ಬಿಜೆಪಿ ಕಾರ್ಯಕರ್ತ ವಿನಯ್ ಸೋಮಯ್ಯ ಆತ್ಮಹತ್ಯೆ ಪ್ರಕರಣ ಕೊಡಗು ಜಿಲ್ಲೆಯಲ್ಲಿ ರಾಜಕೀಯ ಕೆಸರೆರೆಚಾಟಕ್ಕೆ, ಪರಸ್ಪರ ಶಕ್ತಿ ಪ್ರದರ್ಶನಕ್ಕೆ ವೇದಿಕೆಯಾಗಿ ಮಾರ್ಪಟ್ಟಿದೆ. ಶುಕ್ರವಾರ, ಶನಿವಾರ ಎರಡು ದಿನಗಳ ಕಾಲ ಬಿಜೆಪಿ ಪ್ರತಿಭಟನೆಗೆ ವೇದಿಕೆಯಾಗಿದ್ದ ಕೊಡಗು, ಭಾನುವಾರ ಕಾಂಗ್ರೆಸ್ ಶಕ್ತಿ ಪ್ರದರ್ಶನಕ್ಕೆ ಸಾಕ್ಷಿಯಾಯಿತು.
ರವಿ.ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್
ಕೊಡಗು (ಏ.06): ಬಿಜೆಪಿ ಕಾರ್ಯಕರ್ತ ವಿನಯ್ ಸೋಮಯ್ಯ ಆತ್ಮಹತ್ಯೆ ಪ್ರಕರಣ ಕೊಡಗು ಜಿಲ್ಲೆಯಲ್ಲಿ ರಾಜಕೀಯ ಕೆಸರೆರೆಚಾಟಕ್ಕೆ, ಪರಸ್ಪರ ಶಕ್ತಿ ಪ್ರದರ್ಶನಕ್ಕೆ ವೇದಿಕೆಯಾಗಿ ಮಾರ್ಪಟ್ಟಿದೆ. ಶುಕ್ರವಾರ, ಶನಿವಾರ ಎರಡು ದಿನಗಳ ಕಾಲ ಬಿಜೆಪಿ ಪ್ರತಿಭಟನೆಗೆ ವೇದಿಕೆಯಾಗಿದ್ದ ಕೊಡಗು, ಭಾನುವಾರ ಕಾಂಗ್ರೆಸ್ ಶಕ್ತಿ ಪ್ರದರ್ಶನಕ್ಕೆ ಸಾಕ್ಷಿಯಾಯಿತು. ಮಾಜಿ ಸಂಸದ ಪ್ರತಾಪ್ ಸಿಂಹ ಅವರ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸುತ್ತಿರುವ ಕೈ ಕಾರ್ಯಕರ್ತರು. ಬೀದಿಗಿಳಿದು ಮಡಿಕೇರಿ ಮೈಸೂರು ರಸ್ತೆ ಬಂದ್ ಮಾಡಿರುವ ಮುಖಂಡರು. ಮಡಿಕೇರಿ ನಗರದ ಪ್ರಮುಖ ಬೀದಿಗಳಲ್ಲಿ ಹರಿದು ಬಂದ ಜನರು.
ಹೌದು ಇದು ಬಿಜೆಪಿಯ ಎರಡು ದಿನಗಳ ಹೋರಾಟಕ್ಕೆ ಪ್ರತಿಯಾಗಿ ಕೊಡಗು ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಭಾನುವಾರ ಕಾಂಗ್ರೆಸ್ ಪಕ್ಷ ತೋರಿಸಿದ ಶಕ್ತಿ ಪ್ರದರ್ಶನ. ಬೆಂಗಳೂರಿನಲ್ಲಿ ಕೊಡಗಿನ ವಿನಯ್ ಸೋಮಯ್ಯ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನುವ ವಿಷಯ ಗೊತ್ತಾಗುತ್ತಿದ್ದಂತೆ ಶುಕ್ರವಾರ ಬೀದಿಗೆ ಇಳಿದಿದ್ದ ಬಿಜೆಪಿ ಮುಖಂಡರು, ಕಾರ್ಯಕರ್ತರು ಮಡಿಕೇರಿ ನಗರದ ಮೂಲಕ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಯನ್ನು ಒಂದುವರೆ ಗಂಟೆಗಳ ಕಾಲ ಬಂದ್ ಮಾಡಿ ತನ್ನೊಳಗಿನ ಆಕ್ರೋಶವನ್ನು ಹೊರ ಹಾಕಿದ್ದರು. ಕೊಡಗಿನ ಇಬ್ಬರು ಶಾಸಕರ ಮೇಲೆ ಪ್ರಕರಣ ದಾಖಲಿಸಬೇಕೆಂದು ಶನಿವಾರ ವಿನಯ್ ಸೋಮಯ್ಯ ಅವರ ಮೃತದೇಹವಿರಿಸಿ ಆಕ್ರೋಶ ವ್ಯಕ್ತಪಡಿಸಿದ್ದರು.
