ಕಾಂಗ್ರೆಸ್ ಮುಖಂಡನ ಆಡಿಯೋ ವೈರಲ್ , ಕಿಸಾನ್ ಕಾಂಗ್ರೆಸ್ ಜಿಲ್ಲಾಧ್ಯಕ್ಷನ ಸ್ಥಾನದಿಂದ ಕೆಂಪನಳ್ಳಿ ರಸೂಲ್ ಖಾನ್ ವಜಾ
ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು
ಚಿಕ್ಕಮಗಳೂರು(ಏ.05): ಸಿ.ಟಿ.ರವಿ ಗೆದ್ದೇ ಗೆಲ್ತಾರೆ ಅಂತ ಹೇಳಿದ್ದ ಕಾಂಗ್ರೆಸ್ ಪಕ್ಷದ ಮುಖಂಡನನ್ನು ಹುದ್ದೆಯಿಂದ ವಜಾ ಮಾಡಿರುವ ಘಟನೆ ಕಾಫಿನಾಡು ಚಿಕ್ಕಮಗಳೂರಿನಲ್ಲಿ ನಡೆದಿದೆ. ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ರಸೂಲ್ ಖಾನ್ ವಜಾ ಆದ ವ್ಯಕ್ತಿ. ಚಿಕ್ಕಮಗಳೂರಿನಲ್ಲಿ ಈ ಬಾರಿ ಹೇಗಿದ್ರು ಸಿ.ಟಿ ರವಿನೇ ಗೆಲ್ಲೋದು ಸರ್ ಎಂದು ಕಾಂಗ್ರೆಸ್ ಮುಖಂಡ ರಸೂಲ್ ಖಾನ್ ಹೇಳಿರುವ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ಈ ಹೇಳಿಕೆಯಿಂದಾಗಿ ಪಕ್ಷಕ್ಕೆ ಮುಜುಗರ ತರುವ ನಡವಳಿಕೆಯಿಂದ ರಸೂಲ್ ಖಾನ್ ಅನ್ನು ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಹುದ್ದೆಯಿಂದ ಅಮಾನತ್ತು ಆದೇಶ ಸಚಿನ್ ಮೀಗಾ ಹೊರಡಿಸಿದ್ದಾರೆ.
undefined
ಸಿ.ಟಿ.ರವಿಯೇ ಗೆಲ್ಲೋದು, ಕಾಂಗ್ರೆಸ್ ಮುಖಂಡನ ಆಡಿಯೋ ವೈರಲ್ :
ಫೋನ್‍ನಲ್ಲಿ ಮಾತನಾಡುತ್ತಾ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಸಿ.ಟಿ.ರವಿಯೇ ಗೆಲ್ಲೋದು ಎಂದು ಹೇಳಿದ್ದ ಕಿಸಾನ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ರಸೂಲ್ ಖಾನ್‍ರನ್ನ ಕಾಂಗ್ರೆಸ್ ಪಕ್ಷದಿಂದ ಪಕ್ಷದಿಂದ ಉಚ್ಛಾಟನೆ ಮಾಡಿದೆ. ಕಿಸಾನ್ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ರಸೂಲ್ ಖಾನ್ ಕಾಂಗ್ರೆಸ್ ಪಕ್ಷದ ಸಕ್ರೀಯ ಕಾರ್ಯಕರ್ತನಾಗಿದ್ದರು. ಒಂದು ದಿನದ ಹಿಂದಷ್ಟೆ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದ ಅವರು, ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಹೊಸಬರಿಗೆ ಟಿಕೆಟ್ ನೀಡಬಾರದು. ಟಿಕೆಟ್‍ಗಾಗಿ ಅರ್ಜಿ ಹಾಕಿರುವ ಆರು ಜನರಲ್ಲೇ ಒಬ್ಬರಿಗೆ ಟಿಕೆಟ್ ನೀಡಬೇಕು. ನಿನ್ನೆ-ಮೊನ್ನೆ ಪಕ್ಷಕ್ಕೆ ಸೇರಿಕೊಂಡು ತಮ್ಮಯ್ಯಗೆ ಟಿಕೆಟ್ ನೀಡಿದರೆ ಮುಸ್ಲಿಂ ಸಮುದಾಯ ಕಾಂಗ್ರೆಸ್ ಬೆಂಬಲಿಸುವುದಿಲ್ಲ ಎಂದು ತಮ್ಮಯ್ಯ ವಿರುದ್ಧ ನೇರವಾಗಿ ಆಕ್ರೋಶ ಹೊರಹಾಕಿದ್ದಾರೆ. ಇಂದು ಫೋನಿನಲ್ಲಿ ಮಾತನಾಡುತ್ತಾ ಚಿಕ್ಕಮಗಳೂರಿನಲ್ಲಿ ಸಿ.ಟಿ.ರವಿಯೇ ಗೆಲ್ಲೋದು ಎಂದು ಹೇಳಿದ್ದಾರೆ ಎನ್ನಲಾದ ಆಡಿಯೋವೊಂದು ವೈರಲ್ ಆಗಿದ್ದು, ಆ ಆಡಿಯೋ ಹಿನ್ನೆಲೆ ಕಿಸಾನ್ ಕಾಂಗ್ರೆಸ್ ರಾಜ್ಯಾಧ್ಯಕ್ಷ ಸಚಿನ್ ಮಿಗಾ ಕಾಂಗ್ರೆಸ್ ಪಕ್ಷದಿಂದ ಅಮಾನತು ಮಾಡಿದ್ದಾರೆ. ಆಡಿಯೋದಲ್ಲಿ ಎಸ್.ಡಿ.ಪಿ.ಐ. ಪಕ್ಷ ಇಲ್ವಾ. ಅಭ್ಯರ್ಥಿ ಹಾಕಿ. ಮುಸ್ಲಿಂ ಮತಗಳು ಚದುರುತ್ತವೆ. ನೀವು ಅಭ್ಯರ್ಥಿ ಹಾಕಿ ನಿಮ್ಮ ಶಕ್ತಿ ತೋರಿಸಿ. ಸಿ.ಟಿ.ರವಿ ನೂರಕ್ಕೆ ನೂರರಷ್ಟು ಗೆಲ್ಲುತ್ತಾನೆ ಎಂದು ಹೇಳಿದ್ದಾರೆ. ಈ ಆಡಿಯೋ ಇಂದು ವೈರಲ್ ಆಗಿದ್ದು, ಪಕ್ಷಕ್ಕೆ ಮುಜುಗರ ತಂದರೆಂಬ ಕಾರಣದಿಂದ ಅವರನ್ನ ಅಮಾನತು ಮಾಡಿದ್ದಾರೆ.
