
ಬೆಂಗಳೂರು (ಡಿ.24): ಮತಕಳ್ಳತದ ವಿಚಾರವಾಗಿ ಪಕ್ಷದ ನಿಲುವಿಗೆ ಭಿನ್ನ ಹೇಳಿಕೆ ನೀಡಿ ಸಚಿವ ಸ್ಥಾನ ಕಳೆದುಕೊಂಡಿದ್ದ ಮಧುಗಿರಿ ಶಾಸಕ ಕೆ.ಎನ್.ರಾಜಣ್ಣ, ಈಗ ರಾಜ್ಯದಲ್ಲಿನ ಮತಗಳ್ಳತನಕ್ಕೆ ಕೆಪಿಸಿಸಿ ಹಾಗೂ ಬೂತ್ ಮಟ್ಟದ ಏಜೆಂಟ್ (ಬಿಎಲ್‌ಎ)ಗಳ ಲೋಪವೇ ಕಾರಣ ಎಂದು ಆರೋಪಿಸಿ ಪಕ್ಷದ ವರಿಷ್ಠ ರಾಹುಲ್ ಗಾಂಧಿ ಅವರಿಗೆ ಪತ್ರ ಬರೆದಿದ್ದಾರೆ.
ಅಷ್ಟೇ ಅಲ್ಲ, ಪಕ್ಷದಲ್ಲಿ ನಾಯಕತ್ವ ಬದಲಾವಣೆ ವಿಚಾರ ತೀವ್ರ ಚರ್ಚೆಗೆ ಒಳಗಾಗಿರುವ ನಡುವೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರವಾಗಿ ಪತ್ರದಲ್ಲಿ ಅನೇಕ ವಿಚಾರಗಳನ್ನು ಪ್ರಸ್ತಾಪಿಸಿದ್ದಾರೆ. ಅಹಿಂದ ನಾಯಕ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ 2013 ಹಾಗೂ 2023ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಸಿದ್ದರಾಮಯ್ಯ ಎಸ್‌ಸಿ, ಎಸ್‌ಟಿ, ಓಬಿಸಿ ಅಲ್ಪಸಂಖ್ಯಾತರು, ಬಡವರು ಸೇರಿ ಎಲ್ಲರ ಏಳಿಗೆಗಾಗಿ ಕೆಲಸ ಮಾಡ್ತಿದ್ದಾರೆ ಎಂದು ತಮ್ಮ ಪತ್ರದಲ್ಲಿ ಉಲ್ಲೇಖಿಸುವ ಮೂಲಕ ಸಿದ್ದರಾಮಯ್ಯ ಅವರನ್ನು ಸಿಎಂ ಸ್ಥಾನದಿಂದ ಕೈ ಬಿಟ್ಟರೆ ಪಕ್ಷದಲ್ಲಿ ಎದುರಾಗುವ ಸಮಸ್ಯೆಗಳ ಬಗ್ಗೆಯೂ ಸೂಕ್ಷ್ಮವಾಗಿ ಎಚ್ಚರಿಕೆ ನೀಡಿದ್ದಾರೆ.
ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಈ ಹಿಂದೆ ನಾಲ್ಕು ಪತ್ರಗಳನ್ನು ಬರೆದಿದ್ದ ರಾಜಣ್ಣ ಅವರು ಈಗ ಸುದೀರ್ಘ 8 ಪುಟಗಳ ಐದನೇ ಪತ್ರ ಬರೆದಿರುವುದು ಬೆಳಕಿಗೆ ಬಂದಿದೆ. ಮತಗಳವು ವಿಷಯದಲ್ಲಿ ಕೆಪಿಸಿಸಿ ಹಾಗೂ ಬಿಎಲ್‌ಎಗಳ ಲೋಪಗಳನ್ನು ಉಲ್ಲೇಖಿಸಿದ್ದಾರೆ. ಕೆಪಿಸಿಸಿ ಅಧ್ಯಕ್ಷರೇ ಬಿಎಲ್‌ಎಗಳನ್ನು ನೇಮಕ ಮಾಡಿರುವುದು. ಬಿಎಲ್‌ಎಗಳು ಸೂಕ್ತ ಗಮನ ಹರಿಸಿದ್ದರೆ ವೋಟ್ ಚೋರಿ ತಪ್ಪಿಸಬಹುದಿತ್ತು. ಬಿಎಲ್‌ಎಗಳು ಹಾಗೂ ಕೆಪಿಸಿಸಿ ಅಧ್ಯಕ್ಷರು ಈ ಬಗ್ಗೆ ಸರಿಯಾದ ಗಮನ ಹರಿಸಿಲ್ಲ. ಹೀಗಾಗಿ ಕರ್ನಾಟಕದಲ್ಲಿ ಮತಗಳವಿಗೆ ಅವಕಾಶ ಆಗಿದೆ. ಬಿಎಲ್‌ಎಗಳು ಸರಿಯಾಗಿ ಕೆಲಸ ಮಾಡಿದ್ದಿದ್ದರೆ ನಾವು ಇನ್ನೂ 8 ರಿಂದ10 ಸೀಟುಗಳನ್ನು ಗೆಲ್ಲಬಹುದಿತ್ತು. ಬೇರೆ ರಾಜ್ಯಗಳಿಂದಲೂ 30 ರಿಂದ 40 ಸೀಟ್ ಗೆಲ್ಲಬಹುದಿತ್ತು. ಮೋದಿ ಪ್ರಧಾನಿಯೇ ಆಗುತ್ತಿರಲಿಲ್ಲ ಎಂದು ಹೇಳಿದ್ದಾರೆ.