ಹೈಕೋರ್ಟ್ ತಡೆಯಾಜ್ಞೆ ಇದ್ದರೂ ತರಾತುರಿಯಲ್ಲಿ ಟೆಂಡರ್: ಹಲವು ಅನುಮಾನಗಳ ಹುಟ್ಟಿಸಿದ ಕೆ.ನಿಡುಗಣೆ ಪಂಚಾಯಿತಿ ನಡೆ
ಇದಕ್ಕೆ ಪ್ರತಿಯಾಗಿ ಭಾನುವಾರ ಬೀದಿಗೆ ಇಳಿದ ಕಾಂಗ್ರೆಸ್ನ ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಬಿಜೆಪಿ, ಬಿಜೆಪಿ ಮುಖಂಡರ ವಿರುದ್ಧ ಘೋಷಣೆಗಳನ್ನು ಕೂಗಿದರು. ಮಡಿಕೇರಿಯ ಗಾಂಧಿ ಮೈದಾನದಿಂದ ಪಾದಯಾತ್ರೆ ಆರಂಭಿಸಿದ ಕಾಂಗ್ರೆಸ್ ಕಾರ್ಯಕರ್ತರು, ಮಂಗೇರಿರ ಮುತ್ತಣ್ಣ ವೃತ್ತದ ಮೂಲಕ ಹಾದು ಜನರಲ್ ತಿಮ್ಮಯ್ಯ ವೃತ್ತದಲ್ಲಿ ಜಮಾಯಿಸಿದರು. ಮಡಿಕೇರಿ, ಮೈಸೂರು ರಸ್ತೆಗಳನ್ನು ಅರ್ಧ ಗಂಟೆಗಳ ಕಾಲ ಬಂದ್ ಮಾಡಿ ತಮ್ಮ ಸೇಡು ತೀರಿಸಿಕೊಂಡರು. ಅಲ್ಲದೆ ಮಾಜಿ ಸಂಸದ ಪ್ರತಾಪ್ ಸಿಂಹ ಅವರ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು. ಜನರಲ್ ತಿಮ್ಮಯ್ಯ ವೃತ್ತದಿಂದ ವಾಪಸ್ ಗಾಂಧಿ ಮೈದಾನದವರೆಗೆ ಪಾದಯಾತ್ರೆ ಮಾಡಿದರು.
ಗಾಂಧಿ ಮೈದಾನದಲ್ಲಿ ಪ್ರತಿಭಟನಾ ಸಭೆ ನಡೆಸಿದರು. ಈ ಸಂದರ್ಭ ಕಾಂಗ್ರೆಸ್ನ ಬಹುತೇಕ ನಾಯಕರು, ಬಿಜೆಪಿಯನ್ನು ಹಾಗೂ ಬಿಜೆಪಿ ನಾಯಕರನ್ನು ವಾಚಾಮಗೋಚರವಾಗಿ ಬೈಯುವುದಕ್ಕೆ ಮೀಸಲಿರಿಸಿದರು. ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್ ಅವರಂತು ವಿಪಕ್ಷ ನಾಯಕ ಆರ್. ಅಶೋಕ್ ಹಾಗೂ ಪ್ರತಾಪ್ ಸಿಂಹ ಅವರ ವಿರುದ್ಧ ತೀರ ವೈಯಕ್ತಿಕವಾಗಿಯೇ ದಾಳಿ ಮಾಡಿದರು. ಆರ್ ಅಶೋಕ್ ಅವರಿಗೆ ಮುನಿರತ್ನ ಏಡ್ಸ್ ಬರಿಸಿದ್ದಾರೆ ಅಂತೆಲ್ಲಾ ವಾಗ್ದಾಳಿ ನಡೆಸಿದರು. ಪ್ರತಾಪ್ ಸಿಂಹ ಅವರನ್ನು ವೈಯಕ್ತಕವಾಗಿಯೇ ಟಾರ್ಗೆಟ್ ಮಾಡಿ ಲಕ್ಷ್ಮಣ್ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು.
