಾರ್ವಜನಿಕರು ಬೀದಿಗೆ ಇಳಿದು ಪ್ರತಿಭಟಿಸಿ ಹೋರಾಟಕ್ಕೆ ಮುಂದಾಗಲಿದ್ದಾರೆ. ಇದರ ನೇತೃತ್ವವನ್ನು ಬಿಜೆಪಿ ವಹಿಸಲಿದೆ ಎಂದರು.
ಗ್ಯಾರಂಟಿ ಹೊರೆ ತಗ್ಗಿಸಲು ಅಡ್ಡದಾರಿ: ಅಕ್ಕಿ ಪ್ರತಿಯೊಬ್ಬರಿಗೂ 10 ಕೆ.ಜಿ. ಕೊಡುತ್ತೇನೆ, ಮಹದೇವಪ್ಪನಿಗೂ ಉಚಿತ, ಡಿ.ಕೆ.ಶಿವಕುಮಾರ್‌ಗೂ ಉಚಿತ ಎನ್ನುತ್ತಿದ್ದವರು ಈಗ ದಾರಿಯಲ್ಲಿ ಹೋಗುವವರೆಗೆಲ್ಲಾ ಕೊಡುವುದಕ್ಕೆ ಆಗುತ್ತಾ, ಬಿಪಿಎಲ್ ಇದ್ದವರಿಗೆ ಮಾತ್ರ, ಟಿವಿ ಇರಬಾರದು, ದ್ವಿಚಕ್ರವಾಹನ ಇರಬಾರದು, ಸ್ವಂತ ಮನೆ ಇರಬಾರದು, 10 ಚದರ ಮನೆ ಇದ್ದವರಿಗೆ ಉಚಿತ ಕೊಡುವುದಕ್ಕೆ ಆಗುವುದಿಲ್ಲ ಎಂದು ಕೊಟ್ಟಿರುವ ಗ್ಯಾರಂಟಿ ಭರವಸೆಗಳ ಹೊರೆ ತಗ್ಗಿಸಲು ಇಲ್ಲಸಲ್ಲದ ಕರಾರುಗಳ ರಾಗವನ್ನು ಎಳೆಯುವ ಮೂಲಕ ಮತದಾರರಿಗೆ ಟೋಪಿ ಹಾಕಲು ಮುಂದಾಗಿದ್ದಾರೆ ಎಂದು ಟೀಕಿಸಿದರು.
ಮೋದಿ ಆಯುಷ್ಮಾನ್ ಭಾರತ್ ನೀಡಿದ್ದರು. ಎಲ್ಲರಿಗೂ ಕೊರೋನಾದ ಲಸಿಕೆಗಳನ್ನು ಉಚಿತವಾಗಿ ನೀಡಿದ್ದರು ಯಾವುದೇ ಕರಾರುಗಳು ಹಾಕಿರಲಿಲ್ಲ. ಬಿಪಿಎಲ್ ಇದ್ದವರಿಗೆ ಉಚಿತ ಅಕ್ಕಿ ನೀಡಿದರು, ಕಾಂಗ್ರೆಸ್ ಪಕ್ಷದವರಂತೆ ಮತದಾರರಿಗೆ ಕರಾರುಗಳು ಹಾಕಲಿಲ್ಲ. ಭಾರತೀಯ ಜನತಾ ಪಕ್ಷವು ನುಡಿದಂತೆ ನಡೆಯುವ ಪಕ್ಷವಾಗಿದೆ. ರಾಜ್ಯ ಸರ್ಕಾರವು ಕರಾರು ಹಾಕುತ್ತಿರುವ ವಿರುದ್ದ ಟೀಕೆಗಳು ವ್ಯಾಪಕವಾಗಿ ಹರಿದು ಬರುತ್ತಿರುವುದ ಕಂಡರೆ ಮುಂಬರಲಿರುವ ಪಂಚಾಯಿತಿ ಮತ್ತು ಲೋಕಸಭಾ ಚುನಾವಣೆಗಳಲ್ಲಿ ಮತದಾರರಿಂದ ಕಾಂಗ್ರೆಸ್ ಪಕ್ಷವು ತಕ್ಕ ಪಾಠ ಕಲಿಸುವ ಕಾಲ ಸನ್ನಿತವಾಗುತ್ತಿದೆ ಎಂದು ಪ್ರತಿಪಾದಿಸಿದರು.
ಆರೋಗ್ಯವಂತ ಸಮಾಜದ ಉಳಿವಿಗೆ ಪುಸ್ತಕ ಅಗತ್ಯ: ಸಿಎಂ ಸಿದ್ದರಾಮಯ್ಯ
ಜಿಲ್ಲಾಧ್ಯಕ್ಷ ಡಾ.ವೇಣುಗೋಪಾಲ್, ನಗರ ಅಧ್ಯಕ್ಷ ತಿಮ್ಮರಾಯಪ್ಪ, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಕೃಷ್ಣಮೂರ್ತಿ, ಕೆ.ಯು.ಡಿ.ಎ ಅಧ್ಯಕ್ಷ ವಿಜಯಕುಮಾರ್, ಯುವಮೋರ್ಚಾ ಜಿಲ್ಲಾಧ್ಯಕ್ಷ ಬಾಲಾಜಿ, ಮಾದ್ಯಮ ಪ್ರಮುಖ್ ಕೆಂಬೋಡಿ ನಾರಾಯಣಸ್ವಾಮಿ, ಪ್ರಧಾನ ಕಾರ್ಯದರ್ಶಿ ರಾಜೇಶ್ ಸಿಂಗ್, ಮುಖಂಡರಾದ ಸೀಗೆನಹಳ್ಳಿ ಸುಂದರ್ ಇದ್ದರು.