ಮತ್ತೊಂದೆಡೆ ಕಾಂಗ್ರೆಸ್‌ನ ಮತಕಳ್ಳತನ ಅಭಿಯಾನದ ಬಗ್ಗೆ ತಮ್ಮ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ. ನನ್ನ ವಿರುದ್ದ ತಮಗೆ ತಪ್ಪು ಮಾಹಿತಿ ನೀಡಿದವರ ಮೇಲೆ ಕ್ರಮ ಆಗಬೇಕು. ಈ ಸಂಬಂಧ ತಮ್ಮನ್ನು ಭೇಟಿ ಮಾಡಲು ಅವಕಾಶ ನೀಡುವಂತೆ ರಾಹುಲ್ ಗಾಂಧಿ ಅವರನ್ನು ಕೋರಿದ್ದಾರೆ. ಮತ ಕಳ್ಳತನದ ಬಗ್ಗೆ ತನ್ನ ಹೇಳಿಕೆಯ ಕುರಿತು ಸ್ಪಷ್ಟೀಕರಣ ನೀಡಿರುವ ರಾಜಣ್ಣ, ನನ್ನ ಹೇಳಿಕೆಯ ಹಿಂದಿರುವ ಸತ್ಯ ಹಾಗೂ ಅದನ್ನು ತಿರುಚಿದ ಬಗ್ಗೆಯನ್ನು ನಿಮ್ಮ ಮುಂದಿಟ್ಟಿದೇನೆ. ನನ್ನ ಹೇಳಿಕೆಯನ್ನು ತಪ್ಪಾಗಿ ನಿಮ್ಮ ಮುಂದೆ ತಂದವರ ಮೇಲೆ ಕ್ರಮ ಕೈಗೊಳ್ಳಿ. ಜೊತೆಗೆ ಈ ಬಗ್ಗೆ ಖುದ್ದು ನಿಮ್ಮನ್ನು ಭೇಟಿಯಾಗಿ ಮಾತನಾಡಲು ಅವಕಾಶ ನೀಡುವಂತೆ ಪತ್ರದಲ್ಲಿ ಮನವಿ ಮಾಡಿದ್ದಾರೆ.
ನಾನು ಯಾವುದೇ ಭ್ರಷ್ಟಾಚಾರ ಮಾಡದೇ ಎರಡು ವರ್ಷ ಸಚಿವನಾಗಿ ಕೆಲಸ ಮಾಡಿದ್ದೇನೆ. ಸಹಕಾರ ಕ್ಷೇತ್ರದಲ್ಲಿ ಮೀಸಲಾತಿ ತಂದಿದ್ದೇನೆ. ಎಸ್‌ಸಿ ಎಸ್‌ಟಿ ಮಹಿಳಾ ಮೀಸಲಾತಿ ತಂದಿದ್ದೇನೆ. ಇದರಿಂದ ರಾಜ್ಯಾದ್ಯಂತ ಒಂದು ಲಕ್ಷ ಕಾರ್ಯಕರ್ತರಿಗೆ ಅನುಕೂಲವಾಗಿದೆ. ಹಾಸನ ಉಸ್ತುವಾರಿಯಾಗಿ ಹಳೇ ಮೈಸೂರು ಭಾಗದಲ್ಲಿ ಹಾಸನ ಗೆಲ್ಲುವಂತೆ ಕೆಲಸ ಮಾಡಿದ್ದೇನೆ. ನಾನು ನೆಹರು ಫ್ಯಾಮಿಲಿಗೆ ನಿಷ್ಠೆಯಿಂದ ಇದ್ದೇನೆ ಎಂದು ಅಲವತ್ತುಕೊಂಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.