ಶಾಸಕ ಪೊನ್ನಣ್ಣ ಕೂಡ ತಮ್ಮ ಇಡೀ ಭಾಷಣವನ್ನು ಬಹುತೇಕ ಬಿಜೆಪಿ ಹಾಗೂ ಬಿಜೆಪಿ ನಾಯಕರನ್ನು ಬೈಯುವುದಕ್ಕೆ ಮೀಸಲಿರಿಸಿದರು. ರಾತ್ರೋ ರಾತ್ರಿ ವಿನಯ್ ಕುಟುಂಬದವರನ್ನು ಮನವೊಲಿಸಿ ಮೃತದೇಹವಿಟ್ಟು ಪ್ರತಿಭಟನೆ ಮಾಡಲು ಒಪ್ಪಿಸಿದರು. ಸಾವನ್ನೂ ರಾಜಕಾರಣ ಮಾಡುವುದಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಆದರೆ ಅವರ ಐಟಿ ಸೆಲ್ನಲ್ಲಿ ಕೆಲಸ ಮಾಡುತ್ತಿದ್ದ ವಿನಯ್ ಸೋಮಯ್ಯ ಅವರ ಹೆಸರು ಅವರ ಪಕ್ಷದ ರಾಜ್ಯಾಧ್ಯಕ್ಷರಿಗೆ ಗೊತ್ತಿರಲಿಲ್ಲ. ಅವರೇನು ಶೋಕಾಚರಣೆಗೆ ಬಂದಿದ್ರಾ ಇಲ್ಲ, ರಾಜಕಾರಣ ಮಾಡುವುದಕ್ಕೆ ಬಂದಿದ್ದರಾ ಎಂದರು. ಮಾಜಿ ಸಂಸದ ಪ್ರತಾಪ್ ಸಿಂಹ ಅವರ ಹೆಸರು ಹೇಳದೆ ಅವನೊಬ್ಬ ವ್ಯಭಿಚಾರಿ, ಅವನು ಎಲ್ಲಾದರೂ ಹೋದರೆ ಹೆಣ್ಣುಮಕ್ಕಳು ಬಾಗಿಲು ಮುಚ್ಚಿಕೊಳ್ಳುತ್ತಾರೆ ಎಂದೆಲ್ಲಾ ವೈಯಕ್ತಿಕವಾಗಿ ನಿಂದಿಸಿದರು.
ಸತ್ತು ಸಂಸ್ಕಾರವಾಗಿದ್ದ ಹೆಂಡತಿ 5 ವರ್ಷದ ಬಳಿಕ ಎದ್ದು ಬಂದ್ಲು: ಆದರೆ ಸೆರೆಮನೆ ವಾಸ ಅನುಭವಿಸಿದ್ದು ಮಾತ್ರ ಗಂಡ!
ಜೊತೆಗೆ ಕೊಡವ ಸಂಪ್ರದಾಯದ ಬಟ್ಟೆಗಳನ್ನು ತೊಟ್ಟ ನನ್ನ ಫೋಟೋವನ್ನು ಶೌಚಾಲಯಕ್ಕೆ ಹಾಕಿರುವುದಕ್ಕೆ ತನ್ನೀರಾ ಮೈನಾ ಅವರು ನನ್ನ ಭಾವನೆಗಳಿಗೆ ಧಕ್ಕೆಯಾಗಿದೆ ಎಂದು ದೂರು ಕೊಟ್ಟಿದ್ದರು. ಅವರದೇನು ತಪ್ಪಿಲ್ಲ ಎನ್ನುವ ದಾಟಿಯಲ್ಲಿ ಮಾತನಾಡಿ ಅವರನ್ನು ಸಮರ್ಥಿಸಿಕೊಳ್ಳುವ ಕೆಲಸವನ್ನು ಮಾಡಿದರು. ಒಟ್ಟಿನಲ್ಲಿ ವಿನಯ್ ಸೋಮಯ್ಯ ಅವರ ಆತ್ಮಹತ್ಯೆ ಪ್ರಕರಣ ಕೊಡಗು ಜಿಲ್ಲೆಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳು ಬೀದಿ ಕಾಳಗ ಮಾಡಿಕೊಂಡು ತಮ್ಮ ಶಕ್ತಿ ಪ್ರದರ್ಶನ ಮಾಡುವ ವೇದಿಕೆಯಾಗಿ ಪರಿವರ್ತನೆ ಆಗಿರುವುದಂತು ಸತ್ಯ.