
ತುಮಕೂರು (ಡಿ.23): ರಾಜ್ಯದಲ್ಲಿ ಸಹಕಾರ ಇಲಾಖೆ ಹಾಗೂ ಹಾಸನ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಕೆ.ಎನ್. ರಾಜಣ್ಣ ಅವರು ಒಂದೇ ಒಂದು ಹೇಳಿಕೆಯಿಂದಾಗಿ ಸಚಿವ ಸ್ಥಾನದಿಂದ ವಜಾಗೊಂಡು, ಅಧಿಕಾರ ಕಳೆದುಕೊಂಡಿದ್ದರು. ಇದರ ಬೆನ್ನಲ್ಲೇ ತೀವ್ರ ಅಸಮಾಧಾನಗೊಂಡಿರುವ ಹಿರಿಯ ನಾಯಕ ಕೆ.ಎನ್. ರಾಜಣ್ಣ, ಕಾಂಗ್ರೆಸ್ ಅಗ್ರ ನಾಯಕ ರಾಹುಲ್ ಗಾಂಧಿ ಅವರಿಗೆ 8 ಪುಟಗಳ ಸುದೀರ್ಘ ಪತ್ರ ಬರೆದಿದ್ದಾರೆ. ತಮ್ಮ ಹೇಳಿಕೆಯನ್ನು ತಿರುಚಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಹಾಗೂ ದೆಹಲಿಗೆ ಬಂದು ನೇರವಾಗಿ ಮಾತನಾಡಲು ಅವಕಾಶ ನೀಡುವಂತೆ ಅವರು ಪತ್ರದಲ್ಲಿ ಮನವಿ ಮಾಡಿದ್ದಾರೆ.
ಕಳೆದ ತಿಂಗಳ 17ರಂದು ಇ-ಮೇಲ್ ಮೂಲಕ ಈ ಪತ್ರ ರವಾನಿಸಿರುವ ರಾಜಣ್ಣ, ಮಾಧ್ಯಮಗಳ ಮುಂದೆ ತಾವಾಡಿದ ಮಾತುಗಳು ಮತ್ತು ಅದಕ್ಕೆ ಬಂದ ಪ್ರಶ್ನೆಗಳನ್ನು ವಿವರವಾಗಿ ಉಲ್ಲೇಖಿಸಿದ್ದಾರೆ. "ನನ್ನ ಹೇಳಿಕೆಯ ಹಿಂದಿರುವ ಸತ್ಯವನ್ನು ತಿರುಚಿ ನಿಮ್ಮ ಮುಂದೆ ತಪ್ಪು ಮಾಹಿತಿಯನ್ನು ನೀಡಲಾಗಿದೆ. ಈ ಪಿತೂರಿಯ ಹಿಂದೆ ಇರುವವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು" ಎಂದು ಅವರು ಒತ್ತಾಯಿಸಿದ್ದಾರೆ.
ಪತ್ರದಲ್ಲಿ ಸಂಘಟನಾತ್ಮಕ ಲೋಪಗಳ ಬಗ್ಗೆಯೂ ರಾಜಣ್ಣ ಗಂಭೀರವಾಗಿ ಪ್ರಸ್ತಾಪಿಸಿದ್ದಾರೆ. 'ಕೆಪಿಸಿಸಿ ನೇಮಿಸಿದ ಬಿಎಲ್‌ಎಗಳು (Booth Level Agents) ತಮ್ಮ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸಿಲ್ಲ. ಈ ಲೋಪಗಳ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮತ್ತು ಸಂಬಂಧಪಟ್ಟ ಅಧಿಕಾರಿಗಳು ಸರಿಯಾದ ಗಮನ ಹರಿಸಿದ್ದರೆ ಫಲಿತಾಂಶ ಬೇರೆಯೇ ಇರುತ್ತಿತ್ತು. ಈ ಲೋಪಗಳನ್ನು ಸರಿಪಡಿಸಿದ್ದರೆ ಕರ್ನಾಟಕದಲ್ಲಿ ಕಾಂಗ್ರೆಸ್ ಇನ್ನೂ 8 ರಿಂದ 10 ಹೆಚ್ಚುವರಿ ಸ್ಥಾನಗಳನ್ನು ಸುಲಭವಾಗಿ ಪಡೆಯುತ್ತಿತ್ತು' ಎಂದು ರಾಜಣ್ಣ ಪತ್ರದಲ್ಲಿ ವಿಶ್ಲೇಷಿಸಿದ್ದಾರೆ.
ತಮ್ಮ ವಿರುದ್ಧ ಹೈಕಮಾಂಡ್‌ಗೆ ದೂರು ನೀಡಿ ಸಚಿವ ಸ್ಥಾನ ತಪ್ಪುವಂತೆ ಮಾಡಿದವರ ಮುಖವಾಡ ಕಳಚಲು ರಾಜಣ್ಣ ತುದಿಗಾಲಲ್ಲಿ ನಿಂತಿದ್ದಾರೆ. 'ನನ್ನ ಹೇಳಿಕೆಯ ಉದ್ದೇಶ ಪಕ್ಷವನ್ನು ಬಲಪಡಿಸುವುದೇ ಹೊರತು ಹಾನಿ ಮಾಡುವುದಲ್ಲ. ಈ ಎಲ್ಲ ವಿಷಯಗಳ ಬಗ್ಗೆ ನಾನು ನೇರವಾಗಿ ನಿಮ್ಮೊಂದಿಗೆ ಚರ್ಚಿಸಬೇಕಿದೆ. ದೆಹಲಿಗೆ ಬಂದು ಮಾತನಾಡಲು ಸಮಯ ನಿಗದಿಪಡಿಸಿ' ಎಂದು ರಾಹುಲ್ ಗಾಂಧಿಯವರಲ್ಲಿ ವಿನಂತಿಸಿದ್ದಾರೆ. ಸಚಿವ ಸ್ಥಾನ ಕಳೆದುಕೊಂಡ ನಂತರ ರಾಜಣ್ಣ ಅವರ ಈ ನಡೆ ರಾಜ್ಯ ರಾಜಕಾರಣದಲ್ಲಿ, ಅದರಲ್ಲೂ ವಿಶೇಷವಾಗಿ ಕಾಂಗ್ರೆಸ್ ಪಾಳಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ. ಡಿ.ಕೆ. ಶಿವಕುಮಾರ್ ಅವರ ಕಾರ್ಯವೈಖರಿಯ ಬಗ್ಗೆಯೇ ಪತ್ರದಲ್ಲಿ ಅಸಮಾಧಾನ ವ್ಯಕ್ತಪಡಿಸಿರುವುದು ಹೈಕಮಾಂಡ್ ಇದನ್ನು ಹೇಗೆ ಸ್ವೀಕರಿಸುತ್ತದೆ ಎಂಬ ಚರ್ಚೆ ಶುರುವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.