CHIKKAMAGALURU: ಚುನಾವಣಾ ರಣರಂಗದಲ್ಲಿ"ಹೋಂ ಮಿನಿಸ್ಟರ್" ಗಳ ಹವಾ!
ಆಡಿಯೋದ ಸ್ಪಷ್ಟೀಕರಣ :
ಈ ಕ್ಷೇತ್ರದಲ್ಲಿ ನಿರಂತರವಾಗಿ ಪ್ರತಿಭಟನೆಯನ್ನು ಮಾಡುತ್ತಾ, ಸಾರ್ವಜನಿಕವಾಗಿ ಪ್ರತಿಯೊಂದು ಸಮುದಾಯದಲ್ಲೂ ಕ್ಷೇತ್ರದಲ್ಲಿ ಕೆಲಸ ಮಾಡಿಕೊಂಡು ಬಂದಿದ್ದೀನಿ ಅತಿ ಹೆಚ್ಚಾಗಿ ಸಿ.ಟಿ ರವಿನ ವಿರೋದಿಸುತ್ತಾ ಬಂದಿದ್ದೀನಿ ಇದಕ್ಕೆ ಸಿಕ್ಕ ಪ್ರತಿಫಲ ಸುಮಾರು 7 ಕೇಸ್ ಆಗಿದೆ. ನಮಗೂ ಅಧಿಕಾರದ ಆಸೆ ಇದೆ, ನಾವೇ ಇಲ್ಲಿ ಗೆಲ್ಲಬೇಕು ಸಿ.ಟಿ.ರವಿ ಸೋಲಿಸಬೇಕು ಅಂತ ಇಷ್ಟು ವರ್ಷದಿಂದ ಕಷ್ಟಪಟ್ಟು ನಮ್ಮ ಮೇಲೆ ಕೇಸ್ ಹಾಕಿಕೊಂಡು ಬಂದಿದ್ದೀವಿ ಆದರೆ ಯಾರೋ ಹೊರಗಡೆಯಿಂದ ಬಂದವರಿಗೆ ಗಲಾಟೆ ಮಾಡಿಕೊಂಡು ಇದ್ದರೆ ಅದಕ್ಕಾಗಿ ನಮಿಗೆ ಬೇಸರ ಆಗಿತ್ತು. ಆ ಬೇಸರದ ವಿಚಾರವಾಗಿ ನಾನು ಮಾತನಾಡಿದ್ದು ಅವಾಗ ನಾನು ಹೇಳಿದ್ದೆ ಸಿ.ಟಿ ರವಿ ಸೋಲ್ತಾನೆ ಆದರೆ ನಮ್ಮ ಒಳ ಜಗಳಕ್ಕೆ, ಕಾರ್ಯಕರ್ತರ ಕಡೆಗಣನೆ ಗೆ, ನಾಯಕರ ಕಡೆಗಣನೆಗೆ ಈ ತರ ಆಗ್ತಾ ಇದೆ, ನಾಳೆ ದಿನ ಸಿ.ಟಿ ರವಿ ಗೆಲ್ಲೋ ಚಾನ್ಸ್ ಇದೆ ಅದಕ್ಕೆ ನಾವು ಚಾನ್ಸ್ ಕೊಡಬಾರದು ಅಂತ ಹೇಳಿದನ್ನ ಇವರು ತಿರುಗಿಸಿ ಬೇರೆ ರೀತಿಯಲ್ಲಿ ತೋರಿಸಿದ್ದಾರೆ. ಎಸ್ ಡಿ ಪಿ ಐ ವಿಚಾರವಾಗಿ ಬಂದದ್ದು ನೀವು ಹಾಕಿ ಹಾಕಿದ ಮೇಲೆ ಯಾವ ರೀತಿ ಸೋಲು ಅನುಭವಿಸುತ್ತೀರಾ, ಯಾವ ರೀತಿ ಪಾಠ ಕಲಿತ್ತೀರಾ ಅನ್ನೋದು ಹೇಳಿರೋದು ಎಂದು ಸ್ಪಷ್ಟನೆ ನೀಡಿದ್ದಾರೆ.
ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.